September 5, 2026
Mumbai News Kannada
ಕ್ರೀಡೆ

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಫುಟ್ ಬಾಲ್‌ ಲೀಗ್ KVAFL–2: ಟೈಗರ್ಸ್ ಯುನೈಟೆಡ್‌ಗೆ ಚಾಂಪಿಯನ್ ಪಟ್ಟ





ಮುಂಬಯಿ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್‌ (ರಿ.) ಮುಂಬಯಿ ಇದರ ಯುವ ವಿಭಾಗದ ವತಿಯಿಂದ ಆಯೋಜಿಸಲಾದ KVA Football League–2 (KVAFL–2) ಫುಟ್ಬಾಲ್ ಪಂದ್ಯಾಟವು ರೋಚಕ ಹಣಾಹಣಿಯೊಂದಿಗೆ ಅಗಸ್ಟ್ 23 ಆದಿತ್ಯವಾರದಂದು ಬೋರಿವಲಿ ಪಶ್ಚಿಮದಲ್ಲಿರುವ Strikers Arena ground ನಲ್ಲಿ ಸಮಾರೋಪಗೊಂಡಿದ್ದು, ಪುರುಷರ ವಿಭಾಗದಲ್ಲಿ ಟೈಗರ್ಸ್ ಯುನೈಟೆಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಬ್ಲ್ಯಾಕ್ ಸ್ಟಾಲಿಯನ್ಸ್ ಹಾಗೂ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಟೈಗರ್ಸ್ ಯುನೈಟೆಡ್ ತಂಡಗಳು ಮುಖಾಮುಖಿಯಾದವು. ಉತ್ತಮ ತಂಡದ ಸಹಕಾರ, ತಂತ್ರಗಾರಿಕೆ ಹಾಗೂ ಕ್ರೀಡಾ ಕೌಶಲ್ಯ ಪ್ರದರ್ಶಿಸಿದ ಎರಡೂ ತಂಡಗಳು 2–2 ಗೋಲುಗಳಿಂದ ಸಮಬಲ ಸಾಧಿಸಿದವು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಟೈಗರ್ಸ್ ಯುನೈಟೆಡ್ 2–1 ಅಂತರದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.


ಟೈಗರ್ಸ್ ಯುನೈಟೆಡ್ ಪರ ನಾಯಕ ಆದಿತ್ಯ ಆಚಾರ್ಯ, ಶ್ಲೋಕ್ ಆಚಾರ್ಯ, ಪ್ರಮಥ್ ಆಚಾರ್ಯ ಹಾಗೂ ಧ್ರುವ ಆಚಾರ್ಯ ಅವರು ಗಮನಾರ್ಹ ಪ್ರದರ್ಶನ ನೀಡಿದರು. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಗ್ರೂಪ್ ‘ಬಿ’ಯಲ್ಲಿ ಮುನ್ನಡೆ ಸಾಧಿಸಿದ್ದ ತಂಡವು ಸೆಮಿಫೈನಲ್‌ನಲ್ಲಿ ರೈಸಿಂಗ್ ಸ್ಟ್ರೈಕರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.
ಬ್ಲ್ಯಾಕ್ ಸ್ಟಾಲಿಯನ್ಸ್ ತಂಡ ಸತತ ಎರಡನೇ ವರ್ಷವೂ ಫೈನಲ್ ಪ್ರವೇಶಿಸಿ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು. ನಾಯಕ ವೇದಾಂತ್ ಆಚಾರ್ಯ ಅವರ ನೇತೃತ್ವದ ತಂಡದಲ್ಲಿ ಸಾಹಿಲ್ ಆಚಾರ್ಯ, ಅಜಯ್ ಆಚಾರ್ಯ, ಚಿರಾಗ್ ಪೇಜಾವರ್, ರೋಹನ್ ಆಚಾರ್ಯ ಹಾಗೂ ಗಗನ್ ಆಚಾರ್ಯ ಇದ್ದರು.
ಪುರುಷರ ವಿಭಾಗದಲ್ಲಿ ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿಯನ್ನು ಚಾಂಪಿಯನ್ ಟೈಗರ್ಸ್ ಯುನೈಟೆಡ್ ತಂಡದ ನಾಯಕ ಆದಿತ್ಯ ಆಚಾರ್ಯ ಪಡೆದರೆ, ಅತ್ಯುತ್ತಮ ಸ್ಟ್ರೈಕರ್ ಪ್ರಶಸ್ತಿಯನ್ನು ಅದೇ ತಂಡದ ಶ್ಲೋಕ್ ಆಚಾರ್ಯ ಪಡೆದುಕೊಂಡರು. ಶ್ಲೋಕ್ ಅವರು ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಇಡೀ ಪಂದ್ಯಾವಳಿಯಲ್ಲಿ ಒಟ್ಟು 10 ಗೋಲು ಗಳಿಸಿ ಗಮನ ಸೆಳೆದರು.


ಮಹಿಳೆಯರು ಹಾಗೂ ಕಿರಿಯರ ವಿಭಾಗದಲ್ಲೂ ರೋಚಕ ಸ್ಪರ್ಧೆ
ಈ ಬಾರಿಯ KVAFLನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಹಾಗೂ 15 ವರ್ಷದೊಳಗಿನ ಬಾಲಕ–ಬಾಲಕಿಯರ ವಿಭಾಗಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಮಹಿಳೆಯರ ವಿಭಾಗದಲ್ಲಿ ಟೈಗರ್ಸ್ ಯುನೈಟೆಡ್ ತಂಡ ಚಾಂಪಿಯನ್ ಆಗಿ, ಕ್ವೀನ್ಸ್ ಯುನೈಟೆಡ್ ತಂಡ ರನ್ನರ್‌ಅಪ್ ಸ್ಥಾನ ಗಳಿಸಿತು.
ಚಾಂಪಿಯನ್ ಟೈಗರ್ಸ್ ಯುನೈಟೆಡ್ ತಂಡದ ನಾಯಕಿ ಮಮತಾ ಆಚಾರ್ಯ ಅವರೊಂದಿಗೆ ಸ್ತುತಿ ಆಚಾರ್ಯ, ಐಶ್ವರ್ಯ ಆಚಾರ್ಯ, ದೀಪಿಕಾ ರಾವ್ ಹಾಗೂ ಸಂಜನಾ ಆಚಾರ್ಯ ತಂಡದಲ್ಲಿದ್ದರು.
15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಹಂಟ್ರೆಕ್ಸ್ ತಂಡ ವಿಜೇತರಾದರೆ, ಬ್ಯಾಡ್ಡಿ ಅಲರ್ಟ್ ತಂಡ ರನ್ನರ್‌ಅಪ್ ಆಯಿತು. ಬಾಲಕರ ವಿಭಾಗದಲ್ಲಿ ಬ್ಲಿಟ್ಜ್ ಬ್ಲೀಕರ್ ತಂಡ ಪ್ರಶಸ್ತಿ ಗೆದ್ದರೆ, ವೋರ್ಟೆಕ್ಸ್ ವೆಲಾಸಿಟಿ ತಂಡ ರನ್ನರ್‌ಅಪ್ ಸ್ಥಾನ ಪಡೆಯಿತು.
20 ಪಂದ್ಯಗಳ ಕ್ರೀಡಾಕೂಟ
KVAFL–2ರಲ್ಲಿ ಪುರುಷರ ವಿಭಾಗದಲ್ಲಿ ಒಟ್ಟು 9 ತಂಡಗಳು ಗ್ರೂಪ್ ‘ಎ’ ಮತ್ತು ‘ಬಿ’ಯಲ್ಲಿ ಸ್ಪರ್ಧಿಸಿದ್ದವು. ಮಹಿಳೆಯರ ವಿಭಾಗದಲ್ಲಿ 2 ತಂಡಗಳು, 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 2 ತಂಡಗಳು ಹಾಗೂ ಬಾಲಕರ ವಿಭಾಗದಲ್ಲಿ 2 ತಂಡಗಳು ಭಾಗವಹಿಸಿದ್ದವು.
ಎರಡೂ ಟರ್ಫ್‌ಗಳಲ್ಲಿ ಏಕಕಾಲದಲ್ಲಿ ಪಂದ್ಯಗಳು ನಡೆಯುವ ಮೂಲಕ ಒಟ್ಟು 20 ಪಂದ್ಯಗಳು ನಡೆದವು. ಪುರುಷರ ಗ್ರೂಪ್ ಹಂತದಲ್ಲಿ 14 ಲೀಗ್ ಪಂದ್ಯಗಳು, ಎರಡು ಸೆಮಿಫೈನಲ್ ಹಾಗೂ ಒಂದು ಫೈನಲ್ ಪಂದ್ಯ ನಡೆದವು. ಸೆಮಿಫೈನಲ್‌ನಲ್ಲಿ ಬ್ಲ್ಯಾಕ್ ಸ್ಟಾಲಿಯನ್ಸ್–ಅಟ್ಲೆಟಿಕೊ ಆಚಾರ್ಯಾಸ್ ಹಾಗೂ ಟೈಗರ್ಸ್ ಯುನೈಟೆಡ್–ರೈಸಿಂಗ್ ಸ್ಟ್ರೈಕರ್ಸ್ ತಂಡಗಳು ಸೆಣಸಿದವು. ಮಹಿಳೆಯರು ಮತ್ತು ಕಿರಿಯರ ವಿಭಾಗಗಳಲ್ಲಿ ಮೂರು ಪಂದ್ಯಗಳು ನಡೆದವು.

ಸಾಧಕರಿಂದ ಯುವಜನತೆಗೆ ಪ್ರೇರಣೆ; ಬೆಳಿಗ್ಗೆ ಮಹಿಳಾ ವಿಭಾಗದ ಸದಸ್ಸೆಯರ ಪ್ರಾರ್ಥನೆ ಯೊಂದಿಗೆ ಜರುಗಿದ ಉದ್ಘಾಟನಾ ಸಮಾರಂಭ ಹಾಗೂ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೀರ್ತಿ ಜಿ. ಆಚಾರ್ಯ ಉಪಸ್ಥಿತರಿದ್ದರು. ಕಾರ್ಪೊರೇಟ್ ಕ್ಷೇತ್ರದ ಸಾಧನೆಯೊಂದಿಗೆ ನೃತ್ಯ, ಮಾರ್ಗದರ್ಶನ ಹಾಗೂ ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರ ಬಹುಮುಖ ಪಯಣವನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಗೌರವ ಅತಿಥಿಗಳಾಗಿ ಮಮತಾ ಎಸ್. ಆಚಾರ್ಯ ಹಾಗೂ ಶ್ಲೋಕ್ ಜೆ. ಆಚಾರ್ಯ ಉಪಸ್ಥಿತರಿದ್ದರು. ಬಾಲ್ಯದಿಂದಲೇ ಫುಟ್ಬಾಲ್ ಮೇಲಿನ ಅಪಾರ ಆಸಕ್ತಿ, ಪರಿಶ್ರಮ ಮತ್ತು ಛಲದ ಮೂಲಕ ಮುನ್ನಡೆದಿರುವ ಮಮತಾ ಆಚಾರ್ಯ ಅವರ ಪಯಣವನ್ನು ಅಭಿನಂದಿಸಲಾಯಿತು. ಕೇವಲ 20ನೇ ವಯಸ್ಸಿನಲ್ಲೇ ಪ್ರತಿಭೆ, ದೃಢಸಂಕಲ್ಪ ಮತ್ತು ಗೆಲುವಿನ ಮನೋಭಾವದ ಮೂಲಕ ಗಮನ ಸೆಳೆದಿರುವ ಶ್ಲೋಕ್ ಆಚಾರ್ಯ ಅವರ ಸಾಧನೆಯನ್ನೂ ಪ್ರಶಂಸಿಸಲಾಯಿತು.
ಸಂಘದ 80ನೇ ವರ್ಷಾಚರಣೆಯ ಸ್ಮರಣ ಸಂಚಿಕೆ ಸಮಿತಿಯ ಸಂಚಾಲಕರೂ, 25ಕ್ಕೂ ಹೆಚ್ಚು ವರ್ಷಗಳಿಂದ ಸಂಘದ ಸಕ್ರಿಯ ಸದಸ್ಯರೂ ಹಾಗೂ ಮಾಜಿ ಆಡಳಿತ ಸಮಿತಿ ಸದಸ್ಯರೂ ಆಗಿರುವ ಶ್ರೀ ಪ್ರವೀಣ್ ಪೇಜಾವರ್ ಅವರು KVAFL-2 ಸಮಾರೋಪ ಸಮಾರಂಭದ ವಿಶೇಷ ಅತಿಥಿಯಾಗಿ ಪಾಲ್ಗೊಂಡರು.
ಅತಿಥಿಗಳು KVA ಹಾಗೂ ಯುವ ವಿಭಾಗಕ್ಕೆ ಕೃತಜ್ಞತೆ ಸಲ್ಲಿಸಿ, ತಮ್ಮನ್ನು ಆಹ್ವಾನಿಸಿ ಗೌರವಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವ ಸಂಘದ ಕಾರ್ಯವನ್ನು ಶ್ಲಾಘಿಸಿ, ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಆಟಗಾರರಿಗೆ ಶುಭ ಹಾರೈಸಿದರು. ಸಮುದಾಯದ ಪ್ರತಿಭಾವಂತ ಯುವಜನರೊಂದಿಗೆ ಒಂದೇ ವೇದಿಕೆಯಲ್ಲಿ ಭಾಗಿಯಾಗಿರುವುದು ಸಂತಸದ ಸಂಗತಿ ಎಂದರು.

ಸಂಘದ ಕಾರ್ಯಕ್ರಮಗಳಲ್ಲಿ ಯುವಕರ ಸಕ್ರಿಯ ಭಾಗವಹಿಸುವಿಕೆಗೆ ಕರೆ:
ಸಂಘದ ಅಧ್ಯಕ್ಷರಾದ ಶ್ರೀ ರವೀಶ್ ಜಿ ಆಚಾರ್ಯರು ಮಾತನಾಡುತ್ತಾ, ಯುವ ವಿಭಾಗದ ಕಾರ್ಯಾಧ್ಯಕ್ಷರು ಹಾಗೂ ಅವರ ತಂಡದ ಪ್ರಯತ್ನಗಳನ್ನು ಶ್ಲಾಘಿಸಿದರು. ಹಲವಾರು ಸವಾಲುಗಳ ನಡುವೆಯೂ ನಿಗದಿತ ದಿನಾಂಕದಲ್ಲೇ KVAFL–2 ಅನ್ನು ಯಶಸ್ವಿಯಾಗಿ ಆಯೋಜಿಸಿ, ಮುಂಬಯಿಯ ವಿವಿಧ ಭಾಗಗಳ ಯುವಕರನ್ನು ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವುದು ಶ್ಲಾಘನೀಯ ಎಂದರು. ಯುವಕರು ಕೇವಲ ಕ್ರೀಡಾ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತರಾಗದೆ, ಸಂಘವು ಆಯೋಜಿಸುತ್ತಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಜಾತಾ ಜಿ ಆಚಾರ್ಯರು ವಿಜೇತರು ಹಾಗೂ ಎಲ್ಲ ಸ್ಪರ್ಧಾಳುಗಳನ್ನು ಅಭಿನಂದಿಸಿ, ಸತತ ಎರಡನೇ ಬಾರಿಗೆ ಉತ್ತಮ ರೀತಿಯಲ್ಲಿ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಿದ ಯುವ ವಿಭಾಗವನ್ನು ಶ್ಲಾಘಿಸಿದರು.
ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಸಂದೇಶ್ ಜೆ ಆಚಾರ್ಯರು ಮಾತನಾಡಿ, “ನಾನು ಕೇವಲ ಮುಖವಷ್ಟೇ; ಪ್ರತಿಯೊಂದು ಕಾರ್ಯಕ್ರಮದ ಕೆಲಸವನ್ನು ಆರಂಭದಿಂದ ಅಂತ್ಯದವರೆಗೆ ಅಚ್ಚುಕಟ್ಟಾಗಿ ನೋಡಿಕೊಳ್ಳುವುದು ನನ್ನ ತಂಡ” ಎಂದು ಹೇಳಿ, ತಮ್ಮ ತಂಡದ ಸದಸ್ಯರ ಸೇವಾ ಮನೋಭಾವವನ್ನು ಪ್ರಶಂಸಿಸಿದರು. ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿಗೆ ವಿಶ್ವಾಸವಿಟ್ಟು ಸಹಕಾರ ನೀಡಿದ KVA ಆಡಳಿತ ಸಮಿತಿ ಹಾಗೂ ಇತರ ಉಪ ಸಮಿತಿಗಳ ಪ್ರತಿಯೊಬ್ಬ ಸದಸ್ಯರಿಗೂ, ಉದಾರ ಧನಿಗಳಿಗೂ ಕೃತಜ್ಞತೆ ಸಲ್ಲಿಸಿದರು.
ಯುವ ವಿಭಾಗದ ಸಂಘಟನಾ ಸಾಮರ್ಥ್ಯ, ಆಟಗಾರರ ಉತ್ಸಾಹ ಹಾಗೂ ಸಮುದಾಯದ ಒಗ್ಗಟ್ಟಿನಿಂದ KVAFL–2 ಯಶಸ್ವಿಯಾಗಿ ಸಂಪನ್ನಗೊಂಡಿತು.



Related posts

ಏಷ್ಯಾ ಕಪ್ 2025 : ಭಾರತ ತಂಡ ಪ್ರಕಟ: ಶುಭಮನ್ ಗಿಲ್ ಉಪನಾಯಕ, ಶ್ರೇಯಸ್ ಅಯ್ಯರ್‌ಗೆ ಸ್ಥಾನವಿಲ್ಲ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ, ಅದ್ಧೂರಿ ಕ್ರೀಡೋತ್ಸವ ದಂಗಲ್ – 2024 ಉದ್ಘಾಟನೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಮುಂಬಯಿ : ವಾರ್ಷಿಕ ಕ್ರೀಡೋತ್ಸವದ ಉದ್ಘಾಟನೆ

Mumbai News Desk

ತುಳು ಸಂಘ ಬೊರಿವಲಿ ಯುವ ವಿಭಾಗದಿಂದ ಕ್ರಿಕೆಟ್ ಪಂದ್ಯಾಟ, – ಕ್ರೀಡೆಗಳು ಸಂಘದ ಅಭಿವೃದ್ದಿಗೆ ಪೂರಕವಾಗಲಿ – ಹರೀಶ್ ಮೈಂದನ್

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ

Mumbai News Desk

ಗಿರೀಶ್ ಶೆಟ್ಟಿ ತೆಳ್ಳಾರ್ ನೇತೃತ್ವದಲ್ಲಿ ಮೇ 3 ರಂದು  ಮುನಿಯಾಲಿನಲ್ಲಿ ರಾಷ್ಟ್ರೀಯ ಕಬ್ಬಡಿ ಆಟಗಾರ ಪ್ರೀತಂ ಶೆಟ್ಟಿ ಸ್ಮರಣಾರ್ಥ ರಾಷ್ಟ್ರ ಮಟ್ಟದ ಪ್ರೊ ಕಬಡ್ಡಿ

Mumbai News Desk