September 6, 2026
Mumbai News Kannada
ಮುಂಬಯಿ

ಡೊಂಬಿವಲಿ ಶ್ರೀ ಮಹಾವಿಷ್ಣು ಮಂದಿರದ ವತಿಯಿಂದ ‘ಆಟಿಡೊಂಜಿ ದಿನ’ ಆಚರಣೆ






​”ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನೀವು ನೀಡಿದ ಸಹಕಾರಕ್ಕೆ ನಾವು ಚಿರಋಣಿಯಾಗಿದ್ದೇವೆ” – ಇಂದುಶೇಖರ್ ಸುವರ್ಣ


​ನಮ್ಮ ಹಿರಿಯರು ಸ್ಥಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಮುಂಬ್ರಾ ಪರಿಸರದಲ್ಲಿ ಭಜನೆಯ ಮೂಲಕ ಸ್ಥಾಪನೆಯಾದ ಸಂಸ್ಥೆ ಡೊಂಬಿವಲಿಗೆ ಸ್ಥಳಾಂತರಗೊಂಡ ನಂತರ, ದಾನಿಗಳ ಸಹಕಾರದ ಮೂಲಕ ಶ್ರೀ ವಿಷ್ಣು ಮಂದಿರವನ್ನು ಸ್ಥಾಪಿಸಿ ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಪ್ರತಿವರ್ಷ ರಕ್ತದಾನ ಶಿಬಿರವನ್ನು ಪ್ರಾರಂಭಿಸಿ, ಗತ ವರ್ಷದಲ್ಲಿ 180 ಯೂನಿಟ್ ರಕ್ತ ಸಂಗ್ರಹ ಮಾಡಿ ಬ್ಲಡ್ ಬ್ಯಾಂಕ್‌ಗೆ ನೀಡಿದೆ ಎನ್ನಲು ಅಭಿಮಾನವಾಗುತ್ತಿದೆ. ಇಂದಿನ ಕಾರ್ಯಕ್ರಮಕ್ಕೆ ಅಭೂತಪೂರ್ವ ಸಹಕಾರ ನೀಡಿದ್ದೀರಿ. ಸುವರ್ಣ ಮಹೋತ್ಸವದ ಆಚರಣೆಯಲ್ಲಿರುವ ಸಂಸ್ಥೆಯ ಸರಣಿ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆ. ಇಂದಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನೀವು ನೀಡಿದ ಸಹಕಾರಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಇಂದುಶೇಖರ್ ಸುವರ್ಣ ನುಡಿದರು.


​ಅವರು ಜುಲೈ 19ರ ಸಂಜೆ ಡೊಂಬಿವಲಿ ಪಶ್ಚಿಮದ ಭರತ್ ಭೋಯಿ ಸಭಾಗೃಹದಲ್ಲಿ ಶ್ರೀ ವಿಷ್ಣು ಮಂದಿರದ ವತಿಯಿಂದ ಆಚರಿಸಿದ ‘ಆಟಿಡೊಂಜಿ ದಿನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
​ಅತಿಥಿ, ಕರ್ನಾಟಕ ಸಂಘ ಡೊಂಬಿವಲಿಯ ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಶೆಟ್ಟಿ ಮಾತನಾಡಿ, “ನಿಮ್ಮ ಸಂಸ್ಥೆಯ ಒಗ್ಗಟ್ಟು ಹಾಗೂ ಇಂದಿನ ಕಾರ್ಯಕ್ರಮ ಮನಸ್ಸಿಗೆ ಬಹಳಷ್ಟು ಮುದ ನೀಡಿದೆ. ವೇದಿಕೆಯ ಅಲಂಕಾರ, ಮಕ್ಕಳ, ಯುವಕ-ಯುವತಿಯರ ಹಾಗೂ ಹಿರಿಯರ ನೃತ್ಯ, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಗವಹಿಸಿದ್ದನ್ನು ಕಂಡು ಅತೀವ ಸಂತೋಷವಾಗಿದೆ. ಭಜನೆಗಾಗಿ ಹುಟ್ಟಿದ ಸಂಸ್ಥೆ ಇಂದು ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ರಂಗದಲ್ಲೂ ಮಿಂಚುತ್ತಿದೆ. ನಮ್ಮ ಆಟಿ ತಿಂಗಳ ತಿಂಡಿ-ತಿನಿಸುಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳುವ ಅಗತ್ಯವಿದೆ. ಯುವಕರು ಮುಂದೆ ಬಂದಲ್ಲಿ ಸಂಸ್ಥೆಯು ಎಷ್ಟು ಎತ್ತರಕ್ಕೆ ಬೆಳೆಯಬಹುದು ಎನ್ನಲು ಈ ಸಂಸ್ಥೆಯೇ ಸಾಕ್ಷಿಯಾಗಿದೆ” ಎಂದರು.


​ಇನ್ನೋರ್ವ ಅತಿಥಿ, ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರವೀಣಾ ಶೆಟ್ಟಿ ಮಾತನಾಡಿ, “ಐವತ್ತು ವರ್ಷಗಳ ಹಿಂದೆ ಸಮಾನ ಮನಸ್ಕರು ಕಟ್ಟಿದ ಸಂಸ್ಥೆ ಇಂದಿನ ಅಧ್ಯಕ್ಷರಾದ ಇಂದುಶೇಖರ್ ಸುವರ್ಣರ ನೇತೃತ್ವದಲ್ಲಿ ಬೆಳೆಯುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. ಸಂಸ್ಥೆಯ ಉತ್ತಮ ಕೆಲಸ ಕಾರ್ಯಗಳಿಂದ ಸಂಸ್ಥೆಯ ಹೆಸರು ಮಹಾನಗರದ ತುಳು-ಕನ್ನಡಿಗರ ಮನದಲ್ಲಿ ಚಿರಪರಿಚಿತವಾಗಲಿ. ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಗದ್ದೆಯ ಕೆಲಸ ಮಾಡಿ ಜೀವಿಸುತ್ತಿದ್ದರು. ಅವರ ಜೀವನ ನಮಗೆ ಮಾರ್ಗದರ್ಶನವಾಗಿದೆ. ಆಷಾಢ ತಿಂಗಳು ಬಹಳ ಕಷ್ಟದ ತಿಂಗಳು. ನಮ್ಮ ಹಿರಿಯರು ಅಂದು ಕಷ್ಟದ ದಿನಗಳನ್ನು ಕಂಡವರು. ತಗತೆ (ತಗಟೆ) ಸೊಪ್ಪು, ಹಲಸಿನ ಬೀಜ, ಗೆಣಸು ತಿಂದು ತೃಪ್ತಿ ಪಡುತ್ತಿದ್ದರು. ಇಂದಿನ ವೇದಿಕೆಯಲ್ಲಿ ತುಳುವ ಸಂಸ್ಕೃತಿಯನ್ನು ಕಂಡು ಮನ ತುಂಬಿಬಂತು. ಶ್ರೀ ಮಹಾವಿಷ್ಣು ದೇವರು ನಿಮಗೆ ಉತ್ತಮ ಆರೋಗ್ಯವನ್ನು ನೀಡಲಿ” ಎಂದರು.


​ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಾಲ್ಯಾನ್ ‘ಆಟಿ ಕಳಂಜ’ನ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
​ಆಟಿ ಕಳಂಜ, ಮಕ್ಕಳು, ಯುವಕ-ಯುವತಿಯರು ಹಾಗೂ ವಯಸ್ಕರ ನೃತ್ಯ, ಕಿರು ನಾಟಕ ಎಲ್ಲರನ್ನೂ ರಂಜಿಸಿತು. ಇದಕ್ಕೂ ಮೊದಲು ವೇದಿಕೆಯ ಮೇಲಿದ್ದ ಗಣ್ಯರು ಕಲ್ಪವೃಕ್ಷದ ಹೂವನ್ನು ಅರಳಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ನಿತಿನ್ ಪುತ್ರನ್ ಉಪಸ್ಥಿತರಿದ್ದರು.
​ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಮಿತ್ ಶೆಟ್ಟಿ ನಿರ್ವಹಿಸಿದರೆ, ಸಭಾ ಕಾರ್ಯಕ್ರಮವನ್ನು ಕಾರ್ಯದರ್ಶಿ ಸಚಿನ್ ಪೂಜಾರಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.



Related posts

ಶ್ರೀ ಜಗದಂಬಾ ಮಂದಿರದ ಯುವ ವಿಭಾಗದ ವತಿಯಿಂದ ಆದಿವಾಸಿ ಶಾಲೆಗೆ ಭೇಟಿ, ಪುಸ್ತಕ, ಇತರ ಸಾಮಗ್ರಿ ವಿತರಣೆ

Mumbai News Desk

ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಶೈಕ್ಷಣಿಕ ಕಾರ್ಯಕ್ರಮ: ಜನಹಿತ ಯೋಜನೆಗಳೊಂದಿಗೆ ರಜತ ಮಹೋತ್ಸವ ಆಚರಣೆಗೆ ಸಂಕಲ್ಪ

Mumbai News Desk

ಡಿಸೆಂಬರ್ 8, 9 ರಂದು ಮುಂಬೈನ ಅರ್ಧಕ್ಕಿಂತ ಹೆಚ್ಚು ಭಾಗಕ್ಕೆ ಶೇ 15ರಷ್ಟು ನೀರಿನ ಕಡಿತ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ದಿಶಾ ಬಂಗೇರ ಗೆ ಶೇ. 94.60 ಅಂಕ.

Mumbai News Desk

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ

Mumbai News Desk

ಕಲಾ ಜಗತ್ತು ಮುಂಬಯಿ ಮತ್ತು ಡಾ. ಸದಾನಂದ ಶೆಟ್ಟಿ ಅಭಿನಂದನಾ ಬಳಗ ಇವರ ಸಹಯೋಗದಲ್ಲಿ ಡಾ. ಸದಾನಂದ ಶೆಟ್ಟಿ ಯವರಿಗೆ ಹೃದಯಸ್ಪರ್ಶಿ ಅಭಿನಂದನಾ ಸಮಾರಂಭ.

Mumbai News Desk