
ಜಯ ಸಿ. ಪೂಜಾರಿ, ಕೆಳಾರ್ಕಳಬೆಟ್ಟು
ಉಡುಪಿ: ಮಾನವನ ಬದುಕನ್ನು ಸಮೃದ್ಧಗೊಳಿಸುವ ಮತ್ತು ಸುಂದರವಾಗಿಸುವ ಮೌಲ್ಯಗಳಾವುವು? ಈ ಜಗತ್ತಿನಲ್ಲಿ ನೂರು ವರ್ಷಗಳಾದರೂ ಬದುಕಬೇಕೆಂಬ ಉದ್ದೇಶವೇನು? ಒಟ್ಟಾರೆ ಮಾನವ ಜೀವನದ ಗುರಿ ಮತ್ತು ಉದ್ದೇಶವೇನು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ. ಆದರೆ, ಪರರ ಕಷ್ಟಗಳಿಗೆ ಸ್ಪಂದಿಸಿ, ಅಸಹಾಯಕರ ಕಣ್ಣೀರು ಒರೆಸಿ, ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವುದರಲ್ಲಿಯೇ ಜೀವನದ ಸಾರ್ಥಕತೆಯನ್ನು ಕಂಡುಕೊಂಡವರು ಸಮಾಜಸೇವಕ ನಿತ್ಯಾನಂದ ಒಳಕಾಡು.
ಹೊಟ್ಟೆಪಾಡಿಗಾಗಿ ದೇಶದ ವಿವಿಧ ಭಾಗಗಳಿಂದ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಅಲ್ಲಿ ದುಡಿದು ಬದುಕು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕುಸಿದು ಬೀಳುವವರಿದ್ದಾರೆ. ಇಂತಹವರ ನೆರವಿಗೆ ಧಾವಿಸುವವರು ಯಾರು? ಅನಾಥ ಸ್ಥಿತಿಯಲ್ಲಿ ಜೀವ ಕಳೆದುಕೊಳ್ಳುವವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವವರು ಯಾರು? ಇಂತಹ ಪ್ರಶ್ನೆಗಳಿಗೆ ತಮ್ಮ ಸೇವೆಯ ಮೂಲಕ ಉತ್ತರವಾಗಿದ್ದಾರೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ, ಸಮಾಜಸೇವಕ ನಿತ್ಯಾನಂದ ಒಳಕಾಡು.
ಉಡುಪಿ ಜಿಲ್ಲೆಯಲ್ಲಿ ವಿವಿಧ ರಾಜ್ಯಗಳಿಂದ ಬಂದು ಕಾರ್ಮಿಕರಾಗಿ ದುಡಿಯುವವರ ಸಂಖ್ಯೆ ಗಣನೀಯವಾಗಿದೆ. ಅನಾರೋಗ್ಯ, ಅಪಘಾತ ಹಾಗೂ ಇನ್ನಿತರ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕುವ ವಲಸೆ ಕಾರ್ಮಿಕರು ಮತ್ತು ನಿರ್ಗತಿಕರಿಗೆ ನಿತ್ಯಾನಂದ ಒಳಕಾಡು ಅವರು ಕಳೆದ 25 ವರ್ಷಗಳಿಂದ ನಿರಂತರವಾಗಿ ನೆರವಾಗುತ್ತಿದ್ದಾರೆ. ಹೀಗಾಗಿ ಅವರು ಜನಮಾನಸದಲ್ಲಿ ಆಪದ್ಬಾಂಧವರೆಂದೇ ಗುರುತಿಸಿಕೊಂಡಿದ್ದಾರೆ.

ನಿಸ್ವಾರ್ಥ ಸೇವೆಯೇ ಬದುಕಿನ ಧ್ಯೇಯ
ರಾಮ ದೇವಾಡಿಗ ಮತ್ತು ಶ್ರೀಮತಿ ಕಲ್ಯಾಣಿ ದಂಪತಿಯ ಪುತ್ರರಾದ ನಿತ್ಯಾನಂದ ಒಳಕಾಡು ಅವರು 10-06-1960ರಂದು ಜನಿಸಿದರು. ವಿದ್ಯಾಭ್ಯಾಸದ ಬಳಿಕ ಸಮಾಜಸೇವೆಯನ್ನೇ ಜೀವನದ ಪ್ರಮುಖ ಧ್ಯೇಯವನ್ನಾಗಿಸಿಕೊಂಡ ಅವರು, ಯಾವುದೇ ಫಲಾಪೇಕ್ಷೆಯಿಲ್ಲದೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ.
ಕಳೆದ 25 ವರ್ಷಗಳಿಂದ ಹಗಲಿರುಳೆನ್ನದೆ, ದಿನದ 24 ಗಂಟೆಯೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿರುವವರು, ಬಡವರು, ರೋಗಿಗಳು ಹಾಗೂ ಅಪಘಾತಕ್ಕೀಡಾದವರ ನೆರವಿಗೆ ತಕ್ಷಣ ಧಾವಿಸುವುದು ಇವರ ಸೇವೆಯ ವಿಶೇಷತೆ. ಸಾವಿರಾರು ಗಾಯಾಳುಗಳು ಮತ್ತು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ, ಅವರಿಗೆ ಚಿಕಿತ್ಸೆ ದೊರಕುವಂತೆ ಮಾಡುವ ಮೂಲಕ ಅನೇಕ ಜೀವಗಳ ರಕ್ಷಣೆಗೆ ಕಾರಣರಾಗಿದ್ದಾರೆ.
ಅನಾಥರು ಮತ್ತು ನಿರ್ಗತಿಕರು ಮೃತಪಟ್ಟಾಗ ಅವರ ಅಂತ್ಯಸಂಸ್ಕಾರಕ್ಕೂ ನೆರವಾಗುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅನಾಥ ಸ್ಥಿತಿಯಲ್ಲಿ ಮೃತಪಟ್ಟವರ ಶವಗಳ ವಿಲೇವಾರಿ ಹಾಗೂ ಅಂತ್ಯಕ್ರಿಯೆಗಳಿಗೆ ಸಂಬಂಧಿಸಿದಂತೆ ಪೊಲೀಸರೊಂದಿಗೆ ಸಹಕರಿಸುತ್ತಾರೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ನ ಸಹಯೋಗದೊಂದಿಗೆ ಬಡ ರೋಗಿಗಳಿಗೆ ವೈದ್ಯಕೀಯ ನೆರವು, ದಾನಿಗಳ ಮೂಲಕ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಹಾಗೂ ತುರ್ತು ಸಂದರ್ಭಗಳಲ್ಲಿ ಸಹಾಯ ಒದಗಿಸುವಂತಹ ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ಸೇವೆಗೆ ಸಂದ ಪ್ರಶಸ್ತಿಗಳು
ನಿತ್ಯಾನಂದ ಒಳಕಾಡು ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಕರ್ನಾಟಕ ಸರ್ಕಾರವು ಅವರಿಗೆ ‘ಜೀವನ ರಕ್ಷಕ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ. ಉಡುಪಿ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪಬ್ಲಿಕ್ ಟಿವಿಯ ‘ಪಬ್ಲಿಕ್ ಹೀರೋ’ ಪ್ರಶಸ್ತಿಗಳೂ ಸಂದಿವೆ. ಈ ಗೌರವಗಳು ಅವರ ನಿಸ್ವಾರ್ಥ ಸೇವೆಗೆ ಸಂದ ಮನ್ನಣೆಯಾಗಿವೆ.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಸೋಂಕಿತರು ಹಾಗೂ ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ಮೂಲಕ ತಮ್ಮ ಮಾನವೀಯ ಸೇವೆಯನ್ನು ಮುಂದುವರಿಸಿದ್ದಾರೆ. ಅಗತ್ಯವಿರುವವರಿಗೆ ಆ್ಯಂಬುಲೆನ್ಸ್ ಸೇವೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿ, ಕಷ್ಟದ ಸಮಯದಲ್ಲಿ ಜನರ ನೆರವಿಗೆ ನಿಂತಿದ್ದಾರೆ.

ದಾನಿಗಳ ನೆರವಿನಿಂದ ಆ್ಯಂಬುಲೆನ್ಸ್ ಸೇವೆ
ನಿರ್ಗತಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಿತ್ಯಾನಂದ ಒಳಕಾಡು ಅವರ ನೇತೃತ್ವದ ಸಮಿತಿಗೆ ದಾನಿಯೊಬ್ಬರು ಉಚಿತವಾಗಿ ಆ್ಯಂಬುಲೆನ್ಸ್ ಒದಗಿಸಿದ್ದಾರೆ. ಈ ಆ್ಯಂಬುಲೆನ್ಸ್ ಮೂಲಕ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರು, ದೂರದ ಊರುಗಳಿಂದ ಬಂದು ಸಂಕಷ್ಟಕ್ಕೆ ಸಿಲುಕಿದವರು, ಬಂಧುಬಳಗವನ್ನು ಕಳೆದುಕೊಂಡವರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ.
ಅಗತ್ಯವಿರುವವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸುವುದಷ್ಟೇ ಅಲ್ಲದೆ, ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುವವರೆಗೂ ವೈದ್ಯರನ್ನು ಸಂಪರ್ಕಿಸಿ ನೆರವಾಗುತ್ತಾರೆ. ಅಸಹಾಯಕರಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ದೊರಕಿಸುವ ನಿಟ್ಟಿನಲ್ಲಿ ಈ ಆ್ಯಂಬುಲೆನ್ಸ್ ಸೇವೆ ಮಹತ್ವದ ಪಾತ್ರ ವಹಿಸುತ್ತಿದೆ.
ಸಮಾಜಸೇವೆಗೆ ಖರ್ಚು ಭರಿಸುವವರು ಯಾರು?
ಇತ್ತೀಚೆಗೆ ನಿತ್ಯಾನಂದ ಒಳಕಾಡು ಅವರನ್ನು ಭೇಟಿಯಾಗಿ ಅವರ ಸಮಾಜಸೇವೆಯ ಕುರಿತು ವಿಚಾರಿಸಿದಾಗ, ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪ್ರಶ್ನೆ: ನೀವು ಎಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸಮಾಜಸೇವೆ ಮಾಡುತ್ತಿದ್ದೀರಿ? ನಿತ್ಯಾನಂದ ಒಳಕಾಡು: ಕಳೆದ 25 ವರ್ಷಗಳಿಂದ ನಿರಂತರವಾಗಿ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.
ಪ್ರಶ್ನೆ: ಈ ಸಮಾಜಸೇವೆಗೆ ತಗಲುವ ಖರ್ಚನ್ನು ಯಾರು ಭರಿಸುತ್ತಾರೆ? ನಿತ್ಯಾನಂದ ಒಳಕಾಡು: ಯಾರಾದರೂ ನನಗೆ ಕರೆ ಮಾಡಿ ಸಹಾಯ ಕೇಳಿದರೆ, ನಾನು ಸಾಧ್ಯವಾದಷ್ಟು ಬೇಗ ಸ್ಥಳಕ್ಕೆ ತೆರಳಿ ನೆರವಾಗುತ್ತೇನೆ. ನನ್ನ ಸೇವೆಗೆ ಯಾವುದೇ ಶುಲ್ಕ ಪಡೆಯುವುದಿಲ್ಲ. ಕೆಲವರು ನನ್ನ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಡುತ್ತಾರೆ. ಅದರಿಂದ ಪ್ರಯಾಣದ ಖರ್ಚಿಗೆ ಸ್ವಲ್ಪ ನೆರವಾಗುತ್ತದೆ.
ಉಡುಪಿಯಲ್ಲಿ ವಲಸೆ ಕಾರ್ಮಿಕರು ಮತ್ತು ನಿರ್ಗತಿಕರ ಸಂಖ್ಯೆ ಹೆಚ್ಚಾಗಿದೆ. ವಿವಿಧ ಕಾರಣಗಳಿಂದಾಗಿ ಇಂತಹವರು ಮೃತಪಟ್ಟಿರುವ ವಿಚಾರ ತಿಳಿದಾಗ, ಅವರಿಗೆ ವಾರಸುದಾರರು ಇಲ್ಲದಿದ್ದರೆ ಅಥವಾ ಅಂತ್ಯಸಂಸ್ಕಾರಕ್ಕೆ ಯಾರೂ ಮುಂದೆ ಬರದಿದ್ದರೆ, ನಾವು ಅಗತ್ಯ ಕ್ರಮಗಳನ್ನು ಕೈಗೊಂಡು ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದು ಅವರು ತಿಳಿಸಿದರು.

ಮಾನವೀಯತೆಯೇ ನಿಜವಾದ ಸಂಪತ್ತು
ಸೇವೆಯೇ ಜೀವನದ ಪರಮ ಗುರಿ ಎಂಬ ತತ್ವವನ್ನು ಮೈಗೂಡಿಸಿಕೊಂಡಿರುವ ನಿತ್ಯಾನಂದ ಒಳಕಾಡು ಅವರು, ತಮ್ಮ ನಿಸ್ವಾರ್ಥ ಕಾರ್ಯಗಳ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದ್ದಾರೆ. ಜಾತಿ, ಧರ್ಮ, ಭಾಷೆ ಹಾಗೂ ರಾಜ್ಯಗಳ ಗಡಿಗಳನ್ನು ಮೀರಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಅವರ ಸೇವಾ ಮನೋಭಾವನೆ ಎಲ್ಲರಿಗೂ ಮಾದರಿಯಾಗಿದೆ.
ಇಂತಹ ನಿಸ್ವಾರ್ಥ ಸಮಾಜಸೇವಕರ ಕಾರ್ಯಗಳನ್ನು ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಗುರುತಿಸಿ, ಸೂಕ್ತ ಗೌರವ ನೀಡುವಂತಾಗಲಿ ಎಂಬುದು ಆಶಯ. ಮಾನವೀಯತೆಯೇ ಬದುಕಿನ ನಿಜವಾದ ಸಂಪತ್ತು ಎಂಬುದನ್ನು ತಮ್ಮ ಸೇವೆಯ ಮೂಲಕ ತೋರಿಸಿಕೊಡುತ್ತಿರುವ ನಿತ್ಯಾನಂದ ಒಳಕಾಡು ಅವರ ಸಮಾಜಮುಖಿ ಕಾರ್ಯಗಳು ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ.



