
ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಕಚೇರಿಯ ರಜತ ಮಹೋತ್ಸವ ಸಂಭ್ರಮದ ಸಮಾರೋಪ: ನಾರಾಯಣ ಗುರುಗಳ ತತ್ವದ ಹಾದಿಯಲ್ಲಿ ಸಮಾಜದ ಬಲಿಷ್ಠ ಹೆಜ್ಜೆ!
ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್
ಥಾಣೆ, ನ. 21: ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಂದು ನೆಲೆಸಿದ ಕನ್ನಡಿಗರು ಮತ್ತು ತುಳುವರು ಮಹಾರಾಷ್ಟ್ರದ ಸಂಸ್ಕೃತಿಯೊಂದಿಗೆ ಬೆರೆತು, ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ನವೆಂಬರ್ 21, ಶುಕ್ರವಾರದಂದು ಥಾಣೆ ಪಶ್ಚಿಮದ ಶ್ರೀ ರಾಮ್ ಗಣೇಶ್ ಗಡ್ಕರಿ ರಂಗಾಯತನ್ ಹಾಲ್‌ನಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಕಲ್ವಾ ಸ್ಥಳೀಯ ಕಚೇರಿಯ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಮೆಚ್ಚುಗೆಯ ಮಾತು
ಏಕನಾಥ್ ಶಿಂದೆ ಅವರು, ಕರ್ನಾಟಕದಿಂದ ಬಂದವರು ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆತು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಕಷ್ಟದಲ್ಲಿದ್ದವರಿಗೆ ಅನ್ನ ನೀಡಿದ ದೊಡ್ಡ ಸೇವೆಯನ್ನು ನೆನಪಿಸಿಕೊಂಡರು. “ನಾರಾಯಣ ಗುರುಗಳ ‘ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು’ ಹಾಗೂ ‘ವಿದ್ಯೆಯಿಂದ ಸ್ವತಂತ್ರರಾಗಿರಿ – ಸಂಘಟನೆಯಿಂದ ಬಲಿಷ್ಠರಾಗಿರಿ’ ಎಂಬ ಸಂದೇಶವನ್ನು ನಿಮ್ಮೆಲ್ಲರೂ ಪಾಲಿಸುತ್ತಿದ್ದೀರಿ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಮಕ್ಕಳು ಶಿಕ್ಷಣವಂತರಾದರೆ ಸಮಾಜ ಸಮೃದ್ಧವಾಗುತ್ತದೆ ಎಂದು ನಂಬಿದ್ದೀರಿ. ನಿಮ್ಮ ಒಗ್ಗಟ್ಟು, ಪ್ರಾಮಾಣಿಕತೆ, ನಿಷ್ಠೆ ಮತ್ತು ಕಠಿಣ ಪರಿಶ್ರಮದೊಂದಿಗೆ ಸಮಾಜವನ್ನು ಒಗ್ಗೂಡಿಸುವ ಕಾಯಕವು ಶ್ಲಾಘನೀಯವಾದುದು” ಎಂದು ನುಡಿದರು.
ಮುಂದುವರಿದು ಮಾತನಾಡಿದ ಅವರು, ಕನ್ನಡಿಗರು ಯಾವ ರಾಜ್ಯದಲ್ಲಿ ನೆಲೆಸುತ್ತಾರೋ ಅಲ್ಲಿನ ಮಣ್ಣಿಗೆ ಮತ್ತು ಸಂಸ್ಕೃತಿಗೆ ಹೊಂದಿಕೊಂಡು ಬದುಕು ನಡೆಸುತ್ತಾರೆ. ಊರ ಕಲಾವಿದರಿಂದ ‘ಛತ್ರಪತಿ ಶಿವಾಜಿ’ ನಾಟಕದ ಪ್ರದರ್ಶನವನ್ನು ಏರ್ಪಡಿಸಿರುವುದು ಸಂತಸ ತಂದಿದೆ ಎಂದು ಕಲಾವಿದರನ್ನು ಅಭಿನಂದಿಸಿದರು. “ಮಹಾರಾಷ್ಟ್ರದ ನೆಲದಲ್ಲಿ ನೀವು ನೆಲೆಸಿದರೂ, ಮರಾಠಿಗರು ಮತ್ತು ಶಿವಸೇನೆ ಸದಾ ನಿಮ್ಮ ಜೊತೆಗಿರುತ್ತದೆ. ನಾನು ಮುಖ್ಯಮಂತ್ರಿಯಾಗಿರಲಿ ಅಥವಾ ಉಪ ಮುಖ್ಯಮಂತ್ರಿಯೇ ಆಗಿರಲಿ, ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಮತ್ತು ನಿಮ್ಮ ಅಗತ್ಯಕ್ಕೆ ಸದಾ ಸಿದ್ಧನಿದ್ದೇನೆ. ಕಳೆದ ಎರಡುವರೆ ವರ್ಷಗಳ ಅವಧಿಯಲ್ಲಿ ನಮ್ಮ ಅಭಿವೃದ್ಧಿ ಕಾರ್ಯಗಳು ಮತ್ತು ವೆಲ್ವೇರ್ ಯೋಜನೆಗಳೇ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಕಾರಣವಾಗಿವೆ. ಈ ಗೆಲುವಿನಲ್ಲಿ ನಿಮ್ಮ ಯೋಗದಾನವೂ ಇತ್ತು” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ, ಅಸೋಸಿಯೇಶನ್‌ನ ವತಿಯಿಂದ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಗೌರವಾಧ್ಯಕ್ಷ ಎಲ್. ವಿ. ಅಮೀನ್, ಅಧ್ಯಕ್ಷ ಹರೀಶ್ ಜಿ. ಅಮೀನ್, ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಬಜಗೋಳಿ ಹಾಗೂ ಪದಾಧಿಕಾರಿಗಳು ಸೇರಿ ಅದ್ದೂರಿಯಿಂದ ಸನ್ಮಾನಿಸಿದರು.

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷ, ಚಿತ್ರ ನಿರ್ಮಾಪಕ ನಿರ್ದೇಶಕ ರಾಜಶೇಖರ್ ಕೋಟ್ಯಾನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಥಾಣೆ ಮಾಜಿ ಮೇಯರ್ ಮೀನಾಕ್ಷಿ ಶಿಂದೆ, ಸಮಾಜ ಸೇವಕ, ವಿಷ್ಯಾಟ್ರಿಕ್ ಕ್ರೈನ್ ಸರ್ವೀಸಸ್ ಎಂ. ಡಿ. ಗಣೇಶ್ ಆರ್. ಪೂಜಾರಿ ಅವರನ್ನೂ ಸಾಕ್ಷ್ಯಚಿತ್ರದ ಮೂಲಕ ಪರಿಚಯಿಸಿ ಸನ್ಮಾನಿಸಲಾಯಿತು.

ಸ್ಥಾಪಕ ಸದಸ್ಯರು ಹಾಗೂ ಸದಸ್ಯರುಗಳ ಪರಿವಾರವನ್ನು ಸನ್ಮಾನಿಸಲಾಯಿತು
ಸನ್ಮಾನಿತರ ಮಹತ್ವದ ನುಡಿಗಳು

ರಾಜಶೇಖರ್ ಕೋಟ್ಯಾನ್: ಸಂಘಟನೆಯ ಬಲ ಮತ್ತು ಶ್ರಮ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ-ನಟ ರಾಜಶೇಖರ್ ಕೋಟ್ಯಾನ್ ಮಾತನಾಡಿ, “ತುಳುನಾಡಿನ ಅತಿ ಹೆಚ್ಚು ಜನಸಂಖ್ಯೆ ಇರುವ ಬಿಲ್ಲವ ಸಮಾಜದಂತಹ ದೊಡ್ಡ ಸಮುದಾಯವನ್ನು ಒಗ್ಗೂಡಿಸಿ ಮುನ್ನಡೆಸುವುದು ಸುಲಭದ ಕೆಲಸವಲ್ಲ. ಕಳೆದ ಆರು ವರ್ಷಗಳಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷನಾಗಿ 282 ಸಂಘ-ಸಂಸ್ಥೆಗಳಿಗೆ ಭೇಟಿ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ” ಎಂದರು.
ಬಿಲ್ಲವರ ಎಸೋಸಿಯೇಶನ್ ಅಧ್ಯಕ್ಷ ಹರೀಶ್ ಅಮೀನ್ ಅವರು ತಮ್ಮ ಉದ್ಯಮವನ್ನು ಬದಿಗಿರಿಸಿ, ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಸಾಲ್ಯಾನ್ ಬಜಗೋಳಿ ಅವರ ಜವಾಬ್ದಾರಿಯುತ ನಾಯಕತ್ವದಿಂದ ಮತ್ತು ತುಳು-ಕನ್ನಡಿಗರನ್ನು ಒಗ್ಗೂಡಿಸಿದ ಶ್ರಮದಿಂದಲೇ ಈ ರಜತ ಮಹೋತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎನ್. ಟಿ. ಪೂಜಾರಿ: ಶ್ರೇಷ್ಠ ನಾಯಕತ್ವದ ಗುಣ
ಬಿಲ್ಲವರ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಅವರು ಮಾತನಾಡಿ, “ಸಭಾಗೃಹದಲ್ಲಿ ನೆರೆದ ಜನಸಾಗರವೇ ಕಲ್ವಾ ಕಾರ್ಯಾಧ್ಯಕ್ಷ ಹರೀಶ್ ಸಾಲ್ಯಾನ್ ಅವರ ವರ್ಚಸ್ಸನ್ನು ತಿಳಿಸುತ್ತದೆ. ಕೊಡುಗೈ ದಾನಿ ಮತ್ತು ಉದಾರ ಮನಸ್ಸಿನ ಹರೀಶ್ ಸಾಲ್ಯಾನ್ ಅವರಿಗೆ ಈ ಪರಿಸರದಲ್ಲಿ ಬೃಹತ್ ಸಂಖ್ಯೆಯ ಬೆಂಬಲಿಗರಿದ್ದಾರೆ” ಎಂದರು.
ಸಂಘ-ಸಂಸ್ಥೆಗಳಲ್ಲಿ ಕೇವಲ ದೊಡ್ಡ ಹುದ್ದೆಯಲ್ಲಿದ್ದರೆ ಸಾಲದು, ಒಳ್ಳೆಯ ಸೇವಾ ಕಾರ್ಯದಿಂದ ವರ್ಚಸ್ಸನ್ನು ತೋರಿಸಬೇಕು. “ಬಡವರ ಕಣ್ಣೀರು ಒರೆಸುವ ಕೆಲಸಗಳು ಆಗಬೇಕು. ಕಷ್ಟದಲ್ಲಿರುವವರಿಗೆ ಸ್ಪಂದಿಸಿ, ಸಮಾಜದ ಉನ್ನತಿಯ ಬಗ್ಗೆ ಚಿಂತನೆ ಮಾಡುವವರೇ ಶ್ರೇಷ್ಠ ನಾಯಕರಾಗಿ ಗುರುತಿಸಿಕೊಳ್ಳುತ್ತಾರೆ. ಅಧ್ಯಕ್ಷನಾದವನು ಸಮಾಜ ಸದಾ ನೆನಪಿಡುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿ ನಿರ್ಗಮಿಸಬೇಕು” ಎಂದು ಅಭಿಪ್ರಾಯಪಟ್ಟರು. ಬಿಲ್ಲವ ನಾಯಕ ಹರೀಶ್ ಅಮೀನ್ ಅವರ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆಯ ದೊಡ್ಡ ಯೋಜನೆಯನ್ನು ಅವರು ಶ್ಲಾಘಿಸಿದರು.

ಮೀನಾಕ್ಷಿ ಶಿಂದೆ: ಪ್ರೀತಿ ಗಳಿಕೆಯಿಂದ ಮೇಯರ್ ಸ್ಥಾನ
“ಕಳೆದ 18 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ನನಗೆ ಎಲ್ಲಾ ಭಾಷಿಕರು ಮತ್ತು ಜಾತಿ ಬಾಂಧವರು ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲವೇ ಈ ಮಹಾರಾಷ್ಟ್ರದ ನೆಲದಲ್ಲಿ ದಕ್ಷಿಣ ಕನ್ನಡದ ಮಹಿಳೆಯೊಬ್ಬಳು ಮೇಯರ್ ಆಗಲು ಸಾಧ್ಯವಾಯಿತು. ಇದು ಇಡೀ ಬಿಲ್ಲವ ಸಮಾಜಕ್ಕೆ ಮತ್ತು ದಕ್ಷಿಣ ಕನ್ನಡಿಗರಿಗೆ ಹೆಮ್ಮೆಯ ಸಂಗತಿ” ಎಂದು ಮೀನಾಕ್ಷಿ ಶಿಂದೆ ಭಾವುಕರಾದರು.
ಅಲ್ಲದೆ, ಬಿಲ್ಲವರ ಎಸೋಸಿಯೇಶನ್‌ನ ಸ್ಥಳೀಯ ಕಚೇರಿಗಳು ಸಮಾಜ ಬಾಂಧವರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುವ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯ ಬಲದಿಂದಲೇ ಇಂತಹ ಬೃಹತ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯ ಎಂದರು.

ಗಣೇಶ್ ಆರ್. ಪೂಜಾರಿ: ಒಗ್ಗಟ್ಟಿನಿಂದ ಶೈಕ್ಷಣಿಕ-ವೈದ್ಯಕೀಯ ಸೇವೆ
ವಿಷ್ಯಾಟ್ರಿಕ್ ಕ್ರೈನ್ ಸರ್ವೀಸಸ್ ಎಂ.ಡಿ. ಗಣೇಶ್ ಆರ್. ಪೂಜಾರಿ ಅವರು ಮಾತನಾಡಿ, “ಸಮಾಜ ಒಗ್ಗಟ್ಟಿನಲ್ಲಿರಬೇಕು, ಪರಸ್ಪರ ಪ್ರೀತಿಯನ್ನು ಹಂಚಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಯನ್ನು ಒದಗಿಸಬೇಕು” ಎಂದರು.
ಮುಂಬಯಿಯ ಕರ್ಮಭೂಮಿಯಲ್ಲಿ ದೈವಭಕ್ತಿ, ಶಿಸ್ತು, ಸಂಸ್ಕಾರ ಮತ್ತು ಗುರು-ಹಿರಿಯರ ಮಾರ್ಗದರ್ಶನದೊಂದಿಗೆ ಬದುಕು ಕಟ್ಟಿಕೊಂಡಿರುವ ದಕ್ಷಿಣ ಕನ್ನಡಿಗರು ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ. 22 ಸ್ಥಳೀಯ ಕಚೇರಿಗಳು ಸಮಾಜವನ್ನು ಸಂಘಟಿಸುತ್ತಿವೆ. ಸಂಸ್ಥೆಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬಗೆಹರಿಸಿ ಸಮಾಜದ ಉನ್ನತಿಗಾಗಿ ಎಲ್ಲರೂ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಕಲ್ವಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಸಾಲ್ಯಾನ್ ಅವರು ಎಲ್ಲಾ ಜಾತಿ ಬಾಂಧವರನ್ನು ಒಗ್ಗೂಡಿಸಿ ರಜತ ಸಂಭ್ರಮ ಆಚರಿಸಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಬಜಗೋಳಿ ಅವರನ್ನು ಕಾರ್ಯಕರ್ತರು ಗೌರವಿಸಿದರು.
ಉನ್ನತ ಶಿಕ್ಷಣ ಸಂಸ್ಥೆಯ ಕನಸು

ಬಿಲ್ಲವರ ಎಸೋಸಿಯೇಶನ್ ಮುಂಬಯಿಯ ಅಧ್ಯಕ್ಷ ಹರೀಶ್ ಜಿ. ಅಮೀನ್ ಮಾತನಾಡಿ, “ಸಮಾಜವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನವಿಮುಂಬಯಿಯಲ್ಲಿ ಬಿಲ್ಲವರ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡಲಾಗಿದೆ. ಗುರುಗಳ ಸಂದೇಶದಂತೆ ವಿದ್ಯೆಗೆ ಹೆಚ್ಚು ಮಹತ್ವ ನೀಡುತ್ತಿದ್ದು, ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅತಿ ಅಗತ್ಯ. ಅದಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಚಿಂತನೆ ಮಾಡಲಾಗಿದೆ. ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಈ ಯೋಜನೆ ಸಾಕಾರಗೊಳ್ಳಲು ಸಾಧ್ಯ. ಸಮಾಜ ಬಾಂಧವರು ಇದಕ್ಕೆ ದೇಣಿಗೆ ನೀಡಿ ಸಹಕರಿಸಬೇಕು” ಎಂದು ಮನವಿ ಮಾಡಿದರು. ಅಲ್ಲದೆ, ಕಲ್ವಾ ಸ್ಥಳೀಯ ಕಚೇರಿಯ ರಜತ ಮಹೋತ್ಸವದ ಯಶಸ್ಸಿಗೆ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಅವರ ಕಠಿಣ ಪರಿಶ್ರಮ ಮತ್ತು ನಿಷ್ಠೆಯನ್ನು ಶ್ಲಾಘಿಸಿದರು.

ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಬಜಗೋಳಿ ಅವರು, ತುಳು-ಕನ್ನಡಿಗರ ಪ್ರೀತಿ, ವಿಶ್ವಾಸ, ಪ್ರೋತ್ಸಾಹದಿಂದ ಉದ್ಯಮದೊಂದಿಗೆ ಸಾಮಾಜಿಕವಾಗಿಯೂ ಬೆಳೆಯಲು ಸಾಧ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. “ನಾನು 25 ವರ್ಷಗಳ ಹಿಂದೆ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಥಾಣೆ ಕಿಸಾನ್ ನಗರದ ಶ್ರೀ ಆಯ್ಯಪ್ಪ ಸೇವಾ ಸಮಿತಿಯಲ್ಲಿ ಸಕ್ರಿಯನಾಗಿದ್ದೇನೆ. ಈ ರಜತ ಮಹೋತ್ಸವವು ನನ್ನ ಕಾರ್ಯಾಧ್ಯಕ್ಷತೆಯ ಅವಧಿಯಲ್ಲಿ ಯಶಸ್ವಿಯಾಗಿರುವುದು ನನ್ನ ಭಾಗ್ಯ” ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವೀನಸ್ ಗ್ರೂಪ್ ಪುಣೆ ಸಿಎಂಡಿ ಎಂ. ಸದಾನಂದ ನಾಯಕ್ ಅವರು, ಉನ್ನತ ಶಿಕ್ಷಣದ ಕಾಲೇಜು ಸ್ಥಾಪನೆ ಮಹತ್ವದ ಯೋಜನೆಯಾಗಿದ್ದು, ಅದರ ಜೊತೆಗೆ ಉತ್ಸಾಹಿ ಯುವ ಜನತೆಗೆ ಸ್ಟಾರ್ಟಪ್ ನಿಧಿ (ಫಂಡ್) ಮೂಲಕ ಹೊಸ ಉದ್ಯಮಕ್ಕೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.

ಶಾಸಕ ಸಂಜಯ್ ಮುಕುಂದ್ ಕೇಳ್ಕರ್ ಅವರು, ಮಹಾರಾಷ್ಟ್ರದ ಅಭಿವೃದ್ಧಿಗೆ ಕರ್ನಾಟಕದವರ ಕೊಡುಗೆ ಅಪಾರ ಎಂದರು. “ಅನೇಕತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ದೇಶದಲ್ಲಿ, ಭಾಷೆ, ಜಾತಿ, ಧರ್ಮ ಭಿನ್ನವಾಗಿದ್ದರೂ ನಾವೆಲ್ಲ ಭಾರತೀಯರು. ಪ್ರಾಂತ್ಯವಾದ ಮಾಡದೆ ಮೋದಿಯವರ ಮಾರ್ಗದರ್ಶನದಂತೆ ನಾವು ಮುನ್ನಡೆಯುತ್ತಿದ್ದೇವೆ” ಎಂದು ತಿಳಿಸಿದರು.

ಠಾಣೆಯ ಮಾಜಿ ಉಪ ಮೇಯರ್ ರಾಜೇಂದ್ರ ಸಾಪ್ತ ಮಾತನಾಡುತ್ತಾ, ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದೊಡ್ಡ ಕೆಲಸವನ್ನು ನೀವೆಲ್ಲ ಒಟ್ಟಾಗಿ ಮಾಡುತ್ತಿದ್ದೀರಿ. ನೀವು ಮಾಡುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳು ತುಂಬಾ ಮೆಚ್ಚುವಂತದ್ದು. ಧಾರ್ಮಿಕತೆಯಲ್ಲಿ ನಿಮ್ಮಿಂದ ನಮಗೆ ತುಂಬಾ ಕಲಿಯಲು ಸಿಗುತ್ತದೆ ಎಂದರು.

ಶಾಸಕ ಜಿತೇಂದ್ರ ಸತೀಶ್ ಅವಾಡ್ ಅವರು, ಕಳೆದ 25 ವರ್ಷಗಳಿಂದ ತಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಶಾಂತ ಸ್ವಭಾವದ ಈ ಸಮುದಾಯದೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದೇನೆ ಎಂದು ಶುಭ ಹಾರೈಸಿದರು.

ಥಾಣೆ ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್ ಲೇಲೆ ಅವರು, ಕರ್ನಾಟಕದವರು ಹೋಟೆಲ್ ಉದ್ಯಮದಲ್ಲಿ ಪ್ರಗತಿ ಸಾಧಿಸಿದ್ದಾರೆ. ಕೊಂಕಣ ಮತ್ತು ಕರ್ನಾಟಕದ ಸಂಸ್ಕೃತಿಯಲ್ಲಿ ಸಾಮ್ಯತೆ, ಶಿಸ್ತು ಮತ್ತು ಸ್ವಚ್ಛತೆ ಇದೆ ಎಂದು ಬಣ್ಣಿಸಿದರು.

ಥಾಣೆ ಹೋಟೆಲ್ ಓನರ್ಸ್ ಎಸೋಸಿಯೇಶನ್ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ ಅವರು, ಮಹಾರಾಷ್ಟ್ರದ ನೆಲದಲ್ಲಿ ನೆಲೆಸಿರುವ ತುಳು-ಕನ್ನಡಿಗರು ಕಠಿಣ ಪರಿಶ್ರಮದಿಂದ ಸ್ವಾಭಿಮಾನದ ಬದುಕನ್ನು ನಡೆಸುತ್ತಾ, ಇತರರಿಗೂ ಮಾರ್ಗದರ್ಶಿಯಾಗಿದ್ದಾರೆ ಎಂದರು.

ಘಾಟ್ಕೋಪರ್ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ ಅವರು, ಕರಾವಳಿ ಜನರು ಮುಂಬಯಿಗೆ ವಲಸೆ ಬಂದ ನಂತರ ಸಂಘಟನೆಗೆ ಮಹತ್ವವಿದೆ ಎಂದು ಅರಿತು ಜಾತಿಯ ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಬಂಟರ ಸಂಘ ಮತ್ತು ಬಿಲ್ಲವರ ಎಸೋಸಿಯೇಷನ್ ಶತಮಾನೋತ್ಸವದ ಹೊಸ್ತಿಲಲ್ಲಿರುವುದು ಹೆಮ್ಮೆಯ ಸಂಗತಿ ಎಂದರು. ಯುವ ಜನತೆಗೆ ಸ್ಪೂರ್ತಿಯಾಗುವಂತೆ ಸಮಾಜ ಸೇವಕರನ್ನು ಗೌರವಿಸುವುದು ಒಳ್ಳೆಯ ಸಂಸ್ಕೃತಿ ಎಂದೂ ಅವರು ನುಡಿದರು.

ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ವರದ ಉಳ್ಳಾಲ್ ಅವರು, ಕಲ್ವಾ ಸ್ಥಳೀಯ ಕಚೇರಿಯ ರಜತ ಮಹೋತ್ಸವದ ಯಶಸ್ಸು ಎಲ್ಲಾ ಸ್ಥಳೀಯ ಕಚೇರಿಗಳಿಗೂ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.








ನವೋದಯ ಇಂಗ್ಲೀಷ್ ಹೈಸ್ಕೂಲ್ ಹಾಗೂ ಜೂನಿಯರ್ ಕಾಲೇಜ್ ಥಾಣೆಯ ಅಧ್ಯಕ್ಷ ದಯಾನಂದ ಎಸ್. ಶೆಟ್ಟಿ ಎಳತ್ತೂರು ಗುತ್ತು ಮತ್ತು ಘೋಡ್ ಬಂದರ್ ರೋಡ್ ಕನ್ನಡ ಎಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಅವರು ಸಹ ಉನ್ನತ ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಬೆಂಬಲ ಸೂಚಿಸಿ, ಹರೀಶ್ ಡಿ. ಸಾಲ್ಯಾನ್ ಅವರ ಕಾರ್ಯವೈಖರಿಯನ್ನು ಮೆಚ್ಚಿದರು. ಚಂದ್ರಶೇಖರ್ ಶೆಟ್ಟಿ ಅವರು ಭಾರತ್ ಬ್ಯಾಂಕ್ ತುಳು-ಕನ್ನಡಿಗರ ಉನ್ನತಿಗೆ ದೊಡ್ಡ ಕೊಡುಗೆ ಎಂದು ನೆನಪಿಸಿದರು. ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ ಮತ್ತು ಜನರಲ್ ಕೆಮಿಕಲ್ ಆಂಡ್ ಇಂಜಿನಿಯರಿಂಗ್ ವರ್ಕ್ ಎಸೋಸಿಯೇಶನ್ ಕಾರ್ಯದರ್ಶಿ ಮಹೇಶ್ ಆರ್. ಕರ್ಕೇರ ಅವರೂ ಸಹ ಕಾರ್ಯಕ್ರಮದ ಯಶಸ್ಸಿಗೆ ಮತ್ತು ಸಮಾಜದ ಸೇವೆಯ ಕುರಿತು ಸಂತಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ವಾಸ್ತು ಮಾರ್ತಾಂಡ ಪಂಡಿತ್ ನವೀನ್ ಚಂದ್ರ ಸನಿಲ್, ಕನ್ನಡ ಸಂಘ ವರ್ತಕ್ ನಗರ್ ಅಧ್ಯಕ್ಷ ಶೇಖರ್ ಪಿ. ಶೆಟ್ಟಿ, ಉದ್ಯಮಿ ಲಕ್ಷ್ಮಣ್ ಆರ್. ಮಣಿಯಾಣಿ, ಉದ್ಯಮಿ ಜಯ ಕೆ. ಪೂಜಾರಿ ಸೇರಿದಂತೆ ಎಸೋಸಿಯೇಶನ್‌ನ ಗೌರವಾಧ್ಯಕ್ಷ ಎಲ್.ವಿ. ಅಮೀನ್, ಉಪಾಧ್ಯಕ್ಷರುಗಳಾದ ಪುರುಷೋತ್ತಮ ಎಸ್. ಕೋಟ್ಯಾನ್, ಜಯಂತಿ ವರದ ಉಳ್ಳಾಲ್, ಕೆ. ಸುರೇಶ್ ಕುಮಾರ್, ಮೋಹನ್ ಸಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌರವ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ಮತ್ತಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.







ಜಾನಪದ ನೃತ್ಯ ಸ್ಪರ್ಧೆ ಮತ್ತು ಆದರ್ಶ ದಂಪತಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನೃತ್ಯ ಸ್ಪರ್ಧೆಯಲ್ಲಿ ಡೊಂಬಿವಲಿ ಸ್ಥಳೀಯ ಕಚೇರಿ ಪ್ರಥಮ, ಚಿಣ್ಣರ ಬಿಂಬ ಕಲ್ವಾ ದ್ವಿತೀಯ, ಘೋಡ್ ಬಂದರ್ ಅಯ್ಯಪ್ಪ ತಂಡ ತೃತೀಯ.
ಆದರ್ಶ ದಂಪತಿ ಸ್ಪರ್ಧೆಯಲ್ಲಿ
ದೀಪಾ ಕೃಷ್ಣ ಪೂಜಾರಿ ದಂಪತಿ ಪ್ರಥಮ, ರಾಧಾ ಭೋಜ ಶೆಟ್ಟಿಗಾರ್ ದಂಪತಿ ದ್ವಿತೀಯ, ಉಪಾ ಅಚ್ಚುತ ಪೂಜಾರಿ ದಂಪತಿ ತೃತೀಯ, ಜಗದೀಶ್ ನಿಟ್ಟೆ ದಂಪತಿ ಸಮಾಧಾನಕರ ಪ್ರಶಸ್ತಿ ಪಡೆದರು.
ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಮಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ರವಿ ಸನಿಲ್ ಅವರು ವಿಜೇತರ ಯಾದಿ ವಾಚಿಸಿದರು.
ರಜತ ಮಹೋತ್ಸವಕ್ಕೆ ಗಣ್ಯರಿಂದ ವೈಭವದ ಚಾಲನೆ ✨

ಬೆಳಗ್ಗೆ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಾಯಿತು. ಬಿಲ್ಲವರ ಎಸೋಸಿಯೇಶನ್ ಮುಂಬಯಿಯ ಅಧ್ಯಕ್ಷ ಹರೀಶ್ ಜಿ. ಅಮೀನ್, ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಬಜಗೋಳಿ ಹಾಗೂ ಸ್ಥಳೀಯ ಕಚೇರಿಗಳ ಅರ್ಚಕರು ಸೇರಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಆರತಿ ಬೆಳಗಿಸಿ, ಪೂಜೆ ಸಲ್ಲಿಸಿದರು.
ನಂತರ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಬೆಳ್ಳಿಹಬ್ಬ ಸಂಭ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಈ ದೀಪ ಪ್ರಜ್ವಲನ ಕಾರ್ಯದಲ್ಲಿ ಬಿಲ್ಲವರ ಎಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮೀನ್, ಉಪಾಧ್ಯಕ್ಷರುಗಳಾದ ಪುರುಷೋತ್ತಮ ಎಸ್. ಕೋಟ್ಯಾನ್ ಕೆ. ಸುರೇಶ್ ಕುಮಾರ್, ಗೌರವ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌರವ ಕೋಶಾಧಿಕಾರಿ ರವಿ ಎಸ್. ಸನಿಲ್, ಯುವಾಭ್ಯುದಯ ಉಪ ಸಮಿತಿಯ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರು, ಇತರ ಸ್ಥಳೀಯ ಕಛೇರಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಲ್ವಾ ಸ್ಥಳೀಯ ಕಚೇರಿಯ ಪದಾಧಿಕಾರಿಗಳಾದ ಗೌರವ ಕಾರ್ಯಾಧ್ಯಕ್ಷರುಗಳಾದ ಬಿ. ಸಿ. ಅಮೀನ್ ಮತ್ತು ಆರ್. ಕೆ. ಅಮೀನ್, ಉಪ ಕಾರ್ಯಾಧ್ಯಕ್ಷ ಉಮೇಶ್ ಟಿ. ಕರ್ಕೇರ, ಗೌರವ ಕಾರ್ಯದರ್ಶಿ ಮಮತಾ ಎಂ. ಅಮೀನ್, ಗೌರವ ಕೋಶಾಧಿಕಾರಿ ಆನಂದ್ ಎಸ್. ಬಂಗೇರ, ಜೊತೆ ಕಾರ್ಯದರ್ಶಿ ಪ್ರಕಾಶ್ ಸಿ. ಪೂಜಾರಿ, ಜೊತೆ ಕೋಶಾಧಿಕಾರಿ ಸುಕನ್ಯಾ ಸಿ. ಪೂಜಾರಿ, ಪ್ರಧಾನ ಅರ್ಚಕ ಕರುಣಾಕರ ಸಿ. ಬಂಗೇರ, ಅರ್ಚಕ ಸಂತೋಷ್ ಸುವರ್ಣ ಹಾಗೂ ವಿವಿಧ ಸ್ಥಳೀಯ ಕಚೇರಿಗಳ ಗೌರವ ಕಾರ್ಯಾಧ್ಯಕ್ಷರುಗಳು ಮತ್ತು ಕಾರ್ಯಾಧ್ಯಕ್ಷರುಗಳು ದೀಪವನ್ನು ಪ್ರಜ್ವಲಿಸಿ ಉತ್ಸವಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ, ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಬಜಗೋಳಿ ಅವರು ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲ ಸ್ಥಳೀಯ ಅರ್ಚಕರುಗಳು ಮತ್ತು ಕಾರ್ಯಾಧ್ಯಕ್ಷರುಗಳನ್ನು ಗೌರವಿಸಿ ಅಭಿನಂದಿಸಿದರು. ಅಲ್ಲದೆ, ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಉಪ ಕಾರ್ಯಾಧ್ಯಕ್ಷ ಸುಭಾಷ್ ಪಾಲನ್ ಹಾಗು ಪದಾಧಿಕಾರಿಗಳು, ಕೇಂದ್ರ ಕಚೇರಿ ಅಧ್ಯಕ್ಷ ಹರೀಶ್ ಜಿ. ಅಮೀನ್ ಹಾಗೂ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು.
ಬಳಿಕ ನಗರದ ವಿವಿಧ ಪ್ರತಿಭಾನ್ವಿತ ತಂಡಗಳ ಪಾಲ್ಗೊಳ್ಳುವಿಕೆಯಲ್ಲಿ ಜಾನಪದ ನೃತ್ಯ ಸ್ಪರ್ಧೆ ಮತ್ತು ಆದರ್ಶ ದಂಪತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನೃತ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ದೃಶ್ಯ ಕೀರ್ತನ್ ಶೆಟ್ಟಿ, ಅನಂತೇಶ್ ಮುದ್ದು ಅಂಚನ್, ವಿನೀತ್ ಶೆಟ್ಟಿ ಅವರು ಸಹಕರಿಸಿದರು.
ಆದರ್ಶ ದಂಪತಿ ಕಾರ್ಯಕ್ರಮಕ್ಕೆ ರಂಗ ನಿರ್ದೇಶಕ ನಂದಳಿಕೆ ನಾರಾಯಣ ಶೆಟ್ಟಿ, ರಂಗ ನಟಿ ಚಂದ್ರಾ ವಸಂತ್, ಕವಯತ್ರಿ ಹರಿಣಾಕ್ಷಿ ಶೆಟ್ಟಿ ಅವರು ತೀರ್ಪುಗಾರರಾಗಿ ಜವಾಬ್ದಾರಿ ನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷ ಹರೀಶ್ ಜಿ. ಅಮೀನ್ ಅವರು ಈ ಎಲ್ಲ ತೀರ್ಪುಗಾರರನ್ನು ಗೌರವಿಸಿ ಕೃತಜ್ಞತೆ ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ‘ಛತ್ರಪತಿ ಶಿವಾಜಿ’ ತುಳು ನಾಟಕ ಪ್ರದರ್ಶನಗೊಂಡಿತು ಮತ್ತು ಪ್ರೀತಿ ಭೋಜನ ನಡೆಯಿತು.




