July 23, 2026
Mumbai News Kannada
ತುಳುನಾಡು

ದೊಡ್ಡಣಗುಡ್ಡೆ: ಕೋಟಿ ಲಲಿತಾ ಸಹಸ್ರನಾಮ ಪಾರಾಯಣ ಮಹಾಯಜ್ಞದ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆ







​ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ: ಸಂದೀಪ್ ಮಂಜ

ಉಡುಪಿ, ಸೆ. 27: ಧಾರ್ಮಿಕ ಕೈಂಕರ್ಯಗಳಿಂದ ಮಾತ್ರ ಮಾನಸಿಕ ನೆಮ್ಮದಿ ದೊರಕಲು ಸಾಧ್ಯ. ಜೀವನದಲ್ಲಿ ಸ್ವಚ್ಛಂದವಾಗಿ ಬದುಕಲು ದೇವರ ಮೊರೆ ಹೋಗುವುದಲ್ಲದೆ, ಸಂಪೂರ್ಣವಾಗಿ ಶರಣಾಗತರಾಗಬೇಕು. ಇದೆಲ್ಲವೂ ಸಾಧ್ಯವಾಗಬೇಕಾದರೆ ನಿತ್ಯವೂ ಜಪ, ದೇವರ ಸ್ತೋತ್ರ ಪಠಣೆ ಮಾಡಬೇಕು ಎಂದು ಜಿಲ್ಲಾ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಸಂದೀಪ್ ಮಂಜ ತಿಳಿಸಿದರು.

​ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನೆರವೇರುತ್ತಿರುವ ಶರನ್ನವರಾತ್ರಿ ಮಹೋತ್ಸವದ ಲಲಿತಾ ಪಂಚಮಿ ಪರ್ವಕಾಲದಲ್ಲಿ, ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಲಕ್ಷ್ಮೀನರಸಿಂಹ ಸಂಸ್ಥಾನದ ಶ್ರೀ ಶಂಕರಾಚಾರ್ಯ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಯವರು ಪೀಠಾರೋಹಣ ಮಾಡಿದ ರಜತ ಮಹೋತ್ಸವದ ಸಂಭ್ರಮದ ಪ್ರಯುಕ್ತ, ನಿರಂತರ ಆರು ತಿಂಗಳ ಕಾಲ ಲಲಿತಾ ಸಹಸ್ರನಾಮ ಪಾರಾಯಣವನ್ನು ಸಾಮೂಹಿಕವಾಗಿ ಸಂಯೋಜಿಸಿ ಶ್ರೀಕ್ಷೇತ್ರ ಹರಿಹರಪುರಕ್ಕೆ ಕಾಣಿಕೆಯಾಗಿ ಸಮರ್ಪಿಸುವ ಮಹಾ ಸಂಕಲ್ಪವನ್ನು ಸ್ವಾಮೀಜಿಯವರ ಆಶಯದಂತೆ ಶ್ರೀ ರಮಾನಂದ ಗುರೂಜಿಯವರು ನೆರವೇರಿಸಲು ಸಂಕಲ್ಪಿಸಿದ್ದಾರೆ. ಅದರ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಶ್ರೀ ಸ್ವಾಮೀಜಿಯವರು ಶ್ರೀ ಕ್ಷೇತ್ರಕ್ಕೆ ಶ್ರೀಚಕ್ರವನ್ನು ಕಾಣಿಕೆಯಾಗಿ ನೀಡಿದ್ದರು.

ವೇಮೂ ರಾಘವೇಂದ್ರ ಭಟ್ ಅವರು ಮಾತನಾಡಿ, ಹಿಂದೆ ಋಷಿ ಮುನಿಗಳು ಯಜ್ಞ ಯಾಗಾದಿಗಳನ್ನು ನಡೆಸಿ ವಿವಿಧ ಧಾರ್ಮಿಕ ಪ್ರಕ್ರಿಯೆಗಳ ಮೂಲಕ ಸನಾತನ ಧರ್ಮಕ್ಕೆ ವಿಶೇಷವಾದ ಕೊಡುಗೆ ನೀಡಿ ಅಡಿಪಾಯ ಹಾಕಿಕೊಟ್ಟಿದ್ದಾರೆ. ಅನಂತರ ರಾಜಾಶ್ರಯದಲ್ಲಿ ಧಾರ್ಮಿಕ ಪ್ರಕ್ರಿಯೆಗಳು ನಡೆಯುತ್ತಿತ್ತು. ಪ್ರಸ್ತುತ ಸನಾತನ ಧರ್ಮವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಮಠ, ಮಂದಿರ, ದೇವಸ್ಥಾನಗಳ ಮೇಲಿದೆ. ಹೋಮ, ಹವನಗಳು ಸಮರ್ಪಕವಾಗಿ ನಡೆದರೆ ಉತ್ತಮ ಮಳೆ, ಮಳೆಯಿಂದ ಸಮೃದ್ಧ ಬೆಳೆ, ತನ್ಮೂಲಕ ಸುಂದರ ಬದುಕಿಗೆ ಪೂರಕವಾಗುವುದು. ಭಕ್ತಿ ಶ್ರದ್ಧೆಯಿಂದ ಜಪ ಯಜ್ಞದಲ್ಲಿ ಪಾಲ್ಗೊಂಡರೆ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು.

ವೇ ಮೂ ವಿಖ್ಯಾತ್ ಭಟ್ ಮಾತನಾಡಿ, ಯಾವುದೇ ಕಾರ್ಯ ಮಾಡುವ ಮುನ್ನ ಸಂಕಲ್ಪ ಶುದ್ಧವಾಗಿರಬೇಕು. ಸಂಕಲ್ಪ ದೃಢವಾಗಿದ್ದರೆ ಖಂಡಿತವಾಗಿಯೂ ಯಶಸ್ಸನ್ನು ಪಡೆಯಬಹುದು. ನಮ್ಮ ಪಾಪ ಪರಿಹರಿಸಿಕೊಳ್ಳುವುದಕ್ಕೆ ಇರುವ ಏಕೈಕ ಮಾರ್ಗವೇ ದೇವರ ನಾಮ ಜಪ ಮಾಡುವುದು. ಪ್ರತಿ ತಿಂಗಳು ಕನಿಷ್ಠ ಎರಡು ಸಹಸ್ರ ಕದಳಿಯಾಗ ನಡೆಯುವ ಕ್ಷೇತ್ರವಿದ್ದರೆ ಅದು ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ. ಈ ನೆಲೆಯಲ್ಲಿ ಇಲ್ಲಿನ ತಾಯಿ ಅತ್ಯಂತ ಪ್ರಸನ್ನತೆಯಿಂದ ಬೇಡಿದ ಇಷ್ಟಾರ್ಥವನ್ನು ಈಡೇರಿಸುತ್ತಿದ್ದಾಳೆ. ಆದುದರಿಂದಲೇ ಈ ಕ್ಷೇತ್ರದಲ್ಲಿ ಭಕ್ತರು ಸೇವೆಯನ್ನು ಸಮರ್ಪಿಸಿ ಕ್ಷೇಮ ಲಾಭ ಪಡೆಯುತ್ತಿದ್ದಾರೆ. ಇದೀಗ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಲಲಿತಾ ಸಹಸ್ರನಾಮವನ್ನು ಪಠನ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಇಚ್ಛಾ, ಜ್ಞಾನ, ಕ್ರಿಯಾ ಹೀಗೆ ಶಕ್ತಿತ್ರಯಗಳನ್ನು ಹೊಂದಿದ ತ್ರಿಪುರ ಸುಂದರಿ ರೂಪದಲ್ಲಿರುವ ತಾಯಿ ಬೇಡಿದ್ದನ್ನು ಅನುಗ್ರಹಿಸುತ್ತಾಳೆ ಎಂದರು.

​ಸಾಮಾಜಿಕ ಕಾರ್ಯಕರ್ತೆ ಸುಪ್ರಭಾ ಆಚಾರ್ಯ ಕಡಿಯಾಳಿ ಅವರು, ಲಲಿತೆಯನ್ನು ಆರಾಧಿಸಿದರೆ ಸುಖ, ಶಾಂತಿ, ಸಮೃದ್ಧಿ ಲಭಿಸಲಿದೆ. ಕಡಿಯಾಳಿಯಲ್ಲಿ 40 ವರ್ಷಗಳಿಂದ 40 ಮಾತೆಯರು ಲಲಿತಾ ಸಹಸ್ರನಾಮವನ್ನು ಪಠನ ಮಾಡುತ್ತಾ ಬಂದಿದ್ದೇವೆ. ಎಲ್ಲರೂ ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡು ವಿಶೇಷವಾದ ಅನುಗ್ರಹಕ್ಕೆ ಪಾತ್ರರಾಗೋಣ ಎಂದರು.

ವೇಮೂ ವಾಮನ ಭಟ್, ಪುರೋಹಿತ ಗಣೇಶ್ ಸರಳಾಯ, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಉಷಾ ರಮಾನಂದ, ಕುಂಭಾಶಿ ಕರ್ನಾಟಕ ಬ್ಯಾಂಕಿನ ಶಾಖಾ ಪ್ರಬಂಧಕ ಪ್ರತೀಕ್ ಟಿ.ಆರ್. ಉಪಸ್ಥಿತರಿದ್ದರು. ಲಲಿತಾ ಸಹಸ್ರನಾಮ ಪಠಿಸುವ ಬಗೆ, ಶಬ್ದೋಚ್ಛಾರ ಇತ್ಯಾದಿ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು. ಲಲಿತಾ ಸಹಸ್ರನಾಮ ಪುಸ್ತಕವನ್ನು ಚಂದ್ರಕಲಾ ಶರ್ಮ ಅವರಿಗೆ ಸಾಂಕೇತಿಕವಾಗಿ ನೀಡಲಾಯಿತು. ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಸ್ವಾಗತಿಸಿದರು. ಉಪ್ಪೂರು ಭಾಗ್ಯಲಕ್ಷ್ಮೀ ನಿರೂಪಿಸಿ, ವಂದಿಸಿದರು.

​ಅಧ್ಯಕ್ಷತೆ ವಹಿಸಿದ್ದ ಶ್ರೀ ರಮಾನಂದ ಗುರೂಜಿ ಅವರ ಮಾತುಗಳು

​ಅಧ್ಯಕ್ಷತೆ ವಹಿಸಿದ್ದ ಶ್ರೀ ರಮಾನಂದ ಗುರೂಜಿ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಇದ್ದರೆ ಮಾತ್ರ ಸಂಪತ್ತನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ಎಲ್ಲರಿಗೂ ಯೋಗ ಮತ್ತು ಯೋಗ್ಯತೆ ಇರುವುದಿಲ್ಲ, ಆದರೆ ಯೋಗ ಬಂದಾಗ ಸತ್ಕಾರ್ಯ ಮಾಡುವ ಮೂಲಕ ಯೋಗ್ಯತೆಯನ್ನು ಸಂಪಾದಸಲು ಸಾಧ್ಯವಾಗುತ್ತದೆ. ಅಂತೆಯೇ ಲಲಿತಾ ಸಹಸ್ರನಾಮ ಪಾರಾಯಣ ಮಾಡುವ ಮೂಲಕ ಎಲ್ಲ ಭಾಗ್ಯಗಳನ್ನು ಪಡೆದು ಗೌರವಯುತವಾದ ನೆಮ್ಮದಿಯ ಬದುಕು ನಮ್ಮದಾಗಲು ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಶೀಲರಾಗೋಣ ಎಂದರು.



Related posts

ಹೆಜಮಾಡಿ ಕೋಡಿ: ವಿದ್ಯಾ ಪ್ರಸಾರ ವಿದ್ಯಾಮಂದಿರದಲ್ಲಿ ಪರಿಸರ ಸ್ನೇಹಿ ಆನ್‌ಲೈನ್ ಚುನಾವಣೆ, ವಿದ್ಯಾರ್ಥಿ ಸಂಸತ್ ಪದಗ್ರಹಣ

Mumbai News Desk

ಮಲ್ಪೆ- ಕಡಲ ಮಕ್ಕಳಿಂದ ಸಂಭ್ರಮದ ಸಮುದ್ರ ಪೂಜೆ.

Mumbai News Desk

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ

Mumbai News Desk

ಅಕ್ಷತಾ ಪೂಜಾರಿ ಮನೆಗೆ ನುಗ್ಗಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

Mumbai News Desk

ಮೂಲ್ಕಿ ಸುರಭಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯಿಂದ ಅಂಗನವಾಡಿ ಮಕ್ಕಳಿಗೆ ಕ್ರೀಡಾ ಸಾಮಗ್ರಿ ಮತ್ತು ಕುರ್ಚಿಗಳ ಕೊಡುಗೆ

Mumbai News Desk

ಮುಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಭವ್ಯ ಸ್ವಾಗತ ಗೋಪುರ ನಿರ್ಮಾಣಕ್ಕೆ ಬಿಲ್ಲವ ಸಮಾಜದ ಸಿದ್ಧತೆ

Mumbai News Desk