July 20, 2026
Mumbai News Kannada
ವೀಡಿಯೊ ಸುದ್ದಿ

ಮುಂಬೈನಲ್ಲಿ ಯಕ್ಷಗಾನ ಸಂಭ್ರಮ: ಸುಭಾಷ್‌ಚಂದ್ರ ಹೆಗಡೆಗೆ ‘ಯಕ್ಷಸೇವಾರತ್ನ’ ಪ್ರಶಸ್ತಿ







‘ಯಕ್ಷಗಾನ ನ್ಯಾಯ, ನೀತಿಯನ್ನು ಸಾರುವ ಜೀವಂತ ಕಲೆ’: ಸುಭಾಷ್‌ಚಂದ್ರ ಹೆಗಡೆ

ಮುಂಬೈ: ಮಹಾರಾಷ್ಟ್ರದ ಠಾಣೆಯಲ್ಲಿ ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನದ ಭವ್ಯ ಸಾಂಸ್ಕೃತಿಕ ಉತ್ಸವವು ಇತ್ತೀಚೆಗೆ ಅತ್ಯಂತ ಸಡಗರದಿಂದ ನೆರವೇರಿತು. ಯಕ್ಷ ಕಲಾಭಿಮಾನಿ ಬಳಗ (ಠಾಣೆ) ಮತ್ತು ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ (ಮುಂಬೈ) ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


​ಠಾಣೆ ಪಶ್ಚಿಮದ ಮುಲುಂಡ್ ಚೆಕ್‌ನಾಕಾ ಸಮೀಪವಿರುವ ನವೋದಯ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ, ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ (ಮೆಕ್ಕೆಕಟ್ಟು ಮೇಳ) ಹಾಗೂ ಅತಿಥಿ ಕಲಾವಿದರ ಸಂಯುಕ್ತ ಆಶ್ರಯದಲ್ಲಿ ‘ರಾಜರುದ್ರ ಕೋಪ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾವಿದರ ರಂಗಚಲನೆ ಹಾಗೂ ಭಾಗವತರ ಸುಶ್ಯಾವ್ಯ ಗಾಯನಕ್ಕೆ ನೂರಾರು ಕಲಾಭಿಮಾನಿಗಳು ಮಂತ್ರಮುಗ್ಧರಾದರು.

ಕಲಾಕ್ಷೇತ್ರ ಹಾಗೂ ಸಮಾಜ ಸೇವೆಯಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರ್ಯಭಟ್ಟ ಪ್ರಶಸ್ತಿ ಪುರಸ್ಕೃತರು ಹಾಗೂ ಯಕ್ಷಗಾನ ಕಲಾವಿದರೂ ಆದ ಪುಣೆಯ ಪ್ರಸಿದ್ಧ ಉದ್ಯಮಿ ಸುಭಾಷ್‌ಚಂದ್ರ ಎಸ್. ಹೆಗಡೆ ಕಟ್ಟಿಂಗೇರಿ ಮನೆ ಅವರಿಗೆ ‘ಯಕ್ಷಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಣಂಜಾರು ದೊಡ್ಡಮನೆ ಸಂಜೀವ್ ಹೆಗಡೆ ಹಾಗೂ ಬೆಳ್ಳಿ ಕಟ್ಟಿಂಗೇರಿ ಮನೆ ರತ್ನಾವತಿ ಹೆಗಡೆ ದಂಪತಿಯ ಪಂಚಮ ಪುತ್ರರಾದ ಸುಭಾಷ್‌ಚಂದ್ರ ಅವರು, ಬಾಲ್ಯದಿಂದಲೇ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದವರಾಗಿದ್ದು, ಕಲಾಪೋಷಕರಾಗಿ ಮತ್ತು ದಾನಿಯಾಗಿ ಗುರುತಿಸಿಕೊಂಡಿದ್ದಾರೆ.
​ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಭಾಷ್‌ಚಂದ್ರ ಹೆಗಡೆ ಅವರು, “ಯಕ್ಷಗಾನವು ನ್ಯಾಯ, ನೀತಿ ಮತ್ತು ಧರ್ಮದ ಸಂದೇಶವನ್ನು ಸಾರುವ ಐಶ್ವರ್ಯದ ಕಲೆಯಾಗಿದೆ. ಬಾಲ್ಯದಲ್ಲಿ ಹಿರಿಯ ಕಲಾವಿದರ ಸಂಪರ್ಕದಿಂದ ಪ್ರೇರಿತನಾಗಿ ಕಾಲೇಜು ದಿನಗಳಲ್ಲಿ ಗುರುರಾಜ್ ಮಾರ್ಪಳ್ಳಿ ಅವರಲ್ಲಿ ಯಕ್ಷಗಾನ ಕಲಿಯಲು ಆರಂಭಿಸಿದ್ದೆ. ಆದರೆ ಉದ್ಯೋಗದ ನಿಮಿತ್ತ ಪುಣೆಗೆ ವಲಸೆ ಬಂದಿದ್ದರಿಂದ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೂ ಕಲೆಯ ಮೇಲಿನ ಪ್ರೀತಿಯಿಂದ ಭಾಗವತಿಕೆಯನ್ನು ಕರಗತ ಮಾಡಿಕೊಂಡಿದ್ದೇನೆ. ಇನ್ನು ಮುಂದೆಯೂ ಕಲಾಪೋಷಕನಾಗಿ ಸೇವೆ ಸಲ್ಲಿಸುತ್ತೇನೆ,” ಎನ್ನುತ್ತಾ ತಮಗೆ ಸಂದ ಈ ಗೌರವವನ್ನು ತಾಯಿ ರತ್ನಾವತಿ ಅವರಿಗೆ ಅರ್ಪಿಸಿದರು.



ಸಭಾ ಅಧ್ಯಕ್ಷತೆ ವಹಿಸಿದ್ದ ಕಲಾಪೋಷಕ ಪೊಲ್ಯ ಉಮೇಶ್ ಶೆಟ್ಟಿ ಮಾತನಾಡಿ, “ಭಾರತವು ಜ್ಞಾನವನ್ನು ಆರಾಧಿಸುವ ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಪರಭಾಷೆ ಹಾಗೂ ಪರಸಂಸ್ಕೃತಿಯ ಪ್ರಭಾವದಿಂದ ಯಕ್ಷಗಾನದಂತಹ ಕಲೆಗಳ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ಮತ್ತು ಪ್ರೇಕ್ಷಕರ ಸಂಖ್ಯೆ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ. ಮುಂಬೈಗೆ ಬರುವ ಮೇಳಗಳಿಗೆ ಕೇವಲ ಆರ್ಥಿಕ ನೆರವು ನೀಡುವುದಷ್ಟೇ ಪ್ರೋತ್ಸಾಹವಲ್ಲ; ಬದಲಿಗೆ ಉತ್ತಮ ಪ್ರೇಕ್ಷಕರಾಗಿ, ವಿಮರ್ಶಕರಾಗಿ ಪಾಲ್ಗೊಳ್ಳುವುದು ನಿಜವಾದ ಕಲಾಪೋಷಣೆ,” ಎಂದರು.


​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳು ಹಾಗೂ ಕಲಾಪೋಷಕರುಗಳಾದ ದಯಾನಂದ್ ಎಸ್. ಶೆಟ್ಟಿ ಎಳತ್ತೂರು ಗುತ್ತು, ರತ್ನಾಕರ್ ಜಿ. ಶೆಟ್ಟಿ ಗಿಳಿಯಾರಕೋಟ, ಉದಯ ಶೆಟ್ಟಿ ಕೌಡೂರು, ಸಂತೋಷ್ ಶೆಟ್ಟಿ ಹೊಸೂರು, ಶೇಖರ್ ಕೆ. ಶೆಟ್ಟಿ, ಜಯರಾಮ್ ಪೂಜಾರಿ, ಉದಯ ಶೆಟ್ಟಿ ಆರ್.ಡಿ., ಜಯಂತ್ ಶೆಟ್ಟಿ, ಸ್ಟ್ಯಾನಿ ಮೊನಿಸ್ ಕಲಸ್, ಹರ್ಷವರ್ಧನ್ ಶೆಟ್ಟಿ ಉಪಸ್ಥಿತರಿದ್ದರು.


​ಯಕ್ಷ ಕಲಾಭಿಮಾನಿ ಬಳಗ ಠಾಣೆಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಬೆಳೆಕೊಡ್ಲು ಹೊಸೂರು ಮತ್ತು ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಮುಂಬೈಯ ಸಂಚಾಲಕರಾದ ಸುರೇಶ್ ಬರ್ಕಲ್ ಮಕ್ಕಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ರವಿ ಹೆಗಡೆ ಹೆರ್ಮಂಡೆ ಕಾರ್ಯಕ್ರಮ ನಿರೂಪಿಸಿದರು.



Related posts

ಮುಂಬೈಯ ಯಾಂತ್ರಿಕ ಬದುಕಿನ ಹಳಿಗಳ ಮೇಲೆ ಮನುಷ್ಯತ್ವದ ಸೀಮಂತ: ಮುಂಬೈ ಲೋಕಲ್‌ನ ಒಂದು ಭಾವಸ್ಪರ್ಶಿ ಕ್ಷಣ

Mumbai News Desk

ಕೋಟೆ ಮುಂಬಯಿಯಲ್ಲಿ ವಿಜೃಂಭಣೆಯ ನವರಾತ್ರೋತ್ಸವ: ಶ್ರೀ ಭುವನೇಶ್ವರಿ ಸೇವಾ ಸಮಿತಿಯ 42ನೇ ವರ್ಷದ ದಸರಾ ಮಹೋತ್ಸವ ಯಶಸ್ವಿ

Chandrahas