
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೆ ನಿಲ್ದಾಣವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ ಭಾರತ ಸ್ಟೇಷನ್ ಯೋಜನೆ (ಎಬಿಎಸ್ಎಸ್) ಅಡಿಯಲ್ಲಿ ಸಂಪೂರ್ಣವಾಗಿ ನವೀಕರಣಗೊಂಡಿದ್ದು, ಜುಲೈ 17 ರಂದು ಉದ್ಘಾಟನೆಗೊಳ್ಳಲು ಸಿದ್ಧವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಇತರ 74 ರೈಲ್ವೆ ನಿಲ್ದಾಣಗಳೊಂದಿಗೆ ಬಂಟ್ವಾಳ ನಿಲ್ದಾಣವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಂಟಿಯಾಗಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಸುಮಾರು 26.18 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬೃಹತ್ ಮರುಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಆರಂಭದಲ್ಲಿ ಕೆಲ ವಿಳಂಬ ಎದುರಿಸಿದರೂ 2025 ರ ಫೆಬ್ರವರಿಯಿಂದ ಕಾಮಗಾರಿಯು ತೀವ್ರ ವೇಗವನ್ನು ಪಡೆದುಕೊಂಡು ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ಆಧುನೀಕರಣ ಯೋಜನೆಯಲ್ಲಿ ಪ್ರಯಾಣಿಕರ ಸುರಕ್ಷತೆ, ಸೌಕರ್ಯ ಮತ್ತು ಸುಲಭ ಸಂಚಾರಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಿಲ್ದಾಣದ ಪ್ಲಾಟ್ಫಾರ್ಮ್ 1 ಮತ್ತು ಪ್ಲಾಟ್ಫಾರ್ಮ್ 2 ಎರಡರಲ್ಲೂ ತಲಾ 400 ಮೀಟರ್ ಉದ್ದದ ಪೂರ್ಣ ಪ್ರಮಾಣದ ಅತ್ಯಾಧುನಿಕ ಮೇಲ್ಛಾವಣಿ (ಶೆಲ್ಟರ್) ಅಳವಡಿಸಲಾಗಿದ್ದು, ಪ್ರಯಾಣಿಕರ ಸುಗಮ ನಡಿಗೆಗಾಗಿ ಪ್ಲಾಟ್ಫಾರ್ಮ್ ಮೇಲ್ಮೈಯನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡಲಾಗಿದೆ. ನಿಲ್ದಾಣದ ಮುಂಭಾಗದ ವಿಸ್ತೀರ್ಣವನ್ನು ಗರಿಷ್ಠ ಮಟ್ಟದಲ್ಲಿ ನವೀಕರಿಸಲಾಗಿದ್ದು, ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ವಾಹನಗಳನ್ನು ಹತ್ತಿಸಲು ಹಾಗೂ ಇಳಿಸಲು ಪ್ರತ್ಯೇಕ ವಲಯಗಳನ್ನು (ಡ್ರಾಪ್-ಆಫ್ ಮತ್ತು ಪಿಕ್-ಅಪ್ ಝೋನ್) ನಿರ್ಮಿಸಲಾಗಿದೆ.
ನಿಲ್ದಾಣದ ಒಳಾಂಗಣ ವಿನ್ಯಾಸದಲ್ಲೂ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು, ವಿಶಾಲವಾದ ಕಾಯುವಿಕೆ ಕೊಠಡಿಗಳು, ಆಧುನಿಕ ಟಿಕೆಟ್ ಬುಕಿಂಗ್ ಕೌಂಟರ್ಗಳು, ಆರಾಮದಾಯಕ ಆಸನ ವ್ಯವಸ್ಥೆಗಳು ಹಾಗೂ ಸುಂದರವಾದ ಲ್ಯಾಂಡ್ಸ್ಕೇಪಿಂಗ್ ನಿರ್ಮಿಸಲಾಗಿದೆ. ಇಡೀ ನಿಲ್ದಾಣಕ್ಕೆ ಆಕರ್ಷಕ ಲುಕ್ ನೀಡಲು ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕಲಾಕೃತಿಗಳನ್ನು ನಿಲ್ದಾಣದ ಮುಂಭಾಗದ ಗೋಡೆಗಳ ಮೇಲೆ ಬಿಡಿಸಲಾಗಿದ್ದು, ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಆಕರ್ಷಕ ಕಮಾನುಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಇಂಧನ ದಕ್ಷತೆಯ ಎಲ್ಇಡಿ ಲೈಟಿಂಗ್ ವ್ಯವಸ್ಥೆ, ಎಲ್ಇಡಿ ನಾಮಫಲಕಗಳು, ಸುಧಾರಿತ ಕೋಚ್ ಇಂಡಿಕೇಷನ್ ಬೋರ್ಡ್ಗಳು ಮತ್ತು ರೈಲು ಮಾಹಿತಿ ಪ್ರದರ್ಶಕ ಫಲಕಗಳನ್ನು ಅಳವಡಿಸುವ ಮೂಲಕ ಇಡೀ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಸಂಪೂರ್ಣ ಹೈಟೆಕ್ ರೂಪ ನೀಡಲಾಗಿದೆ.





