October 29, 2026
Mumbai News Kannada
ಸುದ್ದಿ

ಅಗ್ರಿಗೋಲ್ಡ್ ಹಣ ವಾಪಸಾತಿ ವದಂತಿ: ಉಡುಪಿ ಎಸ್ಪಿ ಕಚೇರಿಗೆ ಸಂತ್ರಸ್ತರ ದೌಡು



ತಕ್ಷಣ ಹಣ ಪಾವತಿಯ ಖಾತರಿ ಇಲ್ಲ; ಮುಂದಿನ ಕಾನೂನು ಪ್ರಕ್ರಿಯೆಗಾಗಿ ದಾಖಲೆ ಸಂಗ್ರಹ

ಜಯ ಸಿ. ಪೂಜಾರಿ, ಕೆಳಾರ್ಕಳ ಬೆಟ್ಟು

ಉಡುಪಿ, ಅ. 28: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಹಣ ವಾಪಸ್ ಸಿಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ನೂರಾರು ಸಂತ್ರಸ್ತರು ಅಕ್ಟೋಬರ್ 28ರಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಧಾವಿಸಿದರು.

ಅಗ್ರಿಗೋಲ್ಡ್ ವಂಚನೆ ಪ್ರಕರಣದ ಸಂತ್ರಸ್ತರ ದಾಖಲೆ ಸಂಗ್ರಹ ಕಾರ್ಯವನ್ನು ಆಂಧ್ರಪ್ರದೇಶ ಸಿಐಡಿ ಮತ್ತು ಕರ್ನಾಟಕ ಸಿಐಡಿ ಜಂಟಿಯಾಗಿ ರಾಜ್ಯದ ಒಂಬತ್ತು ಕೇಂದ್ರಗಳಲ್ಲಿ ಅಕ್ಟೋಬರ್ 27ರಿಂದ ಆರಂಭಿಸಿವೆ. ಉಡುಪಿ ಕೇಂದ್ರದಲ್ಲಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಂತ್ರಸ್ತರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ದಿನವೊಂದಕ್ಕೆ 150 ಮಂದಿಗೆ ಟೋಕನ್ ನೀಡುವ ವ್ಯವಸ್ಥೆಯಿದ್ದರೂ, ವದಂತಿಯಿಂದಾಗಿ ನೂಕುನುಗ್ಗಲು ಉಂಟಾಯಿತು. ಬಳಿಕ ಪೊಲೀಸರು ಸಂತ್ರಸ್ತರಿಗೆ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿ ಸಮಾಧಾನಪಡಿಸಿದರು.

ಸಂತ್ರಸ್ತರು ಮೂಲ ಅಗ್ರಿಗೋಲ್ಡ್ ಬಾಂಡ್, ನಗದು ರಸೀದಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್‌ನ ಛಾಯಾಪ್ರತಿ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ತರಬೇಕು. ಈ ದಾಖಲೆ ಸಂಗ್ರಹವು ತಕ್ಷಣದ ಹಣ ಪಾವತಿಯ ಖಾತರಿಯಲ್ಲ; ಮುಂದಿನ ಕಾನೂನು ಪ್ರಕ್ರಿಯೆಗಾಗಿ ನಡೆಯುತ್ತಿರುವ ಕಾರ್ಯವಾಗಿದೆ ಎಂದು ಸಿಐಡಿ ಸ್ಪಷ್ಟಪಡಿಸಿದೆ.

ಸಂತ್ರಸ್ತರಿಗೆ ಶೀಘ್ರ ನ್ಯಾಯ ದೊರೆಯಲಿ

ಅಗ್ರಿಗೋಲ್ಡ್ ಹಗರಣದಿಂದ ಸುಮಾರು 32 ಲಕ್ಷ ಹೂಡಿಕೆದಾರರು ಅಂದಾಜು 6,380 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ವಂಚನೆಯಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ವಯೋವೃದ್ಧ ಸಂತ್ರಸ್ತರಲ್ಲಿ ಕೆಲವರಿಗೆ ಸ್ಮರಣಶಕ್ತಿ ಕುಂದಿರುವುದರಿಂದ ಹೂಡಿಕೆಯ ದಾಖಲೆಗಳನ್ನು ಪತ್ತೆಹಚ್ಚುವುದೂ ಕಷ್ಟವಾಗಿದೆ.

ವರ್ಷಗಳಿಂದ ತಮ್ಮ ಹಣಕ್ಕಾಗಿ ಕಾಯುತ್ತಿರುವ ಸಂತ್ರಸ್ತರ ನೋವನ್ನು ಸರ್ಕಾರ ಮತ್ತು ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ, ಕಾನೂನು ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಮೂಲಕ ಅರ್ಹ ಹೂಡಿಕೆದಾರರಿಗೆ ಸಾಧ್ಯವಾದಷ್ಟು ಬೇಗ ಹಣ ವಾಪಸ್ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಂತ್ರಸ್ತರ ಆಶಯವಾಗಿದೆ.



Related posts

ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿನ ನೂತನ ಅಧ್ಯಕ್ಷ : ಜೆಸಿ ವಿಕ್ಕಿ ಪೂಜಾರಿ ಮಡುಂಬು

Mumbai News Desk

ಸ್ಥಳೀಯರ ಹಕ್ಕುಗಳ ರಕ್ಷಣೆಗೆ ಬೃಹತ್ ಪ್ರತಿಭಟನೆ: ಹೆಜಮಾಡಿ–ಪಡುಬಿದ್ರಿ ಟೋಲ್ ಹೋರಾಟ ಸಮಿತಿಯಿಂದ ಪೋಸ್ಟರ್ ರಿಲೀಸ್

Mumbai News Desk

ಉಡುಪಿ : ಪೊಲೀಸರಿಂದ ಯುವತಿಗೆ ಹಲ್ಲೆ ಪ್ರಕರಣ, ಬಿಲ್ಲವ ಸಮುದಾಯದ ಆಕ್ರೋಶ – ಘಟನೆಯ ಹಿನ್ನೆಲೆ ಏನು?

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (MPL 2026): ಹರಾಜು ಪ್ರಕ್ರಿಯೆ ಯಶಸ್ವಿ; ₹4 ಲಕ್ಷಕ್ಕೆ ಕುಂದಾಪುರ ಲೆಜೆಂಡ್ಸ್ ಮುಂಚೂಣಿಯಲ್ಲಿ

Mumbai News Desk

” ಸಾಧನೆಯ ಮೂಲಕ ಮನಸ್ಸನ್ನು ತಿಳಿಗೊಳಿಸುವುದೇ ಜೀವನದ ಮುಖ್ಯ ಉದ್ದೇಶ “: ಶ್ರೀ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ.

Mumbai News Desk

ಸಿ. ಟಿ. ಸಾಲಿಯಾನ್ ರವರಿಗೆ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಶ್ರಧಾಂಜಲಿ ಸಭೆ .

Mumbai News Desk