31.4 C
Mumbai
June 5, 2026
Mumbai News Kannada
ತುಳುನಾಡು

ಮೂಲ್ಕಿ : ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ ‘ನುಡಿಮುತ್ತು’ ಬಿಡುಗಡೆ ಕಾರ್ಯಕ್ರಮ





ಕನ್ನಡ ಭಾಷೆ, ಸಂಸ್ಕೃತಿ ರಕ್ಷಣೆ ಹಾಗೂ ಸಾಧಕರ ಸನ್ಮಾನಕ್ಕೆ ಸಾಹಿತ್ಯಿಕ ಚಟುವಟಿಕೆಗಳು ಹೆಚ್ಚಾಗಲಿ: ಡಾ| ಹರಿಕೃಷ್ಣ ಪುನರೂರು

ನಮ್ಮ ಕನ್ನಡ ಭಾಷೆಗೆ ಮತ್ತು ಸಂಸ್ಕೃತಿಗೆ ತನ್ನದೇ ಆದ ಇತಿಹಾಸ ಹಾಗೂ ಮಹತ್ವವಿದೆ. ದಿನನಿತ್ಯದ ಬದುಕಿನಲ್ಲಿ ನಾವು ಕನ್ನಡವನ್ನು ಬಳಸಬೇಕು ಹಾಗೂ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳು ಹೆಚ್ಚಾಗಬೇಕು. ಹರಿಶ್ಚಂದ್ರ ಸಾಲ್ಯಾನ್ ಅವರಿಗೆ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ರಾಜಮರ್ಯಾದೆ ಸಿಗುವಂತೆ ಮಾಡಬೇಕು ಅನ್ನುವುದು ನನ್ನ ಅನಿಸಿಕೆ.ಅವರ ಕೊಡುಗೆಗಳನ್ನು ಪರಿಗಣಿಸಿ, ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವವರನ್ನು ನಾವು ನೆನಪಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಅವರದೇ ಆದ ಸನ್ಮಾನ ಮತ್ತು ಗೌರವ ಸಿಗಬೇಕು ಎನ್ನುವುದೇ ಮುಖ್ಯ. ನಾವು ಅವರಿಗೆ ಪ್ರೋತ್ಸಾಹ ಕೊಡುವ ಕೆಲಸ ಮಾಡಬೇಕಾಗಿದೆ. ಏನೇ ಇರಲಿ, ನಮ್ಮ ಕೈಲಾದಷ್ಟು ಸಹಾಯ ಮತ್ತು ಸಹಕಾರವನ್ನು ನೀಡಬೇಕು. ಒಳ್ಳೆಯ ಕೆಲಸ ಮಾಡಲು ಪ್ರೋತ್ಸಾಹ ನೀಡಿದರೆ, ಅವರು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಅವರು ನುಡಿದರು.

ಅವರು ಜೂನ್ 3ರಂದು ಮೂಲ್ಕಿ ಟ್ಯೂರಿಸ್ಟ್ ಹೋಮ್ ಸಭಾಗ್ರಹದಲ್ಲಿ ಹೊಸ ಅಂಗಣ ಪ್ರಕಟನಾಲಯ ಪ್ರಕಟನೆ ಹೊರ ತಂದ, ಲೇಖಕ, ಅಂಕಣಕಾರ ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ “ನುಡಿಮುತ್ತು” ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮುಖ್ಯ ಅತಿಥಿ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ| ತಲ್ಲೂರು ಶಿವರಾಮ್ ಶೆಟ್ಟಿ ಮಾತನಾಡುತ್ತಾ “ಹರಿಶ್ಚಂದ್ರ ಸಾಲ್ಯಾನ್ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು 23 ಕೃತಿಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಈ ಸಾಧನೆ ನಿಜಕ್ಕೂ ಶ್ಲಾಘನೀಯ. ಅವರು ಬರೆದಿರುವ ಪುಸ್ತಕಗಳನ್ನು ಓದುತ್ತಾ ಹೋದಂತೆ ಭವಿಷ್ಯದ ಬಗೆಗಿನ ಅರಿವು ಮೂಡುತ್ತದೆ ಮತ್ತು ಜೀವನಕ್ಕೆ ಒಂದು ದಾರಿ ಸಿಗುತ್ತದೆ. ಇವತ್ತಿನ ದಿನಗಳಲ್ಲಿ ನಮ್ಮಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ, ಆದರೆ ಇಂತಹ ಪುಸ್ತಕಗಳು ಹೆಚ್ಚೆಚ್ಚು ವೇದಿಕೆಗಳನ್ನು ಪಡೆದುಕೊಳ್ಳಬೇಕು ಮತ್ತು ಜನರನ್ನು ತಲುಪಬೇಕು. ದಿನನಿತ್ಯ ಓದುವ ಹವ್ಯಾಸ ಇಟ್ಟುಕೊಂಡರೆ ನಮ್ಮ ಜೀವನದ ಅರಿವು ಹೆಚ್ಚುತ್ತದೆ. ಪ್ರತಿ ದಿನ ಬೆಳಗ್ಗೆ ಎದ್ದು ಮೊಬೈಲ್ ನೋಡುವ ಬದಲು ಇಂತಹ ಪುಸ್ತಕಗಳನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು. ತುಳು ಭಾಷೆಯಲ್ಲಿದ್ದು, ಅದನ್ನು ಕನ್ನಡಕ್ಕೂ ತಂದರೆ ಇನ್ನೂ ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಗುತ್ತದೆ. ಇಂತಹ ಇಳಿ ವಯಸ್ಸಿನಲ್ಲಿ ಇಷ್ಟೊಂದು ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ನುಡಿದರು.

ಇನ್ನೋರ್ವ ಅತಿಥಿ ಕಿನ್ನಿಗೋಳಿಯ ಯುಗಪುರುಷ ಪತ್ರಿಕೆಯ ಸಂಪಾದಕರಾದ ಭುವನಾಭಿರಾಮ ಉಡುಪ ತಮ್ಮ ಅಭಿಪ್ರಾಯ ತಿಳಿಸುತ್ತಾ “ಇಂದು ಕೆಲವರು ಒಂದು ಕೃತಿ, ಎರಡು ಕೃತಿ, ಮೂರು ಕೃತಿ ಬರೆದು ‘ಯಾಕಪ್ಪಾ ನನಗೆ ಯಾಕೆ ಈ ಬೇರೆ ರಗಳೆ’ ಅಂತ ಸುಮ್ಮನೆ ಕೂತುಬಿಡುತ್ತಾರೆ. ಆದರೆ ಈ ಪುಣ್ಯಾತ್ಮ, 23ನೇ ಕೃತಿ, ಆ ಪುಣ್ಯಾತ್ಮ ಮಾಡ್ತಾ ಇದ್ದಾರಲ್ಲ, ಅದಕ್ಕೆ ಅವರಿಗೆ ದೊಡ್ಡ ಧನ್ಯವಾದಗಳು.​ಇಲ್ಲಿ ಆಯ್ಕೆ ಮಾಡುವಂತಹ ವಿಚಾರಗಳೂ ಅಷ್ಟೇ — ಜ್ಯೋತಿಷ್ಯದ ಬಗ್ಗೆ ಇರಬಹುದು, ಕೃತಿ ಬರೆಯುವಾಗ ಧಾರ್ಮಿಕ ವಿಚಾರಗಳಿರಬಹುದು, ದೈವಗಳ ಬಗ್ಗೆ ಇರಬಹುದು, ನುಡಿಮುತ್ತುಗಳು, ಗಾದೆಗಳು ಇರಬಹುದು.ಇಂತಹ ವಿಚಾರಗಳ ಕೃತಿಗಳು ಜನರಿಗೆ ಬೇಗ ತಲುಪುತ್ತವೆ, ಅದಕ್ಕೆ ಬೇಡಿಕೆಯೂ ಅಷ್ಟೇ ಇರುತ್ತದೆ.​ನಿಜವಾಗಿಯೂ ಇಂತಹ ಒಂದು ಪ್ರಸ್ತುತ ವಿಚಾರಗಳು, ಈ ಜಾಗ ಖಾಲಿ ಇರುವಾಗ ನುಡಿಮುತ್ತುಗಳ ಮೂಲಕ ನಮಗೆ ತಟ್ಟನೆ ನೆನಪಾಗುತ್ತವೆ. ಖಂಡಿತವಾಗಿ ನಾವೆಲ್ಲ ಕೃತಿಯನ್ನು ಕೊಂಡುಕೊಂಡು, ಪ್ರೋತ್ಸಾಹ ನೀಡಿ, ಅವರ ಮುಂದಿನ ಕೃತಿಗಳ ಪ್ರಕಟಣೆಗೆ ನಾವು ಸಹಾಯ ಮಾಡಬೇಕು ಅಂತ ನಾನು ನಿಮ್ಮಲ್ಲೆಲ್ಲ ನಮ್ರತೆಯಿಂದ ಕೇಳಿಕೊಳ್ಳುತ್ತೇನೆ ಎಂದರು.​

ಅತಿಥಿ,ಕರ್ನಾಟಕ ವಿಶ್ವಕರ್ಮ ಎಸೋಸಿಯೇಷನ್ ಮುಂಬೈಯ ಮಾಜಿ ಅಧ್ಯಕ್ಷ, ಜಿ. ಟಿ. ಆಚಾರ್ಯ ಮಾತನಾಡಿ “ಮಿತ್ರ ಹರಿಶ್ಚಂದ್ರ ಸಾಲಿಯಾನ್ ಅವರ 23 ನೇ ಕೃತಿ ಬಿಡುಗಡೆಯ ಕಾರ್ಯಕ್ರಮದ ಪಾಲ್ಗೊಂಡು ಸಂತಸವಾಯ್ತು.ಇಂತಹ ಒಂದು ಅದ್ಭುತವಾದ ಕೆಲಸವನ್ನು ಅವರು ಮಾಡ್ತಾ ಇದ್ದಾರೆ. ಇವತ್ತು 23ನೇ ಕೃತಿ ಅಂದರೆ ಮಗು ಇವತ್ತು ಭೂಮಿಯ ಬೆಳಕನ್ನು ಕಂಡಿದೆ ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ. ಯಾಕೆ ಅಂತ ಹೇಳಿದರೆ ಒಂದು ಕೃತಿಯನ್ನು ಬರೆಯುವುದು ಅಂತ ಹೇಳಿದರೆ, ಒಂದು ತಾಯಿಗೆ ಮಗುವನ್ನು ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ಅನುಭವಿಸುವ ಪ್ರಸವ ವೇದನೆ ಹೇಗೆ ಒಂದು ಸಂತೋಷ ಆಗುತ್ತದೋ, ಹಾಗೆ ಸಾಹಿತ್ಯದವರಿಗೆ ಆ ಕೃತಿಯನ್ನು ಹೊರ ತಂದಾಗ ಕೂಡ ಸಂತೋಷವಾಗುತ್ತದೆ.ಅವರ ಸಾಧನೆಗೆ ನಾವೆಲ್ಲ ಮೆಚ್ಚಲೇಬೇಕು. ಕಳೆದ ಸಲ ತುಳು ಗಾದೆಗಳನ್ನು ಪ್ರಕಟ ಮಾಡಿದ್ದಾರೆ. ಈ ಸಲ ನುಡಿಮುತ್ತುಗಳು. ಇದು ಅತ್ಯಂತ ನಮ್ಮ ಬದುಕಿನಲ್ಲಿ ಅಗತ್ಯವಾದಂತಹ ಒಂದು ಪುಸ್ತಕ ಅಂತ ನಾನು ಭಾವಿಸುತ್ತೇನೆ ಎಂದು ಹೇಳಿ ಸಾಲ್ಯಾನ್ ರವರ ಸಾಹಿತ್ಯ ಸೇವೆಗೆ ಶುಭ ಹಾರೈಸಿದರು.
ಇನ್ನೋರ್ವ ಅತಿಥಿ, ಮುಂಬೈಯ ಪತ್ರಕರ್ತ ಉಮೇಶ್ ಅಂಚನ್ ತಮ್ಮ ಅಭಿಪ್ರಾಯ ತಿಳಿಸುತ್ತ “ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ತನ್ನ ಆತ್ಮೀಯರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ.ಹರಿಶ್ಚಂದ್ರ ಸಾಲ್ಯಾನ್ ಅವರ ಕೃತಿಯ ಬಗ್ಗೆ ಹೇಳುವುದಾದರೆ, ಅವರ ಪ್ರತಿಯೊಂದು ಕೃತಿಯೂ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಮೂಡಿಬಂದಿವೆ .ಇತ್ತೀಚೆಗಿನ ಹೆಚ್ಚಿನ ಕೃತಿಗಳನ್ನು ಕೇವಲ ಹೆಚ್ಚು ಕಲಿತವರು ಅಥವಾ ಸಾಹಿತಿಗಳು ಮಾತ್ರ ಓದಬಹುದು. ನಮ್ಮಂತಹ ಸಾಮಾನ್ಯ ಜನರಿಗೆ ಅವುಗಳನ್ನು ಓದಿ ಅರ್ಥೈಸಿಕೊಳ್ಳಲು ಆಗುವುದಿಲ್ಲ. ಆದರೆ ಇವರ ಕೃತಿಗಳು ಇಂದಿನ ನಮ್ಮ ಸಮಾಜಕ್ಕೆ ತುಂಬಾ ಉಪಯುಕ್ತವಾಗಿವೆ.ಇವರ ಹೊಸ ಅಂಗಣ ಪತ್ರಿಕೆಯ ಮುಖಾಂತರ ಕಳೆದ ಹತ್ತು ವರ್ಷಗಳಿಂದ ಒಳ್ಳೊಳ್ಳೆ ಲೇಖನಗಳು, ವಿಚಾರಗಳು ಹಾಗೂ ಕೆಲವೊಂದು ಸಮಾಜದ ಆದರ್ಶ ವ್ಯಕ್ತಿಗಳ ಪರಿಚಯಗಳು ಮೂಡಿ ಬರುತ್ತಿವೆ. ಅಷ್ಟೇ ಅಲ್ಲದೆ, ತಿಂಗಳ ಬೆಳಕು ಕಾರ್ಯಕ್ರಮದ ಮುಖಾಂತರ ಇವರು ತೆರೆಯಮರೆಯಲ್ಲಿದ್ದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಪ್ರತೀ ತಿಂಗಳು ಮಾಡುತ್ತಿದ್ದಾರೆ.
ಇಂತಹ ಕಾರ್ಯಕ್ರಮಗಳು ಬೇರೆಲ್ಲೂ ಆಗುವುದಿಲ್ಲ. ಹರಿಶ್ಚಂದ್ರ ಸಾಲ್ಯಾನ್ ಅವರಿಗೆ ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯದ ಉತ್ತಮ ಪ್ರಶಸ್ತಿ ಲಭಿಸಲಿ. ನಮ್ಮೆಲ್ಲರ ಜಂಟಿ ಪ್ರಯತ್ನದಿಂದಲೇ ಆ ಪ್ರಶಸ್ತಿ ಸಿಗಬೇಕಾಗಿದೆ. ಏಕೆಂದರೆ ಪ್ರಶಸ್ತಿಗಳು ಹುಡುಕಿಕೊಂಡು ಬರುವ ಸಮಯ ಈಗ ಇಲ್ಲ. ಆದ್ದರಿಂದ ನಾವೆಲ್ಲರೂ ಒಟ್ಟುಗೂಡಿ, ಅವರಿಗೆ ಉತ್ತಮ ಪ್ರಶಸ್ತಿ ಸಿಗುವಲ್ಲಿ ಪ್ರಯತ್ನಿಸೋಣ ಎಂದರು.

ಸಂಘಟಕಿ ಭಾನುಮತಿ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತ ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಪುಸ್ತಕ ಬಿಡುಗಡೆಯಾಗುತ್ತಿರುವುದು ಅತ್ಯಂತ ಸಂತೋಷದ ವಿಷಯ. ಬರೆಯುವ ಆಸಕ್ತಿ ಇದ್ದಾಗ ಮಾತ್ರ ಇಂತಹ ಉತ್ತಮ ಕೃತಿಗಳು ಹೊರಬರಲು ಸಾಧ್ಯ. ನಾವು ಮಕ್ಕಳಿಗೆ ಕೇವಲ ಭಾಷೆಯನ್ನು ಕಲಿಸಿದರೆ ಸಾಲದು, ಬದಲಿಗೆ ನಮ್ಮ ಸಂಸ್ಕೃತಿ ಮತ್ತು ಇಂತಹ ಉತ್ತಮ ಸಾಹಿತ್ಯದ ಮೌಲ್ಯಗಳನ್ನು ಅವರ ಮನಸ್ಸಿನಲ್ಲಿ ಬಿತ್ತಬೇಕು. ನಮ್ಮ ತುಳುನಾಡಿನ ಕಲೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂಗ್ಲಿಷ್ ಭಾಷೆಯ ಪ್ರಭಾವದ ನಡುವೆಯೂ ನಮ್ಮ ತಾಯ್ನುಡಿ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷರಾದ ಶ್ರೀ ಎಚ್. ವಸಂತ್ ಬೆರ್ನಾಡ್ ಮತ್ತು ಅತಿಕಾರಿಬೆಟ್ಟು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಮನೋಹರ್ ಕೋಟ್ಯಾನ್ ಅವರು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಮನಂಪಾಡಿ ಶಾಲಾ ಶಿಕ್ಷಕಿ, ಸಮಾಜ ಸೇವಕಿ ವಸಂತಿಯವರನ್ನು ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಕೃತಿಕಾರ ಹರಿಶ್ಚಂದ್ರ ಸಾಲ್ಯಾನ್ ಸ್ವಾಗತಿಸಿ ಕೃತಿ ಹೊರಬರಲು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ದಿನೇಶ್ ಶೆಟ್ಟಿ ನಿರೂಪಿಸಿದರೆ, ವಾಸು ಪೂಜಾರಿ ಚಿತ್ರಾಪು ವಂದಿಸಿದರು.ಸಾಮಾಜಿಕ, ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರು, ಸಾಹಿತ್ಯಾಸಕ್ತರು, ಹರಿಶ್ಚಂದ್ರ ಸಾಲ್ಯಾನ್ ಅವರ ಹಿತೇಷಿಗಳು,ಮಿತ್ರರು ಉಪಸ್ಥಿತರಿದ್ದರು.



Related posts

ಉಡುಪಿ ಉಚ್ಚಿಲ ದಸರಾ-2025: ಮೊಗವೀರರ ಶಕ್ತಿ ಕೇಂದ್ರದಲ್ಲಿ ವೈಭವದ ‘ದಸರಾ ಸಮಾಪನ’

Mumbai News Desk

ಸಸಿಹಿತ್ಲು: ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧನ್ಯೋತ್ಸವ ಕಾರ್ಯಕ್ರಮ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು: ಮೂರನೇ ಸ್ಥನ್ಯಪಾನ ಕೊಠಡಿ ಉದ್ಘಾಟನೆ

Mumbai News Desk

ವಿಶ್ವ ಗಾಣಿಗರ ಚಾವಡಿ ಮಂಗಳೂರು – ಉಚಿತ ವೈದ್ಯಕೀಯ ಶಿಬಿರ

Mumbai News Desk

ಹೆಜಮಾಡಿ ಬಿಲ್ಲವರ ಸಂಘ ನವರಾತ್ರಿ ಆಚರಣೆ, ದಾಂಡಿಯಾ ನೃತ್ಯ

Mumbai News Desk

ಉಡುಪಿ : ಜ. 9ರಂದು ಶೀರೂರು ಮಠದ ಶ್ರೀಗಳ ಉಡುಪಿ ‘ಪುರ ಪ್ರವೇಶ’.

Mumbai News Desk