August 25, 2026
Mumbai News Kannada
ಲೇಖನ

ಕಡು ಬಡತನದ ಕಣ್ಣೀರಿನಿಂದ ‘ಕುಸಲ್ದ ಅರಸೆ’ಯ ಕೀರ್ತಿಯವರೆಗೆ: ತುಳು ರಂಗಭೂಮಿಯ ಅಪ್ರತಿಮ ಕಲಾವಿದ ನವೀನ್ ಡಿ. ಪಡೀಲ್





ತುಳುನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪರಿಸರದ ಪಡೀಲ್ ಸಮೀಪದ ಕರಂಬೂರು ಎಂಬ ಪುಟ್ಟ ಊರು. ದೇವಪ್ಪ ಸುವರ್ಣ ಹಾಗೂ ಶೇಸಮ್ಮ ದಂಪತಿಯ ಸಣ್ಣ ಸಂಸಾರದಲ್ಲಿ ಇಬ್ಬರು ಮಕ್ಕಳು—ಒಬ್ಬ ಗಂಡು, ಒಬ್ಬ ಹೆಣ್ಣು. ಆ ಗಂಡು ಮಗನೇ ಇಂದು ತುಳು ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ನವೀನ್ ಡಿ. ಪಡೀಲ್.

ಐದಾರು ದಶಕಗಳ ಹಿಂದೆ ಕಡು ಬಡತನ ಕಿತ್ತು ತಿನ್ನುತ್ತಿದ್ದ ಕಾಲದಲ್ಲಿ ನವೀನ್ ಅವರ ಬಾಲ್ಯ ಬಹಳ ಕಷ್ಟದಲ್ಲಿ ಕಳೆಯಿತು. ಆದರೆ ಆ ಕಷ್ಟದ ದಿನಗಳೇ ಅವರ ಬದುಕಿಗೆ ಗಟ್ಟಿಯಾದ ಅಡಿಪಾಯ ಹಾಕಿದವು. ಅಂದು ತಾಯಿ ಇತರರ ಮನೆಗಳಿಗೆ ತೆರಳಿ ದುಡಿದು, ತನ್ನ ಹೊಟ್ಟೆಗೆ ಸಿಕ್ಕ ಅನ್ನದಲ್ಲಿಯೂ ಉಳಿಸಿ, ತನ್ನಿಬ್ಬರು ಮಕ್ಕಳಿಗಾಗಿ ತಂದು ಉಣಿಸುತ್ತಿದ್ದ ನೆನಪುಗಳನ್ನು ನವೀನ್ ಅವರು ಇಂದಿಗೂ ಭಾವುಕರಾಗಿ ನೆನೆಯುತ್ತಾರೆ. ಆ ದಿನಗಳ ನೋವು, ಹಸಿವು, ಹೋರಾಟ ಹಾಗೂ ತಾಯಿಯ ತ್ಯಾಗ ಅವರ ಮನಸ್ಸಿನಲ್ಲಿ ಎಂದಿಗೂ ಮಾಸದ ನೆನಪುಗಳಾಗಿವೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಪರಶುರಾಮ ಸೃಷ್ಟಿ, ಬುದ್ಧಿವಂತರ ನಾಡು, ಕಲೆ-ಸಂಸ್ಕೃತಿಯ ನೆಲೆ ಎಂದೇ ಹಿರಿಯರು ಹೇಳುತ್ತಾರೆ. ಮಂಗಳೂರು ಪರಿಸರದ ಪಡೀಲ್ ಎಂಬ ಮಾಯದ ನೆಲೆಯ ಮಣ್ಣಿನ ಸುಗಂಧದಲ್ಲಿ, ಧರ್ಮದ ಉಳಿವಿನಲ್ಲಿ, ತುಳುನಾಡಿನ ಒಲವಿನ ಕೊಡಿಯೆಲೆಯಲ್ಲಿ ಬೆಳೆದ ನವೀನ್ ಪಡೀಲ್ ಅವರ ಬದುಕಿನ ಹಿಂದೆ ತಾಯಿ, ಹಿರಿಯರು, ಗುರುಗಳು ಹಾಗೂ ತುಳುವ ಮಣ್ಣಿನ ಕಾರ್ಣಿಕದ ಪರಿವಾರ ದೈವಗಳ ಆಶೀರ್ವಾದದ ಬಲವಿದೆ.

ತಾಯಿ ಇರಬಹುದು, ಮಾವನ ಹಿಂದಿನಿಂದ ಬರುವ ಅಳಿಯನಾಗಿರಬಹುದು, ಹಿರಿಯರ ಪ್ರೀತಿ ಇರಬಹುದು—ತನ್ನನ್ನು ಕಾಪಾಡಿಕೊಂಡು ಬೆಳೆಸಿದ ಪ್ರತಿಯೊಬ್ಬರನ್ನೂ ನವೀನ್ ಅವರು ಕೃತಜ್ಞತೆಯಿಂದ ನೆನೆಯುತ್ತಾರೆ. ತುಳುವ ಮಣ್ಣಿನ ದೈವ-ದೇವರುಗಳಿಗೆ, ತಾಯಿ ಮತ್ತು ಹಿರಿಯರಿಗೆ ಶಿರಬಾಗಿ ಆಶೀರ್ವಾದ ಪಡೆದು, ದೈವದ ಗಂಧ ಪ್ರಸಾದವನ್ನು ಹಣೆಗೆ ತಿಲಕವಿಟ್ಟು ತುಳು ರಂಗಭೂಮಿಯ ಬಾಗಿಲು ತಟ್ಟಿದ ಕಲಾವಿದರಲ್ಲಿ ನವೀನ್ ಡಿ. ಪಡೀಲ್ ಅವರ ಹೆಸರು ಇಂದು ಮುಂಚೂಣಿಯಲ್ಲಿದೆ.

ಮನೆಯಲ್ಲಿ ಕಡು ಬಡತನವಿದ್ದ ಕಾರಣ ಕಿಟಲ್ ಮೆಮೋರಿಯಲ್ ಪ್ರೌಢಶಾಲೆ, ಗೋರಿಗುಡ್ಡೆ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಬೇಕಾಯಿತು. ಕುಟುಂಬ ನಿರ್ವಹಣೆಯ ಜವಾಬ್ದಾರಿ ಚಿಕ್ಕ ವಯಸ್ಸಿನಲ್ಲೇ ಹೆಗಲೇರಿತು. ಮನೆಗಳಿಗೆ ಬಣ್ಣ ಹೊಡೆಯುವುದು, ಗಾರೆ ಕೆಲಸ ಮಾಡುವುದು, ಬಾಡಿಗೆ ಆಟೋ ಓಡಿಸುವುದು, ಬಾವಿ ಕೆಲಸ ಮಾಡುವುದು ಸೇರಿದಂತೆ ಸಿಕ್ಕ ಕೆಲಸವನ್ನೆಲ್ಲಾ ಮಾಡಿ ಜೀವನ ಸಾಗಿಸಿದರು.

ಆದರೆ ಕಷ್ಟಗಳ ನಡುವೆ ಒಂದು ಕನಸು ಮಾತ್ರ ಅವರೊಳಗೆ ಜೀವಂತವಾಗಿತ್ತು—‘ತಾನೇನಾದರೂ ಸಾಧಿಸಬೇಕು’. ಅದೇ ಹಠ ಅವರನ್ನು ಕಲೆಯತ್ತ ಕರೆದೊಯ್ದಿತು. ತಮ್ಮ ಗುರುಗಳೊಂದಿಗೆ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ ನವೀನ್ ಪಡೀಲ್, ನಿಧಾನವಾಗಿ ರಂಗಭೂಮಿಯ ಮೇಲೆ ತಮ್ಮ ಹೆಜ್ಜೆ ಗುರುತು ಮೂಡಿಸಿದರು.

ಮಲಯಾಳಂ ಸಿನೆಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಬಳಿಕ ಮಲಯಾಳಂನ ‘ವಿಧೇಯನ್’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಭಾರತದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಅಡೂರ್ ಗೋಪಾಲಕೃಷ್ಣನ್ ನಿರ್ದೇಶಿಸಿದ ಈ ಚಿತ್ರದಲ್ಲಿ ನಟಿಸುವ ಅವಕಾಶ ನವೀನ್ ಅವರ ಕಲಾ ಬದುಕಿಗೆ ಮತ್ತೊಂದು ಮಹತ್ವದ ತಿರುವು ನೀಡಿತು.

ಆ ಬಳಿಕ ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಅವರು, 2000ನೇ ಇಸವಿಯ ನಂತರ ತುಳು ಸಿನೆಮಾಗಳಲ್ಲಿಯೂ ಹೆಚ್ಚು ಸಕ್ರಿಯರಾದರು. ಒಂದರ ಹಿಂದೆ ಒಂದರಂತೆ ಹಲವಾರು ತುಳು ಚಿತ್ರಗಳಲ್ಲಿ ಅಭಿನಯಿಸುತ್ತಾ, ತಮ್ಮದೇ ಆದ ಹಾಸ್ಯ ಶೈಲಿ, ಮುಖಭಾವ, ಮಾತಿನ ಲಯ ಹಾಗೂ ಗಂಭೀರ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದರು.

‘ಮಾಸ್ಟರ್ ಆಫ್ ಕಾಮಿಡಿ ಅಂಡ್ ಟ್ರಾಜಿಡಿ’ ಎಂದೇ ಖ್ಯಾತಿ ಪಡೆದಿರುವ ನವೀನ್ ಪಡೀಲ್ ಅವರು ಕೇವಲ ಹಾಸ್ಯ ಕಲಾವಿದರಲ್ಲ. ಹಾಸ್ಯದ ಹಿಂದೆ ಅಡಗಿರುವ ನೋವನ್ನು, ಗಂಭೀರ ಪಾತ್ರಗಳ ಮೂಲಕ ವ್ಯಕ್ತವಾಗುವ ಭಾವನೆಗಳನ್ನು ಹಾಗೂ ಮಾನವೀಯ ಸಂಬಂಧಗಳ ಸೂಕ್ಷ್ಮತೆಯನ್ನು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಅಪರೂಪದ ಕಲಾವಿದ.

ಒಂದು ಕಾಲದಲ್ಲಿ ನವೀನ್ ಪಡೀಲ್ ಎಂದರೆ ಕಾಮಿಡಿ ಪಾತ್ರ ಎಂದೇ ಭಾವಿಸುತ್ತಿದ್ದ ಪ್ರೇಕ್ಷಕರು, ಇಂದು ಅವರ ಗಂಭೀರ ಹಾಗೂ ಭಾವನಾತ್ಮಕ ಪಾತ್ರಗಳಿಗೂ ಅಷ್ಟೇ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಇದೇ ಅವರ ನಟನಾ ಸಾಮರ್ಥ್ಯದ ದೊಡ್ಡ ಗೆಲುವು.

1969ರ ನವೆಂಬರ್ 11ರಂದು ಜನಿಸಿದ ನವೀನ್ ಡಿ. ಪಡೀಲ್ ಅವರು ಮಂಗಳೂರಿನಲ್ಲಿ ‘ಕುಸಲ್ದ ಅರಸೆ’—ಅಂದರೆ ‘ಸಂತೋಷದ ರಾಜ’ ಎಂಬ ಪ್ರೀತಿಯ ಬಿರುದನ್ನು ಪಡೆದಿದ್ದಾರೆ. ತುಳು ರಂಗಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ನಾಟಕಗಳು ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಅಭಿನಯಿಸಿರುವ ಅವರು, ತಮ್ಮದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಕನ್ನಡದ ಜನಪ್ರಿಯ ಟಿ.ವಿ. ಕಾರ್ಯಕ್ರಮ ‘ಮಜಾ ಟಾಕೀಸ್’ನಂತಹ ಕಾರ್ಯಕ್ರಮಗಳ ಮೂಲಕವೂ ಕನ್ನಡಿಗರ ಮನೆಮಾತಾಗಿದ್ದಾರೆ.

ನವೀನ್ ಪಡೀಲ್ ಅವರ ಕಲಾ ಬದುಕಿಗೆ ಸಂದಿರುವ ಗೌರವಗಳೂ ಅನೇಕ. 2016ರಲ್ಲಿ ಪ್ರಸಿದ್ಧ ತುಳು ಚಲನಚಿತ್ರ ‘ಕುಡ್ಲ ಕೆಫೆ’ಯಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಕರ್ನಾಟಕ ಸರ್ಕಾರದ ವತಿಯಿಂದ ಪೋಷಕ ನಟ ಪ್ರಶಸ್ತಿ ಲಭಿಸಿದೆ.

2023ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (KIFF)ನಲ್ಲಿ ಪ್ರಥಮ ಅರೇಭಾಷೆ ಸಿನೆಮಾ ‘ಮೂಗಜ್ಜನ ಕೋಳಿ’ಯಲ್ಲಿ ಮೂಗಜ್ಜನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯೂ ಇವರ ಮುಡಿಗೇರಿದೆ.

ರಾಷ್ಟ್ರ ಪ್ರಶಸ್ತಿಯ ವಿಚಾರದಲ್ಲಿ ನವೀನ್ ಪಡೀಲ್ ಅವರು ವೈಯಕ್ತಿಕವಾಗಿ ನೇರ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿಲ್ಲ. ಆದರೆ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಇಂಬು’ (Imbu) ಎಂಬ ಚಲನಚಿತ್ರಕ್ಕೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 2026ರಲ್ಲಿ ಅತ್ಯುತ್ತಮ ತುಳು ಸಿನೆಮಾ (Best Tulu Film) ಎಂಬ ರಾಷ್ಟ್ರ ಪ್ರಶಸ್ತಿ ಗೌರವ ಸಂದಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ‘ಮೂಗಜ್ಜ’ ಎಂಬ ವಿಶಿಷ್ಟ ಪಾತ್ರದಲ್ಲಿ ನವೀನ್ ಡಿ. ಪಡೀಲ್ ಅವರು ಕರಾವಳಿಯ ಗ್ರಾಮೀಣ ಬದುಕು, ಸಂಸ್ಕೃತಿ, ಆಚರಣೆಗಳು ಹಾಗೂ ಮಾನವ ಸಂಬಂಧಗಳ ಸುತ್ತ ಸಾಗುವ ಕಥೆಗೆ ಜೀವ ತುಂಬಿದ್ದಾರೆ. ಶಿವಧ್ವಜ್ ಶೆಟ್ಟಿ ಅವರ ನಿರ್ದೇಶನ ಹಾಗೂ ಪ್ರಶಾಂತ್ ರೈ ಅವರ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಹಾಸ್ಯ ನಟನೆಯಿಂದ ಗುರುತಿಸಿಕೊಂಡಿದ್ದ ಪಡೀಲ್ ಅವರು ತಮ್ಮ ಕಣ್ಣು, ಮುಖಭಾವ ಮತ್ತು ಮೌನದ ಮೂಲಕವೇ ಭಾವನೆಗಳನ್ನು ವ್ಯಕ್ತಪಡಿಸಿ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವಂತಹ ಅಭಿನಯ ನೀಡಿದ್ದಾರೆ.

ಇವರನ್ನು ಇತ್ತೀಚೆಗೆ ಸಂಪರ್ಕಿಸಿದಾಗ ತಮ್ಮ ಕಲಾ ಪಯಣದ ಕುರಿತು ಮಾತನಾಡಿದ ನವೀನ್ ಪಡೀಲ್ ಅವರು, ತಮ್ಮ ರಂಗಭೂಮಿ ಆಸಕ್ತಿಗೆ ಮೂಲ ಕಾರಣ ತಮ್ಮ ಗುರುಗಳೇ ಎಂದು ಸ್ಮರಿಸಿದರು.

“ನನ್ನ ಗೋರಿಗುಡ್ಡೆಯ ಹೈಸ್ಕೂಲ್ ಜೀವನದಲ್ಲಿ ನನ್ನ ಮಾಸ್ಟರ್ ರಮಾ, ಬಿ.ಸಿ. ರೋಡ್ ಅವರಿಂದ ಪ್ರೇರಣೆ ಸಿಕ್ಕಿತು. ಅವರು ನನ್ನ ಗುರು ಕೂಡ ಹೌದು” ಎಂದು ಅವರು ನೆನಪಿಸಿಕೊಂಡರು.

“ನೀವು ಯಾವ ಇಸವಿಯಲ್ಲಿ ನಾಟಕ ರಂಗಭೂಮಿಗೆ ಬಂದಿದ್ದೀರಿ?” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು 1987ರಿಂದ ಈ ರಂಗಭೂಮಿಯ ನಟನೆಗೆ ಬಂದು 39 ವರ್ಷದ ಅನುಭವ ಹೊಂದಿದ್ದೇನೆ” ಎಂದರು.

ಕರಾವಳಿಯ ಜನರು ತಮ್ಮನ್ನು ಯಾವ ನಾಟಕ ಹಾಗೂ ಚಲನಚಿತ್ರಗಳ ಮೂಲಕ ಗುರುತಿಸಿದ್ದಾರೆ ಎಂಬ ಪ್ರಶ್ನೆಗೆ ಅವರು ‘ನಂಬುನನೇ ನಂಬೋಡು’, ‘ಒರ್ಯಾಡೋರಿ ಅಸಲು’, ‘ಮಜಾ ಟಾಕೀಸ್’, ‘ಟೋಟಲ್ 125’ ಪ್ರಮುಖ ನಾಟಕಗಳು ಯಶಸ್ಸು ತಂದುಕೊಟ್ಟಿವೆ ಹಾಗೂ ಜನರು ಹೆಚ್ಚಾಗಿ ಗುರುತಿಸಿದ್ದಾರೆ ಎಂದು ಹೇಳಿದರು.

ತಮ್ಮ ನಟನಾ ಬದುಕಿಗೆ ಪ್ರೋತ್ಸಾಹ ನೀಡಿದವರನ್ನು ನೆನೆಯುವಾಗ, “ರಮಾ, ಬಿ.ಸಿ. ರೋಡ್ ನನ್ನ ಗುರು. ಜಿ.ಕೆ. ಪುರುಷೋತ್ತಮ್ ಕುಡ್ಲ, ವಿಠ್ಠಲ್ ಶೆಟ್ಟಿ ಕನಕಪಾಡಿ, ವಿಜಯಕುಮಾರ್ ಕೊಡ್ಯಾಲ್‌ಬೈಲು, ದೇವದಾಸ್ ಕಾಪಿಕಾಡ್, ಶಿವಧ್ವಜ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಇನ್ನಿತರರು ನನಗೆ ಪ್ರೋತ್ಸಾಹ ನೀಡಿದ್ದಾರೆ” ಎಂದು ಕೃತಜ್ಞತೆ ಸಲ್ಲಿಸಿದರು.

ತಮ್ಮನ್ನು ಅರಸಿ ಬಂದ ಸನ್ಮಾನಗಳ ಕುರಿತು ಮಾತನಾಡಿದ ಅವರು, “ಬ್ರಾಹ್ಮಣರ ಸಂಘ, ಬಂಟರ ಸಂಘ, ಬಿಲ್ಲವ ಸಂಘ, ದ್ರಾವಿಡರ ಸಂಘ, ವಿಶ್ವಕರ್ಮ ಸಂಘ, ಮುಸ್ಲಿಮರ ಸಂಘ, ಕ್ರಿಶ್ಚಿಯನ್ ಸಂಘ, ಗೌಡ ಸಾರಸ್ವತ ಸಂಘ ಹಾಗೂ ಇನ್ನಿತರ ಸಂಘಗಳು ನನ್ನನ್ನು ಆರೈಕೆ ಮಾಡಿ, ಎತ್ತಿ ಪ್ರೋತ್ಸಾಹಿಸಿವೆ” ಎಂದು ಸೌಹಾರ್ದತೆಯ ನೆನಪುಗಳನ್ನು ಹಂಚಿಕೊಂಡರು.

ವಿದೇಶ ಪ್ರವಾಸದ ವೇಳೆ ಇಂಗ್ಲಿಷ್‌ನಲ್ಲಿ ಮಾತನಾಡಿದ ಅನುಭವದ ಕುರಿತು ಕೇಳಿದಾಗ ಅವರ ಎಂದಿನ ಹಾಸ್ಯ ಶೈಲಿಯಲ್ಲೇ, “ಅಯ್ಯೋ, ಇಲ್ಲಪ್ಪ! ನನಗೆ ಇಂಗ್ಲಿಷ್ ಅನುಭವ ಕಡಿಮೆ. ಆಸ್ಟ್ರೇಲಿಯಾ, ದುಬೈ, ನೈಜೀರಿಯಾ, ಇಂಗ್ಲೆಂಡ್, ಐರ್ಲೆಂಡ್, ಬಹ್ರೈನ್, ಮಸ್ಕತ್ ಎಲ್ಲ ಕಡೆ ಹೋಗಿದ್ದೇನೆ. ನಾನು ‘Yes, No’ ಅಂತ ಈ ರೀತಿ ಮಾತನಾಡಿ ದಿನ ಕಳೆದಿದ್ದೇನೆ” ಎಂದು ನಗುತ್ತಾ ಉತ್ತರಿಸಿದರು.

ತುಳು ಚಿತ್ರ, ತುಳು ರಂಗಭೂಮಿ, ಕನ್ನಡ ಚಿತ್ರಗಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ನಟಿಸಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ನವೀನ್ ಡಿ. ಪಡೀಲ್ ಅವರು ಪತ್ನಿ ಪಡೀಲ್ ಕನ್ನೊರಿನ ಪ್ರೇಮಲತಾ ಅವರೊಂದಿಗೆ ಸಂಸಾರ ನಡೆಸುತ್ತಿದ್ದಾರೆ.

ಕಲೆ, ಭಾಷೆ, ಧರ್ಮ ಹಾಗೂ ಸಮುದಾಯಗಳ ಗಡಿಯನ್ನು ಮೀರಿ ಸೌಹಾರ್ದತೆಯಿಂದ ಬಾಳಿ ಬದುಕಬೇಕು ಎಂಬ ಸಂದೇಶವನ್ನು ಅವರು ಎಲ್ಲ ಸಮುದಾಯದವರಿಗೂ ನೀಡುತ್ತಾ ಬಂದಿದ್ದಾರೆ. ಇದೇ ಅವರ ವ್ಯಕ್ತಿತ್ವದ ಮತ್ತೊಂದು ದೊಡ್ಡ ಗುಣ.

ತುಳುನಾಡಿನ ಮಣ್ಣಿನಲ್ಲಿ ಹುಟ್ಟಿ, ಬಡತನದ ಕಹಿಯನ್ನು ಅನುಭವಿಸಿ, ಕೂಲಿ ಕೆಲಸದಿಂದ ಜೀವನ ಆರಂಭಿಸಿ, ರಂಗಭೂಮಿಯ ಬೆಳಕಿನಡಿ ನಿಂತು, ಮಲಯಾಳಂ, ತುಳು ಹಾಗೂ ಕನ್ನಡ ಚಿತ್ರರಂಗಗಳಲ್ಲಿ ತನ್ನದೇ ಆದ ಛಾಪು ಮೂಡಿಸಿ, ಸಾವಿರಾರು ವೇದಿಕೆಗಳಲ್ಲಿ ಜನರನ್ನು ನಗಿಸಿ, ಅಳಿಸಿ, ಭಾವುಕರನ್ನಾಗಿಸಿ, ಇಂದು ‘ಕುಸಲ್ದ ಅರಸೆ’ ಎಂಬ ಪ್ರೀತಿಯ ಬಿರುದಿನೊಂದಿಗೆ ಲಕ್ಷಾಂತರ ಅಭಿಮಾನಿಗಳ ಮನದಲ್ಲಿ ನೆಲೆಸಿರುವ ನವೀನ್ ಡಿ. ಪಡೀಲ್ ಅವರ ಪಯಣ ನಿಜಕ್ಕೂ ಒಂದು ಸ್ಪೂರ್ತಿದಾಯಕ ಬದುಕಿನ ಕಥೆ.

ಇನ್ನೂ ಬರುವ ದಿನಗಳಲ್ಲಿ ಸ್ವತಃ ಒಂದು ಸಿನೆಮಾ ಮಾಡುವ ಆಸೆಯನ್ನು ನವೀನ್ ಡಿ. ಪಡೀಲ್ ಅವರು ಹೊಂದಿದ್ದಾರೆ. ಅವರ ಆ ಕನಸು ನನಸಾಗಲಿ, ಕಲೆಯ ಪಯಣ ಮತ್ತಷ್ಟು ಎತ್ತರಕ್ಕೇರಲಿ, ತುಳುನಾಡಿನ ಈ ಪ್ರತಿಭೆಯ ಬೆಳಕು ಇನ್ನಷ್ಟು ದೂರದವರೆಗೆ ಹರಡಲಿ ಎಂದು ಹಾರೈಸೋಣ.

— ಜಯ ಸಿ. ಪೂಜಾರಿ

ಕೆಳಾರ್ಕಳ ಬೆಟ್ಟು



Related posts

ಮಹಿಳಾ ಮೀಸಲಾತಿ ಮಸೂದೆ: ಸಂಸತ್ತಿನ ಅಡೆತಡೆಗಳು ಮತ್ತು ರಾಜಕೀಯ ಸಂಘರ್ಷಗಳ ಒಂದು ವಿಶ್ಲೇಷಣೆ

Mumbai News Desk

*ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಡೆದುಬಂದ ಹೆಜ್ಜೆ ಗುರುತು:*

Mumbai News Desk

ಮಕ್ಕಳು ಮುಂದಿನ ಭವಿಷ್ಯ. ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಬೇಕಾದ   ವಿಶಿಷ್ಟ ಕಾರ್ಯಕ್ರಮ  ಬಂಟ ಭವಿಷ್ಯ,

Mumbai News Desk

ತುಳು-ಕನ್ನಡಿಗರ ಮನ ಸೆಳೆದ ಅಭಿನಯ ಮಂಟಪ ಮುಂಬೈಯ ತುಳು ಜಾನಪದ ಐತಿಹಾಸಿಕ ನಾಟಕ – ಕಲ್ಕುಡ-ಕಲ್ಲುರ್ಟಿ, 

Mumbai News Desk

ಹನಿ ಕತೆ: ಪರಿಹಾರ

Vani Prasad

ಶಿಕ್ಷಣದ ಜೊತೆಗೆ ಸಂಸ್ಕೃತಿಯ ಆರಾಧನೆ: ಪಂಬದ ಸಮುದಾಯದ ಹೆಮ್ಮೆಯ ಕುಲಕಸುಬನ್ನು ಮೈಗೂಡಿಸಿಕೊಂಡ ಮಹೇಶ್ ಗುಜರನ್

Mumbai News Desk