28 C
Mumbai
August 18, 2026
Mumbai News Kannada
ತುಳುನಾಡು

ಭಯ-ಭಕ್ತಿಯ ರೋಮಾಂಚನ: ಕಣ್ಮನ ಸೆಳೆದ ಕಾಪುವಿನ ಇತಿಹಾಸ ಪ್ರಸಿದ್ಧ ಪಿಲಿಕೋಲ





ತುಳುನಾಡಿನ ಪ್ರಸಿದ್ಧ ಆಚರಣೆಗಳಲ್ಲಿ ಒಂದಾದ ಐತಿಹಾಸಿಕ ಪಿಲಿಕೋಲವು ಕಾಪುವಿನಲ್ಲಿ ಭಕ್ತಿಭಾವ ಮತ್ತು ಸಂಭ್ರಮದ ನಡುವೆ ಮೇ 16ರ ಶನಿವಾರ ನೆರವೇರಿತು.

ಕಾಪುವಿನ ಪಡು ಗ್ರಾಮದ ಶ್ರೀಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ನಡೆದ ಈ ಆಚರಣೆ ತುಳುನಾಡಿನ ಪ್ರಾಚೀನ ದೈವಾರಾಧನಾ ಪರಂಪರೆಯ ಪ್ರತೀಕ. ಪಿಲಿಕೋಲಕ್ಕೂ ಮುನ್ನ ಬಬ್ಬರ್ಯ, ಕೊಡಮಣಿತ್ತಾಯ, ನಂದಿಕೇಶ್ವರ ಸೇರಿದಂತೆ ಪರಿವಾರ ದೈವಗಳ ನೇಮೋತ್ಸವ ನಡೆಯಿತು.
ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡ ಪಿಲಿಕೋಲವು ಸಂಜೆ 6 ಗಂಟೆಯವರೆಗೂ ನಡೆಯಿತು.
ಪಿಲಿ ಭೂತವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದ ಬಳಿಕ, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಟ್ಟ ಬಂಟ ಕಂಬವನ್ನೇರಿ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಬೇಟೆಗಾಗಿ ಹೊರಟಿತು. ಐದು ಗಂಟೆಗಳ ಕಾಲ ಕಾಪು ಮಾರಿಗುಡಿ ಪರಿಸರದಲ್ಲಿ ಸುತ್ತಾಡಿ ಬೇಟೆ ಯಾಡುವ ಸಂಪ್ರದಾಯ ನಡೆಯಿತು.

ಪಡು ಗ್ರಾಮದ ದೈವಸ್ಥಾನದ ಸುತ್ತಲಿನ ಸುಮಾರು 6 ರಿಂದ 7 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪಿಲಿ ಭೂತದ ಭವ್ಯ ಸಂಚಾರ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನಕ್ಕೆ ಸಂಬಂಧಪಟ್ಟ ಮನೆಗಳಲ್ಲಿ ದೈವಕ್ಕೆ ಭಕ್ತಿಪೂರ್ವಕವಾಗಿ ಹಾಲು ಮತ್ತು ಸೀಯಾಳವನ್ನು (ಎಳನೀರು) ನೀಡಿ ಪ್ರಾರ್ಥಿಸಲಾಯಿತು. ಪಿಲಿ ಭೂತದ ಸಂಚಾರದ ವೇಳೆಯಲ್ಲಿ ಹುಲಿಯ ಕೈಗೆ ಸಿಗುವುದರಿಂದ ತಪ್ಪಿಸಿಕೊಳ್ಳಲು ಭಕ್ತರು ಓಡುತ್ತಿರುವ ರೋಮಾಂಚನಕಾರಿ ದೃಶ್ಯಗಳು ಕಂಡುಬಂದವು. ಭಕ್ತರ ಸಡಗರದ ನಡುವೆಯೂ ಈ ಬಾರಿ ಮೂವರಿಗೆ ಪಿಲಿಭೂತ ಸ್ಪರ್ಶವಾಗಿದೆ.
ಹುಲಿ ವೇಷಧಾರಿ ಆವೇಶಭರಿತವಾಗಿ ಭಕ್ತರತ್ತ ಧಾವಿಸುತ್ತಿದ್ದಂತೆ ಜನರು ಭಯಭಕ್ತಿಯಿಂದ ಓಡಿಹೋಗಿ ಮತ್ತೆ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು. ಸುದೀರ್ಘ ಸಂಚಾರದ ಬಳಿಕ ಪಿಲಿದೈವ ಮಾರಿಯಮ್ಮ ದೇವಿಯ ಸನ್ನಿಧಿಗೆ ಮರಳಿದಾಗ ಪಿಲಿಕೋಲಕ್ಕೆ ತೆರೆ ಬಿದ್ದಿತು.

ಈ ಅಪರೂಪದ ಪಿಲಿ ಕೋಲದ ವೈಭವವನ್ನು ಕಣ್ತುಂಬಿಕೊಳ್ಳಲು ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಮುಂಬಾಯಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಅಸಂಖ್ಯಾತ ಭಕ್ತರು ಮತ್ತು ಜಾನಪದ ಕಲಾ ಆಸಕ್ತರು ಕಾಪುವಿಗೆ ಆಗಮಿಸಿದ್ದರು. ಸಾರ್ವಜನಿಕರು ದಾರಿಯುದ್ದಕ್ಕೂ ಸಾಲಾಗಿ ನಿಂತುಕೊಂಡು ಹುಲಿ ಭೂತದ ಗಾಂಭೀರ್ಯದ ಸವಾರಿ ಮತ್ತು ಕೋಲದ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಂಡು ಪುನೀತರಾದರು.

ಒಟ್ಟಿನಲ್ಲಿ ದೈವಾರಾಧನೆಯ ಮೂಲಕ ವಿಸ್ಮಯಗಳ ಪ್ರಂಪಚವಾಗಿರುವ ತುಳುನಾಡಿನಲ್ಲಿ ಎಲ್ಲರ ಹುಬ್ಬೇರಿಸುವ ಪಿಲಿಭೂತದ ಆರಾಧನೆ ನಡೆದಿದೆ. ಹಲವು ಸಂಶೋಧನೆ ಗಳಿಗೆ ನಾಂದಿಯಾಗಿರುವ ಈ ಅದ್ಭುತ ಆಚರಣೆ ಈ ಬಾರಿ ನಿರ್ವಿಘ್ನವಾಗಿ ನಡೆದಿದ್ದು, ಪಿಲಿಕೋಲವನ್ನು ಈ ಬಾರಿಯೂ ಸಾವಿರಾರು ಜನ ಕುತೂಹಲದಿಂದ ಕಂಡಿದ್ದಾರೆ.

ಪುರಾಣ ಪ್ರಸಿದ್ಧ ಇತಿಹಾಸ :

ಕಾಪು ಸೀಮೆಯನ್ನು ಆಳುತ್ತಿದ್ದ ಭೈರರಸು ತನ್ನ ಅರಮನೆಯ ಪಂಜರದಲ್ಲಿ ಹುಲಿಯನ್ನು ಸಾಕುತ್ತಿದ್ದರು. ಕಾಲಕ್ರಮೇಣ ಹುಲಿಯನ್ನು ಸಾಕಲು ಕಷ್ವವಾದ ಸಂಧರ್ಭದಲ್ಲಿ ತನ್ನ ಸೀಮೆ ಪೊರೆಯುವ ಮಾರಿಯಮ್ಮನ ಅನುಮತಿ ಕೇಳಿ ಹುಲಿಯನ್ನು ಕಾಡಿಗೆ ಬಿಡುವ ಆಲೋಚನೆ ಮಾಡಿದ. ಆ ದಿನ ರಾತ್ರಿ ರಾಜನ ಕನಸಲ್ಲಿ ಬಂದ ಮಾರಿಯಮ್ಮ ಆ ಹುಲಿ ದೈವಾಂಶ ಸಂಭೂತವಾಗಿದ್ದು, ತನ್ನ ದೇವಸ್ಥಾನದ ಬಲಭಾಗದಲ್ಲಿರುವ ಸ್ಥಳದಲ್ಲಿ ಹುಲಿಗಳಿಗೊಂದು ಆಲಯ ಕಟ್ಟಿಸಿ ಅವುಗಳನ್ನೂ ಆರಾಧಿಸಲು ಕರೆ ಕೊಡುತ್ತಾಳೆ. ಇದರಂತೇ ಪಿಲಿಭೂತವಾಗಿ ನಂಬಲಾಗಿದೆ ಎಂಬ ಪುರಾಣ ಹಿನ್ನೆಲೆಯಿದೆ.

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಪಿಲಿ ಕೋಲ ಆರಂಭವಾಗಿ ಸತತ ಐದು ಗಂಟೆಗಳ ಕಾಲ ನಡೆಯುತ್ತದೆ. ಪಿಲಿ ದೈವ ಐದು ಗಂಟೆಗಳ ಕಾಲ ಕಾಪು ಮಾರಿಗುಡಿ ಪರಿಸರದಲ್ಲಿ ಸುತ್ತಾಡಿ, ಬೇಟೆಯಾಡಿ, ಮುಟ್ಟಲು ಬರುವ ಅಪಾರ ಸಂಖ್ಯೆಯ ಜನರನ್ನು ಚದುರಿಸುತ್ತದೆ. ಐದು ಗಂಟೆಗಳ ಧೀರ್ಘ ಸುತ್ತಾಟದ ಬಳಿಕ ಹುಲಿ ಮಾರಿಯಮ್ಮ ಮುಂದೆ ಬಂದು‌ನಿಂತ ಬಳಿಕ ಪಿಲಿ ಕೋಲ ಮುಕ್ತಾಯ ಆಗುತ್ತದೆ.



Related posts

ಉಡುಪಿ ಶೀರೂರು ಪರ್ಯಾಯ ಮಹೋತ್ಸವ: ಕಿನ್ನಿಮೂಲ್ಕಿಯಲ್ಲಿ ತಾರೆಯರ ಸಮಾಗಮ ಹಾಗೂ ಸಾಧಕ ಕಲಾವಿದರಿಗೆ ಸನ್ಮಾನ

Mumbai News Desk

ಉಡುಪಿ : ಪರ್ಯಾಯ ಆಚರಣೆಯ ಅಂಗವಾಗಿ ನಡೆದ ಧಾನ್ಯ ಮುಹೂರ್ತ

Mumbai News Desk

ಬಿರುವೆರ್‌ ಕಾಪು ಸೇವಾ ಸಮಿತಿ ವತಿಯಿಂದ ಆಟಿ ಕಷಾಯ ವಿತರಣೆ

Mumbai News Desk

ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ “ಮೂಲ್ಕಿಯ ಕೀರ್ತಿಶೇಷ ಸಾಧಕರು” ಕೃತಿ ಬಿಡುಗಡೆ ಸಮಾರಂಭ

Mumbai News Desk

ಮೂಲ್ಕಿ : ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ, ಸಮಾಜಿಕ ಕಾರ್ಯಕರ್ತ ಜನಾರ್ಧನ ಬಂಗೇರ ಅವರಿಗೆ ಸನ್ಮಾನ

Mumbai News Desk

ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನ – ವಾರ್ಷಿಕ ಬಂಡಿ ನೇಮೋತ್ಸವ ಸಂಪನ್ನ

Mumbai News Desk