July 23, 2026
Mumbai News Kannada
ಮುಂಬಯಿ

ಡೊಂಬಿವಲಿ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ: 67ನೇ ವಾರ್ಷಿಕ ಮಹಾಪೂಜೆ ಸಂಭ್ರಮ







ಚಿತ್ರ: ಧನಂಜಯ್ ಪೂಜಾರಿ, ವರದಿ: ಇನ್ನಂಜೆ ಜಯರಾಮ್

​ಡೊಂಬಿವಲಿ, ನ. 22-
​ಸಂಸ್ಕಾರ-ಸಂಸ್ಕೃತಿ ಉಳಿಸುವ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಅರವತ್ತೇಳು ವರ್ಷಗಳ ಹಿಂದೆ ಈಗಿನ ಪ್ರಧಾನ ಭುವಾಜಿ ಶೇಖರ್ ಕೋಟ್ಯಾನ್ ಮತ್ತಿತರ ಕೆಲ ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಸಂಚಾಲಿತ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದಲ್ಲಿ 67ನೇ ವಾರ್ಷಿಕ ಮಹಾಪೂಜೆಯು ಅಧ್ಯಕ್ಷರಾದ ಸೋಮನಾಥ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಭಕ್ತಿ-ಭಾವಗಳಿಂದ ಯಶಸ್ವಿಯಾಗಿ ನೆರವೇರಿತು.

​ಸಂಸ್ಕಾರ ರಕ್ಷಣೆಗೆ ರವಿ ಸನಿಲ್ ಅವರ ಕರೆ
​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ಉಪಾಧ್ಯಕ್ಷರಾದ ರವಿ ಸನಿಲ್ ಅವರು ಮಾತನಾಡಿ, “ಸನಾತನ ಹಿಂದೂ ಧರ್ಮ ಉಳಿಯಬೇಕಾದರೆ ನಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವ ಕಾರ್ಯ ಮಾಡಬೇಕು. ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನು ಬೋಧಿಸಿ, ಮಕ್ಕಳನ್ನು ಮಠ, ಮಂದಿರ, ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವ ಕಾರ್ಯವನ್ನು ಪ್ರತಿಯೊಬ್ಬ ಮಾತಾ-ಪಿತೃಗಳು ಮಾಡಬೇಕು” ಎಂದು ಕರೆ ನೀಡಿದರು. ಮಂಡಳಿಯ ಅಧ್ಯಕ್ಷ ಸೋಮನಾಥ ಪೂಜಾರಿ ಅವರ ನೇತೃತ್ವದಲ್ಲಿ ಸಂಸ್ಥೆ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳ ಮೂಲಕ ಸದೃಢವಾಗಿ ಬೆಳೆದಿದೆ. ವಾರ್ಷಿಕ ಮಹಾಪೂಜೆ ಯಶಸ್ವಿಯಾಗಲು ಸಹಕರಿಸಿದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಪೂಜಾ ಸಮಿತಿ, ಭುವಾಜಿಗಳು ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅವರು ವಂದನೆ ಸಲ್ಲಿಸಿದರು.

​ಭವ್ಯ ಮಂದಿರ ನಿರ್ಮಾಣಕ್ಕೆ ಐದು ಲಕ್ಷ ರೂ. ದೇಣಿಗೆ ಘೋಷಣೆ
​ಅತಿಥಿಯಾಗಿ ಆಗಮಿಸಿದ್ದ ಮಾಜಿ ನಗರ ಸೇವಕರಾದ ರಮೇಶ್ ಮಾತ್ರೆ ಅವರು ಮಹತ್ವದ ಘೋಷಣೆ ಮಾಡಿದರು. “ಈಗ ಚುನಾವಣಾ ಸಮಯ. ಚುನಾವಣಾ ನಂತರ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ದೇವರಿಗೆ ಭವ್ಯ ಮಂದಿರ ನಿರ್ಮಾಣ ಮಾಡಲು ಜಾಗದ ವ್ಯವಸ್ಥೆಯಾಗಲಿದೆ. ಮಂದಿರ ನಿರ್ಮಾಣಕ್ಕೆ ನಾನು ವೈಯಕ್ತಿಕವಾಗಿ ಐದು ಲಕ್ಷ ರೂಪಾಯಿ ನೀಡುತ್ತೇನೆ” ಎಂದು ಪ್ರಕಟಿಸಿದರು.

​ಅತಿಥಿ ಹರೀಶ್ ಶೆಟ್ಟಿ ಮಾತನಾಡಿ, “ಕಳೆದ 67 ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮದ ಮೂಲಕ ಹೆಸರುವಾಸಿಯಾದ ಸಂಸ್ಥೆ ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ. ಸೌಮ್ಯ ಸ್ವಭಾವದ ಅಧ್ಯಕ್ಷರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ ಕಾರ್ಯಕಾರಿ ಸಮಿತಿ ನಿಮ್ಮೆಲ್ಲರ ನಿಷ್ಕಾಮ ಭಕ್ತಿಯ ಸಹಕಾರದಿಂದ ಸಂಸ್ಥೆಯ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ” ಎಂದರು.

​ಅತಿಥಿ ರಾಘವೇಂದ್ರ ಕಾಪು ಅವರು ಮಾತನಾಡಿ, “ಯಾವುದೇ ಸಂಸ್ಥೆ ಅಭಿವೃದ್ಧಿಯತ್ತ ಸಾಗಲು ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ. ಮಕ್ಕಳಿಗೆ ಮಾತೃಭಾಷೆ, ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿ ಉತ್ತಮ ಪ್ರಜೆಗಳಾಗಿ ಬಾಳಲು ಕಿವಿ ಮಾತು ಹೇಳಬೇಕು. ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಭವ್ಯ ಮಂದಿರ ನಿರ್ಮಾಣ ಮಾಡಲು ಸಹಕಾರ ನೀಡೋಣ” ಎಂದು ಹೇಳಿದರು.


​ಈ ಸಂದರ್ಭದಲ್ಲಿ ದಾನಿ ಸತೀಶ್ ಬಂಗೇರ ದಂಪತಿಯನ್ನು ಗೌರವಿಸಲಾಯಿತು. ಇತ್ತೀಚಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಬಿಲ್ಲವರ ಎಸೋಸಿಯೇಶನ್ನ ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಪಡು ಇನ್ನ, ಅತಿಥಿಗಳಾದ ರಮೇಶ್ ಮ್ಯಾತ್ರೆ, ಹರೀಶ್ ಡಿ. ಶೆಟ್ಟಿ, ರಾಘವೇಂದ್ರ ಕಾಪು ಹಾಗೂ ಕಲಾವಿದ ತೆಂಕ ಎರ್ಮಾಳು ನಾಗೇಶ್ ಸುವರ್ಣ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
​ಅಲ್ಲದೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕುಶ ರವಿ ಸನಿಲ್ ಮತ್ತು ಸದಸ್ಯರು, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಮಾಧವ ಆರ್. ಪೂಜಾರಿ ಮತ್ತು ಕಾರ್ಯದರ್ಶಿ ಗಂಗಾಧರ ಕಾಂಚನ್ ಅವರನ್ನು ಸನ್ಮಾನಿಸಲಾಯಿತು.
​ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಹಾನ್ ಎಂ. ಸುವರ್ಣ, ಮೋಹಕ್ ಎಸ್. ಮೆಂಡನ್, ಪ್ರಸಿದ್ ಪಿ. ಭಟ್, ಪುಷ್ಕರ್ ವಿದೇಶ್, ವೈಭವಿ ಬಿ. ಸಾಲ್ಯಾನ್, ಅನ್ಸುಲ್ ಪಿ. ಕೋಟ್ಯಾನ್, ವೈಷ್ಣವಿ ಬಿ. ಸಾಲ್ಯಾನ್ ಮತ್ತು ಅಭಿಷೇಕ್ ಭರತ್ ಕುಮಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿತರ ಪರಿಚಯ ಹಾಗೂ ವಿದ್ಯಾರ್ಥಿಗಳ ಯಾದಿಯನ್ನು ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಅವರು ಓದಿದರು. ಜೊತೆ ಕಾರ್ಯದರ್ಶಿ ವಸಂತ ಸುವರ್ಣ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದನೆ ಸಲ್ಲಿಸಿದರು.

​ವೇದಿಕೆ ಮೇಲೆ ಪುರಂದರ ಜಿ. ಕೋಟ್ಯಾನ್, ಯು. ಲಕ್ಷ್ಮಣ್ ಸುವರ್ಣ, ಪ್ರಧಾನ ಭುವಾಜಿ ಶೇಖರ ಕೋಟ್ಯಾನ್, ಪ್ರಸಾದ್ ಪೂಜಾರಿ, ಪ್ರಧಾನ ಅರ್ಚಕ ಪ್ರಕಾಶ್ ಭಟ್, ವಿದೇಶ್ ನಾರ್ಕಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

​ಧಾರ್ಮಿಕ ವಿಧಿ ವಿಧಾನಗಳು
​ಮಂದಿರದ ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ ಕಾನಂಗಿ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ವಿಜೃಂಭಣೆಯಿಂದ ನೆರವೇರಿದವು.
​ತೋರಣ ಮುಹೂರ್ತ, ​ಗಣಹೋಮ, ​ನವಕ ಪ್ರಧಾನ ಹೋಮ, ​ನವಕ ಕಲಶಾಭಿಷೇಕ, ​ಪಂಚಾಮೃತ ಅಭಿಷೇಕ,
​ಅಲಂಕಾರ ಪೂಜೆ, ​ಶ್ರೀ ಸತ್ಯನಾರಾಯಣ ಮಹಾಪೂಜೆ, ನಡೆದು ಮದ್ಯಾಹ್ನ ಮಂಡಳಿಯ ಸದಸ್ಯರಿಂದ
​ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಶನೀಶ್ವರ ಪೂಜೆ ನಡೆಯಿತು. ರಾತ್ರಿ ​ರಂಗ ಪೂಜೆ, ಮಹಾ ಮಂಗಳಾರತಿ ನಡೆಯಿತು. ಮದ್ಯಾಹ್ನ ಮತ್ತು ರಾತ್ರಿ ನೂರಾರು ಭಕ್ತರು ಪ್ರಸಾದ ಸ್ವೀಕರಿಸಿ ​ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು. 



Related posts

ಗೊರೆಗಾಂವ್ ಪೂರ್ವ ನಿತ್ಯಾನಂದ ಆಶ್ರಮದಲ್ಲಿ ಉಚಿತ ವೈದ್ಯಕೀಯ ಶಿಬಿರ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಜೈರಾಜ್ ಕುಮಾರ್ ಶೆಟ್ಟಿ ಗೆ ಶೇ 93.6ಅಂಕ.

Mumbai News Desk

ಮುಂಬೈ ಲೋಕಲ್ ರೈಲಿನಲ್ಲಿ ಬಾಗಿಲು ಮುಚ್ಚುವ ವಿವಾದ: ಚಾಕು ಇರಿತಕ್ಕೊಳಗಾಗಿದ್ದ ಯುವಕ ಸಾವು, ಆರೋಪಿ ಬಂಧನ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದಆಷಾಢ ಹಬ್ಬ ಆಚರಣೆ

Mumbai News Desk

 ಶ್ರೀ ಕಟೀಲು ಯಕ್ಷಕಲ ವೇದಿಕೆ ಚಾರಿಟೇಬಲ್ ಟ್ರಸ್ಟ್ ಆರನೇ ವಾರ್ಷಿಕ ಯಕ್ಷ ಸಂಭ್ರಮ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಶ್ರೀಶ ಕುಶಾಲಪ್ಪ ಮೂಲ್ಯ ಗೆ ಶೇ 93.60 ಅಂಕ.

Mumbai News Desk