ಕಾಪು/ಮುಂಬೈ: ದಕ್ಷಿಣ ಭಾರತೀಯ ಚಿತ್ರರಂಗ ಹಾಗೂ ಕಿರುತೆರೆಯ ನಟಿ ರೇಖಾ ವಿ. ಕುಮಾರ್ ಅವರು ತಮ್ಮ ಪುತ್ರಿಯೊಂದಿಗೆ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಾಪು ಶ್ರೀ ಮಾರಿಯಮ್ಮನ ಸನ್ನಿಧಾನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದು ಪುನೀತರಾದರು.
ದೇವಸ್ಥಾನಕ್ಕೆ ಆಗಮಿಸಿದ ನಟಿಯನ್ನು ದೇವಳದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಅವರು ಗರ್ಭಗುಡಿಯಲ್ಲಿ ನೆಲೆಸಿರುವ ಶ್ರೀ ಮಾರಿಯಮ್ಮನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿ ರೇಖಾ ವಿ. ಕುಮಾರ್ ಮತ್ತು ಅವರ ಪುತ್ರಿಗೆ ಅನುಗ್ರಹ ಪ್ರಸಾದವನ್ನು ನೀಡಿ ಹರಸಿದರು.
ಇದೇ ವೇಳೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ವತಿಯಿಂದ ನಟಿ ರೇಖಾ ವಿ. ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಧಾರ್ಮಿಕ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಚಾರ ಸಮಿತಿಯ ಸಂಚಾಲಕರಾದ ರಾಕೇಶ್ ಕುಂಜೂರು, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.



