30.9 C
Mumbai
June 11, 2026
Mumbai News Kannada
ಮುಂಬಯಿ

ಮುಂಬಯಿನಲ್ಲಿ ಮತ್ತೆ ಕಳೆಗಟ್ಟುತ್ತಿರುವ ಮಾತಿನ ಲೋಕ – ಜ್ಞಾನಯಾನದ ನೇತಾರರಾದ ಪೂಜ್ಯ ಪೆರ್ಣಂಕಿಲ ಶ್ರೀ ಹರಿದಾಸ ಭಟ್





ಮುಂಬಯಿ ತಾಳಮದ್ದಳೆಯ ರಂಗ ರಂಗೇರುತ್ತಿದೆ.
ವಿದ್ಯಾವಿಹಾರದ ಅಂಬಿಕಾ‌ ಆದಿನಾಥೇಶ್ವರ ಮಂದಿರದ ಪ್ರಾಂಗಣ ಮಾತಿನ ಮಂಟಪವಾಗಿ ತಿಂಗಳುಗಳೇ ಕಳೆದಿವೆ.

ಹೊಸ ಹುಡುಗರು ಬದುಕು ಕಟ್ಟಿಕೊಳ್ಳುವ ತರಾತುರಿಯಲ್ಲಿಯೂ ಶ್ವೇತ ವರ್ಣದ ಪಂಚೆ ತೊಟ್ಟು ಪುರಾಣದ ಪಾತ್ರಗಳಾಗಿ ಮಾತಿನ ತೋರಣ ಕಟ್ಟುತ್ತಿದ್ದಾರೆ.

ಕೌಟುಂಬಿಕ ಹೊಣೆಗಾರಿಕೆ, ಬದುಕಿಗೆ ಆಲಂಬನವಾದ ಕೆಲಸ ಇವುಗಳ ನಡುವೆಯೂ ಅನೇಕ ಮಾತೆಯರು, ಅಕ್ಕಂದಿರು ತಾವು ಕೂಡ ತಾಳಮದ್ದಳೆ ಕೂಟದಲ್ಲಿ ಅರ್ಥ ಹೇಳಬೇಕು ಎಂಬ ಆಸಕ್ತಿಯೊಂದಿಗೆ ಬಿಡುವು ಮಾಡಿಕೊಂಡು ಮಾತಿನ ಮಾಯಾಲೋಕದೆಡೆಗೆ ಮನವಿರಿಸಿ ಬರುತ್ತಿದ್ದಾರೆ.

ಮುಂಬಯಿ ಯಕ್ಷರಂಗದ ನುರಿತ ಕಲಾವಿದರು ತಮ್ಮ ರಂಗದ ಅನುಭವದೊಂದಿಗೆ, ಪುರಾಣದ ಸೂಕ್ಷ್ಮಗಳನ್ನು ಎರಕಗೊಳಿಸಿ, ಹೊಸಬರೊಂದಿಗೆ ಸಾಮರಸ್ಯದ ರಂಗಾನುಬಂಧ ಬೆಳೆಸುತ್ತಿದ್ದಾರೆ.

ಶ್ರೀ ರಾಮ ಕಥಾ ಹೃದಯಂ
ಹೌದು…
ಈ ಕಾರ್ಯಕ್ರಮವೇ ಮುಂಬಯಿ ತಾಳಮದ್ದಳೆ ಕ್ಷೇತ್ರದ ನವಕ್ರಾಂತಿಗೆ ಮಹಾಮುನ್ನುಡಿ. ಸನಾತನತೆಯನ್ನು ಮರೆತ , ಸಂಸ್ಕಾರದ ಶ್ರೀಮಂತಿಕೆಯಿಂದ ವಿಮುಖರಾದ ಇಂದಿನ ನವ-ಸಮಾಜಕ್ಕೆ
ಪ್ರಭು ಶ್ರೀ ರಾಮಚಂದ್ರ ದೇವರ ಜೀವನ ಕಥನವನ್ನು ಜೀವಾಳವಾಗಿರಿಸಿಕೊಂಡು, ಆ ಪುರುಷೋತ್ತಮನ ಜೀವನಾದರ್ಶದ ಸವಿಯನ್ನು ಉಣಬಡಿಸುತ್ತೇವೆ ಎಂಬ ಸತ್ ಸಂಕಲ್ಪದಿಂದ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಮತ್ತು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಇವರ ಜಂಟಿ ಸಂಯೋಜನೆಯಲ್ಲಿ ಶುಭಾರಂಭಗೊಂಡ ಸರಣಿ ತಾಳಮದ್ದಳೆ ಕಾರ್ಯಕ್ರಮದ ದೆಸೆಯಿಂದ ಮುಂಬಯಿ ತಾಳಮದ್ದಳೆ ರಂಗದಲ್ಲಿ ಒಂದು ಹೊಸ ಪರ್ವ ಆರಂಭಗೊಂಡಿದೆ.

ವೈಯಕ್ತಿಕ ಹಿತಾಸಕ್ತಿ , ಸ್ವಪ್ರತಿಷ್ಠೆಯ ತೆವಲು ಮುಂತಾದ ಅನಗತ್ಯ ಸಂಗತಿಗಳತ್ತ ನೋಟವೀಯದೆ, ಪೂರ್ಣ ಕಾರ್ಯಕ್ರಮ ಉತ್ಕೃಷ್ಟ ಗುಣಮಟ್ಟದಿಂದ ಕೂಡಿರಬೇಕು ಎಂಬ ಸದಾಶಯದಿಂದ ಶ್ರಮಿಸುವ ಕಲಾವಿದರ ಒಗ್ಗೂಡುವಿಕೆಯು ತಾಳಮದ್ದಳೆಗೆ ಬಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಪುತ್ರಕಾಮೇಷ್ಟಿ ಯಿಂದ ತೊಡಗಿ ಈಗಾಗಲೇ ಎಂಟು ಕಂತುಗಳನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿರುವ
ಸರಣಿ ತಾಳಮದ್ದಳೆಯ ಯಾನ ಒಂಬತ್ತನೇ ಕಂತಿನ ರೂಪದಲ್ಲಿ ರಾಮಾಯಣದ ಬಹುಶ್ರುತ ಭಾಗ ‘ವಾಲಿವಧೆ’ ಎಂಬ ಪ್ರಸಂಗವನ್ನು ಜೂನ್ 14 ರ ಭಾನುವಾರ ದಂದು ಪ್ರಸ್ತುತಗೊಳಿಸಲಿದೆ.

ತಾಳಮದ್ದಳೆಯಲ್ಲಿ ಬಹು ವಿರಳವಾದ ಪುತ್ರಕಾಮೇಷ್ಠಿ , ಯಜ್ಞ ಸಂರಕ್ಷಣೆ ಹಾಗೂ ಶ್ರೀ ರಾಮನಿಂದ ಮೋಕ್ಷ ಹೊಂದಿದ ಕಬಂಧ ಹಾಗೂ ಶಬರಿ‌ ಆಧಾರಿತ ಪ್ರಸಂಗಗಳನ್ನು ಕೂಡ ಜನಮನ ಮೆಚ್ಚುವಂತೆ ಪ್ರದರ್ಶಿಸಿರುವುದು ಈ ಸರಣಿ ತಾಳಮದ್ದಳೆಯ ಹೆಚ್ಚುಗಾರಿಕೆ.

ಜ್ಞಾನಯಜ್ಞದ ಆಧ್ವರ್ಯ ಪೂಜ್ಯ ಪೆರ್ಣಂಕಿಲ ಶ್ರೀ ಹರಿದಾಸ ಭಟ್.

ವಿದ್ಯಾ ವಿಹಾರದ ಅಂಬಿಕಾ ಆದಿನಾಥೇಶ್ವರ ಮಂದಿರ ಕಲಾ ಸರಸ್ವತಿಯ ಆಡುಂಬೊಲ. ಹಲವು ದಶಕಗಳಿಂದ‌ ಆ ಕ್ಷೇತ್ರದ ಪ್ರಾಂಗಣದಲ್ಲಿ ನಿತ್ಯನಿರಂತರವಾಗಿ ಕಲಾಕಲಾಪ ನಡೆಯುತ್ತಲೇ ಬಂದಿದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ವೇದ ಮೂರ್ತಿ ಶ್ರೀ ಪೆರ್ಣಂಕಿಲ ಹರಿದಾಸ ಭಟ್ಟ ರ ಕಲಾಪ್ರೀತಿಯೇ ಈ ಎಲ್ಲ ಕಲಾ ಕಲಾಪದ ಹಿಂದಿನ ಗಟ್ಟಿ ಹಿನ್ನೆಲೆ ಎನ್ನುವುದು ಸರ್ವ ಕಲಾವಲಯಕ್ಕೂ ಶ್ರುತವಾದ ಸಂಗತಿ.
ಪ್ರಭು ಶ್ರೀ ರಾಮಚಂದ್ರ ದೇವರ ಪರಮ ಆರಾಧಕರಾದ ಹರಿದಾಸ ಭಟ್ಟರು ಶ್ರೀ ರಾಮ ಕೇಂದ್ರಿತವಾದ ಶ್ರೀ ರಾಮ ಕಥಾಹೃದಯಂ ಎಂಬ ಮಾತಿನ ಮಹೋತ್ಸವಕ್ಕೂ ಪ್ರಧಾನ ಅಧ್ವರ್ಯು.
ತಾಳಮದ್ದಳೆಗೆ ಬೇಕಾದ ಸರ್ವ ವ್ಯವಸ್ಥೆಗಳನ್ನು ಬಹಳ ಆಸ್ಥೆಯಿಂದ ಮಾಡಿ, ಪ್ರತಿ ಕಾರ್ಯಕ್ರಮದಲ್ಲಿಯೂ ಬಹು ಉತ್ಸಾಹದಿಂದ ತೊಡಗಿಕೊಂಡು ತಮ್ಮ ಗಾಂಭೀರ್ಯದ ಮಾತುಗಳ ಮೂಲಕ ಜ್ಞಾನದ ಸುಧಾಪಾನ ಮಾಡಿಸುವ ಶ್ರೀಯುತರ ಶ್ರೀ ರಾಮ ಭಕ್ತಿ, ಕಲಾಪ್ರೀತಿ ನಿಜಕ್ಕೂ ಆದರಣೀಯ, ಅನುಸರಣೀಯ.

ಅವರ ಸುಪುತ್ರ ಶ್ರೀ ಶ್ರೀವತ್ಸ ಹರಿದಾಸ ಭಟ್ ಅವರು ಕೂಡ ಬಹಳ ಆಸ್ಥೆಯಿಂದ ಈ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಈ ಜ್ಞಾನಯಾನದ ಯಶಸ್ವಿಗೆ ಬಲವಾಗಿ ನಿಂತಿರುವುದು ಅವರಿಗೆ ತಂದೆಯಿಂದ ಬಳುವಳಿಯಾಗಿ ಬಂದ ಸಂಸ್ಕಾರದ ಬಲದಿಂದ ಎನ್ನುವುದು ಸುಸ್ಪಷ್ಟ.
ಆಡಳಿತ ಮೊಕ್ತೇಸರರಾದ ಶ್ರೀ ಹರಿದಾಸ ಗೋಪಾಲ ಶೆಟ್ಟಿ ಅವರು ಕೂಡ ಪ್ರತೀ ಕಾರ್ಯಕ್ರಮದಲ್ಲಿಯೂ ತಪ್ಪದೆ ಭಾಗಿಯಾಗಿ ಸಂಭ್ರಮದಿಂದ ಓಡಾಡುವುದು ನೋಡಿದರೆ ಅವರ ಕಲಾಪ್ರೀತಿಯ ಅಗಾಧತೆಯ ಅರಿವಾಗುತ್ತದೆ.

ಒಟ್ಟಾರೆಯಾಗಿ ಮುಂಬಯಿ ತಾಳಮದ್ದಳೆಯ ರಂಗದಲ್ಲಿ ಒಂದು ಹೊಸ ಕ್ರಾಂತಿ ಸೃಷ್ಟಿಯಾಗಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯು ಹೆಚ್ಚಾಗುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಕಾಯುವ ಒಂದು ಪ್ರತ್ಯೇಕ ಪ್ರೇಕ್ಷಕ ವಲಯವು ಸೃಷ್ಟಿಯಾಗಿದೆ. ಕಲಾವಿದರು ಸತ್ವಯುತವಾಗಿ ಪ್ರಸಂಗ ಪ್ರಸ್ತುತ ಪಡಿಸುವತ್ತ ನಿತಾಂತವಾಗಿ, ಕಾಯೇನ ವಾಚಾ ಮನಸಾ ಶ್ರಮಿಸುತ್ತಿದ್ದಾರೆ.ಹಿತವಾದ ಹಿಮ್ಮೇಳ ಕಾರ್ಯಕ್ರಮದ ಮತ್ತೊಂದು ಮೆರುಗು.

ಅದೊಂದು ದೈವಿಕ ವಾತಾವರಣ

ಆರಂಭದಲ್ಲಿ ಆಹ್ವಾನಿತ ಭಜನಾ ತಂಡದವರಿಂದ ತೊಡಗುವ ಶ್ರೀ ದೇವರ ಸಂಕೀರ್ತನೆ ಮನಸ್ಸಿನೊಳಗೊಂದು ಆನಂದದ ಅನುಭಾವ ಸೃಷ್ಟಿಸಿದರೆ, ಕಾರ್ಯಕ್ರಮದ ಸಭಾಕಾರ್ಯಕ್ರಮದಲ್ಲಿ ಶ್ರೀ ವತ್ಸ ರು ಉಚ್ಚರಿಸುವ ಶ್ರೀ ರಾಮ ತಾರಕ ಮಂತ್ರ ವನ್ನು ಪುನರುಚ್ಚರಿಸುವಾಗ ನಾವು ರಾಮ ಹುಟ್ಟಿದ ಭೂಮಿಯಲ್ಲಿ ಹುಟ್ಟಿದ್ದೇವೆ; ನಮ್ಮೊಳಗೂ ಒಬ್ಬ ರಾಮ ಹುಟ್ಟಬೇಕು ಎಂಬ ಎಚ್ಚರ ಅರಿವಿಲ್ಲದೆ ಮೂಡುತ್ತದೆ.
ಆಶೀರ್ವಚನದ ನುಡಿಯಾಡುವ ಹರಿದಾಸ ಭಟ್ಟರು ಮನೆ – ಮನೆಯಲ್ಲಿ ರಾಮ ಮನ – ಮನದಲ್ಲಿ ರಾಮ ಎಂದು ರಾಮಾದರ್ಶದ ಬೋಧನೆ ಮಾಡುವಾಗ ನಮ್ಮ ಮನೆಯ ಮಕ್ಕಳು ಈ ನುಡಿಗೆ ಕಿವಿಯಾಗಬೇಕು ಎಂಬ ಭಾವ ನಮ್ಮೊಳಗೆ ಹುಟ್ಟದಿದ್ದರೆ ನಮ್ಮೊಳಗಿನ ಭಾರತೀಯತೆಯೇ ನಿರರ್ಥಕ.

ಒಂದಂತೂ ಸತ್ಯ…ಇದು ಆಡಂಬರದ ಕಾರ್ಯಕ್ರಮ ಅಥವಾ…. ತೋರಿಕೆಯ ಕಾರ್ಯಕ್ರಮ ಅಲ್ಲ. ಹೆಸರಿನ ಹಸಿವಿನಿನಿಂದ ಮಾಡುವ ಕಾರ್ಯಕ್ರಮವೂ ಅಲ್ಲ. ನಮ್ಮ ಸಮಯ ಹಾಳು ಮಾಡುವ ಕಾರ್ಯಕ್ರಮವಂತೂ ಅಲ್ಲವೇ ಅಲ್ಲ.
ಇದೊಂದು ಸಾರ್ಥಕ ಕಾರ್ಯಕ್ರಮ. ಇಲ್ಲಿ ಭಕ್ತಿಯ ಭಾವ ಉಂಟು. ಇಲ್ಲಿ ಧರ್ಮದ ಪ್ರಜ್ಞೆ ಉಂಟು. ಈ ನೆಲದ ಅಸ್ಮಿತೆಯ ಕುರಿತಾದ ಕಾಳಜಿ ಉಂಟು. ಕಲೆ ಕಲಾವಿದರ ಕುರಿತಾದ ನಿಸ್ಪೃಹವಾದ ಗೌರವ ಉಂಟು.
ಇಂತಹ ಕಾರ್ಯಕ್ರಮಗಳು ಮುಂಬಯಿ ಮಹಾನಗರದಲ್ಲಿ ಆಗುತ್ತಿರುವುದು ಮುಂಬಯಿ ತುಳು – ಕನ್ನಡಿಗರ ಸೌಭಾಗ್ಯ. ಸಾಧ್ಯವಾದಷ್ಟು ಆ ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿ, ರಾಮಕಥಾ ಶ್ರವಣದಿಂದ ಪ್ರಾಪ್ತಿಯಾಗುವ ಪುಣ್ಯಕ್ಕೆ ಭಾಜನರಾಗಬೇಕು.
ಶ್ರವಣ ರಮಣೀಯವಾದ ಮಾರ್ಮಿಕ ಮಾತುಗಳಿಗೆ ಕಿವಿಯಾಗುವುದರ ಮೂಲಕ ನಮ್ಮ ಅಂತರಂಗದೊಳಗೆ ಧರ್ಮದ ಕುರಿತಾದ ಪ್ರಜ್ಞೆಯು ಜಾಗೃತವಾಗಬೇಕು.

  • ಸುರೇಶ್ ಶೆಟ್ಟಿ ನಂದ್ರೋಳ್ಳಿ


Related posts

ತುಳುನಾಡ ಸೇವಾ ಸಮಾಜ ಮೀರಾ ಭಾಯಂದರ್ -ಹಳದಿಕುಂಕುಮ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಂಸ್ಥಾಪಕ ದಿನಾಚರಣೆ.

Mumbai News Desk

ಧರೆಗಿಳಿದ ಮಳೆಹನಿ, ಮಿನುಗಿದ ಮುಂಬೈ: ಪ್ರಕೃತಿಯ ವಿಶೇಷ ಸಿರಿಯಲ್ಲಿ 2026ರ ಉದಯ

Mumbai News Desk

ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ ಸಂಪನ್ನ

Mumbai News Desk

ತುಳು ಸಂಘ ಬೊರಿವಲಿಯ ವಾರ್ಷಿಕ ಮಹಾಸಭೆ

Mumbai News Desk

ಸಾಫಲ್ಯ ಸೇವಾ ಸಂಘ ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ :ಮಹಿಳಾ ವಿಭಾಗದಿಂದ ಜರಗಿದ ವಿಶ್ವ ಮಹಿಳಾ ದಿನಾಚರಣೆ

Mumbai News Desk