ಪುಣೆ: ಪುಣೆಯ ಕನ್ನಡಿಗರು ಹಾಗೂ ಯಕ್ಷಗಾನ ಕಲಾಭಿಮಾನಿಗಳಿಗೆ ಸಾಂಸ್ಕೃತಿಕ ರಸದೌತಣ ನೀಡುವ ‘ಶ್ರೀ ರಾಘವೇಂದ್ರ ಮಹಿಮೆ’ ಪೌರಾಣಿಕ ಯಕ್ಷಗಾನ ಪ್ರದರ್ಶನವು ಆ. 21ರಂದು ಸಂಜೆ 5 ಗಂಟೆಗೆ ಗಣೇಶ್ ನಗರದಲ್ಲಿರುವ ‘ಕನ್ನಡ ಸಂಘ ಪುಣೆ’ಯ ಶಕುಂತಲಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ ವೈಭವದಿಂದ ನಡೆಯಲಿದೆ.
ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಪೂರ್ಣಾನುಗ್ರಹದೊಂದಿಗೆ ಆಯೋಜಿಸಲಾಗುತ್ತಿರುವ ಈ ಯಕ್ಷಗಾನ ಪ್ರಸಂಗವನ್ನು ಶಾಂತರಾಮ ಶೆಟ್ಟಿ ನಂದ್ರೋಳ್ಳಿ ಅವರು ವಿರಚಿಸಿದ್ದಾರೆ. ಸ್ಪಂದನ ಸೇವಾ ಸಂಸ್ಥೆ ಬೆಂಗಳೂರು ಹಾಗೂ ವೆಂಕಟೇಶ ಪೈ ಅವರ ಸಹಕಾರದೊಂದಿಗೆ ಹೊಸಪಟ್ಟಣ ಯಕ್ಷಗಾನ ಕಲಾಮಂಡಳಿ ಹೊನ್ನಾವರದ ಪ್ರಬುದ್ಧ ಕಲಾವಿದರು ಈ ಅಪೂರ್ವ ಪ್ರಸಂಗವನ್ನು ಪ್ರಸ್ತುತಪಡಿಸಲಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ‘ಶ್ರೀ ರಾಘವೇಂದ್ರ ಮಹಿಮೆ’ ಯಕ್ಷಗಾನದ ಪ್ರಥಮ ಪ್ರದರ್ಶನ ಇದಾಗಿರುವುದರಿಂದ ಕಾರ್ಯಕ್ರಮವು ವಿಶೇಷ ಮಹತ್ವ ಪಡೆದುಕೊಂಡಿದೆ.
ಯಕ್ಷಗಾನವು ಕರಾವಳಿ ಕರ್ನಾಟಕದ ಶ್ರೀಮಂತ ಜನಪದ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದು, ಪೌರಾಣಿಕ ಕಥಾನಕಗಳ ಮೂಲಕ ಧಾರ್ಮಿಕ, ನೈತಿಕ ಹಾಗೂ ಜೀವನ ಮೌಲ್ಯಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ಸಾರುತ್ತದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಆಧರಿಸಿರುವ ಈ ಯಕ್ಷಗಾನ ಪ್ರಸಂಗವು ಭಕ್ತಿ, ಆಧ್ಯಾತ್ಮಿಕತೆ, ಕಲಾ ವೈಭವ ಹಾಗೂ ಮನರಂಜನೆಯ ಸೊಗಡನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಲಿದೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪುಣೆಯ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಗಣ್ಯರು, ಉದ್ಯಮಿಗಳು, ಸಮಾಜ ಸೇವಕರು, ಕಲಾ ಪೋಷಕರು ಹಾಗೂ ಯಕ್ಷಗಾನಾಭಿಮಾನಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪುಣೆಯ ಹೆಸರಾಂತ ಕೈಗಾರಿಕೋದ್ಯಮಿ, ಕನ್ನಡ ಸಂಘ ಪುಣೆಯ ಅಧ್ಯಕ್ಷ ಹಾಗೂ ಸಮಾಜ ಸೇವಕ ಕುಶಲ್ ಎಸ್. ಹೆಗ್ಡೆ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುವುದು. ಇದೇ ವೇಳೆ ಪುಣೆಯ ಹೆಸರಾಂತ ಉದ್ಯಮಿ ಹಾಗೂ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆಯ ಮೂಲಕ ಯಕ್ಷರಂಗವನ್ನು ಬೆಳಗಿದ, ಕಲಾವಿದರ ಕಾಮಧೇನು ಎಂದೇ ಗುರುತಿಸಿಕೊಂಡಿರುವ ಪ್ರವೀಣ್ ಶೆಟ್ಟಿ ಪುತ್ತೂರು (ಅಂಬಾಗಿಲು) ಅವರಿಗೂ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ ಪ್ರಸಾದ ರೂಪವಾಗಿ ‘ಕಲಾ ಗೌರವ’ ಅರ್ಪಿಸಿ ಸನ್ಮಾನಿಸಲಾಗುವುದು.

ಯಕ್ಷಗಾನ ಕ್ಷೇತ್ರದ ಕಲಾವಿದರನ್ನು ಪ್ರೋತ್ಸಾಹಿಸುವುದು, ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವುದು ಹಾಗೂ ಹೊಸ ಪೀಳಿಗೆಗೆ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಪುಣೆಯ ಕನ್ನಡಿಗರು ಹಾಗೂ ಕಲಾಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಮುಂಬೈನ ಗೌರವ ಸಲಹೆಗಾರರಾದ ರತ್ನಾಕರ ಜಿ. ಶೆಟ್ಟಿ ಕೋಟ, ಸುಭಾಶ್ಚಂದ್ರ ಹೆಗ್ಡೆ ಕಟ್ಟಂಗೇರಿ ಹಾಗೂ ಜಯಕರ ಶೆಟ್ಟಿ ಕೊಂಡಳ್ಳಿ ಅವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಚಾಲಕರಾಗಿ ಸುರೇಶ್ ಬರ್ಕಲ್ ಮಕ್ಕಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಕ್ತಿಭಾವ, ಯಕ್ಷಗಾನದ ವೈಭವ ಹಾಗೂ ಕಲಾ ಗೌರವದ ಸಮ್ಮಿಲನವಾಗಲಿರುವ ಈ ಅಪೂರ್ವ ಕಾರ್ಯಕ್ರಮಕ್ಕೆ ಪುಣೆಯ ಕನ್ನಡಿಗರು, ಯಕ್ಷಗಾನ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಚಾಲಕರಾದ ಸುರೇಶ್ ಬರ್ಕಲ್ ಮಕ್ಕಿ (ಮೊ: 8861628077) ಅವರನ್ನು ಸಂಪರ್ಕಿಸಬಹುದು.




