27 C
Mumbai
August 24, 2026
Mumbai News Kannada
ಮುಂಬಯಿ

ಮುಂಬಯಿ ಸ್ವರ್ಣೋದ್ಯಮಿ ಶ್ರೀಧರ ವಿ. ಆಚಾರ್ಯ ಅವರಿಗೆ ‘ಬಿ. ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ’ ಪ್ರದಾನ






​ಪರರ ಬದುಕು ಬೆಳಗಿಸಿದವರನ್ನು ಸಮಾಜ ಎಂದಿಗೂ ಮರೆಯದು: ಕಾಳಹಸ್ತೇಂದ್ರ ಶ್ರೀ


​ಮಂಗಳೂರು: “ಸ್ವಾರ್ಥವನ್ನು ಬದಿಗಿರಿಸಿ ಪರರ ಬದುಕನ್ನು ಬೆಳಗಿಸುವ ಧೇಯದೊಂದಿಗೆ ಬದುಕಿದ ಮಹನೀಯರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ,” ಎಂದು ಆನೆಗುಂದಿ ಸರಸ್ವತೀ ಪೀಠಾಧೀಶ ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
​ಮಂಗಳೂರಿನ ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಮೇ 19ರ ಭಾನುವಾರ ನಡೆದ ಬಿ. ಹರಿಶ್ಚಂದ್ರ ಆಚಾರ್ಯರ 113ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.


​”ಸಮಾಜಸೇವೆಯ ಆದರ್ಶವನ್ನು ಮೈಗೂಡಿಸಿಕೊಂಡಿರುವ ಮುಂಬಯಿ ಮೂಲದ ಸ್ವರ್ಣೋದ್ಯಮಿ, ಬೋರಿವಿಲಿ ಪೂರ್ವದ ಶ್ರೀನಿವಾಸ್ ಆರ್ನಮೆಂಟ್ಸ್‌ನ ಮಾಲಕರಾದ ಶ್ರೀಧರ ವಿ. ಆಚಾರ್ಯ ಅವರಿಗೆ ‘ಬಿ. ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ’ ಪ್ರದಾನಿಸಿರುವುದು ಅತ್ಯಂತ ಯುಕ್ತವಾದ ಗೌರವವಾಗಿದೆ,” ಎಂದು ಶ್ರೀಗಳು ಶ್ಲಾಘಿಸಿದರು.
​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್, “ಅಭಿವೃದ್ಧಿಯ ಹೆಸರಿನಲ್ಲಿ ಮಾನವನು ಪ್ರಕೃತಿಗೆ ವಿರುದ್ಧವಾದ ಬದುಕಿನತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಮೌಲ್ಯಗಳನ್ನು ನಾವು ಮತ್ತೆ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ,” ಎಂದರು.


​2026ನೇ ಸಾಲಿನ ಬಿ. ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿಯನ್ನು ಶ್ರೀಧರ ವಿ. ಆಚಾರ್ಯ ಅವರಿಗೆ ಪ್ರದಾನ ಮಾಡಲಾಯಿತು. ಟ್ರಸ್ಟ್ ಅಧ್ಯಕ್ಷ ಎಸ್.ವಿ. ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರದ ನಿವೃತ್ತ ಕಂದಾಯ ಕಾರ್ಯದರ್ಶಿ ಕೆ. ಎಸ್. ಪ್ರಭಾಕರ್ ಅವರು ಬಿ. ಹರಿಶ್ಚಂದ್ರ ಆಚಾರ್ಯರ ಸಂಸ್ಮರಣಾ ಭಾಷಣ ಮಾಡಿದರು.
​ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿದ ಹಿರಿಯರಾದ ಬಿ.ಎ. ಆಚಾರ್ಯ ಮಣಿಪಾಲ ಹಾಗೂ ಯೋಗೀಶ ಆಚಾರ್ಯ ಅವರನ್ನು ಗೌರವಿಸಲಾಯಿತು. ಶಿಕ್ಷಣ ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
​ಟ್ರಸ್ಟ್ ಸದಸ್ಯೆ ಲಲಿತಾ ಕೆ. ಆಚಾರ್ ಅವರ ‘ಸುಲಲಿತ ಕಾವ್ಯ ಗುಚ್ಛ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಟ್ರಸ್ಟ್‌ನ ಉಚಿತ ವಿದ್ಯಾರ್ಥಿ ನಿಲಯವಾದ ‘ಆಶ್ರಯ ವಿದ್ಯಾರ್ಥಿ ಧಾಮ’ದ ದಶಮಾನೋತ್ಸವದ ಅಂಗವಾಗಿ ಬೆಳ್ಳಾಯಿ ಕುಟುಂಬಸ್ಥರು ನೀಡಿದ ರೂ. 2 ಲಕ್ಷ ಮೌಲ್ಯದ ಸೌರ ವಿದ್ಯುತ್ ವ್ಯವಸ್ಥೆಯನ್ನು ಬಿ. ಸತೀಶ್ ರಾವ್ ಅವರು ಟ್ರಸ್ಟ್ ಅಧ್ಯಕ್ಷರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.


​ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ರವೀಶ್ ಗಣಪಯ್ಯ ಆಚಾರ್ಯ ಮಾತನಾಡಿ, “ಸಮಾಜದ ಅಭಿವೃದ್ಧಿಗಾಗಿ ಹರಿಶ್ಚಂದ್ರ ಟ್ರಸ್ಟ್ ಜನಪರ ಸೇವೆಗಳನ್ನು ಮಾಡುತ್ತಿರುವುದು ಅಭಿನಂದನೀಯ. ಮುಂಬಯಿಯಲ್ಲಿ ವಿಶ್ವಕರ್ಮ ಸಮಾಜದ ಎಲ್ಲಾ ಸೇವಾಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿರುವ ಉದ್ಯಮಿ, ಮಹಾದಾನಿ ಶ್ರೀಧರ್ ಆಚಾರ್ಯ ಅವರನ್ನು ಸನ್ಮಾನಿಸಿರುವುದು ಅತ್ಯಂತ ಸೂಕ್ತವಾಗಿದೆ,” ಎಂದು ನುಡಿದರು.
​ವೇದಿಕೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಗೋಕುಲದಾಸ್ ನಾಯಕ್, ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್.ಆರ್. ಹರೀಶ್ ಆಚಾರ್ಯ, ಎಸ್.ಕೆ.ಜಿ. ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ, ದುಬೈ ಶ್ರೀ ವಿಶ್ವಕರ್ಮ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಶಾಂತಾರಾಮ ಆಚಾರ್ಯ ಕಿನ್ನಿಗೋಳಿ ಹಾಗೂ ಹಳೆವಿದ್ಯಾರ್ಥಿ ಪ್ರತಿನಿಧಿ ಶಮಂತ್ ಆಚಾರ್ಯ ಉಪಸ್ಥಿತರಿದ್ದರು.


​ಜಿ.ಟಿ. ಆಚಾರ್ಯ ಮುಂಬಯಿ ಅಭಿನಂದನಾ ಭಾಷಣ ಮಾಡಿದರು. ಟ್ರಸ್ಟ್ ಕಾರ್ಯದರ್ಶಿ ಡಾ. ಎಸ್.ಬಿ.ಪಿ. ಗುರುದಾಸ್ ಸ್ವಾಗತಿಸಿದರು. ಸುಂದರ ಆಚಾರ್ಯ ಬೆಳುವಾಯಿ ವಂದಿಸಿದರು. ದಾಮೋದರ ಶರ್ಮ ಬಾರ್ಕೂರು ಹಾಗೂ ಭರತ್ ರಾಜ್ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು. ತದನಂತರ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಹಾಗೂ ಆಶ್ರಯ ವಿದ್ಯಾರ್ಥಿ ಧಾಮದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಭಗವಂತ ನೀಡಿದ್ದನ್ನು ಸಮಾಜಕ್ಕೆ ಸಮರ್ಪಿಸುತ್ತಿದ್ದೇನೆ: ಶ್ರೀಧರ್ ಆಚಾರ್ಯ ಶಿರ್ವ ಮಂಚಕಲ್

​ಪ್ರಶಸ್ತಿಯನ್ನು ಸತಿಪತಿಗಳಾಗಿ ಸ್ವೀಕರಿಸಿ ಮಾತನಾಡಿದ ಶ್ರೀಧರ ವಿ. ಆಚಾರ್ಯ (ಶಿರ್ವ ಮಂಚಕಲ್), “ಎಲ್ಲಾ ಧರ್ಮ ಕಾರ್ಯಗಳು ಭಗವಂತನ ಇಚ್ಛೆಯಂತೆ ನಡೆಯುತ್ತವೆ. ದಾನ ಧರ್ಮಗಳನ್ನು ಮಾಡಲು ದೇವರು ನಮಗೆ ಶಕ್ತಿ ನೀಡಿದ್ದರಿಂದಲೇ ಇದು ಸಾಧ್ಯವಾಗಿದೆ. ಭಗವಂತ ನೀಡಿದ್ದನ್ನು ನಾನು ಸಮಾಜಕ್ಕೆ ಮರಳಿ ಸಮರ್ಪಿಸುತ್ತಿದ್ದೇನೆ. ಈ ಎಲ್ಲಾ ಸೇವೆಗಳು ನನ್ನ ಮಾತಾಪಿತರ ಆಶೀರ್ವಾದದಿಂದ ಸಾಧ್ಯವಾಗಿದ್ದು, ಮುಂದೆಯೂ ಕರ್ತವ್ಯದ ಸೇವೆಯನ್ನು ನಿರಂತರವಾಗಿ ಮಾಡುತ್ತೇನೆ,” ಎಂದು ಕೃತಜ್ಞತೆ ಸಲ್ಲಿಸಿದರು.



Related posts

ಬೋರಿವಲಿ ಪೂರ್ವ ನ್ಯಾನ್ಸಿ ಕಾಂಪ್ಲೆಕ್ಸ್: ಶ್ರೀ ಜಗದೀಶ್ವರಿ ಮಂದಿರದಲ್ಲಿ ದೃಢ ಕಲಶಾಭಿಷೇಕ ಸಂಪನ್ನ

Mumbai News Desk

ಗೋರೆಗಾಂವ್: ಶ್ರದ್ಧಾ-ಭಕ್ತಿಯಿಂದ ಜರುಗಿದ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ 61ನೇ ವಾರ್ಷಿಕೋತ್ಸವ

Mumbai News Desk

ಸಿ ಎ ಪರೀಕ್ಷೆ ಫಲಿತಾಂಶ 2024ದಿವ್ಯಾ ವಿಶ್ವನಾಥ್ ಪೂಜಾರಿ ಉತ್ತೀರ್ಣ

Mumbai News Desk

ಶ್ರೀಕೃಷ್ಣ ವಿಠಲ ಪ್ರತಿಷ್ಠಾನ : ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಸಾಂಸ್ಕೃತಿಕ ವೈಭವ , ಸಾಧಕರಿಗೆ ಸನ್ಮಾನ.

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ – ನಾಗರ ಪಂಚಮಿ ಆಚರಣೆ

Mumbai News Desk

ಘಾಟ್ಕೋಪರ್ ಶ್ರೀ ಭವಾನಿ ಶನೀಶ್ವರ ದೇವಸ್ಥಾನದ 45ನೇ ವಾರ್ಷಿಕ ಮಹಾಪೂಜಾ ಉತ್ಸವ

Mumbai News Desk