
ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ: ಸತೀಶ್ ಶೆಟ್ಟಿ ಅಜೆಕಾರು
ಮುಂಬಯಿ: ಆ.18 “ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಕಷ್ಟಪಟ್ಟು ಗಳಿಸಿಕೊಂಡ ಸ್ವಾತಂತ್ರ್ಯವನ್ನು ಉಳಿಸಿಕೊಂಡು, ದೇಶದ ಏಕತೆ, ಸಮಗ್ರತೆ ಹಾಗೂ ಅಖಂಡತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ. ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೀರ ಯೋಧರ ತ್ಯಾಗವನ್ನು ಸದಾ ಸ್ಮರಿಸಬೇಕು. ಅವರ ಶೌರ್ಯ ಮತ್ತು ಬಲಿದಾನದಿಂದಲೇ ದೇಶ ಸುರಕ್ಷಿತವಾಗಿದ್ದು, ತಾಯ್ನಾಡಿನ ಸ್ವಾತಂತ್ರ್ಯವನ್ನು ಗೌರವದಿಂದ ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ,” ಎಂದು ಅಜೆಕಾರು ಸತೀಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಮುಂಬಯಿ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶ ಮೊದಲು: ವಿನಯ ವೇಣುಗೋಪಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆನಡಾದ ಉದ್ಯಮಿ ಕೊಡೆತ್ತೂರು ವಿನಯ ವೇಣುಗೋಪಾಲ್ ಶೆಟ್ಟಿ ಮಾತನಾಡಿ, “80ನೇ ವರ್ಷದ ಸಂಭ್ರಮವು ಕೇವಲ ಹಬ್ಬದ ಆಚರಣೆಯಾಗದೆ, ದೇಶದ ಸಾಧನೆಗಳನ್ನು ಸ್ಮರಿಸುವ, ಕೊರತೆಗಳನ್ನು ಅರಿತುಕೊಳ್ಳುವ ಮತ್ತು ಉತ್ತಮ ಭವಿಷ್ಯ ನಿರ್ಮಿಸುವ ಸಂಕಲ್ಪದ ಸಂದರ್ಭವಾಗಬೇಕು. ‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಸ್ವಾತಂತ್ರ್ಯದ ನಿಜವಾದ ಅರ್ಥ ಸಾಕಾರಗೊಳ್ಳುತ್ತದೆ,” ಎಂದರು.
ವೇದಿಕೆಯಲ್ಲಿ ಕೊಡೆತ್ತೂರು ಗುಲಾಬಿ ಸಂಜೀವ ಶೆಟ್ಟಿ, ಕೊಡೆತ್ತೂರು ಶ್ರೀಧರ್ ಶೆಟ್ಟಿ, ಲಕ್ಷ್ಮೀ ಶ್ರೀಧರ್ ಶೆಟ್ಟಿ, ಮಲ್ಲಿಕಾ ಕೇಶವ ಶೆಟ್ಟಿ ಹಾಗೂ ಯಶೋದಾ ಶೆಟ್ಟಿ ಕುಕ್ಕುಂದೂರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಕೊಡೆತ್ತೂರು ಕೇಶವ ಶೆಟ್ಟಿ ಸ್ವಾಗತಿಸಿದರು. ಮಧುರ ರೋಷನ್ ಶೆಟ್ಟಿ, ಕಿರಣ್ ಹೆಜಮಾಡಿ, ಪ್ರಮೋದ್ ಯಾದವ್ ಮತ್ತು ಪ್ರತೀಕ್ಷಾ ಅಭಿಷೇಕ್ ಶೆಟ್ಟಿ ಸಹಕರಿಸಿದರು. ಮುಂಬಯಿ ಫ್ರೆಂಡ್ಸ್ ಸಂಚಾಲಕರಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಅಭಿಷೇಕ್ ಶ್ರೀಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೋಷನ್ ಶೆಟ್ಟಿ ಚುನ್ನಬಟ್ಟಿ ವಂದಿಸಿದರು.
ಮನೋರಂಜನೆಯ ಅಂಗವಾಗಿ ಗೀತ ಗಾಯನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಯನಾ ಸತೀಶ್ ಶೆಟ್ಟಿ ಅಜೆಕಾರು ಸಂಯೋಜಿಸಿದ್ದರು. ಸಮಾರಂಭವು ದೇಶಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.




