ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷರಾದ ಹೊಸಬೆಟ್ಟು ಕೆ. ಆರ್. ಪುತ್ರನ್ ಅವರು ಜುಲೈ 3 ರಂದು ನಿಧನ ಹೊಂದಿದ್ದು, ಅವರ ಅಗಲಿಕೆಗೆ ಸಂತಾಪ ಸೂಚಿಸಲು ಮಂಡಳಿಯ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ. ಈ ಸಂತಾಪ ಸೂಚನಾ ಸಭೆಯು ಮುಂಬಯಿಯ ಅಂಧೇರಿ ಪಶ್ಚಿಮದಲ್ಲಿರುವ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮೊಗವೀರ ಭವನದಲ್ಲಿ ಜೂಲೈ 13 ರ ಸೋಮವಾರದಂದು ಸಂಜೆ 4 ಗಂಟೆಗೆ ನಡೆಯಲಿದೆ.
ದಿವಂಗತ ಕೆ. ಆರ್. ಪುತ್ರನ್ ಅವರು ಮೊಗವೀರ ಮಂಡಳಿಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಬರೋಬ್ಬರಿ ಮೂರು ದಶಕಗಳ ಕಾಲ ತಮ್ಮ ಅಮೂಲ್ಯವಾದ ಸಮಯವನ್ನು ನೀಡಿ, ತಮ್ಮ ಶಿಸ್ತುಬದ್ಧ ನೀತಿಯಿಂದ ಮಂಡಳಿಯನ್ನು ಸಮೃದ್ಧಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಿ.ಎ. ಕಂಪನಿಯೊಂದರಲ್ಲಿ ಕೆಳಸ್ಥರದ ಸಿಬ್ಬಂದಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು, ತಮ್ಮ ಅಪಾರ ಪ್ರತಿಭೆ ಮತ್ತು ನಿರಂತರ ಸಾಧನೆಯಿಂದ ಸಿ.ಎ. ಪದವಿ ಗಳಿಸಿ, ಅದೇ ಕಂಪೆನಿಯಲ್ಲಿ ಪಾಲುದಾರರಾಗಿ ನೇಮಕಗೊಂಡ ಓರ್ವ ಅಪರೂಪದ ರಾತ್ರಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಅನೇಕ ಸಾಮಾಜಿಕ ಸಂಘಟನೆಗಳಿಗೆ ಆರ್ಥಿಕ ಮಾರ್ಗದರ್ಶಕರಾಗಿದ್ದ ಅವರ ಸೇವೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ವಿವಿಧ ಸಂಸ್ಥೆಗಳ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಅನನ್ಯವಾದುದಾಗಿದೆ.
ಈ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ದಿವಂಗತ ಕೆ. ಆರ್. ಪುತ್ರನ್ ಅವರ ಅಭಿಮಾನಿಗಳು, ಮೊಗವೀರ ಗ್ರಾಮ ಸಭಾ ಮತ್ತು ಮೂಲಸ್ಥಾನ ಸಭಾಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಮೃತರ ಆತ್ಮದ ಚಿರಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಬೇಕಾಗಿ ಮಂಡಳಿಯ ಅಧ್ಯಕ್ಷರಾದ ಗಣೇಶ್ ಕಾಂಚನ್ ಮತ್ತು ಪ್ರಧಾನ ಕಾರ್ಯದರ್ಶಿ ದಿಲೀಪ್ ಮೂಲ್ಕಿ ಅವರು ಪ್ರಕಟಣೆಯಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
previous post





