ಚಿತ್ರ: ರಾಮದಾಸ್, ವರದಿ: ಇನ್ನಂಜೆ ಜಯರಾಮ್
ಕನ್ನಡತನ ನಮ್ಮ ಉಸಿರಾಗಬೇಕು: ನ್ಯಾಯವಾದಿ ಸುಧಾ ಸುಧಾಕರ್ ಜೋಶಿ “ನಾನು ಈ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ನಿಲ್ಲುವ ಬದಲು ಇದೇ ಕರ್ನಾಟಕ ಸಂಘದ ಓರ್ವ ಸದಸ್ಯೆಯಾಗಿ ನಿಲ್ಲಲು ಹೆಮ್ಮೆಪಡುತ್ತೇನೆ. ನಮ್ಮ ಉತ್ತರ ಕರ್ನಾಟಕದ ವಿಜಯಪುರ ಭಾಗದಲ್ಲಿ ಒಂದು ನಾಣ್ಣುಡಿಯಿದೆ—ಮನೆಯವರು ಮಗಳಿಗೆ ತವರುಮನೆಯಿಂದ ನೀಡುವ ಉಡುಗೊರೆ ಎಷ್ಟು ಶ್ರೇಷ್ಠವೋ, ಈ ಸಂಘವು ನನಗೆ ನೀಡಿರುವ ಗೌರವವೂ ತವರುಮನೆಯ ಪ್ರೀತಿಯ ಉಡುಗೊರೆಯಂತೆ ಭಾಸವಾಗುತ್ತಿದೆ” ಎಂದು ಸಂಘದ ಸನ್ಮಾನ ಸ್ವೀಕರಿಸಿ ಮುಖ್ಯ ಭಾಷಣ ಮಾಡಿದ ಪ್ರಸಿದ್ಧ ನ್ಯಾಯವಾದಿ ಶ್ರೀಮತಿ ಸುಧಾ ಸುಧಾಕರ್ ಜೋಶಿ ಭಾವನಾತ್ಮಕವಾಗಿ ನುಡಿದರು.

ಅವರು ನವೆಂಬರ್ 1ರಂದು ಮಹಾರಾಷ್ಟ್ರದ ಉಪನಗರ ಕಲ್ಯಾಣ ಪರಿಸರದ ಗಿರಿಜಾ ಪಯ್ಯಾಡೆ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಸಾಂಸ್ಕೃತಿಕ ಸಡಗರದಿಂದ ನೆರವೇರಿದ, ಕನ್ನಡ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕಂಪನ್ನು ನಿರಂತರವಾಗಿ ಪಸರಿಸುತ್ತಿರುವ ಹೆಮ್ಮೆಯ ಸಂಸ್ಥೆ ‘ಕರ್ನಾಟಕ ಸಂಘ ಕಲ್ಯಾಣ’ದ 24ನೇ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, “ಡಾ. ರಾಜ್‌ಕುಮಾರ್ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು’ ಎಂಬ ಅಮರ ಗೀತೆಯನ್ನು ಬಾಲ್ಯದಿಂದಲೂ ಗುನುಗುತ್ತಾ ಬೆಳೆದವರು ನಾವು. ಕಾವೇರಿಯ ಪವಿತ್ರ ಜಲದಿಂದ, ಬಸವೇಶ್ವರರ ಪಾದಸ್ಪರ್ಶದಿಂದ ಪುನೀತವಾದ ನೆಲ ನಮ್ಮ ಕರ್ನಾಟಕ. ಪಂಚನದಿಗಳ ತವರು ವಿಜಯಪುರ, ಪಂಪ, ರನ್ನ, ಕುವೆಂಪು, ದ.ರಾ. ಬೇಂದ್ರೆಯವರಂತಹ ಯುಗಪ್ರವರ್ತಕ ಕವಿಗಳು, ಇನ್ಫೋಸಿಸ್ ಸುಧಾಮೂರ್ತಿಯವರಂತಹ ಜಾಗತಿಕ ಸಾಧಕಿಯರು, ಅಸಂಖ್ಯಾತ ವಿಜ್ಞಾನಿಗಳು ಹಾಗೂ ಉದ್ಯಮಿಗಳನ್ನು ಈ ಕನ್ನಡ ಮಣ್ಣು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ವಿಶೇಷವಾಗಿ ಇಡೀ ಮುಂಬೈ ಮಹಾನಗರದ ಹಸಿವನ್ನು ನೀಗಿಸುವಲ್ಲಿ ನಮ್ಮ ಕರಾವಳಿಯ ಶೆಟ್ರುಗಳ ಹೋಟೆಲ್ ಉದ್ಯಮದ ಪಾತ್ರ ಅಗಾಧವಾದದ್ದು. ನಾವು ಉದ್ಯೋಗ, ವ್ಯಾಪಾರ, ನೌಕರಿಗಳಿಗಾಗಿ ಮುಂಬೈಗೆ ಬಂದು ನೆಲೆಸಿದರೂ ನಮ್ಮ ಕನ್ನಡತನ ಮತ್ತು ಭಾಷಾಭಿಮಾನವನ್ನು ಎಂದಿಗೂ ಮರೆತಿಲ್ಲ. ಪರಸ್ಥಳದಲ್ಲಿದ್ದರೂ ಇಷ್ಟೊಂದು ಸಮಯ, ಶ್ರಮ ಮೀಸಲಿಟ್ಟು ಕನ್ನಡ ಸಂಘವನ್ನು ಸಕ್ರಿಯವಾಗಿ ಮುನ್ನಡೆಸುತ್ತಿರುವ ಎಲ್ಲ ಪದಾಧಿಕಾರಿಗಳ ಕಾರ್ಯ ಅತ್ಯಂತ ಪ್ರಶಂಸನೀಯ” ಎಂದು ಯುವಪೀಳಿಗೆ ಮತ್ತು ಪೋಷಕರಿಗೆ ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳುವಂತೆ ಕರೆ ನೀಡಿದರು.

ಗೌರವ ಅತಿಥಿ ಸತ್ಯಧ್ಯಾನ ವಿದ್ಯಾಪೀಠದ ವಿದ್ವಾಂಸ ಪೂಜ್ಯ ಶ್ರೀ ರಾಮಕೃಷ್ಣ ಆಚಾರ್ ಆಶೀರ್ವಚನ ನೀಡಿ, “ನಮ್ಮ ಸಂಸ್ಕೃತಿ, ಧರ್ಮ, ಸಂಸ್ಕಾರ ಮತ್ತು ನಡವಳಿಕೆಗಳು ನಿಂತಿರುವುದೇ ಭಕ್ತಿಯೆಂಬ ಬೇರಿನ ಮೇಲೆ. ಆ ಬೇರನ್ನು ಕಡಿದರೆ ಬದುಕು ಬರಡಾಗುತ್ತದೆ. ದೈನಂದಿನ ಜೀವನದ ಪ್ರತಿಯೊಂದು ಕೆಲಸ-ಕಾರ್ಯಗಳು ಭಕ್ತಿಯ ತಳಹದಿಯಲ್ಲಿದ್ದರೆ ಇಡೀ ಜೀವನವೇ ಸಾಧನಮಯವಾಗುತ್ತದೆ. ಆಧುನಿಕರು ಭಕ್ತಿಯನ್ನು ಹೊಸದಾಗಿ ತಂದಿದ್ದಾರೆ ಎಂಬ ವಾದ ಸರಿಯಲ್ಲ; ಶ್ವೇತಾಶ್ವತರ ಉಪನಿಷತ್ತಿನ ಕಾಲದಿಂದಲೂ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರು ಸಾರಿದಂತೆ ಭಕ್ತಿಯೇ ಸಕಲ ಜ್ಞಾನ ಮತ್ತು ಅರ್ಥದ ಮೂಲವಾಗಿದೆ” ಎಂದು ಮಾರ್ಗದರ್ಶನ ಮಾಡಿದರು.

ಇನ್ನೋರ್ವ ಗೌರವ ಅತಿಥಿ ಶಹಾಡ್ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಶ್ರೀ ರಾಜೇಶ್ ಶೆಟ್ಟಿ ಮಾತನಾಡಿ, “ಕರ್ನಾಟಕ ಸಂಘ ಕಲ್ಯಾಣವು 24 ವರ್ಷಗಳ ನಿರಂತರ ಪಯಣ ಮುಗಿಸಿ ಬೆಳ್ಳಿಹಬ್ಬದ ಹೊಸ್ತಿಲಿಗೆ ಕಾಲಿಡುತ್ತಿರುವುದು ಹೆಮ್ಮೆಯ ಸಂಗತಿ. ಶಹಾಡ್ ಮೂಕಾಂಬಿಕಾ ಮಂದಿರದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಂಘದ ಹಿರಿಯರು ಸಕ್ರಿಯವಾಗಿ ಕೈಜೋಡಿಸುತ್ತಿರುವುದು ಶ್ಲಾಘನೀಯ” ಎಂದು ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಜಯಂತ್ ದೇಶ್ಮುಖ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ ಕಲ್ಯಾಣದ ಖ್ಯಾತ ನ್ಯಾಯವಾದಿ ಶ್ರೀಮತಿ ಸುಧಾ ಸುಧಾಕರ್ ಜೋಶಿ ಮುಖ್ಯ ಅತಿಥಿಯಾಗಿ, ಮುಲುಂಡಿನ ಸತ್ಯಧ್ಯಾನ ವಿದ್ಯಾಪೀಠದ ವಿದ್ವಾಂಸರಾದ ಪೂಜ್ಯ ಶ್ರೀ ರಾಮಕೃಷ್ಣ ಆಚಾರ್ ಹಾಗೂ ಶಹಾಡ್‌ನ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಶ್ರೀ ರಾಜೇಶ್ ಶೆಟ್ಟಿ ಗೌರವ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸಿ ವಿದ್ಯುಕ್ತ ಚಾಲನೆ ನೀಡಿದರು.
ಸಮಾರಂಭದ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಸಂಘದ ಹಿರಿಯ ಸದಸ್ಯರ ಆತ್ಮಕ್ಕೆ ಸಾಮೂಹಿಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕರ್ನಾಟಕ ಸಂಘ ಕನ್ನಡಿಗರ ತವರುಮನೆ: ಅಧ್ಯಕ್ಷ ಜಯಂತ್ ದೇಶ್ಮುಖ್ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಯಂತ್ ದೇಶ್ಮುಖ್, “ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ಕಲ್ಯಾಣದ ನೆಲದಲ್ಲಿ ಕರ್ನಾಟಕ ಸಂಘವು ಕನ್ನಡಿಗರಿಗೆ ಬರೀ ಸಂಸ್ಥೆಯಾಗಿರದೆ, ಮನೆಯಿಂದ ದೂರವಿರುವವರಿಗೆ ತವರುಮನೆಯ ಆಶ್ರಯ ತಾಣವಾಗಿದೆ (ಹೋಮ್ ಅವೇ ಫ್ರಮ್ ಹೋಮ್). ಕಳೆದ 24 ವರ್ಷಗಳಿಂದ ಸಂಘವು ನಿರಂತರವಾಗಿ ಸಾಂಸ್ಕೃತಿಕ ಹಬ್ಬಗಳು, ನೃತ್ಯ-ಸಂಗೀತ ಕಾರ್ಯಕ್ರಮಗಳು, ಸಮಾಜ ಸೇವೆ ಹಾಗೂ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳ ಕಿಟ್‌ಗಳನ್ನು ವಿತರಿಸುವ ಕಾರ್ಯಗಳ ಮೂಲಕ ಕನ್ನಡಿಗರನ್ನು ಒಗ್ಗೂಡಿಸುತ್ತಾ ಬಂದಿದೆ” ಎಂದರು.
ಸಂಘದ ಮಾಜಿ ಅಧ್ಯಕ್ಷ ಕೆ.ಎನ್. ಸತೀಶ್ ಅವರು ಮಾತನಾಡಿ, 9ನೇ ಶತಮಾನದ ಕವಿರಾಜಮಾರ್ಗದ ಕಾಲದಲ್ಲಿ ಕಾವೇರಿಯಿಂದ ಗೋದಾವರಿವರೆಗೂ ಹಬ್ಬಿದ್ದ ಕನ್ನಡ ಸಾಮ್ರಾಜ್ಯದ ಇತಿಹಾಸವನ್ನು ಮೆಲಕು ಹಾಕಿದರು. “ಹೈದರಾಲಿ-ಟಿಪ್ಪು ಸುಲ್ತಾನರ ಪತನಾನಂತರ ಬ್ರಿಟಿಷರ ಕಾಲದಲ್ಲಿ ಕನ್ನಡ ಮಾತನಾಡುವ ನೆಲವು ಮರಾಠರು, ನಿಜಾಮರು, ಮೈಸೂರು ಸಂಸ್ಥಾನ ಮತ್ತು ಬ್ರಿಟಿಷ್ ಕರಾವಳಿ ಭಾಗಗಳಾಗಿ ನಾಲ್ಕು ಹೋಳಾಯಿತು. ನಂತರ 1905ರಲ್ಲಿ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಆರಂಭವಾದ ಕರ್ನಾಟಕ ಏಕೀಕರಣ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು; ಬಳಿಕ 1973ರಲ್ಲಿ ಕರ್ನಾಟಕ ಎಂದು ನಾಮಕರಣಗೊಂಡಿತು. ಈ ಹಿನ್ನೆಲೆಯಲ್ಲಿ ನಾವು ರಾಜ್ಯೋತ್ಸವದ ಐತಿಹಾಸಿಕ ಮಹತ್ವವನ್ನು ಅರಿಯಬೇಕು” ಎಂದರು.
ಉಪಾಧ್ಯಕ್ಷೆ ಶ್ರೀಮತಿ ಜಯಂತಿ ಗೋಪಾಲ್ ಹೆಗಡೆ ಮಾತನಾಡಿ, “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ನವೆಂಬರ್ ಒಂದು ಎನ್ನುವುದು ಕೇವಲ ತೋರಿಕೆಯ ಹಬ್ಬವಲ್ಲ, ಅದು ಕನ್ನಡಿಗರ ಸ್ವಾಭಿಮಾನದ ಪ್ರತೀಕ. ನಮ್ಮ ಕರ್ನಾಟಕವು ಜ್ಞಾನದಲ್ಲಿ ಮುಂಚೂಣಿಯಲ್ಲಿರಬೇಕು, ಕೃಷಿಯಲ್ಲಿ ಸಮೃದ್ಧವಾಗಿರಬೇಕು, ಯುವಕರಿಗೆ ಉದ್ಯೋಗಾವಕಾಶಗಳು ಸಿಗಬೇಕು ಹಾಗೂ ಶಿಕ್ಷಣ ಎಲ್ಲರಿಗೂ ಸಮಾನವಾಗಿ ದೊರೆಯಬೇಕು. ರೈತರು ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಆದ್ದರಿಂದ ಅನ್ನದಾತರಿಗೆ ಸೂಕ್ತ ಬೆಳೆವಿಮೆ, ನೀರಾವರಿ ಸೌಲಭ್ಯ ಹಾಗೂ ಬೆಂಬಲ ಬೆಲೆ ಒದಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
‘ಕಲ್ಯಾಣ ಕನ್ನಡಿಗ’ ಪ್ರಶಸ್ತಿ ಹಾಗೂ ಸನ್ಮಾನ: ವಿವಿಧ ರಂಗಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಸಮಾಜದ ಗಣ್ಯರಿಗೆ ಪ್ರತಿಷ್ಠಿತ ‘ಕಲ್ಯಾಣ ಕನ್ನಡಿಗ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು:

- ಸಮಾಜ ಸೇವಾ ಕ್ಷೇತ್ರ: ಶಹಾಡ್ ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಅಧ್ಯಕ್ಷ ಶ್ರೀ ಕರುಣಾಕರ್ ಶೆಟ್ಟಿ.

- ಸಾಂಸ್ಕೃತಿಕ ಹಾಗೂ ಮನರಂಜನಾ ಕ್ಷೇತ್ರ: ಸಮಾಜ ಸೇವಕಿ ಹಾಗೂ ಕಲಾವಿದೆ ಶ್ರೀಮತಿ ವಸಂತ ಚಂದ್ರಶೇಖರ್.

- ಆತಿಥ್ಯ ಮತ್ತು ಉದ್ಯಮ ಕ್ಷೇತ್ರ: ಕಲ್ಯಾಣದ ಹೋಟೆಲ್ ಸಾಯಿ ಸಾಗರ್‌ನ ಮಾಲೀಕರಾದ ಶ್ರೀ ನಾಗರಾಜ್ ಶೆಟ್ಟಿ ದಂಪತಿ.

- ಸಂಸ್ಥಾ ಸೇವೆ: ಸಂಘದ ಪ್ರಾಮಾಣಿಕತೆ ಹಾಗೂ ನಗುಮುಖದ ಅವಿರತ ಸೇವೆಗಾಗಿ ಕೋಶಾಧ್ಯಕ್ಷ ಶ್ರೀ ಗಣೇಶ್ ನಾಮದೇವ್ ಪೈ ದಂಪತಿ.
ಸನ್ಮಾನಿತರನ್ನು ಯುವ ವಿಭಾಗದ ಅಧ್ಯಕ್ಷೆ ಶ್ರೀಮತಿ ಪ್ರಸನ್ನ ಹೆಗಡೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಇಂದಿರಾ ಕುಲ್ಕರ್ಣಿ ಹಾಗೂ ಶ್ರೀ ಗಣೇಶ್ ಪೈ ಸಭೆಗೆ ಪರಿಚಯಿಸಿದರು.
ಇದೇ ಸುಸಂದರ್ಭದಲ್ಲಿ ಸಂಘದ ವತಿಯಿಂದ ಪ್ರಕಟಿಸಲಾದ ‘ವಾರ್ಷಿಕ ಸ್ಮರಣಿಕೆ-2026’ ವಿಶೇಷ ಸಂಚಿಕೆಯನ್ನು ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರು ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು.
ಸಂಘದ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದ ಪ್ರಧಾನ ಕಾರ್ಯದರ್ಶಿ ವಿಜಯ್ ಹುಣಸ್ವಾಡ್ಕರ್, “ನಮ್ಮ ಮುಂದಿನ ಯುವಪೀಳಿಗೆ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು” ಎಂದರು. ಜತೆಗೆ ಸಂಘದ ಎಜುಕೇಷನ್ ಫಂಡ್, ಮೆಡಿಕಲ್ ಫಂಡ್ ಹಾಗೂ ಪೂಜಾ ನಿಧಿಗೆ ಬೆನ್ನೆಲುಬಾಗಿ ನಿಂತಿರುವ ಎಲ್ಲಾ ದಾನಿಗಳು ಮತ್ತು ಪ್ರಾಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸಂಘದ ಹಿರಿಯ ಸಲಹೆಗಾರರಾದ ಶ್ರೀ ಭಾಸ್ಕರ್ ಶೆಟ್ಟಿ, ಶ್ರೀ ರಮೇಶ್ ಟಿ. ಶೆಟ್ಟಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವೀಣಾ ಮಾರುತಿ ಕಾಮತ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಂಘದ ಸದಸ್ಯರ ಮಕ್ಕಳಿಂದ ಹಾಗೂ ಕಲ್ಯಾಣ ಪರಿಸರದ ವಿವಿಧ ಸಂಸ್ಥೆಗಳ ಕಲಾವಿದರಿಂದ ಆಕರ್ಷಕ ಸಾಂಸ್ಕೃತಿಕ ನೃತ್ಯ, ನಾಟಕ ಮತ್ತು ಗಾಯನ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡವು. ಸಂಘವು ಈ ಹಿಂದೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶ್ರೀಮತಿ ವೀಣಾ ನಾಯಕ್ ಸಮಗ್ರ ಸಭಾ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಮತಿ ವೀಣಾ ಕಾಮತ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಶ್ರೀಮತಿ ಪ್ರಸನ್ನ ಹೆಗಡೆ, ಶ್ರೀಮತಿ ಆಶಾ ನಾಯಕ್ ಮತ್ತು ಶ್ರೀಮತಿ ವೀಣಾ ನಾಯಕ್ ಅತಿಥಿ ಗಣ್ಯರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ವಿಜಯ್ ಹುಣಸ್ವಾಡ್ಕರ್ ವಂದನಾರ್ಪಣೆ ಮಾಡಿದರು.



