ಹಿರಿಯ ಕಲಾವಿದರನ್ನು ಗೌರವಿಸುವ ಕಾರ್ಯ ಇನ್ನಷ್ಟು ನಡೆಯಲಿ: ಐಕಳ ಹರೀಶ್ ಶೆಟ್ಟಿ
ಸುರತ್ಕಲ್: ಸಮಾಜದಲ್ಲಿ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯಗಳು ಇನ್ನಷ್ಟು ಹೆಚ್ಚಾಗಿ ನಡೆಯಬೇಕಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಇಲ್ಲಿನ ಬಂಟರ ಭವನದಲ್ಲಿ ಮಂಗಳೂರಿನ ಹಿರಿಯ ಪತ್ರಕರ್ತ, ಸಂಘಟಕ ಬಾಳ ಜಗನ್ನಾಥ ಶೆಟ್ಟಿ ಅವರ ನೇತೃತ್ವದ ರಂಗಚಾವಡಿ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಹಾಗೂ ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ.) ಸುರತ್ಕಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 1ರಂದು ಆಯೋಜಿಸಲಾಗಿದ್ದ “ರಂಗು ರಂಗಿನ ರಂಗೋತ್ಸವ” ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಚಾವಡಿ ಸಂಸ್ಥೆಯು ನಿರಂತರ ಕಲಾ ಸೇವೆಯೊಂದಿಗೆ ಜಿಲ್ಲೆಯ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಪುರಸ್ಕರಿಸುತ್ತಿದೆ. ಸ್ಥಳೀಯ ನಿವಾಸಿಗಳಿಗೆ ಉತ್ತಮ ಸಾಂಸ್ಕೃತಿಕ ಮನರಂಜನೆ ನೀಡುವ ನಿಟ್ಟಿನಲ್ಲಿ ಸುಭಾಷಿತನಗರ ಅಸೋಸಿಯೇಶನ್ ಜೊತೆಗೂಡಿ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ರಂಗಭೂಷಣ, ಹಿರಿಯ ಕಲಾವಿದ ಲಕ್ಷ್ಮಣ್ ಕುಮಾರ್ ಮಲ್ಲೂರು ಅವರಿಗೆ 2026ನೇ ಸಾಲಿನ ‘ರಂಗಚಾವಡಿ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಂಗಚಾವಡಿ ಸಂಸ್ಥೆಯು ಹಲವು ವರ್ಷಗಳಿಂದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುನ್ನಡೆಸುತ್ತಾ, ರಂಗೋತ್ಸವದ ಮೂಲಕ ಕಲಾವಿದರಿಗೆ ಸನ್ಮಾನ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಚಾವಡಿ ಸಂಸ್ಥೆಯ ಅಧ್ಯಕ್ಷ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಮಾತನಾಡಿ, “ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಸ್ಥಾಪನೆಗೊಂಡ ರಂಗಚಾವಡಿಯು ಅಸಂಖ್ಯಾತ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸಿದೆ. ಇದರಿಂದ ರಂಗಭೂಮಿಯಲ್ಲಿ ಯುವಪ್ರತಿಭೆಗಳು ಬೆಳೆಯಲು ಸಾಧ್ಯವಾಗಿದೆ. ಕಲೆ, ಕಲಾವಿದರನ್ನು ಬೆಳೆಸಿದಾಗ ಮಾತ್ರ ರಂಗಭೂಮಿ ಮತ್ತಷ್ಟು ಬಲಿಷ್ಠಗೊಳ್ಳಲು ಸಾಧ್ಯ” ಎಂದರು.
ಮುಖ್ಯ ಅತಿಥಿಯಾಗಿದ್ದ ಕಟೀಲು ಶ್ರೀ ಡೆವಲಪರ್ಸ್ನ ಆಡಳಿತ ನಿರ್ದೇಶಕ ಗಿರೀಶ್ ಎಂ. ಶೆಟ್ಟಿ ಕಟೀಲು ಮಾತನಾಡಿ, ಸಂಸ್ಥೆಯು ಕಲಾವಿದರನ್ನು ಬೆಳೆಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ, ರಂಗಭೂಮಿ ಮತ್ತು ಸಿನಿಮಾ ಕಲಾವಿದೆ ರೂಪಶ್ರೀ ವರ್ಕಾಡಿ ಅವರನ್ನು ಸಮಾರಂಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಸಿ.ಎ. ಸುನೀಲ್ ಭಂಡಾರಿ ಬೆಂಗಳೂರು, ಚಲನಚಿತ್ರ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್ ಹಾಗೂ ರವಿ ರೈ ಕಲಸ, ಯಥಾರ್ಥ ಸೋಶಿಯಲ್ನ ಸಂಸ್ಥಾಪಕಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ, ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಶೆಟ್ಟಿ, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಚಾವಡಿಮನೆ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

ನ್ಯಾಯವಾದಿ ಶಶಿರಾಜ್ ಕಾವೂರು ಅಭಿನಂದನಾ ಭಾಷಣ ಮಾಡಿದರು. ಲಾವಣ್ಯ ಶೆಟ್ಟಿ ಚೇಳೈರು ಪ್ರಾರ್ಥಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ‘ಸ್ಟಾರ್ ವಾಯ್ಸ್ ಮೆಲೊಡೀಸ್’ ವತಿಯಿಂದ ಗಾನಸುಧೆ ಹಾಗೂ ‘ಕಲಾ ಸಂಗಮ’ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ನೂತನ ಕೃತಿ “ಶ್ರೀಮತಿ ಸತ್ಯಭಾಮ” ನಾಟಕದ ಉಚಿತ ಪ್ರದರ್ಶನ ನಡೆಯಿತು.
(ವರದಿ: ದಿನೇಶ್ ಕುಲಾಲ್)



