
ಫೋರ್ಟ್ ನಿಂದ ಜೋಗೇಶ್ವರಿ ತನಕದ ಜಯ ಸಿ ಸುವರ್ಣ ಅಭಿಮಾನಿ ಸಮಿತಿಯ ಕಾರ್ಯಧ್ಯಕ್ಷರಾಗಿ ಶ್ರೀ ರವೀಂದ್ರ ಶಾಂತಿ ಆಯ್ಕೆ
ಚಿತ್ರ ವರದಿ: ಇನ್ನಂಜೆ ಜಯರಾಮ್
ಮುಂಬೈ: ಜಯ ಸಿ. ಸುವರ್ಣರ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜವು ಸಂಘಟಿತವಾಗಿ ಮುನ್ನಡೆಯಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಂಕಷ್ಟಕ್ಕೆ ಸ್ಪಂದಿಸುವುದೇ ಸಂಘಟನೆಯ ಮೂಲ ಉದ್ದೇಶವಾಗಲಿ ಎಂದು ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಕರೆ ನೀಡಿದರು.ಜಯ ಸಿ. ಸುವರ್ಣ ಅಭಿಮಾನಿಗಳು, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಮುಂಬೈ ಹಾಗೂ ಮುಂಬೈ ಬಿಲ್ಲವರು ಒಟ್ಟಾಗಿ ಸಾಂತಾಕ್ರೂಸ್‌ನ ಪೇಜಾವರ ಮಠದಲ್ಲಿ ಹಮ್ಮಿಕೊಂಡಿದ್ದ ‘ಶ್ರೀ ನಾರಾಯಣ ಗುರು ಭಜನಾ ಮಂಡಳಿ’ಯ ಉದ್ಘಾಟನೆ ಹಾಗೂ ಸಮಿತಿ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸೇವೆ ಮತ್ತು ಭಕ್ತಿ ಒಂದೇ ನಾಣ್ಯದ ಎರಡು ಮುಖಗಳು”ಜಯ ಸುವರ್ಣರ ಹೆಸರಿನಲ್ಲಿ ಕಾರ್ಯನಿರ್ವಹಿಸುವುದು ನಮಗೆ ಸಿಕ್ಕಿದ ದೊಡ್ಡ ಜವಾಬ್ದಾರಿ. ನಮ್ಮ ಸಮಾಜದ ಬಾಂಧವರಿಗೆ ಕಷ್ಟ ಬಂದಾಗ ಅಸೋಸಿಯೇಶನ್ ಹಾಗೂ ಅಭಿಮಾನಿ ಬಳಗವು ಅವರ ಪರವಾಗಿ ನಿಲ್ಲಬೇಕು. ಗುರು ನಾರಾಯಣರ ತತ್ವ ಮತ್ತು ಜಯ ಸುವರ್ಣರ ದಾರಿದೀಪದಲ್ಲಿ ನಾವು ಸಮಾಜದ ಸೇವೆಯನ್ನು ನಿರಂತರವಾಗಿ ಮಾಡಬೇಕಿದೆ,” ಎಂದು ಸೂರ್ಯಕಾಂತ್ ಜಯ ಸುವರ್ಣ ಆಶಯ ವ್ಯಕ್ತಪಡಿಸಿದರು.


ಅಂಧೇರಿ ಜರಿಮರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಜ್ಯೋತಿಷಿ ಶ್ರೀ ಎಸ್.ಎನ್. ಉಡುಪ ಅವರು ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಜನೆಯು ಮಾನಸಿಕ ಶಾಂತಿ ಮತ್ತು ಚೈತನ್ಯ ನೀಡುವ ಸನ್ಮಾರ್ಗವಾಗಿದೆ, ಜೀವನದಲ್ಲಿ ನಿರಂತರ ಚಟುವಟಿಕೆ ಇರಬೇಕು. ಭಜನೆಯು ಮನಸ್ಸಿಗೆ ಶಾಂತಿ ನೀಡುವುದಲ್ಲದೆ, ಕಲಿಯುಗದಲ್ಲಿ ಭಗವಂತನನ್ನು ಸ್ಮರಿಸಲು ಇರುವ ಅತ್ಯಂತ ಸುಲಭ ಮತ್ತು ಪವಿತ್ರ ಮಾರ್ಗವಾಗಿದೆ.” ಎಂದು ಆಶೀರ್ವಚನ ನೀಡಿದರು.

ಜಯ ಸಿ ಸುವರ್ಣ ಅಭಿಮಾನಿಗಳ ಫೋರ್ಟ್‌ನಿಂದ ಜೋಗೇಶ್ವರಿ ವರೆಗಿನ 3ನೇ ವಲಯದ ಪ್ರಾದೇಶಿಕ ಸಮಿತಿಯ ರಚನಾ ಸಭೆಯನ್ನು ಕಲಿನ ಶ್ರೀ ಭಗವತಿ ದೇವಸ್ಥಾನದ ಮೊಕ್ತೇಸರರು ಹಾಗೂ ದೇವಿ ಪಾತ್ರಿಗಳಾದ ಶ್ರೀ ಕುಮಾರ್ ಸ್ವಾಮಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ “ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಭಜನಾ ಮಂಡಳಿ ಆರಂಭವಾಗಿರುವುದು ಸಂತೋಷದ ವಿಷಯ. ನಾವೆಲ್ಲರೂ ಒಂದೇ ಜಾತಿ, ಒಂದೇ ಕುಟುಂಬ ಎನ್ನುವ ಭಾವನೆಯಿಂದ ಇಂತಹ ಧಾರ್ಮಿಕ ಕಾರ್ಯಗಳಿಗೆ ಕೈಜೋಡಿಸಬೇಕು.” ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್‌ನ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್ ಎಸ್. ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಗುರುಗಳ ತತ್ವ ಮತ್ತು ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಗುರಿ. ಎಂದು ಗುರು ನಾರಾಯಣರ ತತ್ವಗಳ ಮಹತ್ವವನ್ನು ವಿವರಿಸಿದರು.

ಸಮಾಜ ಸೇವಕರಾದ ಬಾಬು ಪೂಜಾರಿ ಮತ್ತು ಅಭಿಮಾನಿ ಸಮಿತಿಯ ಕಾರ್ಯಧ್ಯಕ್ಷ ರವೀಂದ್ರ ಶಾಂತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.







ಭಾರತ್ ಬ್ಯಾಂಕ್ ನಿರ್ದೇಶಕರಾದ ಶ್ರೀ ಸುರೇಶ್ ಸುವರ್ಣ, ಸಮಾಜ ಸೇವಕರುಗಳಾದ ಶ್ರೀ ಬಾಬು ಪೂಜಾರಿ, ಜಯ ಸಿ ಸುವರ್ಣ ಅಭಿಮಾನಿ ಸಮಿತಿಯ ಉಪಾಧ್ಯಕ್ಷರುಗಳಾದ ಶ್ರೀ ಸದಾಶಿವ ಎ ಕರ್ಕೇರ, ಹಾಗೂ ಫೋರ್ಟ್ ನಿಂದ ಜೋಗೇಶ್ವರಿ ತನಕದ ಜಯ ಸಿ ಸುವರ್ಣ ಅಭಿಮಾನಿ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ರವೀಂದ್ರ ಶಾಂತಿ “ಸೂರ್ಯಕಾಂತ್ ಅವರ ನಾಯಕತ್ವದಲ್ಲಿ ಸಮಾಜವು ಉತ್ತಮ ದಾರಿಯಲ್ಲಿ ಸಾಗುತ್ತಿದೆ. ಜಯ ಸುವರ್ಣರ ಹೆಸರನ್ನು ಅಜರಾಮರವಾಗಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ.” ಎಂಬ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಭಾರತ್ ಬ್ಯಾಂಕ್‌ನ ನಿರ್ದೇಶಕರುಗಳಾದ ಅಶೋಕ್ ಎಂ. ಕೋಟ್ಯಾನ್, ಸುರೇಶ್ ಸುವರ್ಣ, ಅಭಿಮಾನಿ ಸಮಿತಿಯ ಉಪಾಧ್ಯಕ್ಷರುಗಳಾದ ಸದಾಶಿವ ಎ. ಕರ್ಕೇರ, ಉದಯ್ ಸುವರ್ಣ, ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಕುಕ್ಯಾನ್, ಕಾರ್ಯದರ್ಶಿ ಕೇಶವ್ ಪೂಜಾರಿ, ಕೋಶಾಧಿಕಾರಿ ಶಿವರಾಮ್ ಪೂಜಾರಿ ಉಪಸ್ಥಿತರಿದ್ದರು. ಅಲ್ಲದೆ, ಅಡ್ವೆ ಗರಡಿ ಟ್ರಸ್ಟಿ ಸುಂದರ್ ಪೂಜಾರಿ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಕೈಲಾಸ್ ವಾಮನ್ ಪೂಜಾರಿ ಮತ್ತು ದೀಪಿಕಾ ವಾಮನ್ ಪೂಜಾರಿ ಅವರನ್ನು ಗೌರವಿಸಲಾಯಿತು. ಶಶಿಧರ್ ಬಂಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.




ವಲಯದ ಮಹಿಳಾ ಘಟಕದ ಸದಸ್ಯರಿಂದ ಭಜನೆ ಮತ್ತು ಕುಣಿತ ಭಜನೆ ನಡೆಯಿತು. ಮುಂಬೈನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಸಮಾಜ ಬಾಂಧವರು ಈ ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾದರು.




