ವಿಶ್ವ :
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಇರಾನ್ ಮೇಲಿನ ಅಮೆರಿಕದ ಭೀಕರ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇರಾನ್ ಬೆಂಬಲಿತ ಸಂಘಟನೆಗಳು ಬಹ್ರೇನ್ ಮತ್ತು ಕುವೈತ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳ ಸುರಿಮಳೆಗೈದಿವೆ ಎಂದು ವರದಿಯಾಗಿದೆ. ಅಮೆರಿಕದ ದಿಗ್ಬಂಧನಕ್ಕೆ ತೀವ್ರ ತಿರುಗೇಟು ನೀಡಿರುವ ಇರಾನ್, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬಂದ್ ಮಾಡುವುದಾಗಿ ಎಚ್ಚರಿಸಿದೆ. ಇದೇ ವೇಳೆ ಇರಾನ್ ಬೆಂಬಲಿತ ಇರಾಕಿ ಉಗ್ರಗಾಮಿ ಸಂಘಟನೆಯೊಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದು, ಟೆಹ್ರಾನ್‌ನಲ್ಲಿ ಟ್ರಂಪ್ ಶವಪೆಟ್ಟಿಗೆಯಲ್ಲಿ ಮಲಗಿರುವ ಚಿತ್ರವಿರುವ ಬೃಹತ್ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿದೆ. ಬ್ರಿಟನ್ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಕೀರ್ ಸ್ಟಾರ್ಮರ್ ಅವರ ರಾಜೀನಾಮೆ ಬೆನ್ನಲ್ಲೇ ಆಂಡಿ ಬರ್ನ್‌ಹ್ಯಾಮ್ ಅವರು ಯುಕೆಯ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ 5,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಅಲ್ಲಿನ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ತಿಳಿಸಿದ್ದು, ಮೆಕ್ಸಿಕೋ ಮತ್ತು ಗ್ವಾಟೆಮಾಲಾ ಗಡಿಯಲ್ಲೂ 7.3 ತೀವ್ರತೆಯ ಪ್ರಬಲ ಭೂಕಂಪ ದಾಖಲಾಗಿ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಯುರೋಪ್ ಖಂಡದಲ್ಲಿ ಬಿಸಿಗಾಳಿಯ (ಹೀಟ್‌ವೇವ್) ತೀವ್ರತೆ ಹೆಚ್ಚಾಗಿದ್ದು, ಕನಿಷ್ಠ 12,000 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಆತಂಕ ವ್ಯಕ್ತಪಡಿಸಿವೆ.
ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ತಾಯ್ನಾಡಿಗೆ ಮರಳುವ ಯೋಜನೆಯ ಬಗ್ಗೆ ಪ್ರಸ್ತುತ ಸರ್ಕಾರ ಕಠಿಣ ಎಚ್ಚರಿಕೆ ನೀಡಿದ್ದು, ಮೊದಲು ಅವರು ವಾಪಸ್ ಬರಲಿ, ನಂತರ ಅವರ ಗಲ್ಲು ಶಿಕ್ಷೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಫಿಫಾ ಗೋಲ್ಡನ್ ಬೂಟ್ ರೇಸ್‌ನಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಎಂಬಾಪೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಗೋಲು ಹಾಗೂ ಅಸಿಸ್ಟ್‌ಗಳು ಸಮನಾದರೆ ವಿಜೇತರನ್ನು ನಿರ್ಧರಿಸುವ ಫಿಫಾದ ಹೊಸ ನಿಯಮಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಜಾಗತಿಕ ತಾಪಮಾನ ನಿಯಂತ್ರಿಸಲು ಮತ್ತು ಎಲ್ ನಿನೋ ಪರಿಣಾಮ ತಡೆಯಲು ವಿಜ್ಞಾನಿಗಳು ಕೈಗೊಂಡಿರುವ ‘ಕ್ಲೌಡ್ ಹ್ಯಾಕಿಂಗ್’ ಪ್ರಯೋಗಗಳು ಜಾಗತಿಕವಾಗಿ ಭಾರಿ ಕುತೂಹಲ ಮೂಡಿಸಿವೆ.
ದೇಶ :
ನಾಳೆಯಿಂದ ಅಂದರೆ ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಉಭಯ ಸದನಗಳ ಸುಗಮ ಕಾರ್ಯನಿರ್ವಹಣೆಗೆ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲು ಕೇಂದ್ರ ಸರ್ಕಾರ ಇಂದು ಮಹತ್ವದ ಸರ್ವಪಕ್ಷ ಸಭೆಯನ್ನು ಕರೆದಿದೆ. ಆಗಸ್ಟ್ 13ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಹಲವು ಪ್ರಮುಖ ಮಸೂದೆಗಳನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲು ಸರ್ಕಾರ ಉದ್ದೇಶಿಸಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ಜುಲೈ 25 ರವರೆಗೆ ಮೊಲ್ಡೊವಾ, ಉತ್ತರ ಮ್ಯಾಸಿಡೋನಿಯಾ ಮತ್ತು ರೊಮೇನಿಯಾ ದೇಶಗಳಿಗೆ ಅಧಿಕೃತ ಭೇಟಿ ನೀಡಲು ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 21 ದಿನಗಳಿಂದ ಲಡಾಖ್‌ನ ಹಕ್ಕುಗಳಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಕ್ಷೀಣಿಸಿದ್ದು, ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಬರುವ ಸಂಸತ್ ಅಧಿವೇಶನ ಮತ್ತು ವಿವಿಧ ಸಂಘಟನೆಗಳ ಪ್ರತಿಭಟನಾ ರ್ಯಾಲಿಯ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಯಲ್ಲಿದ್ದರೂ ವಾಂಗ್ಚುಕ್ ಅವರು ಚಿಕಿತ್ಸೆ ಮತ್ತು ಗ್ಲೂಕೋಸ್ ಪಡೆಯಲು ನಿರಾಕರಿಸಿದ್ದು, ಉಪವಾಸ ಮುಂದುವರಿಸಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭಾರತ ಮತ್ತು ಎಸ್ಟೋನಿಯಾ ದೇಶಗಳ ನಡುವೆ ಆರ್ಥಿಕ ಹಾಗೂ ವ್ಯಾಪಾರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಭಾರತದ ಬಾಹ್ಯಾಕಾಶ ರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದ್ದು, ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ ಯಶಸ್ವಿಯಾಗಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಉತ್ತರ ಭಾರತದ ಉತ್ತರಾಖಂಡ, ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಕರ್ನಾಟಕ :
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ವಿಧಿವಶರಾಗಿದ್ದು, ಸೋಮವಾರ ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕಾತಿ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಲಭ್ಯವಿರುವ 20 ಸ್ಥಾನಗಳಿಗಾಗಿ ಸುಮಾರು 40 ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದಾರೆ; ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಭಾನುವಾರ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳ ನಿಗದಿ ವಿಚಾರದಲ್ಲಿ ಚರ್ಚೆ ಮುಂದುವರಿದಿದ್ದು, ತುಮಕೂರಿಗೆ ವಿಮಾನ ನಿಲ್ದಾಣ ಬಂದರೆ ೧೮ ರಿಂದ ೨೦ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಇತ್ತ, ಕನಕಪುರದಲ್ಲಿ ವಿಮಾನ ನಿಲ್ದಾಣ ಬೇಡ ಎಂದು ಬಿ.ವೈ. ವಿಜಯೇಂದ್ರ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಬಿಡದಿ ಸ್ಮಾರ್ಟ್ ಸಿಟಿ ಟೌನ್‌ಶಿಪ್ ಯೋಜನೆ ತೀವ್ರ ವಿವಾದಕ್ಕೀಡಾಗಿದ್ದು, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೇರಿದ ಜಮೀನಿಗೂ ಸರ್ಕಾರ ಅಧಿಸೂಚನೆ ಹೊರಡಿಸಿದೆ; ಯೋಜನೆ ವಿರೋಧಿಸಿ ರೈತರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನಮ್ಮ ಮೆಟ್ರೋ ರೈಲುಗಳಲ್ಲಿ ರೀಲ್ಸ್ ಮಾಡುವುದು, ಜೋರಾಗಿ ಹಾಡು ಹಾಕುವುದು ಹಾಗೂ ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರಿಗೆ ೨೫೦೦ ರಿಂದ ೧೦,೦೦೦ ರೂಪಾಯಿವರೆಗೆ ಮತ್ತು ಗಂಭೀರ ಪ್ರಕರಣಗಳಲ್ಲಿ ೨೫,೦೦೦ ರೂಪಾಯಿವರೆಗೆ ದಂಡ ವಿಧಿಸಲು ಬಿಎಂಆರ್‌ಸಿಎಲ್ ಕಠಿಣ ಕ್ರಮ ಕೈಗೊಂಡಿದೆ.
ಬೆಂಗಳೂರು ನಗರದಾದ್ಯಂತ ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿರುವ ೪೨೪೯ಕ್ಕೂ ಹೆಚ್ಚು ಅನಾಥ ಹಾಗೂ ಬಿಡಾಡಿ ವಾಹನಗಳನ್ನು ತೆರವುಗೊಳಿಸುವ ಟೋಯಿಂಗ್ ಕಾರ್ಯಾಚರಣೆಗೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಇತ್ತೀಚೆಗೆ ಪ್ರಕಟವಾದ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಚಿತ್ರವು ಅತ್ಯುತ್ತಮ ಕನ್ನಡ ಸಿನಿಮಾ ಸೇರಿದಂತೆ ೩ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ತುಳು ಭಾಷೆಯ ‘ಇಂಬು’ ಚಿತ್ರವೂ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದೆ.
೨೦೨೬ರ ನೀಟ್ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ; ಎಂಟು ಮಂದಿ ವಿದ್ಯಾರ್ಥಿಗಳು ೬೯೦ಕ್ಕೂ ಹೆಚ್ಚು ಅಂಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ದೆಹಲಿಯಲ್ಲಿ ನಡೆದ ‘ರಾಮಾಯಣ’ ಚಿತ್ರದ ವಿಶೇಷ ಕಾರ್ಯಕ್ರಮದಲ್ಲಿ ನಟ ಯಶ್ ಅವರು ಕನ್ನಡದಲ್ಲಿಯೇ ಮಾತು ಆರಂಭಿಸುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮುಂಬೈ :
ಮುಂಬೈ ನಗರ ಮತ್ತು ನೆರೆಯ ಥಾಣೆ ಜಿಲ್ಲೆಯಲ್ಲಿ ಶನಿವಾರ ಸಂಜೆಯಿಂದ ಭಾರಿ ಮಳೆ ಮುಂದುವರಿದಿದ್ದು, ಕೇವಲ ಎರಡು ಗಂಟೆಗಳ ಅವಧಿಯಲ್ಲಿ 30 ಮಿಲಿಮೀಟರ್‌ಗಿಂತಲೂ ಅಧಿಕ ಮಳೆಯಾಗಿದೆ. ಮಳೆಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು (IMD) ಮುಂಬೈ ಮತ್ತು ಥಾಣೆ ಪ್ರದೇಶಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಮುಂದಿನ ಜುಲೈ 22 ರವರೆಗೆ ಮುಂಬೈನಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ನಾಗರಿಕರಿಗೆ ಇಲಾಖೆ ಸೂಚನೆ ನೀಡಿದೆ.
ಮುಂಬೈನ ಪ್ರಮುಖ ಉಪನಗರವಾದ ಚೆಂಬೂರಿನಲ್ಲಿ ಭೀಕರ ರಾಸಾಯನಿಕ ಟ್ಯಾಂಕರ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ವೈದ್ಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆಯ ಕೌನ್ಸಿಲರ್ ಮ್ಹಾತ್ರೆ ಅವರಿಗೆ ನೀಡಲಾಗಿದ್ದ ಜಾಮೀನನ್ನು ಬಾಂಬೆ ಹೈಕೋರ್ಟ್ ಇಂದು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ರೈಲ್ವೆ ಅಪಘಾತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದ್ದು, ಚಲಿಸುವ ರೈಲಿನಿಂದ ಬಿದ್ದು ಮೃತಪಟ್ಟ ವ್ಯಕ್ತಿಯ ಬಳಿ ಟಿಕೆಟ್ ಇಲ್ಲದಿದ್ದ ಮಾತ್ರಕ್ಕೆ ಆತನನ್ನು ‘ಟಿಕೆಟ್ ರಹಿತ ಪ್ರಯಾಣಿಕ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಕೋಟ್ಯಂತರ ರೂಪಾಯಿ ಮೊತ್ತದ ಮಿಥಿ ನದಿ ಹೂಳು ತೆಗೆಯುವ ಹಗರಣದ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಸೂಕ್ತ ಮೇಲ್ನೋಟದ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಗುತ್ತಿಗೆದಾರನಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಉಪನಗರಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ವಂಚನೆ ಪ್ರಕರಣಗಳಿಗೆ ಸಾಕ್ಷಿ ಎಂಬಂತೆ, ನವಿ ಮುಂಬೈನ ಪ್ರಮುಖ ಜ್ಯುವೆಲ್ಲರಿ ಸಂಸ್ಥೆಯೊಂದಕ್ಕೆ ವಾಟ್ಸಾಪ್ ವಂಚನೆ ಜಾಲದ ಮೂಲಕ ಬರೋಬ್ಬರಿ 10.7 ಕೋಟಿ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಮುಂಬೈ ಮಹಾನಗರ ಪಾಲಿಕೆಯು (BMC) ಮುಂಬರುವ ದಿನಗಳಲ್ಲಿ ರಸ್ತೆಬದಿಯ ಮರಗಳ ವೈಜ್ಞಾನಿಕ ಸಮೀಕ್ಷೆ ನಡೆಸಲು ಉದ್ದೇಶಿಸಿದ್ದು, ಅಪಾಯಕಾರಿ ಮರಗಳ ವರ್ಗೀಕರಣ ಮತ್ತು ಅವುಗಳ ಆರೋಗ್ಯ ಸ್ಥಿತಿಯ ದತ್ತಾಂಶವನ್ನು ಸಿದ್ಧಪಡಿಸಲು ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ.
ಇತ್ತೀಚೆಗೆ ಕರಾವಳಿ ರಸ್ತೆಯ ಸುರಂಗ ಮಾರ್ಗದಲ್ಲಿ ಸಂಭವಿಸಿದ ಅಗ್ನಿ ಅವಘಡದ ಹಿನ್ನೆಲೆಯಲ್ಲಿ, ಸುರಕ್ಷತೆಗಾಗಿ ವಿಶೇಷ ಜಾಗೃತಿ ಅಭಿಯಾನ ಹಾಗೂ ಮಾಕ್ ಡ್ರಿಲ್‌ಗಳನ್ನು ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಉಡುಪಿ :
ಉಡುಪಿ ಜಿಲ್ಲೆ ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ದಾಖಲೆಯ 88.9 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇದರಲ್ಲಿ ಕಾಪು ತಾಲೂಕಿನಲ್ಲಿ ಗರಿಷ್ಠ 119.7 ಮಿಲಿ ಮೀಟರ್ ಮಳೆಯಾಗಿದ್ದು, ಬೈಂದೂರು ಹಾಗೂ ಕುಂದಾಪುರ ಭಾಗದಲ್ಲೂ ಭಾರಿ ಮಳೆಯಾಗಿದೆ. ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಜಾಗರೂಕರಾಗಿರಲು ಸೂಚಿಸಿದೆ.
ಉಡುಪಿಯ ಕಾರ್ಕಳದಲ್ಲಿ ಪ್ರಸಿದ್ಧ ದೇವಸ್ಥಾನವೊಂದರ ಚೆಕ್ ಬೂಟಾಟಿಕೆ ಮಾಡಿ ನಕಲಿ ಸಹಿ ಹಾಕಿ ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇಟಾ ಎಂಟ್ರಿ ಆಪರೇಟರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಟ್ಕಾ ದಂಧೆಯ ಪ್ರಮುಖ ಆರೋಪಿಯಾದ ರಾಮರಾಜ್ ಅಲಿಯಾಸ್ ರಮೇಶ್ ಅರಸ್ ಎಂಬಾತನನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕುಂದಾಪುರ ತಾಲೂಕಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿರುವ ದುರದೃಷ್ಟಕರ ಘಟನೆ ನಡೆದಿದೆ.
ಕಟಪಾಡಿ ಪರಿಸರದಲ್ಲಿ ತಡರಾತ್ರಿ ಹಟ್ಟಿಗೆ ನುಗ್ಗಿದ ಬೀದಿನಾಯಿಗಳ ಹಿಂಡು 5 ಆಡುಗಳನ್ನು ಭೀಕರವಾಗಿ ಕಚ್ಚಿ ಕೊಂದಿರುವ ಘಟನೆ ನಡೆದಿದ್ದು, ಸ್ಥಳೀಯ ರೈತರು ಆತಂಕಗೊಂಡಿದ್ದಾರೆ.
ಬೈಂದೂರು ವಲಯದಲ್ಲಿ ಯುವಕರಿಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗಗಳಾದ ಸುಮಾರು 15ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿರುವ ಹಳ್ಳಿಯೊಂದರಲ್ಲಿ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್‌ನಂತಹ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಜಿಲ್ಲಾಡಳಿತ ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.
ಆನ್‌ಲೈನ್ ಹೂಡಿಕೆ ಹಾಗೂ ಫೇಸ್‌ಬುಕ್ ವಂಚನೆ ಜಾಲಕ್ಕೆ ಬಿದ್ದು ಉಡುಪಿಯ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ :
ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವುದರಿಂದ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.
ಬಂಟ್ವಾಳ ತಾಲೂಕಿನ ಬಿಸಿ ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದ ಯುವತಿ ಲಾವಣ್ಯ ಎಂಬಾಕೆಯ ಭೀಕರ ಕೊಲೆ ಪ್ರಕರಣ ಇಡೀ ಕರಾವಳಿಯನ್ನು ಬೆಚ್ಚಿಬೀಳಿಸಿದೆ. ಕೊಲೆಗಡುಕ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತ ಇಲಿ ಪಾಷಣ ಸೇವಿಸಿದ್ದರಿಂದ ಪ್ರಸ್ತುತ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸಾಪ್ ಗ್ರೂಪ್‌ಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಚೋದನಾತ್ಮಕ ಪೋಸ್ಟ್‌ಗಳು ಹಾಗೂ ವಿಡಿಯೋ ಎಡಿಟ್ ಮಾಡಿ ಹಂಚಿಕೊಳ್ಳುವವರ ವಿರುದ್ಧ ಮಂಗಳೂರು ಮತ್ತು ಬಂಟ್ವಾಳ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಈಗಾಗಲೇ ಹಲವರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ನವಸಹಜ ಸಮುದಾಯ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಮಿನಿ ವಿಧಾನಸೌಧದ ಬಳಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ. ಮಂಗಳೂರಿನ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ತನ್ನ ಕೆನರಾ ಕಲ್ಚರಲ್ ಅಕಾಡೆಮಿ ಮೂಲಕ ಇತಿಹಾಸ ಪ್ರಸಿದ್ಧ ‘ಮಂಗಳೂರು ಮಿತ್ರ ಮಂಡಳಿ 2.0’ ಸಾಹಿತ್ಯ ವೇದಿಕೆಯನ್ನು ಅಧಿಕೃತವಾಗಿ ಪುನಾರಂಭಿಸಿದ್ದು, ಹೊಸ ತಲೆಮಾರಿನ ಕನ್ನಡ ಬರಹಗಾರರನ್ನು ಉತ್ತೇಜಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.





