October 9, 2026
Mumbai News Kannada
ಸುದ್ದಿ

ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿಗೆ ಭಾಜನರಾದ ಹಿರಿಯ ಅರ್ಥಧಾರಿ ಕೆ.ಕೆ. ಶೆಟ್ಟಿ ಮುಂಬಯಿ







ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿಗೆ ಭಾಜನರಾದ ಹಿರಿಯ ಅರ್ಥಧಾರಿ ಕೆ.ಕೆ. ಶೆಟ್ಟಿ ಮುಂಬಯಿ

ಹಿರಿಯ ಯಕ್ಷಗಾನ ವಿದ್ವಾಂಸ, ಶಿಕ್ಷಕ ಮತ್ತು ಪ್ರಸಂಗಕರ್ತ ದಿವಂಗತ ಸೀತಾನದಿ ಗಣಪಯ್ಯ ಶೆಟ್ಟರ ಹೆಸರಿನಲ್ಲಿ ವರ್ಷಂಪ್ರತಿ ಕೊಡಮಾಡುವ ಪ್ರಶಸ್ತಿಗೆ ಈ ಬಾರಿ ಮುಂಬಯಿ ಮಹಾನಗರದ ಹಿರಿಯ ಅರ್ಥಧಾರಿ, ಸಂಘಟಕ ಮತ್ತು ಸಮಾಜಸೇವಕ ಕೆ.ಕೆ. ಶೆಟ್ಟಿ ಆಯ್ಕೆಯಾಗಿದ್ದಾರೆ. ಅವರಿಗೀಗ 90ರ ತುಂಬು ಪ್ರಾಯ. 39ನೇ ಸೀತಾನದಿ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.

ಪಡುಬಿದ್ರಿ ನಡ್ಸಾಲಿನ ಕೃಷಿಕ ಕುಟುಂಬದಲ್ಲಿ ದಿವಂಗತ ಕಾಡ್ಯ ಶೆಟ್ಟಿ ಮತ್ತು ಚಿಕ್ಕಿ ಶೆಟ್ಟಿ ದಂಪತಿಗೆ 1936 ಮೇ 5ರಂದು ಜನಿಸಿದ ಕೆ. ಕುಟ್ಟಿ ಶೆಟ್ಟರು, ಅವರಾಲ್ ಮಟ್ಟಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದರು. 1950ರಲ್ಲಿ ತಮ್ಮ ಹದಿನಾಲ್ಕನೇ ವಯಸ್ಸಿಗೆ ಮುಂಬಯಿ ಮಹಾನಗರವನ್ನು ಸೇರಿದರು. ಅಲ್ಲಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ದುಡಿಯುತ್ತಾ ಮೊಗವೀರ ರಾತ್ರಿ ಶಾಲೆಯಲ್ಲಿ ಕಲಿಕೆಯನ್ನು ಮುಂದುವರಿಸಿದರು. ಮುಂದೆ ಸ್ವತಂತ್ರ ಉದ್ಯಮ ನಡೆಸುವುದರೊಂದಿಗೆ ಹಲವು ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರು.

ಯಕ್ಷಗಾನ ತಾಳಮದ್ದಳೆಯತ್ತ ಆಸಕ್ತರಾಗಿದ್ದ ಕೆ.ಕೆ. ಶೆಟ್ಟರು, ಮಾಣಿಯೂರು ಶಂಕರ ಶೆಟ್ಟರ ಪ್ರೇರಣೆಯಿಂದ ಅರ್ಥಧಾರಿಯಾಗಿ ಬೆಳೆದರು. ಶ್ರೀಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ರೇರೋಡ್ ಮತ್ತು ಶ್ರೀ ಶಾರದಾ ಯಕ್ಷಗಾನ ಮಂಡಳಿ ಬೈಕಲಾ ಮೂಲಕ ಹಿರಿಯ–ಕಿರಿಯ ಕಲಾವಿದರೊಂದಿಗೆ ತಮ್ಮ ಅರ್ಥಗಾರಿಕೆಯನ್ನು ಮುಂದುವರಿಸಿದರು. ಕರ್ಣ, ವಾಲಿ, ಜರಾಸಂಧ, ಕೌರವ, ಭೀಷ್ಮ, ಪರಶುರಾಮ, ಕೃಷ್ಣ, ಅರ್ಜುನ, ರಾವಣ ಮೊದಲಾದ ಪಾತ್ರಗಳಲ್ಲಿ ಖ್ಯಾತಿ ಗಳಿಸಿದರು. ಮುಂಬಯಿಯ ತಮ್ಮ ಓರಗೆಯ ಕಲಾವಿದರೊಂದಿಗೆ ಮಾತ್ರವಲ್ಲದೆ ತವರೂರಿನ ಹಿರಿಯ ಅರ್ಥಧಾರಿಗಳಾದ ಶೇಣಿ, ಸಾಮಗರು, ಜೋಶಿ, ಮುದ್ರಾಡಿ, ಸಿದ್ಧಕಟ್ಟೆಯವರೊಂದಿಗೂ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸಿದ್ದಾರೆ.

ಮುಂಬಯಿಯಲ್ಲಿ ‘ಯಕ್ಷಮಿತ್ರ’ ಎಂಬ ಸಂಘಟನೆಯನ್ನು ಸ್ಥಾಪಿಸಿ ಪೆರಣಂಕಿಲ ಹರಿದಾಸ ಭಟ್, ಬಳ್ಕುಂಜೆ ಗೋಪಾಲ ಶೆಟ್ಟಿ, ಅಡ್ವೆ ವಾಸು ಶೆಟ್ಟಿ, ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ದೇವಲ್ಕುಂದ ಭಾಸ್ಕರ ಶೆಟ್ಟಿ, ಕೋಲ್ಯಾರು ರಾಜು ಶೆಟ್ಟಿ, ಶೇಣಿ ಶ್ಯಾಮ ಭಟ್ ಮೊದಲಾದವರ ಸಹಕಾರದಿಂದ ಮಹಾನಗರದ ವಿವಿಧೆಡೆ ತಾಳಮದ್ದಳೆ ಕೂಟಗಳನ್ನು ಆಯೋಜಿಸಿದ ಶೆಟ್ಟರು, ಕಲಾವಿದರ ಸನ್ಮಾನ ಹಾಗೂ ಸಂಸ್ಮರಣೆಗಳನ್ನು ನಡೆಸಿ ಯಕ್ಷರಸಿಕರ ಮನಗೆದ್ದರು. ಮುಂಬಯಿಯ ಯಕ್ಷಗಾನ ಸಂಸ್ಥೆಗಳಿಗೆ ಮತ್ತು ಊರಿನ ಕಲಾವಿದರಿಗೆ ಆಪ್ತರೆನಿಸಿದರು. ಕಣಂಜಾರು ಆನಂದ ಶೆಟ್ಟಿ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ (2018) ಸೇರಿದಂತೆ ಹಲವು ಗೌರವ-ಪುರಸ್ಕಾರಗಳನ್ನು ಅವರು ಪಡೆದಿದ್ದಾರೆ.

ಕಲಾವಿದರಿಗೆ ಆಪತ್ಕಾಲದಲ್ಲಿ ನೆರವಾಗುವುದಲ್ಲದೆ, ಹಲವು ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಕರಿಸಿರುವುದು ಅವರ ಔದಾರ್ಯಕ್ಕೆ ಸಾಕ್ಷಿ. 1967ರಲ್ಲಿ ಪರಾರಿ ಬಳ್ಕುಂಜೆಯ ನೇತ್ರಾವತಿ ಶೆಟ್ಟಿ ಅವರನ್ನು ವಿವಾಹವಾಗಿ, ವೈದ್ಯ ಪುತ್ರಿ ಡಾ. ಶಾಲಿನಿ ವಿ. ಶೆಟ್ಟಿ ಹಾಗೂ ಉದ್ಯಮಶೀಲರಾದ ಗಣೇಶ್ ಶೆಟ್ಟಿ (ನೆಸ್ಲೆ), ಶ್ರೀಕಾಂತ್ ಶೆಟ್ಟಿ (ಸಿಎ) ಎಂಬ ಇಬ್ಬರು ಗಂಡುಮಕ್ಕಳೊಂದಿಗೆ ನವಿ ಮುಂಬಯಿ ವಾಶಿಯ ತಮ್ಮ ನಿವಾಸದಲ್ಲಿ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ. ತೊಂಬತ್ತರ ಇಳಿವಯಸ್ಸಿನಲ್ಲಿಯೂ ಅವರು ಯಕ್ಷಗಾನ ಮತ್ತು ಸಾರ್ವಜನಿಕ ರಂಗದಲ್ಲಿ ಸಕ್ರಿಯರಾಗಿದ್ದಾರೆ.

ಅ.10ಕ್ಕೆ ಪ್ರಶಸ್ತಿ ಪ್ರದಾನ: ಇದೇ ಅಕ್ಟೋಬರ್ 10ರಂದು ಮುಂಬಯಿಯ ಥಾಣೆಯ ಆರ್. ನೆಸ್ಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಕೆ.ಕೆ. ಶೆಟ್ಟರು 2026ನೇ ಸಾಲಿನ ‘ಸೀತಾನದಿ ಪ್ರಶಸ್ತಿ’ಯನ್ನು ಸ್ವೀಕರಿಸಲಿದ್ದಾರೆ. ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡುವರು. ಪೊಲ್ಯ ಉಮೇಶ ಶೆಟ್ಟಿ ಸಂಸ್ಮರಣಾ ಭಾಷಣ ಹಾಗೂ ಪ್ರೊ. ಎಸ್.ವಿ. ಉದಯಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡುವರು.

ಇದೇ ಸಂದರ್ಭದಲ್ಲಿ ದಿವಂಗತ ಸೀತಾನದಿಯವರು ರಚಿಸಿದ ಐದು ಪ್ರಸಂಗಗಳ ಸಂಕಲನವನ್ನು ಬರೋಡಾದ ಉದ್ಯಮಿ ಶಶಿಧರ ಶೆಟ್ಟಿ ಬಿಡುಗಡೆಗೊಳಿಸುವರು. ಸೀತಾನದಿ ಜಯರಾಮ ಶೆಟ್ಟಿ, ಇರುವೈಲು ದಾಮೋದರ ಶೆಟ್ಟಿ ಮತ್ತು ಪ್ರತಿಷ್ಠಾನದ ಕಾರ್ಯದರ್ಶಿ ಎಸ್. ಅಶೋಕಕುಮಾರ್ ಶೆಟ್ಟಿ ಉಪಸ್ಥಿತರಿರುವರು. ಕೊನೆಯಲ್ಲಿ ಪ್ರಕಾಶ್ ಕಿರಾಡಿ ಮತ್ತು ಬಳಗದಿಂದ ‘ಬ್ರಹ್ಮಕಪಾಲ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

— ಭಾಸ್ಕರ ರೈ ಕುಕ್ಕುವಳ್ಳಿ



Related posts

ಸಮಾಜ ಸೇವಕಿ ದಿ. ಸುಮಿತ್ರಾ ರಾಜು ಸಾಲ್ಯಾನ್ ಅವರ ಜನ್ಮದಿನ.ವೃದ್ಧಾಶ್ರಮದಲ್ಲಿ ಆಚರಣೆ.

Mumbai News Desk

ಛತ್ರಪತಿ ಶಿವಾಜಿ ಮಹಾರಾಜರ ಭೂಮಿಯಲ್ಲಿ ಡ್ಯಾನ್ಸ್ ಬಾರ್‌ಗಳಿಗೆ ನಿಷೇಧ ಹೇರಿದ ರಾಜ್ ಠಾಕ್ರೆ ಹೇಳಿಕೆಯ ಬೆನ್ನಲ್ಲೆ ಪನ್ವೇಲ್ ಬಾರ್ ಧ್ವಂಸಗೊಳಿಸಿದ ಎಂಎನ್‌ಎಸ್ ಕಾರ್ಯಕರ್ತರು

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಧನ ಸಹಾಯ

Mumbai News Desk

ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಹುಟ್ಟೂರ ಸಮ್ಮಾನ – ತಾಳಮದ್ದಳೆ 

Mumbai News Desk

ರಾಷ್ಟ್ರೀಯ ನಾಟಕ ಸ್ಪರ್ಧೆ – ಉಡುಪಿಯ ನವಸುಮ ರಂಗಮಂಚ ಕೊಡವೂರು ತಂಡ ಪ್ರಥಮ.

Mumbai News Desk

ಉದ್ಯಮಿ ಎನ್. ಟಿ.ಪೂಜಾರಿ ಅವರಿಗೆ ಪಿತೃ ವಿಯೋಗ

Mumbai News Desk