
ಮಕ್ಕಳ ವಿದ್ಯಾಭ್ಯಾಸ ಮತ್ತು ಮಹಿಳಾ ಸಬಲೀಕರಣ: ಪ್ರಗತಿಯ ಬುನಾದಿ – ಶ್ರೀನಿವಾಸ ಸಾಪಲ್ಯ
ಮುಂಬೈ: ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು ಮತ್ತು ಮಹಿಳೆಯರ ಸಬಲೀಕರಣಕ್ಕೆ ಸ್ಪಂದಿಸುವುದು ಸಂಸಾರ ಮತ್ತು ದೇಶದ ಪ್ರಗತಿಗೆ ಬುನಾದಿಯಾಗಿದೆ ಎಂದು ಸಾಫಲ್ಯ ಸೇವಾ ಸಂಘ ಮುಂಬೈ ಅಧ್ಯಕ್ಷ ಶ್ರೀನಿವಾಸ ಸಾಪಲ್ಯ ಹೇಳಿದರು. ಸೆಪ್ಟೆಂಬರ್ 7ರಂದು ಕುರ್ಲಾ ಪೂರ್ವದ ಬಂಟರ ಭವನದ ಎನ್.ಎಕ್ಸ್. ಸಂಕೀರ್ಣದಲ್ಲಿ ನಡೆದ ‘ಸಾಫಲ್ಯ ಸೇವಾ ಸಂಘ ಮುಂಬೈ ವಿದ್ಯಾರ್ಥಿ ಸಹಾಯಧನ ಮತ್ತು ಮಹಿಳೆಯರಿಗೆ ಫರ್‌ಘಂಟಿ ವಿತರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದ ಏಳಿಗೆಗೆ ಮಕ್ಕಳ ಶಿಕ್ಷಣಕ್ಕೆ ನಿರಂತರ ನೆರವು ಬೇಕು. ಮಹಿಳೆಯರು ಸ್ವಾವಲಂಬಿಗಳಾಗಲು ಸ್ವಂತ ಉದ್ಯೋಗಕ್ಕೆ ಸಹಾಯ ಮಾಡಿದರೆ ಮಾತ್ರ ಸಮಾಜ ಪ್ರಗತಿಯನ್ನು ಕಾಣಲು ಸಾಧ್ಯ. ಕೇವಲ ಸಂಘ ಕಾರ್ಯಪ್ರವೃತ್ತವಾದರೆ ಸಾಲದು, ಸದಸ್ಯರೂ ತಮ್ಮ ಕರ್ತವ್ಯ ನಿರ್ವಹಿಸಿದರೆ ಸಮಾಜವು ಬೆಳೆಯಲು ದಾರಿದೀಪವಾಗಬಹುದು ಎಂದು ಅವರು ನುಡಿದರು.

ಬೆಳಿಗ್ಗೆ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಶ್ರೀನಿವಾಸ ಸಾಪಲ್ಯ, ಉಪಾಧ್ಯಕ್ಷರಾದ ಕೃಷ್ಣ ಕುಮಾರ್ ಬಂಗೇರ ಮತ್ತು ಜೀವನ್ ಶ್ರೀಯಾನ್, ಕಾರ್ಯದರ್ಶಿ ಭಾಸ್ಕರ್ ಸಪಳಿಗ, ಕೋಶಾಧಿಕಾರಿ ಹೇಮಂತ್ ಸಪಳಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮಿ ಮೆಂಡನ್, ಯುವ ವಿಭಾಗದ ಅಧ್ಯಕ್ಷೆ ಕುಮಾರಿ ಸಂಧ್ಯಾ ಪುತ್ರನ್ ಹಾಗೂ ಹಿರಿಯರಾದ ಪದ್ಮನಾಭ ಸೋಮೇಶ್ವರ, ರಮೇಶ್ ಪುತ್ರನ್, ಸುಂದರ್ ಪುತ್ರನ್, ಗಿರಿಧರ್ ಸಪಲ್ಯ, ಮತ್ತು ಕೇಶವ್ ಸಪಲ್ಯ ಉದ್ಘಾಟಿಸಿದರು. ನಂತರ ಕುಮಾರಿ ನಿರುಷ್ಕ ಬಂಗೇರ ಮತ್ತು ಖುಷಿ ಪುತ್ರನ್ ಅವರಿಂದ ನೃತ್ಯ ವೈಭವ ನಡೆಯಿತು. ಅನುಸೂಯ ಸೋಮೇಶ್ವರ, ಪ್ರತಿಭಾ ಸಪಳಿಗ, ಲೋಲಾಕ್ಷಿ ಬಂಗೇರ ದೇವರ ಪ್ರಾರ್ಥನೆ ನೆರವೇರಿಸಿದರು.
ಭಜನಾ ಮತ್ತು ಚಿತ್ರಕಲಾ ಸ್ಪರ್ಧೆ
ಭಜನಾ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ತ್ರಿಶಿಕಾ ಕರ್ಕೇರ (ಪ್ರಥಮ), ಸಂವಿತ್ ಸಪಳಿಗ (ದ್ವಿತೀಯ) ಮತ್ತು ದಿಯಾ ಸಪಳಿಗ (ತೃತೀಯ) ಬಹುಮಾನ ಪಡೆದರು. ಸೀನಿಯರ್ ವಿಭಾಗದಲ್ಲಿ ಶೋಭಾ ಕರ್ಕೇರ (ಪ್ರಥಮ), ಜಯಂತಿ ಸಾಲಿಯಾನ್ (ದ್ವಿತೀಯ) ಮತ್ತು ವೈಷ್ಣವಿ ಸಪಳಿಗ (ತೃತೀಯ) ವಿಜೇತರಾದರು. ಪ್ರಾಯೋಜಕರಾದ ಭಾಸ್ಕರ್ ಸಪಳಿಗ ವಿಜೇತರಿಗೆ ಬಹುಮಾನ ನೀಡಿ ಗೌರವಿಸಿದರು. ಜಯಲಕ್ಷ್ಮಿ ಶೆಟ್ಟಿ ಮತ್ತು ರಜನಿ ಶೆಟ್ಟಿ ಅವರು ಭಜನಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದರು.
ಚಿತ್ರಕಲಾ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಕುಮಾರಿ ಪ್ರಿಷಾ ಸಪಳಿಗ (ಪ್ರಥಮ), ರಿದ್ಧಿಮಾನ್ ನವೀನ್ ಬಂಗೇರ (ದ್ವಿತೀಯ), ಮತ್ತು ಜಿಯಾ ಸಂತೋಷ್ ಸಪಳಿಗ (ತೃತೀಯ) ವಿಜೇತರಾದರು. ಸೀನಿಯರ್ ವಿಭಾಗದಲ್ಲಿ ಸುಪ್ರೀತ್ ಶೇರಿಗಾರ (ಪ್ರಥಮ), ತ್ರಿಶಿಕಾ ಕರ್ಕೇರ (ದ್ವಿತೀಯ), ಮತ್ತು ಚಾರ್ವಿ ರಾಜೇಶ್ ಸಪಳಿಗ (ದ್ವಿತೀಯ) ಬಹುಮಾನ ಪಡೆದರು. ಸರಿತಾ ಸುವರ್ಣ ಮತ್ತು ಕುಮಾರಿ ಸಂಜನಾ ಸಪಳಿಗ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದರು.

ವಾರ್ಷಿಕ ಮಹಾಸಭೆ ಮತ್ತು ಯೋಜನೆಗಳ ವರದಿ
ಮಧ್ಯಾಹ್ನ 2 ಗಂಟೆಗೆ ವಾರ್ಷಿಕ ಮಹಾಸಭೆ ನಡೆಯಿತು. ಅಧ್ಯಕ್ಷ ಶ್ರೀನಿವಾಸ ಸಾಪಲ್ಯ ಅವರು ತಮ್ಮ ಕಳೆದ ಎಂಟು ವರ್ಷಗಳ ಅವಧಿಯಲ್ಲಿ (2017-2025) ಸಂಘದ ಮೂಲ ಬಂಡವಾಳವು 76 ವರ್ಷಗಳಲ್ಲಿ ಸಂಗ್ರಹವಾದ ಬಂಡವಾಳಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು. ಈ ಅವಧಿಯಲ್ಲಿ ವಿವಿಧ ಯೋಜನೆಗಳ ಮೂಲಕ ಸಮಾಜದ ಬಾಂಧವರ ಕಷ್ಟಕ್ಕೆ ಸ್ಪಂದಿಸಲು ಅವಕಾಶ ದೊರೆತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಓಂ ಪ್ರಕಾಶ್ ರಾವ್, ವಾಸು ಪುತ್ರನ್, ಮಾಜಿ ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ, ಮಾಜಿ ಕೋಶಾಧಿಕಾರಿ ದಮಯಂತಿ ಸಾಲಿಯಾನ್, ಶಂಕರ್ ಸಪಳಿಗ, ವಿದ್ಯುತ್ ಮುಲ್ಕಿ, ಶೈಲೇಶ್ ಪುತ್ರನ್, ಉಷಾ ಸಪಳಿಗ, ಮಾಜಿ ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಬಂಗೇರ, ಸಂಧ್ಯಾ ಪುತ್ರನ್, ಜೀವನ್ ಶ್ರೀಯಾನ್, ಕೃಷ್ಣ ಕುಮಾರ್ ಬಂಗೇರ, ಹೇಮಂತ್ ಸಪಳಿಗ, ಭಾಸ್ಕರ್ ಸಪಳಿಗ, ಲಕ್ಷ್ಮಿ ಮೆಂಡನ್, ಮತ್ತು ಕಿರಣ್ ಕುಮಾರ್ ಸಪಳಿಗ ಭಾಗವಹಿಸಿ, ಸಂಘದ ಪ್ರಗತಿ ಹಾಗೂ ಅಧ್ಯಕ್ಷರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ವಿವಿಧ ಸೇವಾ ಕಾರ್ಯಗಳು
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ವಿದ್ಯಾರ್ಥಿವೇತನ ನೀಡಲಾಯಿತು. ‘ನಾದಸ್ವರ ಯೋಜನೆ’ಯ ಅಡಿಯಲ್ಲಿ ದಾನಿಗಳ ಮೂಲಕ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸುವ ಕಾರ್ಯ ನಡೆಯಿತು. ದಿವಂಗತ ಕೆ. ಟಿ. ಕುಂದರ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಲಾಯಿತು. ‘ಸಾಫಲ್ಯ ಶಿಕ್ಷಣ ಯೋಜನೆ’ಯ ಮೂಲಕ ಗಣಕ ಯಂತ್ರ ತರಬೇತಿಗೆ ಸಹಾಯಧನ ವಿತರಿಸಲಾಯಿತು. ದಾನಿಗಳ ಮೂಲಕ ಮಕ್ಕಳಿಗೆ ಪುಸ್ತಕಗಳನ್ನು ಸಹ ವಿತರಿಸಲಾಯಿತು. ಈ ಕಾರ್ಯವನ್ನು ಕುಮಾರಿ ಐಶ್ವರ್ಯ, ಸಮೀಕ್ಷಾ ಮತ್ತು ತನು ಕಾಂಚನ್ ನೆರವೇರಿಸಿದರು.
ವಿಮಲಾ ಬಂಗೇರ ಅವರು ‘ಸಾಫಲ್ಯ ಭಾಗ್ಯ’ ಯೋಜನೆಯ ಬಗ್ಗೆ ವಿವರಿಸಿದರು. ಅರ್ಹರಿಗೆ ಉಚಿತ ‘ಘರ್‌ಘಂಟಿ’ (ಅಟ್ಟ ಮಾಡುವ ಯಂತ್ರ) ವಿತರಣೆಯನ್ನು ಸಂಘದ ಅಧ್ಯಕ್ಷರು ನೆರವೇರಿಸಿದರು. ವಧು-ವರ ವೇದಿಕೆ ಮತ್ತು ಯುವಕ-ಯುವತಿಯರ ಅನ್ವೇಷಣೆಯಲ್ಲಿ ಎದುರಾಗುವ ತೊಂದರೆಗಳ ಬಗ್ಗೆ ಶ್ರೀಮತಿ ಶೋಭಾ ಬಂಗೇರ ವಿವರಿಸಿದರು.

ಡಾ. ವಿಧಾನ ಸಿ. ದೋಷಿ ಮತ್ತು ಅವರ ತಂಡ ಉಚಿತ ನೇತ್ರ ತಪಾಸಣಾ ಕಾರ್ಯ ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಸ್ಕರ್ ಸಪಳಿಗ ವಂದನಾರ್ಪಣೆ ಮಾಡಿದರು ಮತ್ತು ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಕಿರಣ್ ಕುಮಾರ್ ಸಪಳಿಗ, ರಾಜೇಶ್ ಪುತ್ರನ್, ಸತೀಶ್ ಕುಂದರ್, ಜಗನ್ನಾಥ್ ಕರ್ಕೇರ, ದೀಪಕ್ ಕುಂದರ್, ಡಾ. ಜಿ.ಪಿ. ಕುಸುಮ, ದಿನೇಶ್ ಕಾಂಚನ್, ಪ್ರತಿಭಾ ಸಪಳಿಗ, ಅನುಸೂಯ ಸೋಮೇಶ್ವರ, ಸುಲೋಚನಾ ಸಪಳಿಗ, ಪ್ರಮೀಳಾ ಶೇರಿಗಾರ್, ಸರಿತಾ ಸುವರ್ಣ, ಮೀನಾಕ್ಷಿ ಸಪಲ್ಯ, ರತಿಕ ಸಪಲ್ಯ, ಶಾಂತ ಸುವರ್ಣ, ಕಲಾವತಿ ಪುತ್ರನ್, ಕವಿತಾ ಅಮೀನ್, ಸತೀಶ್ ಪುತ್ರನ್, ಶ್ರೇಯ ಪುತ್ರನ್, ಮತ್ತು ವೈಷ್ಣವಿ ಸಪಳಿಗ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಂಘದ ಮುಖ್ಯ ಕಾರ್ಯಗಳು: ಸಾಫಲ್ಯ ಸೇವಾ ಸಂಘ ಮುಂಬೈ ತನ್ನ ಸಮಾಜದ ಬಾಂಧವರಿಗೆ ಶೈಕ್ಷಣಿಕ ಸೌಲಭ್ಯಗಳು, ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಮತ್ತು ಅಟ್ಟ ತಯಾರಿಸುವ ಯಂತ್ರಗಳ ಸಹಾಯ, ಧಾರ್ಮಿಕ ಪ್ರಜ್ಞೆ ಬೆಳೆಸಲು ಭಜನಾ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಉಚಿತ ನೇತ್ರ ತಪಾಸಣೆ ಮತ್ತು ಸತ್ಯನಾರಾಯಣ ಮಹಾಪೂಜೆಯಂತಹ ಕಾರ್ಯಗಳನ್ನು ಹಮ್ಮಿಕೊಂಡಿದೆ.




