28.8 C
Mumbai
July 15, 2026
Mumbai News Kannada
ಮುಂಬಯಿ

ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಶೈಕ್ಷಣಿಕ ಕಾರ್ಯಕ್ರಮ: ಜನಹಿತ ಯೋಜನೆಗಳೊಂದಿಗೆ ರಜತ ಮಹೋತ್ಸವ ಆಚರಣೆಗೆ ಸಂಕಲ್ಪ








​ಡೊಂಬಿವಲಿ: “ಕಳೆದ 24 ವರ್ಷಗಳ ಹಿಂದೆ ಬೆರಳೆಣಿಕೆಯ ಸದಸ್ಯರಿಂದ ಆರಂಭಗೊಂಡು, ಇಂದು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹತ್ತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಮನೆಮಾತಾಗಿರುವ ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಇದೀಗ ರಜತ ಮಹೋತ್ಸವದ ಹೊಸ್ತಿಲಲ್ಲಿದೆ. 2026–2027ರ ರಜತ ಮಹೋತ್ಸವ ವರ್ಷವನ್ನು ಅರ್ಥಪೂರ್ಣ ಜನಹಿತ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುವುದು,” ಎಂದು ಸಂಸ್ಥೆಯ ಅಧ್ಯಕ್ಷ ಆರ್. ಕೆ. ಸುವರ್ಣ ತಿಳಿಸಿದರು.
​ಇಲ್ಲಿನ ವೈಭವ ಮಂಗಳ ಕಾರ್ಯಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ಜುಲೈ 12ರಂದು ಸಂಜೆ 4 ಗಂಟೆಗೆ ಜರುಗಿದ ಸಂಸ್ಥೆಯ ವಾರ್ಷಿಕ ಶೈಕ್ಷಣಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸಂಸ್ಥೆಯ ಈ ಹೆಮ್ಮರದ ಬೆಳವಣಿಗೆಗೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸಲಹೆಗಾರರು, ಮಹಿಳಾ ಹಾಗೂ ಯುವ ವಿಭಾಗ ಮತ್ತು ಕೊಡುಗೈ ದಾನಿಗಳ ನಿರಂತರ ಸಹಕಾರವೇ ಕಾರಣ ಎಂದು ಅವರು ಕೃತಜ್ಞತೆ ಸಲ್ಲಿಸಿದರು. ಉಚಿತ ಪುಸ್ತಕ ಪಡೆಯಲು ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಇಂತಹ ಸಮಾರಂಭಗಳಲ್ಲಿ ಖುದ್ದಾಗಿ ಉಪಸ್ಥಿತರಿರುವುದು ಸೂಕ್ತ ಎಂದೂ ಅವರು ಇದೇ ವೇಳೆ ಅಭಿಪ್ರಾಯಪಟ್ಟರು.


​ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಂಟರ ಸಂಘ ಮುಂಬಯಿ ಸಂಸ್ಥೆಯ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಸೋಶಿಯಲ್ ವೆಲ್ಫೇರ್ ಕಮಿಟಿ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಅರುಣ್ ಶೆಟ್ಟಿ ಪಡುಕುಡೂರು ಮಾತನಾಡಿ, “ಸಿರಿನಾಡ ಸಂಘದ ಕಾರ್ಯವೈಖರಿಯನ್ನು ನಾನು ಹತ್ತಿರದಿಂದ ಬಲ್ಲೆ. ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡದ ಅಕ್ಷರ ಜ್ಞಾನವನ್ನು ಉಣಬಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಇದರಿಂದಾಗಿ ಮಕ್ಕಳಲ್ಲಿ ಕನ್ನಡದ ಅರಿವು ಮೂಡಿದಂತಾಗುತ್ತದೆ. ಸಂಸ್ಥೆಯು ನಿಂತ ನೀರಾಗದೆ, ಹರಿಯುವ ನದಿಯಂತೆ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರಬೇಕು,” ಎಂದು ಹೇಳಿ ರಜತ ಮಹೋತ್ಸವಕ್ಕೆ ಶುಭ ಹಾರೈಸಿದರು. ಜೊತೆಗೆ, ಸ್ಥಳೀಯವಾಗಿ ಯಾವುದೇ ಸಮಸ್ಯೆಗಳಿದ್ದಲ್ಲಿ ನಗರಸೇವಕಿಯ ಸಹಕಾರ ಪಡೆಯಬಹುದು ಎಂದು ಕಿವಿಮಾತು ಹೇಳಿದರು.


​ವೇದಿಕೆಯಲ್ಲಿದ್ದ ಸಂಘದ ಸಲಹೆಗಾರರಾದ ಇಂದ್ರಾಳಿ ದಿವಾಕರ ಶೆಟ್ಟಿ ಮಾತನಾಡಿ, “ಜಾತಿ-ಮತ ಭೇದವಿಲ್ಲದ ಸಿರಿನಾಡ ಸಂಘವು ಒಂದು ಕೂಡುಕುಟುಂಬದಂತಿದೆ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವುದು ಕಷ್ಟಕರವಾದ ಕೆಲಸವಾಗಿದ್ದರೂ, ಸಂಸ್ಥೆಯು ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ ಹಾಗೂ ಕನ್ನಡ ಕಲಿಕಾ ತರಗತಿಗಳಂತಹ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿರುವುದು ಹೆಮ್ಮೆಯ ವಿಚಾರ. ರಜತ ಮಹೋತ್ಸವದ ಸವಿನೆನಪಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಮಹತ್ತರ ಸಾಧನೆ ಮಾಡಿ ತೋರಿಸಬೇಕಾಗಿದೆ. ಸಂಘದ ಉಪವಿಭಾಗವಾದ ಮಹಿಳಾ ವಿಭಾಗವು ಪ್ರಧಾನ ಸಮಿತಿಯ ಕಾರ್ಯಕ್ರಮಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ತಾವು ನಡೆಸುವ ಕಾರ್ಯಕ್ರಮಗಳ ಮಾರ್ಗಸೂಚಿಯನ್ನು ಪ್ರಧಾನ ಸಮಿತಿಯಲ್ಲಿ ಚರ್ಚಿಸಿ ಕಾರ್ಯನಿರ್ವಹಿಸಬೇಕು,” ಎಂದು ಸಲಹೆ ನೀಡಿದರು.

​ಮತ್ತೊಬ್ಬ ಮುಖ್ಯ ಅತಿಥಿ, ಕಲ್ಯಾಣ್ ಡೊಂಬಿವಲಿ ಮಹಾನಗರ ಪಾಲಿಕೆಯ ವಾರ್ಡ್ ಕ್ರಮಾಂಕ 23ರ ನಗರಸೇವಕಿ ಶ್ರೀಮತಿ ರಷಿಕಾ ಕೃಷ್ಣ ಪಾಟೀಲ್ ಮಾತನಾಡಿ, “ನಿಮ್ಮೆಲ್ಲರ ಸಹಕಾರದಿಂದ ನಗರಸೇವಕಿಯಾಗಿ ಆಯ್ಕೆಯಾದ ನನ್ನನ್ನು ಈ ಶೈಕ್ಷಣಿಕ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸತ್ಕರಿಸಿರುವುದಕ್ಕೆ ಸದಾ ಋಣಿಯಾಗಿದ್ದೇನೆ. ನಿಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧಳಿದ್ದೇನೆ. ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಮಾತೃಭಾಷೆ ಕಲಿಸಿ ಪ್ರಮಾಣಪತ್ರ ನೀಡುತ್ತಿರುವುದು ಹಾಗೂ ಕಲಿತ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಯರನ್ನು ಗೌರವಿಸಿ ‘ಗುರುವಂದನೆ’ ಸಲ್ಲಿಸುತ್ತಿರುವುದು ಸಂಸ್ಥೆಯ ಅಚ್ಚುಕಟ್ಟಾದ ಕಾರ್ಯವೈಖರಿಗೆ ಸಾಕ್ಷಿ,” ಎಂದು ಶ್ಲಾಘಿಸಿದರು.


​ಮಹಿಳಾ ವಿಭಾಗದ ಸದಸ್ಯೆ ಶ್ರೀಮತಿ ಸರಸ್ವತಿ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
​ಸಂಘದ ಕಾರ್ಯದರ್ಶಿ ಅಜೆಕಾರು ಜಯ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು. ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಅತಿಥಿ ಗಣ್ಯರನ್ನು ಗೌರವಿಸಿದರು. ಕನ್ನಡ ಕಲಿಕಾ ಶಿಕ್ಷಕಿಯರಾದ ಶೋಭಾ ಟಿ. ಪೂಜಾರಿ, ಸುನೀತಾ ಪಾಲನ್, ಸರಸ್ವತಿ ಶೆಟ್ಟಿ, ಮತ್ತು ಸುಮತಿ ಮೊಗವೀರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
​ಸಮಾರಂಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ಕಲಿಕಾ ತರಗತಿಯ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜೊತೆಗೆ ಕಲಿಕಾ ತರಗತಿಯ ವಿದ್ಯಾರ್ಥಿಗಳಿಂದ ಶಿಕ್ಷಕಿಯರಿಗೆ ಭಾವಪೂರ್ಣ ‘ಗುರುವಂದನೆ’ ನೆರವೇರಿತು.
​ಪ್ರತಿಭಾ ಪುರಸ್ಕಾರದ ಫಲಾನುಭವಿಗಳ ಪಟ್ಟಿಯನ್ನು ಕೋಶಾಧಿಕಾರಿ ಸದಾಶಿವ ಸಾಲಿಯಾನ್ ವಾಚಿಸಿದರೆ, ಕನ್ನಡ ಕಲಿಕಾ ತರಗತಿಯ ವಿದ್ಯಾರ್ಥಿಗಳ ಪಟ್ಟಿಯನ್ನು ಜೊತೆ ಕಾರ್ಯದರ್ಶಿ ಶೋಭಾ ಟಿ. ಪೂಜಾರಿ ವಾಚಿಸಿದರು.
​ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಅಮೀನ್, ಸಲಹೆಗಾರರಾದ ವಸಂತ ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಉದಯ ಜೆ. ಶೆಟ್ಟಿ ಹಾಗೂ ಯುವ ವಿಭಾಗದ ಉಪಾಧ್ಯಕ್ಷ ಗುರುರಾಜ್ ಸುವರ್ಣ ಉಪಸ್ಥಿತರಿದ್ದರು. ಸಲಹೆಗಾರರಾದ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.



Related posts

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ – 35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅಂಕಿತಾ ಭಾಸ್ಕರ್ ಭಂಡಾರಿ ಗೆ ಶೇ 82.60 ಅಂಕ.

Mumbai News Desk

ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ : 42ನೇ ವರ್ಷದ ನವರಾತ್ರಿ ಮಹೋತ್ಸವ.

Mumbai News Desk

ಬೊರಿವಲಿ: ಜಗದೀಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ; ಕುಣಿತ ಭಜನೆಯ ಭಕ್ತಿಪರವಶತೆ

Mumbai News Desk

ಸದ್ಗುರು ಅನಿರುದ್ಧ ಕನ್ನಡ ಉಪಾಸನಾ ಕೇಂದ್ರದ ಧಾರ್ಮಿಕ ಪ್ರವಾಸ.

Mumbai News Desk

ಛಾಯಕಿರಣ ಮಾಸ ಪತ್ರಿಕೆಯ ದಶಮಾನೋತ್ಸವ ಅಚರಣೆ, ಗೌರವಾರ್ಪಣೆ

Mumbai News Desk