ಕಾಪು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ, ಸಾಮಾಜಿಕ ಸೇವೆ ಹಾಗೂ ದೇವಳದ ಧಾರ್ಮಿಕ ಕೈಂಕರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಮಾಜ ಸೇವಕ ಕಾಪು ಜಯರಾಮ ಆಚಾರ್ಯ ಅವರಿಗೆ ‘ಸೇವಾರತ್ನ’ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾಪುವಿನ ಅಮ್ಮನವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಸ್ವರ್ಣ ಗದ್ದುಗೆಯ ನಿರ್ಮಾಣ ಕಾರ್ಯದಲ್ಲಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕರಾಗಿ ಹಾಗೂ ಪ್ರಚಾರ ಸಮಿತಿಯ ಸಂಚಾಲಕರಾಗಿ ಜಯರಾಮ ಆಚಾರ್ಯರು ಪೂರ್ಣ ಪ್ರಮಾಣದ ಸಹಕಾರ ನೀಡಿ ಸೇವೆ ಸಲ್ಲಿಸಿದ್ದರು. ಈ ನಿಷ್ಠಾವಂತ ಸೇವೆಯನ್ನು ಗುರುತಿಸಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ, ಭಕ್ತಾದಿಗಳ ಸಮ್ಮುಖದಲ್ಲಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಸದಸ್ಯರಾದ ಮಾಧವ ಆರ್. ಪಾಲನ್, ರವೀಂದ್ರ ಮಲ್ಲಾರ್, ಚರಿತ ದೇವಾಡಿಗ, ಯೋಗೀಶ್ ಶೆಟ್ಟಿ ಪಳ್ಳಿ, ರವಿರಾಜ್ ಶೆಟ್ಟಿ ಕಾಪು ಹಾಗೂ ದೇವಸ್ಥಾನದ ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.



