September 6, 2026
Mumbai News Kannada
ಸುದ್ದಿ

ರಾಕ್ಷಸ ಪಾತ್ರಗಳಲ್ಲಿ ಮೆರೆದು, ಯಕ್ಷರಂಗದಲ್ಲಿ ಮಿಂಚಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ





ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಬಣ್ಣದ ವೇಷಧಾರಿ ಎಂದೇ ಪ್ರಸಿದ್ಧಿ ಪಡೆದಿದ್ದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅನಾರೋಗ್ಯದಿಂದ ಭಾನುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಬಣ್ಣದ ವೇಷಧಾರಿ ಎಂದೇ ಪ್ರಸಿದ್ಧಿ ಪಡೆದಿದ್ದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅನಾರೋಗ್ಯದಿಂದ ಭಾನುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಯಕ್ಷಗಾನ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚಿನ ವರ್ಷ ವ್ಯವಸಾಯ ಮಾಡಿರುವ ಸದಾಶಿವ ಶೆಟ್ಟಿಗಾರ್, ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

1965 ಡಿ.17ರಂದು ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆಯಲ್ಲಿ ಬಾಬು ಶೆಟ್ಟಿಗಾರ್-ಗಿರಿಯಮ್ಮ ದಂಪತಿಯ ಪುತ್ರನಾಗಿ ಅವರು ಜನಿಸಿದರು. ಸಿದ್ದಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದ ಅವರ ಯಕ್ಷಗಾನ ಆಸಕ್ತಿ ರಂಗಸ್ಥಳದ ವರೆಗೆ ಕರೆದೊಯ್ಯಿತು. ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಹಾಲಿಂಗ ಅವರ ಬಳಿ ವೇಷ, ನಾಟ್ಯ ಮತ್ತು ರಂಗದ ನಡೆಗಳ ಕುರಿತು ಕಲಿತ ಅವರು, ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು.

ಎರಡು ವರ್ಷ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ ಆರಂಭಿಸಿದ ಬಳಿಕ ಕಟೀಲು 1ನೇ ಮೇಳದಲ್ಲಿ 8 ವರ್ಷ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿದರು. ಬಳಿಕ 13 ವರ್ಷ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿ, 18 ವರ್ಷ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರಿಗೆ ಸದಾಶಿವ ಶೆಟ್ಟಿಗಾರರು ವಿದ್ಯಾದಾನ ಮಾಡಿದ್ದಾರೆ.

ರಾವಣ, ಮಹಿರಾವಣ, ಮಹಿಷಾಸುರ, ಶುಂಭ, ಕುಂಭಕರ್ಣ, ಶೂರ್ಪನಖಿ, ಪೂತನಿ, ಅಜಮುಖಿ, ಕಾಕಾಸುರ, ತಾರಕಾಸುರ, ಯಮಧರ್ಮ ಸಹಿತ ಎಲ್ಲ ರೀತಿಯ ಪುರುಷ ಹಾಗೂ ಹೆಣ್ಣು ಬಣ್ಣದ ವೇಷಗಳಲ್ಲಿ ಸಿದ್ದಕಟ್ಟೆಯವರು ಹೆಸರು ಮಾಡಿದವರು. ಸುಸ್ಪಷ್ಟ ಮಾತುಗಾರಿಕೆ, ಪರಂಪರೆಯ ಬಣ್ಣ, ಬಣ್ಣದ ವೇಷಕ್ಕೆ ಹೇಳಿ ಮಾಡಿಸಿದ ಅಂಗ ಸೌಷ್ಟವ, ಗಡಸು ಧ್ವನಿ ಹಾಗೂ ಪ್ರಸಿದ್ಧ ಬಣ್ಣದ ವೇಷಧಾರಿ ಬಣ್ಣದ ಮಾಲಿಂಗರಿಂದ ಕಲಿತ ವಿದ್ಯೆ ಅವರನ್ನು ಅಗ್ರಗಣ್ಯ ವೇಷಧಾರಿಯನ್ನಾಗಿ ರೂಪಿಸಿತು.

ಇತ್ತೀಚೆಗೆ ಮಂಗಳೂರು ವಿ.ವಿ.ಯಿಂದ ‘ಯಕ್ಷಮಂಗಳ’ ಪ್ರಶಸ್ತಿ ಸ್ವೀಕರಿಸಿದ್ದ ಅವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಭ್ರಾಮರಿ ಯಕ್ಷಮಣಿ ಪ್ರಶಸ್ತಿ, ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಹರೇಕಳ ಪಾವೂರು, ಬಿ.ಸಿ. ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮಾಜಿ ಅಧ್ಯಕ್ಷ ಹೊಸಬೆಟ್ಟು ಕೆ.ಆರ್. ಪುತ್ರನ್ ಅವರಿಗೆ ನುಡಿನಮನ: ಅಂಧೇರಿಯಲ್ಲಿ ಸಂತಾಪ ಸಭೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (17/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಿ. ಆರ್. ರಾಜು ನಿಧನಕ್ಕೆ ಶ್ರದ್ದಾಂಜಲಿ ಸಭೆ

Mumbai News Desk

ಆಶಾ ಭೋಸ್ಲೆ ಅವರ ಆರೋಗ್ಯದಲ್ಲಿ ಏರುಪೇರು: ಮುಂಬೈನ ಆಸ್ಪತ್ರೆಗೆ ದಾಖಲು

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (MPL 2026): ಹರಾಜು ಪ್ರಕ್ರಿಯೆ ಯಶಸ್ವಿ; ₹4 ಲಕ್ಷಕ್ಕೆ ಕುಂದಾಪುರ ಲೆಜೆಂಡ್ಸ್ ಮುಂಚೂಣಿಯಲ್ಲಿ

Mumbai News Desk

*ಭಾರತ್ ಬ್ಯಾಂಕ್ ಬೋಯಿಸರ್ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನ ಆಚರಣೆ

Mumbai News Desk