ಪರಮಾತ್ಮನ ಭಕ್ತಿಗೆ ಸಿಕ್ಕಿದ ಮಹಾಪ್ರಸಾದ – ಸೂರ್ಯಕಾಂತ್ ಜೆ ಸುವರ್ಣ
ಮಲಾಡ್ ಪೂರ್ವ ಕುರಾರ್ ವಿಲೇಜ್ ನ ಶ್ರೀ ಶನೀಶ್ವರ ದೇವಸ್ಥಾನದ ಸಮಿತಿಯ ಸಭೆ ತಾ.14.10.25ರಂದು ಗೊರೇಗಾಂವ್ ಪೂರ್ವದ ಸಾಯಿ ಲೀಲಾ ಹೋಟೆಲಿನ ಸಭಾಗೃಹದಲ್ಲಿ ನಡೆಯಿತು.ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು, ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಅವರನ್ನು ನೂತನ ಕಾರ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ದೇವಸ್ಥಾನದ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ ಅವರು ಶ್ರೀ ಶನಿ ಮಂದಿರದ ನೂತನ ಕಾರ್ಯಧ್ಯಕ್ಷರಾಗಿ ಆಯ್ಕೆಯಾದ ಸೂರ್ಯಕಾಂತ್ ಜಯ ಸುವರ್ಣ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸೂರ್ಯಕಾಂತ್ ಸುವರ್ಣ “ಆರಾಧ್ಯ ಮೂರ್ತಿಯಾದ ಶ್ರೀ ಶನೀಶ್ವರ ದೇವಸ್ಥಾನದ ಧಾರ್ಮಿಕ ಸೇವೆ ಮಾಡುವ ಭಾಗ್ಯ ಸಿಕ್ಕಿದ್ದು, ಪರಮಾತ್ಮನ ಭಕ್ತಿಗೆ ಸಿಕ್ಕಿದ ಮಹಾ ಪ್ರಸಾದವೆಂದು ಭಾವಿಸುತ್ತಾನೆ. ಬಾಲ್ಯದಿಂದಲೂ ಮನೆಯಲ್ಲಿ ಪ್ರತಿ ವರುಷ ಜರಗುವ ಶನಿ ಪೂಜೆ ಮತ್ತು ಪ್ರವಚನ, ತಂದೆ -ತಾಯಿಯರು ಭಕ್ತಿಯಿಂದ ಅರ್ಪಿಸುವ ಸೇವೆಯನ್ನು ನೋಡಿ , ನನ್ನ ಜೀವನದಲ್ಲಿ ಪೂಜೆ, ಭಕ್ತಿ ಮಾಡುತ್ತ ಬಂದವ ನಾನು, ಕಷ್ಟ ಬಂದಾಗ ಕರ್ಮ ಫಲದಾತನಾದ ಶ್ರೀ ಶನೀಶ್ವರನನ್ನು ಬೇಡಿದಾಗ, ನನಗೆ ದಾರಿ ತೋರಿಸಿ, ಸುಗಮ ದಾರಿಯನ್ನು ತೋರಿಸಿದ ಆ ಛಾಯಾನಂದನನ ಸೇವೆ ಮಾಡುವ ಸೌಭಾಗ್ಯ ಬಹಳ ಸಂತಸ ತಂದಿದೆ.
ಮನುಷ್ಯನಿಗೆ ಕಷ್ಟ ಬಂದಾಗ ಅವನಿಗೆ ಶನಿ ಕಾಟ ಎನ್ನುವುದು ವಾಡಿಕೆಯ ಮಾತಾಗಿರಬಹುದು, ನಿಜವಾಗಿಯೂ ಅವನ ಬದುಕನ್ನು ತಿದ್ದಿ ಸರಿ ದಾರಿಯನ್ನು ತೋರಿಸುವ ಹಾಗು ಕರ್ಮದ ಅನುಗುಣವಾಗಿ ಫಲವನ್ನು ನೀಡುವ ಕರ್ಮಫಲದಾತ. ಯಾರು ಧರ್ಮದ ದಾರಿಯಲ್ಲಿ ನಡೆಯುತ್ತಾನೋ ಆತನಿಗೆ ಖಂಡಿತವಾಗಿಯೂ ಶನಿ ದೇವರು ಯಾವುದೇ ಸಮಸ್ಯೆಗಳನ್ನು ತಂದೊಡ್ಡುವುದಿಲ್ಲ.ಕಷ್ಟ ಅನ್ನುವುದು, ಅದು ನಮ್ಮ ನಮ್ಮ ಕರ್ಮದ ಫ಼ಲ.ನನಗೆ ಯಾವತ್ತಾದರೂ ಕಷ್ಟ ಅಂದಾಗ ನಾನು ಮೊದಲು ಯೋಚಿಸುವುದು ಪ್ರತ್ಯಕ್ಷಯಾ ಪರೋಕ್ಷವಾಗಿ ನನ್ನಿಂದ ಯಾರಿಗಾದರೋ ಕಷ್ಟವಾಗಿದೆಯೋ, ಅದರಿಂದ ನನಗೆ ಕಷ್ಟ ಒದಗಿರಬಹುದು, ಸದಾ ದೇವರಲ್ಲಿ ಬೇಡುವುದು ಸನ್ಮಾರ್ಗದ ಜೀವನವನ್ನು ಕೊಡು ಹಾಗು ನನ್ನಿಂದ ಇತರರಿಗೆ ತೊಂದರೆ ಆಗದಿರಲಿ. ನಾವೆಲ್ಲರೂ ಸೇರಿ ದೇವಸ್ಥಾನದ ಅಭಿವೃದಿಗೆ ಶ್ರಮಿಸೋಣ ಹಾಗು ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗೋಣ ಎಂದರು.
ದೇವಸ್ಥಾನದ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫ಼ಲ್ಯರವರು ಮಾತನಾಡುತ್ತಾ, ಸುಮಾರು ೧೯೭೪ ರಲ್ಲಿ ಹುಟ್ಟಿದ ಈ ಭಕ್ತಿ ಕೇಂದ್ರ, ೧೯೯೪ ರಲ್ಲಿ ಜೀರ್ಣೋದ್ದಾರವಾಯಿತು, ಆ ಸಂಧರ್ಭದಲ್ಲಿ ದಿವಂಗತ ಜಯ ಸುವರ್ಣನವರು ಈ ಜೀರ್ಣೋದ್ದಾರವಾದ ದೇವಾಲಯವನ್ನು ಉದ್ಘಾಟಿಸಿದರು. ಈ ದೇವಾಲಯದ ವಿಸ್ತಾರ ಮತ್ತು ಬೆಳವಣಿಗೆಗೆ ಕೊಡುಗೆ ನೀಡಿದ ದಿವಂಗತ ಜಯ ಸುವರ್ಣರ ಮಗನಾದ ಸೂರ್ಯಕಾಂತ್ ಜಯ ಸುವರ್ಣರನ್ನು ಆಯ್ಕೆ ಮಾಡಿದ್ದು, ಬಹಳ ಸಂತಸದ ವಿಷಯವಾಗಿದೆ ಹಾಗು ಅವರ ಮಾರ್ಗದರ್ಶನದಲ್ಲಿ ಈ ಕ್ಷೇತ್ರ ಅಭಿವೃದ್ಧಿ ಹಾಗು ಬೆಳವಣಿಗೆ ಕಾಣುವಂತಾಗಲಿ ಎಂದು ಶುಭ ಕೋರಿದರು.
ಪೂಜಾ ಸಮಿತಿಯ ಉಪಾಧ್ಯಕ್ಷರಾದ ಪೇತ್ರಿ ವಿಶ್ವನಾಥ ಶೆಟ್ಟಿಯವರು ಮಾತನಾಡುತ್ತಾ ಸೂರ್ಯಕಾಂತ ಸುವರ್ಣ ಅವರು ನಮ್ಮ ಸಂಸ್ಥೆಗೆ ಕಾರ್ಯಧ್ಯಕ್ಷರಾಗಿ ಆಯ್ಕೆ ಆಗಿರುವುದು ನಮ್ಮ ಭಾಗ್ಯ, ಸುವರ್ಣರವರ ಪಾಲಿಗೆ ಇದು ಸೌಭಾಗ್ಯ ಎಂದು ಭಾವಿಸುವೆ .ಅವರೊಂದಿಗೆ ನಾವು ಒಮ್ಮತದ ಸಹಾಯ, ಸಹಕಾರದೊಂದಿಗೆ ದೇವಸ್ಥಾನದ ಅಭಿವೃದ್ದಿಗೆ ಶ್ರಮಿಸೋಣ ಎಂದರು.
ಶ್ರೀಮತಿ ರತಿಕಾ ಶ್ರೀನಿವಾಸ ಸಾಫ಼ಲ್ಯ ಮಾತನಾಡುತ್ತಾ ಸೂರ್ಯಕಾಂತ ಸುವರ್ಣ ಅವರ ಒಪ್ಪಿಗೆ ನಮಗೆ ಬಲಬಂದಂತಾಗಿದೆ, ಅವರ ಬಿಡುವಿಲ್ಲದ ಸಮಯದಲ್ಲೂ ನಮ್ಮ ಸಮಿತಿಯ ಅಧಿಕಾರ ಸ್ವೀಕರಿಸಿರುವುದು ನಮ್ಮ ಭಾಗ್ಯ ಎಂದು ಅವರಿಗೆ ಕೃತಜ್ಞತೆ ತಿಳಿಸಿದರು.
ಅಧ್ಯಕ್ಷರಾದ ಶ್ರೀನಿವಾಸ್ ಸಪಲ್ಯರು ದೇವಸ್ಥಾನದ ಕಾರ್ಯಾಧ್ಯಕ ನೇಮಕ ಪತ್ರವನ್ನು ಸೂರ್ಯಕಾಂತ ಜಯ ಸುವರ್ಣ ಅವರಿಗೆ ಹಸ್ತಾಂಸಿದರು, ಹಾಗು ದೇವಸ್ಥಾನದ ವತಿಯಿಂದ ಸಾಲು, ದೇವರ ಬೆಳ್ಳಿಯ ಪ್ರತಿಮೆ ಹಾಗು ಹೂಗುಚ್ಛ ಮುಖೇನ ಸತ್ಕರಿಸಲಾಯಿತು.
ಈ ಸರಳ ಕಾರ್ಯಕ್ರಮದಲ್ಲಿ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫ಼ಲ್ಯ,ಉಪಾಧ್ಯಕ್ಷರಾದ ಪೇತ್ರಿ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ರಮೇಶ ಆಚಾರ್ಯ, ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ಸಂತೋಷ ಶೆಟ್ಟಿ, ಕೋಶಾಧಿಕಾರಿ ಹರೀಶ್ ಜೆ ಸಾಲ್ಯಾನ,ಮಹಿಳಾ ವಿಭಾಗದ ಅಧ್ಯಕ್ಷೆ ಶೀತಲ್ ಆನಂದ ಕೋಟ್ಯಾನ ,ಸಮಿತಿಯ ಜೊತೆ ಕಾರ್ಯದರ್ಶಿ ಶಾಲಿನಿ ಶೆಟ್ಟಿ, ಆನಂದ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಜಯ ಸಿ ಸುವರ್ಣ ಅಭಿಮಾನಿಗಳು, ಮುಂಬೈ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿಯವರಿಂದ ಸೂರ್ಯಕಾಂತ್ ಸುವರ್ಣ ಗೆ ಅಭಿನಂದನೆ.
ಮಹಾತೋಭಾರ ಶ್ರೀ ಶನೀಶ್ವರ ದೇವಸ್ಥಾನ ಸಮಿತಿಯ ಕಾರ್ಯಧ್ಯಕ್ಷರಾಗಿ ಭಾರತ್ ಬ್ಯಾಂಕ್ ಕಾರ್ಯಧ್ಯಕ್ಷರಾದ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷರಾದ, ಜಯ ಸಿ ಸುವರ್ಣ ಅಭಿಮಾನಿಗಳ ನಾಯಕ, ಸಂಘಟಕ, ಸಮಾಜ ಸೇವಕರಾದ, ಶನಿ ದೇವರ ಅಪಾರ ಭಕ್ತರಾದ ಸೂರ್ಯಕಾಂತ್ ಜಯ ಸುವರ್ಣರನ್ನು ಸಮಿತಿಯವರು ಆಯ್ಕೆಮಾಡಿದಕ್ಕೆ ಜಯ ಸಿ ಸುವರ್ಣ ಅಭಿಮಾನಿಗಳು, ಮುಂಬಯಿ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿಯವರು ಸೂರ್ಯಕಾಂತ್ ಜಯ ಸುವರ್ಣಾ ಅವರಿಗೆ ಅಭಿನಂದನೆ ಸಲ್ಲಿಸ್ಸಿದ್ದಾರೆ.




