28.4 C
Mumbai
August 3, 2026
Mumbai News Kannada
ಮುಂಬಯಿ

ಡೊಂಬಿವಲಿ: ಬಡ ರೋಗಿಗಳಿಗೆ ಆಸರೆಯಾದ ಉಚಿತ ಡಯಾಲಿಸಿಸ್ ಕೇಂದ್ರ ಲೋಕಾರ್ಪಣೆ: ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಜನಪರ ಆರೋಗ್ಯ ಸೇವೆಗೆ ಚಾಲನೆ





ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್, ರವಿ ಬಿ. ಅಂಚನ್


​ಮುಂಬೈ: ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ‘ದಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ’ (MVM) ತನ್ನ ಜನಪರ ಹಾಗೂ ಆರೋಗ್ಯ ಕಾಳಜಿಯ ದ್ವಿತೀಯ ಹಂತದ ಯೋಜನೆಯ ಅಂಗವಾಗಿ, ಡೊಂಬಿವಲಿಯ ಸ್ಥಳೀಯ ಶಾಖೆಯಲ್ಲಿ ನೂತನ ಉಚಿತ ಡಯಾಲಿಸಿಸ್ ಯಂತ್ರದ ಕೊಠಡಿಯನ್ನು ಶನಿವಾರ ಲೋಕಾರ್ಪಣೆಗೊಳಿಸಿತು.


​ನಾಡೋಜ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಹಾಗೂ ಸಾಯಿ ಜ್ಯೋತ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಈ ಮಹತ್ವದ ಆರೋಗ್ಯ ಯೋಜನೆ ಕಾರ್ಯಗತಗೊಂಡಿದೆ.

ದಿವ್ಯ ಶಿಪ್ಪಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೇದ ಪ್ರಕಾಶ್ ಶ್ರೇಯಾನ್, ಪ್ರಮುಖರಾದ ಸುರೇಶ್ ಕಾಂಚನ್, ಗಣೇಶ್ ಕಾಂಚನ್, ಮಹಾಬಲ ಕುಂದರ್ ಹಾಗೂ ಅಜಿತ್ ಸುವರ್ಣ ಸೇರಿದಂತೆ ಹಲವು ಗಣ್ಯರು ಜಂಟಿಯಾಗಿ ರಿಬ್ಬನ್ ಕತ್ತರಿಸುವ ಮೂಲಕ ನೂತನ ಉಚಿತ ಡಯಾಲಿಸಿಸ್ ಸೇವೆಗೆ ಔಪಚಾರಿಕ ಚಾಲನೆ ನೀಡಿದರು.


ಕೊಟ್ಟ ಮಾತು ಈಡೇರಿಸಿದ್ದೇವೆ: ವೇದ ಪ್ರಕಾಶ್
​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಿವ್ಯ ಶಿಪ್ಪಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೇದ ಪ್ರಕಾಶ್ ಶ್ರೇಯಾನ್, “ಮಂಡಳಿಯ ಚುನಾವಣಾ ಸಂದರ್ಭದಲ್ಲಿ ನಾವು ಸಮಾಜಕ್ಕೆ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಶೇ 100 ರಷ್ಟು ಈಡೇರಿಸುತ್ತಿದ್ದೇವೆ. ಕೆಲವು ರಾಜಕೀಯ ಪಕ್ಷಗಳಂತೆ ನಾವು ಕೇವಲ ಆಶ್ವಾಸನೆಗಳಿಗೆ ಸೀಮಿತವಾಗಿಲ್ಲ. ಸಮಾಜದ ಹಿರಿಯ ನಾಯಕ ನಾಡೋಜ ಡಾ. ಜಿ. ಶಂಕರ್ ಅವರು ಮುಕ್ತ ಮನಸ್ಸಿನಿಂದ ಒಂದು ಡಯಾಲಿಸಿಸ್ ಯಂತ್ರವನ್ನು ದಾನವಾಗಿ ನೀಡಿದ್ದಾರೆ. ಅದರಿಂದ ಪ್ರೇರಿತನಾಗಿ ನಾನು ಕೂಡ ಮತ್ತೊಂದು ಯಂತ್ರವನ್ನು ನೀಡಿದ್ದೇನೆ. ಸದ್ಯದಲ್ಲೇ ಅಂಧೇರಿ ಭಾಗದಲ್ಲೂ ಮೂರನೇ ಯಂತ್ರವನ್ನು ಸ್ಥಾಪಿಸಲು ಮಂಡಳಿಯ ಅಧ್ಯಕ್ಷರಿಗೆ ವಿನಂತಿಸಿದ್ದು, ದಾನಿಗಳು ಸಿದ್ಧರಾಗಿದ್ದಾರೆ. ಇದರೊಂದಿಗೆ ಶೇ 25 ರಷ್ಟು ರಿಯಾಯಿತಿ ದರದ ಔಷಧ ವಿತರಣಾ ಯೋಜನೆಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು” ಎಂದರು.


ಆರೋಗ್ಯ ಸೇವೆಗೆ ಮೊದಲ ಆದ್ಯತೆ: ಗಣೇಶ್ ಕಾಂಚನ್
​ಮಂಡಳಿಯ ಅಧ್ಯಕ್ಷ ಗಣೇಶ್ ಕಾಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಮಾಜ ಬಾಂಧವರ, ವಿಶೇಷವಾಗಿ ಬಡವರ ಆರೋಗ್ಯದ ವಿಷಯದಲ್ಲಿ ಮಂಡಳಿಯು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕಳೆದ 10 ತಿಂಗಳಿನಿಂದ ನಮ್ಮ ಸಮಿತಿ ನಿರಂತರವಾಗಿ ಶ್ರಮಿಸುತ್ತಿದೆ. ಇದು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ಸಮಾಜದ ಹಿತದೃಷ್ಟಿಯಿಂದ ಜಾರಿಗೆ ತರಲಾದ ಯೋಜನೆಯಾಗಿದೆ. ಕ್ಯಾನ್ಸರ್ ತಪಾಸಣೆಗೆ ಅಗತ್ಯವಿರುವ ₹17,000 ವೆಚ್ಚದ ಪಿಇಟಿ (PET) ಸ್ಕ್ಯಾನ್ ಅನ್ನು ಕೇವಲ ₹5,500 ಗೆ ಒದಗಿಸಲು ಹಾಗೂ ದೇಶಾದ್ಯಂತ ಇರುವ 200 ಪ್ರಮುಖ ಪ್ರಯೋಗಾಲಯಗಳ ಸಹಯೋಗದೊಂದಿಗೆ ಶೇ 70 ರಷ್ಟು ರಿಯಾಯಿತಿಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ನೀಡಲು ಮಂಡಳಿ ಒಪ್ಪಂದ ಮಾಡಿಕೊಂಡಿದೆ” ಎಂದು ವಿವರಿಸಿದರು.


​ಬಡತನಕ್ಕೆ ಸ್ಪಂದಿಸುವ ಮನಸ್ಸು ಬೇಕು: ಸುರೇಶ್ ಕಾಂಚನ್
​ಬಾಗ್ವಾಡಿ ಹೊಬ್ಳಿಯ ಮೊಗವೀರ ಮಹಾಜನ ಸೇವಾ ಸಂಘದ ಗೌರವಾಧ್ಯಕ್ಷ ಸುರೇಶ್ ಕಾಂಚನ್ ಮಾತನಾಡಿ, “ವೇದ ಪ್ರಕಾಶ್ ಅವರ ನೇತೃತ್ವದ ಈ ಕಾರ್ಯ ಶ್ಲಾಘನೀಯ. ನಮ್ಮ ಸಮಾಜದ ಶೇ 95 ರಷ್ಟು ಜನರು ಬಡವರಾಗಿದ್ದು, ಅವರೆಲ್ಲರಿಗೂ ಉಚಿತ ಡಯಾಲಿಸಿಸ್ ಲಭ್ಯವಾಗುವಂತೆ ಮಾಡಿರುವುದು ಶ್ರೇಷ್ಠ ಕಾರ್ಯ. ನಾವೊಬ್ಬ ಸಾಮಾನ್ಯ ಹೋಟೆಲ್ ಉದ್ಯಮಿಯಾಗಿದ್ದರೂ ನಮ್ಮ ಕೈಲಾದ ಮಟ್ಟಿಗೆ ಸಮಾಜಕ್ಕೆ ಸಹಾಯ ಮಾಡಲು ಸದಾ ಸಿದ್ಧ. ಮುಂದಿನ ದಿನಗಳಲ್ಲಿ ಮತ್ತೊಂದು ಡಯಾಲಿಸಿಸ್ ಯಂತ್ರವನ್ನು ದಾನವಾಗಿ ನೀಡಲು ನಾನು ಸಿದ್ಧನಿದ್ದೇನೆ” ಎಂದು ಘೋಷಿಸಿದರು.


​ಮಂಡಳಿ ಕಾರ್ಯದಕ್ಷತೆ ಶ್ಲಾಘನೀಯ: ಅಜಿತ್ ಸುವರ್ಣ
​ಮಂಡಳಿಯ ಮಾಜಿ ಅಧ್ಯಕ್ಷ ಅಜಿತ್ ಸುವರ್ಣ ಮಾತನಾಡಿ, “ನೂತನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಪರಿಶ್ರಮದಿಂದ ಮಂಡಳಿಯು ಇಂದು ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ. ಸದ್ಯದಲ್ಲೇ ಮಂಡಳಿಯ 125ನೇ ವರ್ಷದ (ಶತಮಾನೋತ್ತರ ರಜತ ಮಹೋತ್ಸವ) ಸಂಭ್ರಮಾಚರಣೆಯನ್ನು ದೇಶ ವಿದೇಶಗಳ ಜನರಿಗೆ ತಿಳಿಯುವಂತೆ ಅತ್ಯಂತ ಅದ್ಧೂರಿಯಾಗಿ ಆಚರಿಸಲಿದ್ದೇವೆ. ಡಯಾಲಿಸಿಸ್ ಪಡೆದ ನಂತರ ರೋಗಿಗಳು ನಿಶ್ಯಕ್ತರಾಗುವುದರಿಂದ ಬಡ ರೋಗಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಸ್ಥಳೀಯ ಶಾಖೆ ಗಮನ ಹರಿಸಬೇಕು” ಎಂದು ಸಲಹೆ ನೀಡಿದರು.


​ವೈದ್ಯಕೀಯ ಸಹಕಾರದ ಭರವಸೆ
​ಸಾಯಿ ಜ್ಯೋತ್ ಆಸ್ಪತ್ರೆಯ ಡಾ. ವಿಶಾಲ್ ಚೌಧರಿ ಮಾತನಾಡಿ, “ಮಂಡಳಿಯ ಆರೋಗ್ಯ ಕಾಳಜಿಗೆ ನಮ್ಮ ಆಸ್ಪತ್ರೆಯ ಸಂಪೂರ್ಣ ಸಹಕಾರವಿದೆ. ಇಲ್ಲಿನ ತುಳು-ಕನ್ನಡಿಗರಿಗೆ ಉಚಿತವಾಗಿ ಡಯಾಲಿಸಿಸ್ ಸೇವೆಯನ್ನು ನೀಡಲಾಗುವುದು ಹಾಗೂ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು” ಎಂದರು.


​ಮೊಗವೀರ ಮಹಾಜನ ಸೇವಾ ಸಂಘ ಬಾಗ್ವಾಡಿ ಹೊಬ್ಳಿಯ ಮಾಜಿ ಅಧ್ಯಕ್ಷ ಮಹಾಬಲ ಕುಂದರ್ ಹಾಗೂ ಪ್ರಸ್ತುತ ಅಧ್ಯಕ್ಷ ಸಂತೋಷ್ ಪುತ್ರನ್ ಮಾತನಾಡಿ, ಮಂಡಳಿಯು ಶಿಕ್ಷಣ, ಆರ್ಥಿಕತೆಯ ಜೊತೆಗೆ ಈಗ ಆರೋಗ್ಯ ಕ್ಷೇತ್ರದಲ್ಲೂ ದೊಡ್ಡ ಕ್ರಾಂತಿ ಮಾಡುತ್ತಿದೆ. ಗಣೇಶ್ ಕಾಂಚನ್ ಅವರು ಒಬಿಸಿ ಸಮಾಜದ ಹಕ್ಕುಗಳಿಗಾಗಿಯೂ ಶ್ರಮಿಸುತ್ತಿದ್ದು, ಇಂತಹ ನಾಯಕರ ಬೆನ್ನಿಗೆ ಇಡೀ ಸಮಾಜ ನಿಲ್ಲಬೇಕು ಎಂದು ಕರೆ ನೀಡಿದರು.


​ ವೇದಿಕೆಯಲ್ಲಿ ಪ್ರಮುಖ ಗಣ್ಯರಾದ ದಿಲೀಪ್ ಕುಮಾರ್ ಮುಲ್ಕಿ, ಶೇಖರ್ ಮೆಂಡನ್, ರಾಜೇಶ್ ಪುತ್ರನ್, ದೇವರಾಜ್ ಪಂಖೇರಾ ಹಾಗೂ ದೇವರಾಜ್ ಕುಂದರ್ ಉಪಸ್ಥಿತರಿದ್ದರು. ಡೊಂಬಿವಲಿ ಸ್ಥಳೀಯ ಶಾಖೆಯ ಕೋಶಾಧಿಕಾರಿ ಕೇಶವ ಬಂಗೇರ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗಾಗಿ ಚಂದ್ರಶೇಖರ್, ಪುರುಷೋತ್ತಮ ಕರ್ಕೇರಾ, ದಾಮೋದರ್ ಪುತ್ರನ್, ವರದರಾಜ್ ಶ್ರೇಯಾನ್, ಹೇಮಲತಾ, ಸಂತೋಷ್ ಕೋಟ್ಯಾನ್, ಉಮೇಶ್ ಮೆಂಡನ್, ಕೇಶವ ಬಂಗೇರ, ಲಕ್ಷ್ಮಣ್, ಸುರೇಶ್ ಕರ್ಕೇರಾ, ಹರಿ ಮೆಂಡನ್, ಅಕ್ಷಯ್ ಪುತ್ರನ್, ಹೇಮಂತ್ ಮೆಂಡನ್, ಗೀತಾ ಮೆಂಡನ್, ದಮಯಂತಿ, ಅಶೋಕ್ ಪುತ್ರನ್, ಲೋಕೇಶ್, ಸವಿತಾ ಸಾಲ್ಯಾನ್, ವಾಸುದೇವ ಬಂಗೇರ, ರತ್ನಾಕರ್ ಬಂಗೇರ, ನಾರಾಯಣ್, ಧೀರಜ್ ಕರ್ಕೇರಾ ಮತ್ತು ನಾಗೇಶ್ ಕುಂದರ್ ಸೇರಿದಂತೆ ಡೊಂಬಿವಲಿ ಶಾಖೆಯ ಎಲ್ಲಾ ಪದಾಧಿಕಾರಿಗಳು ಶ್ರಮಿಸಿದ್ದರು.



Related posts

ವೈಭವದ ವಿಸರ್ಜನ ಮೆರವಣಿಗೆಯೊಂದಿಗೆ ಪಶ್ಚಿಮ ವಿಭಾಗದ ನವರಾತ್ರಿ ಉತ್ಸವ ಸಂಪನ್ನ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ – ಮೀರಾ ಭಾಯಂದರ್ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

Mumbai News Desk

ಭಾರತ್ ಬ್ಯಾಂಕ್ ವಿರಾರ್ ಶಾಖೆಯ 47ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ

Mumbai News Desk

ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೆಷನ್, ಮುಂಬಯಿ : ವಾರ್ಷಿಕ ವಿಹಾರಕೂಟ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಯಕ್ಷಗಾನ ತಾಳಮದ್ದಳೆ ಸುಧನ್ವ ಮೋಕ್ಷ

Mumbai News Desk

ಬಂಟರ ಸಂಘ ಮುಂಬೈ ಅಂಧೇರಿ- ಬಾಂದ್ರಾ ಪ್ರಾದೇಶಿಕ ಸಮಿತಿ ಆಟಿಡೊಂಜಿ ಪೊರ್ಲು- ತಿರ್ಲ್, ಸಂಜೀವನಿ ಉದ್ಘಾಟನೆ.

Mumbai News Desk