ಮುಂಜಾನೆ ನಾಲ್ಕು ಗಂಟೆ… ಕೋಳಿ ಕೂಗು ಗಾಳಿಯಲ್ಲಿ ಹಾರಿ ಹೋಗಿತ್ತು… ಆದರೆ ಮೊಬೈಲ್ ನಲ್ಲಿ ಅಲಾರಾಂ ಎರಡನೇ ಸಲ ರಿಂಗಣಿಸಿದಾಗ ನಿಧಾನವಾಗಿ ಕಣ್ಣು ತೆರೆದೆ. ಕಣ್ಣು ಮಂಜು ಮಂಜಾದರೂ ಉಜ್ಜಿಕೊಂಡು ಮೊಬೈಲ್ ನತ್ತ ತಡಕಾಡಿದೆ. ಬಳಿಕ ರಪ ರಪನೆ ತಯಾರಾದೆ.
ಈ ಮೊದಲೇ ರಂಜಿತಣ್ಣನ ಎರಡು ಮಿಸ್ಸ್ ಡ್ ಕಾಲ್ ಮಿಸ್ ಆಗಿತ್ತು. ಲೇಟ್ ಆಯಿತೆಂದು ನೀರು, ಡ್ರೋನ್ ಕ್ಯಾಮೆರಾ ಎಲ್ಲ ಹಿಡಿದುಕೊಂಡು ತಮ್ಮನೊಂದಿಗೆ ಹೊರಟೆ…

ಕೌಡೂರಿನಿಂದ ಬೈಲೂರು ದಾರಿಯಲ್ಲಿ ಮುಂಜಾನೆ ಕಂಡ ಸೂರ್ಯೋದಯದ ಅದ್ಭುತ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಈಗಾಗಲೇ ರಂಜಿತಣ್ಣ ಮತ್ತು ತಂಡ ಅಜೆಕಾರ್ ನತ್ತ ತೆರಳಿಯಾಗಿತ್ತು. ನಾವೂ ಕೂಡ ಹಾದಿ ಕೇಳಿಕೊಂಡು ಅಲ್ಲಿಗೆ ರಪ್ಪಂತ ಸಾಗಿದೆವು. ಬಳಿಕ ನಾವೆಲ್ಲ ಒಟ್ಟಾಗಿದ್ದು ಅಂಡಾರಿನ ಕಾರಣಿಕದ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಹತ್ತಿರ. ಸಾಧಾರಣ ಎಲ್ಲರೂ ಪರಿಚಯದವರೇ. ಒಟ್ಟು 14 ಜನ ಕೊಡಮಣಿತ್ತಾಯನಿಗೆ ಅಡ್ಡ ಬಿದ್ದು ನಮ್ಮ ವಾಲಿ ಕುಂಜ ಚಾರಣವನ್ನು ಯಶಸ್ವಿಗೊಳಿಸಪ್ಪ ಎಂದು ಬೇಡಿಕೊಂಡೆವು. ಬೇಡಿಕೆಯ ನೇತೃತ್ವ ವಹಿಸಿದ್ದು ನಮ್ಮ ಕಿಶೋರಣ್ಣ. ತುಂಬಾ ಚೆಂದವಾಗಿ ಎಲ್ಲರ ಪರ ಬೇಡಿಕೊಂಡರು. ಆ 14 ಜನರಲ್ಲಿ ಅಜೆಕಾರಿನ ಹೆಣ್ಣು ಸಿಂಹವೂ ಇತ್ತು. ನಮ್ಮೊಂದಿಗೆ ಆಕೆ ದುರ್ಗಮ ಸಾಹಸಕ್ಕೆ ಕೈ ಹಾಕಿದ್ದೂ ಮೆಚ್ಚುವಂತದ್ದು.

ಅಲ್ಲಿಂದ ನಮ್ಮ ವಾಲಿ ಕುಂಜ ಚಾರಣಕ್ಕೆ ಚಾಲನೆ ದೊರೆಯಿತು. ಕೊಡಮಣಿತ್ತಾಯ ಸ್ಥಾನದಿಂದ ನಮ್ಮ ಚಾರಣಕ್ಕೆ ಗೈಡ್ ಮಾಡುವವರನ್ನು ಈ ಮೊದಲೇ ರಂಜಿತಣ್ಣ ತಯಾರು ಮಾಡಿದ್ದರು. ಅಲ್ಲದೆ ಅರಣ್ಯ ಇಲಾಖೆಯೊಂದಿಗೆ ಸಂಪರ್ಕ ಬೆಳೆಸಿ ನಮಗೆಲ್ಲರಿಗೂ ವಾಲಿ ಕುಂಜಕ್ಕೆ ತೆರಳುವ ಅನುಮತಿ ದೊರಕಿಸಿ ಕೊಡುವ ಸಾಹಸ ಮಾಡಿದ್ದು ರಂಜಿತಣ್ಣನೇ. ಎಲ್ಲರಿಗೂ ಕೆಲವು ತಿಂಗಳ ಮೊದಲೇ ಚಾರಣಕ್ಕೆ ತೆರಳುವ ಬಗ್ಗೆ ತಿಳಿದಿದ್ದರೂ ನನಗೆ ಮಾತ್ರ ಹೇಳಿದ್ದು ಎರಡು ದಿನ ಮೊದಲಷ್ಟೇ.. ಎರಡು ದಿನದಲ್ಲೇ ನಾನು ತಯಾರಾಗಿದ್ದೆ.
ಹೀಗೆ ನಾವು ಗೈಡ್ ಮನೆ ಹತ್ತಿರ ಬಂದೆವು. ಬೆಳಿಗ್ಗಿನ ಉಪಹಾರ ಅಲ್ಲಿ ಮಾಡೋಣವೆಂದು ಮೊದಲೇ ನಿಗದಿಪಡಿಸಿದ್ದ ನಾವು ನಮ್ಮ ಫೇಮಸ್ ಜಯಣ್ಣ ಅವರ ಅಮ್ಮ ಕ್ಯಾಟರರ್ಸ್ ನ ಚಪಾತಿ ಹಾಗೂ ಕೂರ್ಮ ಚಪ್ಪರಿದೆವು. ಬಳಿಕ ಗೈಡ್ ರೊಂದಿಗೆ ಚರ್ಚಿಸಿ ಬೆಟ್ಟಕ್ಕೆ ತೆರಳಬೇಕಾದ ಸಿದ್ಧತೆ ಮಾಡಿಕೊಂಡೆವು. ಗೈಡ್ ಅಲ್ಲಿ ಉಂಬಳ (ಇಂಗ್ಲಿಷ್ ನಲ್ಲಿ ಲೀಚಸ್ ) ಅತಿ ಹೆಚ್ಚಾಗಿರುವ ಬಗ್ಗೆ ನಮಗೆ ತಿಳಿಸಿದರು. ನಮಗೋ ಅದು ಮೊದಲ ಅನುಭವ. ಉಂಬಳದಿಂದ ಕಚ್ಚಿಸಿಕೊಳ್ಳೋ ನಡುಕ ಶುರುವಾಯಿತು. ಆದ್ರೂ ಏನೋ ಒಂದು ಸಾಹಸ ಮಾಡುವ ಹಂಬಲ. ಗೈಡ್, ಉಂಬಳಕ್ಕೆ ಬ್ರಹ್ಮಾಸ್ತ್ರ ಸಿದ್ಧ ಪಡಿಸಿದರು. ಒಂದು ಬಟ್ಟೆಯ ಒಳಗೆ ಸುಣ್ಣ, ಹೊಗೆಸೊಪ್ಪು, ಹಾಗೂ ಉಪ್ಪಿನ ಮಿಶ್ರಣದ ಉಂಡೆ ತಯಾರಿಸಿ ಒಂದು ಕೋಲಿಗೆ ಕಟ್ಟಿದರು. ಹೀಗೆ ಎರಡು ಮೂರು ಅಸ್ತ್ರವನ್ನು ಹಿಡಿದುಕೊಂಡು ಗೈಡ್ ನ್ನು ಹಿಂಬಾಲಿಸಿದೆವು.
ಆರಂಭದಲ್ಲೇ ಒಂದು ತೊರೆಯನ್ನು ದಾಟಿ ಗುಡ್ಡ ಹತ್ತುವ ನಮ್ಮ ಕಾಯಕ ಆರಂಭ.
ನಿಧಾನವಾಗಿ ಹೆಜ್ಜೆ ಇಡುತ್ತ ಸಾಗಿದೆವು ..
“ವಾಲೀ ಕುಂಜದ ತುತ್ತ ತುದಿಗೆ ಹೋಗಲು 7 ಕಿಲೋ ಮೀಟರ್ ನಡೆಯಬೇಕಪ್ಪ ಎಂದು ಗೈಡ್ ಹೇಳಿದಾಗ ! ಓಹ್ ! ಎಂಬ ಉದ್ಘಾರ ಹೊರಟಿತು.. ಬಂದಾಗಿದೆ… ಹೋಗಲೇಬೇಕು ಎಂಬ ಹಠ ಸಾಧನೆ.. ಹಿಂದಿನಿಂದ ಬರುತ್ತಿದ್ದವರೆಲ್ಲರ ಮೊಗದಲ್ಲಿ ಮುಸಿ ಮುಸಿ ನಗು… ಇದರಲ್ಲಿ ರಂಜಿತಣ್ಣ ಮಾತ್ರ ಹ್ಹ ಹ್ಹ ಹ್ಹ ಎಂದರು ….

ಸುಮಾರು ಒಂದು ಕಿ.ಮೀ. ನಡೆದಿರಬಹುದು. ಅಷ್ಟರವರೆಗೆ ಜೋಷ್ ನಲ್ಲಿ ಬೊಬ್ಬೆ ಹಾಕಿಕೊಂಡು ನಡೆಯುತ್ತಿದ್ದಾಗ ಹಿಂದಿನಿಂದ ಒಬ್ಬ ಜೋರಾಗಿ ಕೂಗಿ ಓಹ್ .. ಉಂಬುರು ಹಿಡಿಯಿತು ಎಂದು ಹೇಳಿದ… ಎಲ್ಲರ ಮುಖದಲ್ಲಿ ಭಯ ಆವರಿಸಿತು. ನನಗೂ ಹಿಡಿದಿರಬಹುದೇನೋ … ಎಂದು.. ಎಲ್ಲರೂ ತಮ್ಮ ತಮ್ಮ ಮೈ ಕೈ ನೋಡಿಕೊಂಡರು. ಅಷ್ಟರಲ್ಲಾಗಲೇ ಉಂಬಳ ಕೆಲವರ ಮೈ ಹತ್ತಿತ್ತು.. ರಕ್ತ ಮೆಲ್ಲನೆ ಹೀರತೊಡಗಿತ್ತು. ಅದರ ಹೊಟ್ಟೆ ಉಬ್ಬತೊಡಗಿತ್ತು . ತಟ್ಟನೆ ಗೈಡ್ ಬ್ರಹ್ಮಾಸ್ತ್ರ ಪ್ರಯೋಗಿಸಿದರು. ಉಂಬಳಗಳು ಅದರ ಪೆಟ್ಟು ತಾಳಲಾರದೆ ಕೆಳಗೆ ರಪರಪನೆ ಬೀಳತೊಡಗಿದವು. ನಮ್ಮಲ್ಲೊಬ್ಬರಂತೂ ಮನೆಯಲ್ಲಿ ಪದಾರ್ಥಕ್ಕೆಂದು ಅಮ್ಮ ಡಬ್ಬದಲ್ಲಿಟ್ಟಿದ್ದ ಅರಶಿನ ಹುಡಿಯ ಇಡೀ ಪ್ಯಾಕೆಟ್ ಅನ್ನೇ ತಂದಿದ್ದರು. ಅವರಿಗೆ ಯಾರೋ ಹೇಳಿದ್ದರಂತೆ. ಅದನ್ನು ಹಾಕಿದರೆ ಉಂಬಳ ಹಿಡಿಯುವುದಿಲ್ಲವೆಂದು. ಅದನ್ನು ಕೇಳಿದ್ದೆ ತಡ ನಾವೆಲ್ಲರೂ ಅವರ ಕೈಯಿಂದ ಹಳದಿ ಹುಡಿಯನ್ನು ಕಿತ್ತುಕೊಂಡು ನಮ್ಮ ನಮ್ಮ ಕಾಲಿಗೆ ಹೊಯ್ದಿದ್ದೆವು. ಎಲ್ಲರೂ ಹಳದಿಮಯ.. ಈ ಎಲ್ಲ ಪ್ರಕ್ರಿಯೆ ಮುಗಿಸಿಕೊಳ್ಳುತ್ತ ನಾವು ಸಾಗುತ್ತಿದ್ದೆವು. ಮೊದ ಮೊದಲೆಲ್ಲ ಹಾದಿ ಸಲೀಸಾಗಿದ್ದರೆ ಬಳಿಕ ದೊರೆತಿದ್ದು ದುರ್ಗಮ ಹಾದಿ. ಒಂದು ಕಡೆ ಮರ ಬಿದ್ದಿದ್ದರೆ ಇನ್ನೊಂದು ಕಡೆ ದಟ್ಟವಾದ ಪೊದೆ. ಪೊದೆಯಿಂದ ಮುಂದೆ ಸರಿದಾಗ ದಟ್ಟವಾದ ಮಂಜು ಮುಸುಕಿದ ವಾತಾವರಣ. ಎಲ್ಲವನ್ನೂ ಸೀಳಿಕೊಂಡು ಸಾಗಿದ್ದೆವು. ಒಂದು ನಿಮಿಷ ಆಯಾಸ ಪರಿಹರಿಸಿಕೊಳ್ಳಲು ನಿಲ್ಲೋಣ ಎಂದರೆ ಕಪ್ಪಗಿನ ರಾಶಿ ರಾಶಿ ಉಂಬಳಗಳು ಬರುವ ಚೆಂದ ನೋಡಿ ಅಲ್ಲಿಂದ ರಪ ರಪನೆ ಜಾಗ ಕಾಲಿ ಮಾಡುತ್ತಿದ್ದೆವು.

ಕಿಶೋರಣ್ಣ ಟ್ರೆಕ್ಕಿಂಗ್ ಹಾಕುವ ದೊಡ್ಡ ಶೂವನ್ನೇ ಹಾಕಿಕೊಂಡು ಬಂದಿದ್ದು ಅವರ ಆ ಬೂಟಿನ ಸೌಂಡಿಗೆ ಕೆಲವು ಉಂಬಳಗಳು ಹೆದರಿದ್ದೂ ಉಂಟು. ಉಫ್ … ಹೇಗೋ ಮುಂದೆ ಸಾಗುತ್ತಿದ್ದೆವು.
ಮುಂದೆ ಮುಂದೆ ಸಾಗುವಾಗ ನೀರು ಬೀಳುವ ಜಲಪಾತದ ಸದ್ದು. ಸಾಗುತ್ತ ಅದರ ಸನಿಹ ತಲುಪಿದವು. ವಾಹ್ಹ್.. ! ಎಲ್ಲರ ಬಾಯಲ್ಲೂ ಉದ್ಘಾರ …. ಜೀವಮಾನದಲ್ಲಿ ಅಷ್ಟೊಂದು ದೊಡ್ಡ ಜಲಪಾತವನ್ನು ನೋಡಿದ್ದು ಅದೇ ಮೊದಲು. ನೋಡಿದಷ್ಟೂ ದೂರ ಜಲಪಾತ… ಡ್ರೋನ್ ಕ್ಯಾಮೆರಾದಲ್ಲಿ ಅದನ್ನು ಸೆರೆ ಹಿಡಿದೆ . ಅಲ್ಲಿ ಸ್ವಲ್ಪ ಹೊತ್ತು ಇದ್ದು ಬಳಿಕ ಅಲ್ಲಿಂದ ಕಠಿಣವಾದ ಬಂಡೆಯನ್ನು ಹತ್ತಿ ಸಾಗಿದೆವು. ಬಳಿಕ ಅಲ್ಲಿಂದ ಬಂದು ಒಂದು ಗುಹೆಯ ಹತ್ತಿರ ಬಂದು ತಲುಪಿದೆವು. ಅಲ್ಲಿ ಸ್ವಲ್ಪ ಉಳಕೊಂಡು ಸಾಗೋಣ ಎಂದು ಗೈಡ್ ಹೇಳಿದರು.
ಗುಹೆಯ ಹತ್ತಿರ ಬಂದೆವು. ಹೋಯ್ ! ಗುಹೆಯ ಹತ್ತಿರ ಬಂದರೂ ಉಂಬಳ ಬಿಡಬೇಕಲ್ಲ. ಓ ಬಾಪ್ರೆ … ಎಲ್ಲರಿಗೂ ಉಂಬಳ ಹೆಕ್ಕುವ ಕೆಲಸ… ಮೈಯಲ್ಲಿ ಅಲ್ಲಿ ಇಲ್ಲಿ ಎಲ್ಲೆಲ್ಲೋ..
ಅಲ್ಲಿ ಬಿಸ್ಕತ್ ಮತ್ತಿತರ ತಿಂಡಿಗಳನ್ನು ತಿಂದು ಜಾಗ ಕಾಲಿ ಮಾಡಿದೆವು. ಆ ಗುಹೆಯ ಬಗ್ಗೆ ಹಾರರ್ ಸ್ಟೋರಿ ಯೊಂದನ್ನು ಗೈಡ್ ಹೇಳಿದ್ದು ಓಹ್ ಇಷ್ಟೆಲ್ಲಾ ಇದೆಯಾ ಎಂದೆನ್ನಿಸತೊಡಗಿತು.

ಬಳಿಕ ಮುಂದಕ್ಕೆ ಹೋದಂತೆ ಒಂದು ಬಂಡೆಯ ಮೇಲೆ ನಿಂತಾಗ ಕಾರ್ಕೋಟಕ ವಿಷವಿರುವ ಪಶ್ಚಿಮ ಘಟ್ಟದ ಅತ್ಯಂತ ಅಪಾಯಕಾರಿ ಹಾವೊಂದು ಕಾಣಿಸಿತು. ಅದು ಕಚ್ಚಿದರೆ ಕ್ಷಣ ಮಾತ್ರದಲ್ಲಿ ಪರಲೋಕಗೈಯುವರೆಂದಾಗ ಮೈ ಜುಮ್ಮೆನಿಸಿತು.
ಬಳಿಕ ನಾವು ಸಾಗಿದ ಹಾದಿ ಅತ್ಯಂತ ದುರ್ಗಮ. ಪ್ರಪಾತ, ಮೆಟ್ಟಲುಗಳು, ಬ್ರಿಟಿಷರು ಬಿಟ್ಟು ಹೋದ ಕುರುಹುಗಳು, ಗಿಡಗಳಿಂದಲೇ ಆವೃತವಾದ ಗುಹೆಯಂತಹ ಹಾದಿ, ಜಾರುವ ಜರೆಯ ಮೇಲೆ ಹತ್ತಿದ್ದು, ಕೆಲವರು ಬಿದ್ದಿದ್ದು, ನಮ್ಮ ಹೆಣ್ಣು ಸಿಂಹವಂತೂ ಮರದ ಮೇಲೆ ಕಾಲಿಟ್ಟು ಹಲಸಿನ ಕಾಯಿಯಂತೆ ಕೆಳಗೆ ಉದುರಿದ್ದು… ಇನ್ನೋರ್ವರು ನಡೆಯಲಿಕ್ಕೆ ಸುಲಭ ಎಂದು ಚಪ್ಪಲಿ ಬಿಟ್ಟು ನಡೆದದ್ದು… ಕಾಲಲ್ಲೆಲ್ಲ ಉಂಬಳ ಕಡಿದ ರಕ್ತ … ಆ ನೋವಿನ ನಡುವೆ ನಕ್ಕಿದ್ದು . .. ಅಬ್ಬಬ್ಬಬ್ಬ .. ಭಯ ಮಿಶ್ರಿತ ವಾತಾರವರಣವಿದ್ದರೂ ಸಾಗಿದ ಹಾದಿಯೇ ರೋಮಾಂಚನ ನೀಡಿತ್ತು. ಹಾಗೂ ಹೇಗೋ ನಮ್ಮನ್ನು ಮಂಗ ಮಾಡಿದ ರಂಜಿತಣ್ಣ ಹಾಗೂ ಗೈಡ್ ನಮ್ಮನ್ನು ಗುಡ್ಡದ ಸನಿಹ ತಂದರು. ಅಷ್ಟರಲ್ಲಾಗಲೇ ಸೋತು ಸುಣ್ಣವಾಗಿದ್ದೆವು. ವಾಲೀ ಕುಂಜದ ಬುಡಕ್ಕೆ ಬಂದಾಗ ಮೇಲೆ ನೋಡುತ್ತೇವೆ 80^ (೮೦ ಡಿಗ್ರಿ) ಯಲ್ಲಿ ನಾವು ಕುಂಜ ಹತ್ತಬೇಕಿತ್ತು. ಓಹ್… ಇದೆಲ್ಲ ಆಗುವುದೋ ಎಂದೆನಿಸಿತು . ಮತ್ತೆ ಮೇಲೇರಿದ್ದು ಇತಿಹಾಸ… ಕಾಲಿ ತೆವಳಿಕೊಂಡೇ ನಾನು ಸಾಗಿದ್ದು. ನಮ್ಮಲ್ಲಿ ಕೆಲವರು ಸಲೀಸಾಗಿ ಹೋಗುವುದನ್ನು ಕಂಡು ಬೆಪ್ಪಾದರೆ ಉಳಿದವರ ವಾಕಿಂಗ್ ಚಿತ್ರ ವಿಚಿತ್ರವಾಗಿತ್ತು. ಏಳುತ್ತ ಬಾಗುತ್ತಾ ತೆವಳುತ್ತ ಕೊನೆಗೂ ನಾವು ತುತ್ತ ತುದಿ ತಲುಪಿದೆವು. (ಬೆಳಿಗ್ಗೆ 6 ಗಂಟೆಗೆ ಹೊರಟಿದ್ದು ತುದಿ ತಲುಪುವಾಗ ಸುಮಾರು ಮಧ್ಯಾನ್ಹ 12.30 ಗಂಟೆ)
ಸ್ವರ್ಗ ತಲುಪಿದ ಅನುಭವ. ಎಲ್ಲೆಲ್ಲೂ ಮೋಡ ಮುತ್ತಿಕ್ಕಿದ ಶಿಖರಗಳು.. ಪರ್ವತಗಳು… ನಾವಿರುವ ಪರ್ವತದ ಸುತ್ತ ಅತಿ ದೊಡ್ಡ ಪ್ರಪಾತ… ಅಲ್ಲಿ ವಾಲಿಯ ಪಾದವಿತ್ತು. ಎಲ್ಲರೂ ಅದಕ್ಕೆ ನಮಿಸಿದರು. ಬಳಿಕ ಖುಷಿಯೋ ಖುಷಿ…. ಕೆಲವರು ಡ್ಯಾನ್ಸ್ ಮಾಡುವುದೇನು, ಸೆಲ್ಫಿ ತೆಗೆಯುವುದೇನು, ಮಂಗನ ಹಾಗೆ ಕುಪ್ಪಳಿಸುವುದೇನು … ಓಹೋಹೋ …. ಸಣ್ಣಗೆ ಮಳೆ ಹನಿಯುತ್ತಿತ್ತು.
ಮಳೆಯಲಿ..
ಜೊತೆಯಲಿ
ವಾಲಿ ಕುಂಜದಲಿ ….
ಸ್ವರ್ಗದಂತಹ ಅನುಭವದಲಿ
ತೇಲಾಡಿದೆವು ನಾವಲ್ಲಿ…

ಅಲ್ಲಿ ವಿಡಿಯೋ ಮಾಡಿಕೊಂಡೆವು…. ಆ ರೋಚಕ, ರೋಮಾಂಚಕ, ರುದ್ರ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡೆವು… ಸುಮಾರು ಒಂದು ಗಂಟೆ ಪ್ರಕೃತಿಯಂದವನ್ನು ಸವಿದು ಹಿಂತಿರುಗಿದೆವು.
ಹಿಂತಿರುಗಿದ್ದೂ ಇತಿಹಾಸ…
ಯಾವುದೇ ತೊಂದರೆಯಿಲ್ಲದೆ ಮನೆಗೆ ತಲುಪಿದೆವು… ತೆವಳುತ್ತಾ, ಬಾಗುತ್ತಾ, ಉರುಳುತ್ತಾ… ದೇವರಿಗೆ ಧನ್ಯವಾದ ತಿಳಿಸುತ್ತಾ…
✒️:-ಚಂದ್ರಹಾಸ್ ಮೆಂಡನ್
(ಸಹಕಾರ ರಂಜಿತ್ ಶೆಟ್ಟಿ ಕೌಡೂರ್ )




