30 C
Mumbai
September 12, 2026
Mumbai News Kannada
ಸುದ್ದಿ

ಏಷ್ಯಾ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ನಿಖಿಲ್ ಪೂಜಾರಿಗೆ ಎರಡು ಚಿನ್ನದ ಪದಕ





ಥೈಲ್ಯಾಂಡ್‌ನಲ್ಲಿ ಅದ್ಭುತ ಸಾಧನೆ; ಭಾರತಕ್ಕೆ ಕೀರ್ತಿ ತಂದ ಕೆರ್ವಾಶೆಯ ಯುವ ಪ್ರತಿಭೆ

ಉಡುಪಿ: ನಿರಂತರ ಪರಿಶ್ರಮ, ಕಠಿಣ ಅಭ್ಯಾಸ ಹಾಗೂ ಯೋಗಾಸನದ ಮೇಲಿನ ಅಪಾರ ಆಸಕ್ತಿಯಿಂದ ಕಾರ್ಕಳ ತಾಲೂಕಿನ ಕೆರ್ವಾಶೆಯ ಯುವಕ ನಿಖಿಲ್ ಎ. ಪೂಜಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಥೈಲ್ಯಾಂಡ್‌ನಲ್ಲಿ ಇತ್ತೀಚೆಗೆ 6/ 9/ 2026 ರಂದು ನಡೆದ WFFYSI ಏಷ್ಯಾ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ನಿಖಿಲ್, Senior A ವಿಭಾಗದ Artistic Solo ಹಾಗೂ Traditional Yogasana ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಈ ಮೂಲಕ ಏಷ್ಯಾ ಮಟ್ಟದಲ್ಲಿ ಭಾರತ, ಕರ್ನಾಟಕ ಹಾಗೂ ಉಡುಪಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಬಾಲ್ಯದಿಂದಲೇ ಯೋಗದತ್ತ ಒಲವು

2006ರ ಡಿಸೆಂಬರ್ 3ರಂದು ಜನಿಸಿದ ನಿಖಿಲ್, ದಿವಂಗತ ಆನಂದ ಪೂಜಾರಿ ಹಾಗೂ ಕುಸುಮ ಪೂಜಾರಿ ದಂಪತಿಯ ಪುತ್ರ. ಅಜಯ್ ಮತ್ತು ದಿವ್ಯಾ ಅವರ ಕಿರಿಯ ಸಹೋದರ. ಬಾಲ್ಯದಿಂದಲೇ ಯೋಗಾಸನದತ್ತ ವಿಶೇಷ ಆಸಕ್ತಿ ಹೊಂದಿದ್ದ ನಿಖಿಲ್, ನಿರಂತರ ಅಭ್ಯಾಸ ಮತ್ತು ಶಿಸ್ತಿನ ಮೂಲಕ ಈ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.

ಶೈಕ್ಷಣಿಕ ಪಯಣ

ನಿಖಿಲ್ ಅವರು ಕೆರ್ವಾಶೆ ಮೈನ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ ಮಿಯಾರು ಮೊರಾರ್ಜಿ ದೇಸಾಯಿ ಆಂಗ್ಲಮಾಧ್ಯಮ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು.

ನಂತರ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿ, ಪ್ರಸ್ತುತ ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಂದುವರಿಸುತ್ತಿದ್ದಾರೆ.

ಸಾಧನೆಗೆ ಮಾರ್ಗದರ್ಶಕರ ಪ್ರೋತ್ಸಾಹ

ನಿಖಿಲ್ ಅವರ ಯೋಗ ಪಯಣಕ್ಕೆ ಆರಂಭದಿಂದಲೇ ಸೂಕ್ತ ಮಾರ್ಗದರ್ಶನ ದೊರೆತಿದೆ. ಮಿಯಾರು ಮೊರಾರ್ಜಿ ದೇಸಾಯಿ ಶಾಲೆಯ ದೈಹಿಕ ಶಿಕ್ಷಕ ಜಗದೀಶ್ ಎಚ್. ಹಾಗೂ ಕಾರ್ಕಳದ ದೈಹಿಕ ಶಿಕ್ಷಕ ನರೇಂದ್ರ ಕಾಮತ್ ಅವರು ನಿಖಿಲ್ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರು.

ಪ್ರಸ್ತುತ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ವನೀಶಾ ರೋಡ್ರಿಗಸ್ ಹಾಗೂ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಸುಧೀರ್ ಎಂ. ಅವರ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ನಿಖಿಲ್ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಬೆಳೆಸಿಕೊಂಡಿದ್ದಾರೆ.

ರಾಜ್ಯದಿಂದ ರಾಷ್ಟ್ರ, ಅಲ್ಲಿಂದ ಏಷ್ಯಾ ವೇದಿಕೆಗೆ

ನಿಖಿಲ್ ಮೂರು ಬಾರಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. 2026ರಲ್ಲಿ ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯ Artistic Solo ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು.

ರಾಷ್ಟ್ರಮಟ್ಟದ ಈ ಗೆಲುವು ಅವರಿಗೆ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಕಲ್ಪಿಸಿತು.

ಥೈಲ್ಯಾಂಡ್‌ನಲ್ಲಿ ಭಾರತದ ಪರವಾಗಿ ಎರಡು ಚಿನ್ನ

ಥೈಲ್ಯಾಂಡ್‌ನಲ್ಲಿ ನಡೆದ WFFYSI ಏಷ್ಯಾ ಯೋಗಾಸನ ಚಾಂಪಿಯನ್‌ಶಿಪ್‌ನ Senior A ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ನಿಖಿಲ್, Artistic Solo ಮತ್ತು Traditional Yogasana ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಬರುವಲ್ಲಿ ಫೋರ್ಟಿನ ವಿದ್ಯಾದಾಯನಿ ಭಜನಾ ಮಂಡಳಿಯ ಇವರ ಮಾವ ಸದಾನಂದ ಪೂಜಾರಿಯವರ ಪ್ರೋತ್ಸಾಹ ಬಹಳ ಪ್ರಾಮುಖ್ಯ ಪಡೆಯಿತು.

ರಾಜ್ಯಮಟ್ಟದ ಸ್ಪರ್ಧೆಗಳಿಂದ ಆರಂಭವಾದ ನಿಖಿಲ್ ಅವರ ಯೋಗ ಪಯಣ, ರಾಷ್ಟ್ರಮಟ್ಟದ ಗೆಲುವಿನ ಮೂಲಕ ಏಷ್ಯಾ ವೇದಿಕೆಗೆ ತಲುಪಿದೆ. ಇದೀಗ ಥೈಲ್ಯಾಂಡ್‌ನಲ್ಲಿ ಭಾರತದ ಪರವಾಗಿ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಅವರು ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದ್ದಾರೆ.

ನಿಖಿಲ್ ಅವರ ಈ ಯಶಸ್ಸಿನ ಹಿಂದೆ ಅವರ ನಿರಂತರ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ, ಕಠಿಣ ಅಭ್ಯಾಸ ಹಾಗೂ ಯೋಗಾಸನದ ಮೇಲಿನ ಅಪಾರ ಪ್ರೀತಿ ಪ್ರಮುಖ ಕಾರಣಗಳಾಗಿವೆ. ಅವರ ಸಾಧನೆಯಿಂದ ಕೆರ್ವಾಶೆ ಗ್ರಾಮದ ಹೆಸರೂ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದೆ.

ನಿಖಿಲ್ ಅವರು ಮುಂದಿನ ದಿನಗಳಲ್ಲಿ ಯೋಗಾಸನ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ. ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಮತ್ತಷ್ಟು ಪದಕಗಳನ್ನು ತಂದುಕೊಡಲಿ ಹಾಗೂ ತಾಯ್ನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಬೆಳಗಿಸಲಿ ಎಂದು ಹಾರೈಸುತ್ತೇನೆ.

ಶುಭ ಹಾರೈಕೆಗಳೊಂದಿಗೆ,

ಜಯ ಸಿ. ಪೂಜಾರಿ
ಕೆಳಾರ್ಕಳ ಬೆಟ್ಟು



Related posts

ಮಾದಕ ವ್ಯಸನ ವಿರೋಧಿ ಅಭಿಯಾನ – “ಜಾಗೃತಿ, ಸಂವಾದ ಮತ್ತು ಸಮಾಲೋಚನೆ”_

Mumbai News Desk

ಟ್ರಂಪ್ ಸುಂಕ ನೀತಿಯಿಂದ ತಲ್ಲಣ : ಭಾರತ ಸೇರಿದಂತೆ ವಿಶ್ವದಾದ್ಯಂತ ಶೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

Mumbai News Desk

ಡಹಾಣೂವಿನ ಉದ್ಯಮಿ ಸಮಾಜಸೇವಕ ಅಶೋಕ್ ಎಸ್‌. ಶೆಟ್ಟಿ ಉಳೆಪಾಡಿ ಇವರಿಗೆ ವಿಶೇಷ ಸನ್ಮಾನ

Mumbai News Desk

ನ್ಯೂ ಪನ್ವೇಲ್  ಶ್ರೀ ವೃಂದಾವನ ಬಾಬಾ ಅಯ್ಯಪ್ಪ ಭಕ್ತ ವೃಂದ19ನೇ ಶ್ರೀ ಅಯ್ಯಪ್ಪ ಮಹಾಪೂಜೆ

Mumbai News Desk

ಬೊಯಿಸರ್ ಸೋಮೇಶ್ವರ ಮಂದಿರ :17ನೇ ವರ್ಧಂತ್ಯುತ್ಸವ ಸಂಪನ್ನ  

Mumbai News Desk

ಸುಧಾಮೂರ್ತಿ ರಾಜ್ಯಸಭೆಗೆ ನೇಮಕ

Mumbai News Desk