ಉಡುಪಿ, ಅ.31: ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲಕ್ಕೆ ಸೇರಿದ ಕನ್ನಡ-ತುಳು ಮಿಶ್ರಿತ ಭಾಷೆ ಹಾಗೂ ಕನ್ನಡ ಲಿಪಿಯಲ್ಲಿ ಕೆತ್ತಲಾಗಿರುವ ಅಪರೂಪದ ಶಿಲಾಶಾಸನವೊಂದು ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ನಂದಳಿಕೆಯ ಕೆದಿಂಜೆ ಜುಮಾದಿ ದೇವಸ್ಥಾನದ ಸಮೀಪದ ದಾಸಂದ ಬಾಕ್ಯಾರ್ ಎಂಬಲ್ಲಿ ಪತ್ತೆಯಾಗಿದೆ. ಈ ಶಾಸನವು ವಿಜಯನಗರದ ಸಂಗಮ ರಾಜಮನೆತನದ ಎರಡನೇ ಹರಿಹರನ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದ ಮಹತ್ವದ ಐತಿಹಾಸಿಕ ದಾಖಲೆಯಾಗಿದ್ದು, ಕರಾವಳಿಯ ಮಧ್ಯಯುಗೀನ ಇತಿಹಾಸದ ಅಧ್ಯಯನಕ್ಕೆ ಹೊಸ ಆಯಾಮವನ್ನು ನೀಡಿದೆ.
ಪುರಾತತ್ವ ಶಾಸ್ತ್ರಜ್ಞ, ಉಡುಪಿಯ ಅದಿಮ ಕಲಾ ಟ್ರಸ್ಟ್ನ ಸ್ಥಾಪಕ ಸಂಚಾಲಕ ಹಾಗೂ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಅಪರೂಪದ ಶಿಲಾಶಾಸನವನ್ನು ಶಿರ್ವದ ಮುಲ್ಕಿ ಸುಂದರ್ರಾಮ್ ಶೆಟ್ಟಿ ಕಾಲೇಜಿನ ಪ್ರಥಮ ವರ್ಷದ ಬಿ.ಎ. ಪುರಾತತ್ತ್ವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಸಿಂಚಿತ್ ಎಂ. ಮತ್ತು ಶೋಧನ್ ಬಿ. ಅವರು ಮೊದಲು ಗುರುತಿಸಿ ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.
ಬಳಪದ ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಶಾಸನವು 46.5 ಸೆಂ.ಮೀ. ಎತ್ತರ ಹಾಗೂ 23 ಸೆಂ.ಮೀ. ಅಗಲ ಹೊಂದಿದ್ದು, ಒಟ್ಟು 34 ಸಾಲುಗಳನ್ನು ಒಳಗೊಂಡಿದೆ. ಸ್ವಸ್ತಿಕ ಲಾಂಛನ ಮತ್ತು ಶೈವ ಸ್ತುತಿಯೊಂದಿಗೆ ಆರಂಭವಾಗುವ ಶಾಸನದಲ್ಲಿ ಶಕ ವರ್ಷ 1039, ಪ್ರಭವ ಸಂವತ್ಸರ ಎಂದು ಕಾಲಮಾನವನ್ನು ಉಲ್ಲೇಖಿಸಲಾಗಿದೆ. ಆದರೆ ಈ ಕಾಲಮಾನವು ಕ್ರಿ.ಶ. 1116-17ಕ್ಕೆ ಸಂಬಂಧಿಸಿದ್ದು, ವಿಜಯನಗರದ ಆಳ್ವಿಕೆಯ ಕಾಲಕ್ಕೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ ಶಾಸನದಲ್ಲಿ ಉಲ್ಲೇಖಿಸಿರುವ ಶಕ ವರ್ಷವು ತಪ್ಪಾಗಿ ನಮೂದಾಗಿರಬಹುದೆಂದು ಸಂಶೋಧನೆಯಿಂದ ತಿಳಿದುಬಂದಿದೆ.
ಶಾಸನದ ಇತರ ಐತಿಹಾಸಿಕ ಮಾಹಿತಿಗಳನ್ನು ಆಧರಿಸಿ ಉದ್ದೇಶಿತ ಕಾಲಮಾನ ಶಕ ವರ್ಷ 1309 ಆಗಿರಬಹುದೆಂದು ಪ್ರೊ. ಮುರುಗೇಶಿ ಅಭಿಪ್ರಾಯಪಟ್ಟಿದ್ದಾರೆ. ಈ ಕಾಲಮಾನವು ಪ್ರಭವ ಸಂವತ್ಸರಕ್ಕೆ ಹೊಂದಿಕೆಯಾಗುವುದರ ಜೊತೆಗೆ ಕ್ರಿ.ಶ. 1386ರಲ್ಲಿ ಮಹಾಪ್ರಧಾನ ಮಲ್ಲಪ್ಪ ಒಡೆಯರು ಬಾರಕೂರು ರಾಜ್ಯದ ರಾಜ್ಯಪಾಲರಾಗಿದ್ದರೆಂಬುದನ್ನು ನೀಲಾವರ ಮತ್ತು ಆತ್ರಾಡಿಯ ಶಾಸನಗಳು ದೃಢಪಡಿಸುತ್ತವೆ. ಪ್ರಸ್ತುತ ಶಾಸನವೂ ಮಲ್ಲಪ್ಪ ಒಡೆಯರು ಬಾರಕೂರು ರಾಜ್ಯವನ್ನು ಆಳುತ್ತಿದ್ದ ವಿಷಯವನ್ನು ಉಲ್ಲೇಖಿಸುವುದರಿಂದ, ಇದು ವಿಜಯನಗರದ ಎರಡನೇ ಹರಿಹರನ ಆಳ್ವಿಕೆಯ ಹತ್ತನೇ ವರ್ಷವಾದ ಕ್ರಿ.ಶ. 1387ಕ್ಕೆ ಸೇರಿದ್ದಾಗಿದೆ ಎಂದು ನಿರ್ಣಯಿಸಲಾಗಿದೆ.
ಶಾಸನದಲ್ಲಿ ಎರಡನೇ ಹರಿಹರನನ್ನು ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಸಮುದ್ರಾಧೀಶ್ವರನೆಂದು ಬಣ್ಣಿಸಲಾಗಿದೆ. ಶ್ರೀವೀರ ಹರಿಯಪ್ಪ ಒಡೆಯರು ಸಾಮ್ರಾಜ್ಯದ ಆಡಳಿತಗಾರರಾಗಿದ್ದ ಸಂದರ್ಭದಲ್ಲಿ ಅವರ ಆದೇಶದಂತೆ ಮಹಾಪ್ರಧಾನ ಮಲ್ಲಪ್ಪ ಒಡೆಯರು ಬಾರಕೂರು ರಾಜ್ಯವನ್ನು ಆಳುತ್ತಿದ್ದರೆಂಬ ವಿವರವನ್ನು ಶಾಸನ ಒಳಗೊಂಡಿದೆ.
ಮುಂದುವರಿದು, ಮಲ್ಲಪ್ಪ ಒಡೆಯರು ದತ್ತಾಳ್ವರ ಬಳಿಯ ರಾಜ್ಯವನ್ನು ಸಂಗಣ ಜಯ ಅರಸರು ಅವರಿಗೆ ವಹಿಸಿಕೊಟ್ಟಿದ್ದರೆಂದು ಉಲ್ಲೇಖಿಸಲಾಗಿದೆ. ಬಳಿಕ ಸಂಗಣ ಜಯ ಅರಸರು ನಂದಳಿಕೆಯ ಎರಡು ಬಾಳುಗಳನ್ನು ಕೋಟೀಶ್ವರಾಳ್ವ ಮತ್ತು ಕಡಂಬಾಳ್ವ ಎಂಬ ಅಣ್ಣ-ತಮ್ಮಂದಿರಿಗೆ ಬ್ರಹ್ಮದಾಯವಾಗಿ ನೀಡಿದ ವಿಷಯವನ್ನು ಶಾಸನ ದಾಖಲಿಸಿದೆ.
ಈ ಎರಡೂ ಬಾಳುಗಳವರು ಕಾರ್ಕಳದ ಬ್ರಹ್ಮೀಶ್ವರ ದೇವರಿಗೆ ಪುರಾಣ ಪ್ರವಚನ ಮಾಡುತ್ತಿದ್ದ ಬ್ರಾಹ್ಮಣರಿಗೆ ಪ್ರತಿವರ್ಷ ಆರು ಮೂಡೆ ಭತ್ತವನ್ನು ತಪ್ಪದೆ ನೀಡಬೇಕೆಂದು ಸಂಗಣ ಜಯ ಅರಸರು ಧರ್ಮದ ಅಡಕವನ್ನು ವಿಧಿಸಿದ್ದರು. ಈ ನಿಯಮವನ್ನು ಉಲ್ಲಂಘಿಸಿದವರು ಅರಸರಿಗೆ 500 ಗದ್ಯಾಣ ಹಾಗೂ ದೇವರಿಗೆ 250 ಗದ್ಯಾಣ ದಂಡ ಪಾವತಿಸಬೇಕೆಂಬ ಷರತ್ತನ್ನೂ ಶಾಸನದಲ್ಲಿ ದಾಖಲಿಸಲಾಗಿದೆ.
ಶಾಸನವನ್ನು ಸಂಗಣ ಜಯ ಅರಸರ ಸೇನಭೋವ ವಿಟ್ಟಣ್ಣ ಎಂಬವರು ಬರೆದಿದ್ದು, ಕೊನೆಯಲ್ಲಿ ಶಾಪಾಶಯದೊಂದಿಗೆ ಮಂಗಳವಾಕ್ಯವನ್ನು ಉಲ್ಲೇಖಿಸಲಾಗಿದೆ. ವಿಶೇಷವೆಂದರೆ, ಶಾಸನದ ಕನ್ನಡ ಭಾಷೆಯ ಮಧ್ಯೆ ಸಂಭುವೇ, ಸಾಲೆತ್ತಿಯ, ನಟ್ಟು, ಕಿನ್ನಿ, ಯಿಲಡ ಮೊದಲಾದ ತುಳು ಪದಗಳು ಸಹಜವಾಗಿ ಬಳಕೆಯಾಗಿವೆ. ಇದು ಆ ಕಾಲಘಟ್ಟದಲ್ಲಿ ಕನ್ನಡ ಮತ್ತು ತುಳು ಭಾಷೆಗಳ ನಡುವಿನ ನಿಕಟ ಭಾಷಾ ಹಾಗೂ ಸಾಂಸ್ಕೃತಿಕ ಸಂಬಂಧಕ್ಕೆ ಸಾಕ್ಷಿಯಾಗಿದೆ.
ನಂದಳಿಕೆಯ ಇತಿಹಾಸಕ್ಕೆ ಮಹತ್ವದ ದಾಖಲೆ
ಈ ಶಾಸನವು ಮಧ್ಯಯುಗೀನ ನಂದಳಿಕೆಯ ಅರಸು ಮನೆತನದ ಆರಂಭಿಕ ಚರಿತ್ರೆಯ ಮೇಲೆ ಮಹತ್ವದ ಬೆಳಕು ಚೆಲ್ಲುತ್ತದೆ. ಸಾಲೆತ್ತಿ ಬಳಿಯ ದಾಸೆಟ್ಟಿಯರ ಅಳಿಯನಾದ ಕೋಟೀಶ್ವರಾಳ್ವರು ನಂದಳಿಕೆಯ ಜನನದ ಸೊಪ್ಪಿಕ್ಕಿದರು ಎಂಬ ಉಲ್ಲೇಖದ ಹಿನ್ನೆಲೆಯಲ್ಲಿ, ಕ್ರಿ.ಶ. 1387ರಲ್ಲಿ ನಂದಳಿಕೆಯಲ್ಲಿ ಅರಮನೆ ನಿರ್ಮಾಣವಾಗಿತ್ತು ಎಂಬ ಐತಿಹಾಸಿಕ ಮಾಹಿತಿ ಈ ಶಾಸನದಿಂದ ಲಭ್ಯವಾಗುತ್ತದೆ ಎಂದು ಪ್ರೊ. ಮುರುಗೇಶಿ ವಿವರಿಸಿದ್ದಾರೆ.
ಅಲ್ಲದೆ, ಶಾಸನದಲ್ಲಿ ಉಲ್ಲೇಖವಾಗಿರುವ ಸಂಗಣ ಜಯ ಅರಸರು ಯಾರು? ಕಾರ್ಕಳದ ಬ್ರಹ್ಮೀಶ್ವರ ದೇವರ ದೈವಸ್ಥಾನ ಎಲ್ಲಿದೆ? ಎಂಬ ಪ್ರಮುಖ ಐತಿಹಾಸಿಕ ಪ್ರಶ್ನೆಗಳಿಗೆ ಇನ್ನೂ ಉತ್ತರ ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಹಾಗೂ ಕ್ಷೇತ್ರ ಅಧ್ಯಯನದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಅಪರೂಪದ ಶಾಸನದ ಪತ್ತೆ ಹಾಗೂ ಅಧ್ಯಯನ ಕಾರ್ಯದಲ್ಲಿ ನಂದಳಿಕೆ ಅರಮನೆಯ ಸುಹಾಸ್ ಹೆಗ್ಡೆ, ಸರಳಾ ಎಸ್. ಹೆಗ್ಡೆ, ಮೂಲ್ಕಿಯ ಗಜನಿ ಫೌಂಡೇಶನ್ ಅಧ್ಯಕ್ಷ ಸುರೇಶ್ ಚಿತ್ರಾಪು ಮತ್ತು ರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ರಘುರಾಮ್ ಶೆಟ್ಟಿ ಗುಳ್ಳಾಡಿ ಅವರು ಸಹಕಾರ ನೀಡಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ, ಬಾರಕೂರು ರಾಜ್ಯದ ಇತಿಹಾಸ, ನಂದಳಿಕೆಯ ಅರಸು ಮನೆತನದ ಬೆಳವಣಿಗೆ ಹಾಗೂ ಕನ್ನಡ-ತುಳು ಭಾಷೆಗಳ ಐತಿಹಾಸಿಕ ಸಂಬಂಧವನ್ನು ತಿಳಿಯಲು ಈ ಶಾಸನ ಮಹತ್ವದ ಆಕರವಾಗಿದ್ದು, ಕರಾವಳಿಯ ಪ್ರಾಚೀನ ಇತಿಹಾಸದ ಸಂಶೋಧನೆಗೆ ಹೊಸ ದಾರಿಯನ್ನು ತೆರೆದಿದೆ.



