
ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಭವ್ಯ ಕಂಚಿನ ಪುತ್ಥಳಿಯನ್ನು ಉಚ್ಚಿಲ ಮೊಗವೀರ ಭವನದಲ್ಲಿ ಶುಕ್ರವಾರ ಅನಾವರಣಗೊಳಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಅವರು ಗಣ್ಯರ ಉಪಸ್ಥಿತಿಯಲ್ಲಿ ನೂತನ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಮೊಗವೀರ ಸಮಾಜದವರು ಶ್ರಮಜೀವಿಗಳಾಗಿದ್ದು, ಸಮುದಾಯದ ಮಕ್ಕಳು ಶಿಕ್ಷಣವಂತರಾಗುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು. ಕರಾವಳಿಯ ಮಣ್ಣಿಗೆ ತನ್ನದೇ ಆದ ಶಕ್ತಿಯಿದ್ದು, ಮೊಗವೀರ ಕುಲಗುರುಗಳ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂದರು.
ಉಚ್ಚಿಲ ದಸರೆಗೆ ಸರ್ಕಾರದಿಂದ ಪ್ರತಿವರ್ಷ ರೂ.50 ಲಕ್ಷ ಅನುದಾನ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಕರ್ನಾಟಕ ಸರ್ಕಾರವು ಎಲ್ಲ ಸಮುದಾಯಗಳ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಬಾಕಿ ಇರುವ ಸರ್ಕಾರದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು. ಇಲಾಖೆಯ ವತಿಯಿಂದ ಜಿಲ್ಲೆಯ 92 ಸಂಸ್ಥೆಗಳಿಗೆ ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕರಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ನಡೆಸಿ, ಈ ಭಾಗದ ಹಲವು ವರ್ಷಗಳ ಬೇಡಿಕೆಯಾಗಿದ್ದ ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಮಾನ್ಯತೆ ನೀಡಿರುವುದು ಐತಿಹಾಸಿಕ ಸಂಗತಿಯಾಗಿದೆ. ಕರಾವಳಿಯ ಭಾಷಿಗರು ಪ್ರೀತಿಯಿಂದ ಮಾತನಾಡಿಸುವ ಗುಣವನ್ನು ಹೊಂದಿದ್ದು, ತುಳು ಭಾಷೆಗೆ ಈ ಮಾನ್ಯತೆ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೂ ಹಣ ಮೀಸಲಿರಿಸಲಾಗಿದ್ದು, ಈ ಭಾಗದ ಅಭಿವೃದ್ಧಿಯ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಾಡೋಜ ಡಾ. ಜಿ. ಶಂಕರ್, ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಸ್ಥಾಪಿಸಬೇಕೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದ ಹಿನ್ನೆಲೆಯಲ್ಲಿ, ಮೊಗವೀರ ಸಮಾಜ ಬಾಂಧವರ ಸಂಕಲ್ಪದಂತೆ ಸುಮಾರು ರೂ.3 ಕೋಟಿ ವೆಚ್ಚದಲ್ಲಿ ಈ ಭವ್ಯ ಪುತ್ಥಳಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
31 ಅಡಿ ಎತ್ತರದ ಪುತ್ಥಳಿಗೆ ಸುಮಾರು 14 ಸಾವಿರ ಕೆ.ಜಿ. ತೂಕದ ಕಂಚನ್ನು ಬಳಸಲಾಗಿದೆ. ಸುಮಾರು ರೂ.6 ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದ್ದು, ಪ್ರತಿವರ್ಷ ಅತ್ಯುತ್ತಮ ರೀತಿಯಲ್ಲಿ ಉಚ್ಚಿಲ ದಸರಾವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕ್ಷೇತ್ರಕ್ಕೆ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಹಾಗೂ ಉಚ್ಚಿಲ ದಸರೆಗೆ ಸರ್ಕಾರ ಪ್ರತಿವರ್ಷ ರೂ.2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಗುರಿಕಾರ ಬಂಧುಗಳಿಗೆ ಧನಸಹಾಯ ವಿತರಿಸಲಾಯಿತು. ಉಚ್ಚಿಲ ದಸರಾ ಸಂದರ್ಭದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ದೇಹದಾಡ್ಯ ಸ್ಪರ್ಧೆಯ ಪೋಸ್ಟರ್‌ನ್ನೂ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಸಮುದಾಯದ ಮುಖಂಡರಾದ ಆನಂದ್ ಸಿ ಕುಂದರ್, ಪ್ರಸಾದ್ ರಾಜ್ ಕಾಂಚನ್, ಅಜಿತ್ ಸುವರ್ಣ, ಸಂತೋಷ್ ಪುತ್ರನ್, ಉದಯ್ ಕುಮಾರ್ ಹಟ್ಟಿಯಂಗಡಿ, ವೇದಪ್ರಕಾಶ್ ಶ್ರಿಯಾನ್, ಕವಿತಾ ಶರತ್, ನಾಗರಾಜ್ ಸುವರ್ಣ, ಮನೋಜ್ ಸಾಲ್ಯಾನ್ ಉಳ್ಳಾಲ ಹಾಗೂ ಇತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಸ್ವಾಗತಿಸಿದರು. ಮನೋಜ್ ಸಾಲ್ಯಾನ್ ವಂದಿಸಿದರು.



