September 6, 2026
Mumbai News Kannada
ಮುಂಬಯಿ

ಮುಂಬಯಿಯಲ್ಲಿ “ಕುಲಾಲ ಭವನ ಮಂಗಳೂರು” ಲೋಕಾರ್ಪಣೆ ಆಮಂತ್ರಣ ಪತ್ರಿಕೆ ಬಿಡುಗಡೆ





ಭವನವು ಸಮಾಜದ ಪ್ರಗತಿಗೆ ಪೂರಕವಾಗಲಿ; ಡಾ. ಆರ್. ಕೆ. ಶೆಟ್ಟಿ ಹಾರೈಕೆ

ಮುಂಬಯಿ: ಶತಮಾನದತ್ತ ಮುನ್ನಡೆಯುತ್ತಿರುವ ಕುಲಾಲ ಸಂಘ ಮುಂಬಯಿಯ ಮಹತ್ವಾಕಾಂಕ್ಷೆಯ ಯೋಜನೆಯಾದ “ಕುಲಾಲ ಭವನ ಮಂಗಳೂರು” ಲೋಕಾರ್ಪಣೆಯ ದಿವ್ಯ ಆಮಂತ್ರಣ ಪತ್ರಿಕೆಯು ಪವಿತ್ರವಾದ ಶ್ರೀಕೃಷ್ಣನ ಸನ್ನಿಧಿಯಾದ ಸಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಶುಕ್ರವಾರ, ಅಕ್ಟೋಬರ್ 5 ರಂದು ಬಿಡುಗಡೆಗೊಂಡಿತು. ದೈವಾನುಗ್ರಹದಿಂದ ಸಮಾರಂಭದ ಮುಂದಿನ ಎಲ್ಲ ಕಾರ್ಯಗಳು ಸುಗಮವಾಗಿ ಸಾಗಲಿ ಎಂಬುದು ಈ ಬಿಡುಗಡೆಯ ಹಿಂದಿನ ಆಶಯವಾಗಿದೆ.

​ಮಂಗಳೂರಿನ ಮಂಗಳಾದೇವಿ ಸಮೀಪದ ಕುಲಾಲ ಭವನದ ಲೋಕಾರ್ಪಣೆ ಸಮಾರಂಭವು ನವೆಂಬರ್ 23 ರಂದು ನೆರವೇರಲಿದೆ. ಈ ಶುಭ ಸಂದರ್ಭದ ಆಮಂತ್ರಣ ಪತ್ರಿಕೆಯನ್ನು ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಸಿ.ಎಂ.ಡಿ. ಹಾಗೂ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಿಡುಗಡೆಗೊಳಿಸಿದರು.

​ಡಾ. ಆರ್. ಕೆ. ಶೆಟ್ಟಿಯವರ ಸ್ಫೂರ್ತಿದಾಯಕ ನುಡಿ

​ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಾ. ಆರ್. ಕೆ. ಶೆಟ್ಟಿಯವರು, “ಕುಲಾಲ ಭವನ ಲೋಕಾರ್ಪಣೆಯು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ. ಸಂಘದ ಮುಂದಿನ ಯೋಜನೆಯಾದ ಶಿಕ್ಷಣ ಸಂಸ್ಥೆ ಸ್ಥಾಪನೆಯು ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸಲಿ” ಎಂದು ಹಾರೈಸಿದರು.

​ಜೀವ ವಿಮಾ ಕ್ಷೇತ್ರದಲ್ಲಿ ಗಿನ್ನೆಸ್ ಬುಕ್ಸ್ ಆಫ್ ರೆಕಾರ್ಡ್‌ಗೆ ಸೇರಿದ್ದಕ್ಕಾಗಿ ಕುಲಾಲ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘ-ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದಾಗ ಅದರ ಮಹತ್ವ ತಿಳಿಯುತ್ತದೆ. “ಜಾತೀಯ ಸಂಘಟನೆಗಳ ಸಹಾಯದಿಂದ ಅನೇಕರು ಇಂದು ಉನ್ನತ ಮಟ್ಟಕ್ಕೇರಿದ್ದು, ಬಂಟರ ಸಂಘದಲ್ಲಿ ಅನೇಕ ಉದಾಹರಣೆಗಳಿವೆ. ಎಲ್ಲರೂ ಒಟ್ಟಾಗಿ ಇಂತಹ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಬೇಕು” ಎಂದು ಕರೆ ನೀಡಿದರು. ಉನ್ನತ ಶಿಕ್ಷಣ ಪಡೆದರೂ ಸೂಕ್ತ ಉದ್ಯೋಗ ಸಿಗದ ಯುವಕರಿಗೆ ಬಂಟರ ಸಂಘದಲ್ಲಿ ತರಬೇತಿ ಸೌಕರ್ಯ ಪ್ರಾರಂಭಿಸಲಾಗಿದ್ದು, ಕುಲಾಲ ಸಮಾಜದ ಅರ್ಹ ಯುವ ಜನಾಂಗವು ಇದರ ಪ್ರಯೋಜನ ಪಡೆದರೆ ತಮ್ಮ ಪ್ರೋತ್ಸಾಹ ಸದಾ ಇರುತ್ತದೆ ಎಂದು ಭರವಸೆ ನೀಡಿದರು.

​ಸಮುದಾಯದ ಹೆಮ್ಮೆ: ಮಯೂರ್ ಉಳ್ಳಾಲ್

​ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಮಾತನಾಡಿ, “ಕುಲಾಲ ಭವನವು ಸಮಾಜದ ಹೆಮ್ಮೆ ಹಾಗೂ ಕುಲಾಲ ಸಮಾಜದ ಕಿರೀಟಕ್ಕೆ ಒಂದು ಗರಿ. ಇದರ ಉದ್ಘಾಟನಾ ಕಾರ್ಯವನ್ನು ಅತ್ಯಂತ ಅದ್ದೂರಿಯಾಗಿ ನೆರವೇರಿಸಲು ಮಂಗಳೂರು ಮಾತ್ರವಲ್ಲದೆ ನೆರೆಯ ಜಿಲ್ಲೆಗಳಿಂದ ಸುಮಾರು 40 ಬಸ್‌ಗಳಲ್ಲಿ 5,000 ಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸಲು ಸಿದ್ಧತೆ ನಡೆಯುತ್ತಿದೆ” ಎಂದು ತಿಳಿಸಿದರು. ಮಾತೃ ಸಂಘಟನೆಯು 99ನೇ ವರ್ಷದಲ್ಲಿದ್ದು, 100ನೇ ವರ್ಷದಲ್ಲಿ ಮಹಿಳಾ ಹಾಸ್ಟೆಲ್‌ ಅನ್ನು ಲೋಕಾರ್ಪಣೆ ಮಾಡಲಾಗುವುದು. ಸಮಾಜವು ಒಗ್ಗಟ್ಟಿನಿಂದ ತನ್ನ ಶಕ್ತಿಯನ್ನು ಪ್ರದರ್ಶಿಸಿದರೆ ಐಎಎಸ್, ಐಪಿಎಸ್ ಮಾತ್ರವಲ್ಲದೆ ರಾಜಕೀಯದಲ್ಲಿಯೂ ಪ್ರಾತಿನಿಧ್ಯ ದೊರೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಯುವ ಜನಾಂಗದ ನಾಯಕತ್ವದ ಅಗತ್ಯವಿದೆ ಎಂದ ಅವರು, ಊರಿನಲ್ಲಿನ ಮಹಿಳಾ ಹಾಸ್ಟೆಲ್‌ಗೆ ಮುಂಬಯಿಯ ಸಮಾಜ ಬಾಂಧವರ ಸಹಕಾರ ಸದಾ ಇರುತ್ತದೆ ಎಂದರು.

ಸಂತಾಕ್ರೂಜ್ ಮಂತ್ರದೇವತೆ ಚಾರಿಟೇಬಲ್ ಟ್ರಸ್ಟ್‌‌ನ ಆಡಳಿತ ಮೊಕ್ತೇಸರ ವಾಸುದೇವ ಕೆ. ಬಂಜನ್ ಅವರು ಆಶೀರ್ವಚನ ನೀಡಿ, “ಕುಲಾಲ ಭವನ ಮಂಗಳೂರು ನಮ್ಮ ಕಾಲದಲ್ಲಿಯೇ ಲೋಕಾರ್ಪಣೆಗೊಳ್ಳುತ್ತಿರುವುದು ನಮ್ಮ ಸೌಭಾಗ್ಯ. ಭವನವು ಭಗವಂತನ ವನವಾಗಿ ಬೃಂದಾವನವಾಗಲಿ, ಹಂತ ಹಂತವಾಗಿ ಹೆಮ್ಮರವಾಗಿ ಬೆಳೆಯಲಿ. ಎಲ್ಲರೂ ಒಗ್ಗಟ್ಟಾಗಿ ಸಹಕರಿಸಿ ಈ ರಥವನ್ನು ಮುಂದಕ್ಕೆ ಸಾಗಿಸೋಣ. ಇದು ಮುಂದಿನ ಪೀಳಿಗೆಗೆ ಪ್ರಯೋಜನಕಾರಿಯಾಗಲಿ” ಎಂದು ಶುಭ ಹಾರೈಸಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ರಘು ಮೂಲ್ಯ ಪಾದಬೆಟ್ಟು ಅವರು ಮಾತನಾಡಿ, ಡಾ. ಆರ್. ಕೆ. ಶೆಟ್ಟಿಯವರ ಉತ್ತಮ ಮಾರ್ಗದರ್ಶನವು ಸಂಘದ ಮುಂದಿನ ಯೋಜನೆಗಳಿಗೆ ಪ್ರಯೋಜನಕಾರಿಯಾಗಲಿ. ಸಂಘದ ಕಾರ್ಯಗಳಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತಾ, ಯುವ ಜನಾಂಗವು ಸಂಘದಲ್ಲಿ ಕಾರ್ಯ ನಿರ್ವಹಿಸಲು ಮುಂದೆ ಬರಬೇಕು ಮತ್ತು ಎಲ್ಲರೂ ಕೈಜೋಡಿಸಿ ಮುಂದಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದರು. “ಕುಲಾಲ ಭವನ ಮುಂಬಯಿ ಕುಲಾಲರ ಅಸ್ಮಿತೆಯಾಗಿದೆ” ಎಂದು ಘೋಷಿಸಿ, ನ. 23ರ ಲೋಕಾರ್ಪಣೆ ಸಮಾರಂಭದಲ್ಲಿ ಮುಂಬಯಿಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

​ಕಟ್ಟಡ ಸಮಿತಿಯ ಕಾರ್ಯಧ್ಯಕ್ಷ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲ್ಯಾನ್ ಬಂಟ್ವಾಳ ಅವರು ಮಾತನಾಡಿ, ನ. 23ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಮುಂಬಯಿಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಹೋಗಿ ಭಾಗವಹಿಸಬೇಕು ಎಂದು ವಿನಂತಿಸಿದರು.

​ಕಟ್ಟಡ ಸಮಿತಿಯ ಉಪ ಕಾರ್ಯಧ್ಯಕ್ಷ ಸುನಿಲ್ ಆರ್ ಸಾಲ್ಯಾನ್ ಅವರು ದಿ. ಪಿ ಕೆ ಸಾಲ್ಯಾನ್ ಮತ್ತು ಬಾಬು ಸಾಲಿಯಾನ್ ಅವರ ಸಮಾಜದ ಕೊಡುಗೆಯನ್ನು ಸ್ಮರಿಸಿದರು. ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಸಮಾನವಾಗಿ ಕೈಜೋಡಿಸಬೇಕು. ಸಮಜದ ಎಲ್ಲಾ ಉಪ ಬಳಿಯವರ ಸಹಕಾರದ ಅಗತ್ಯವಿದೆ ಎಂದರು.

​ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರ ಡಿ ಬಂಜನ್ ಅವರು ಮಾತನಾಡಿ, ನವೆಂಬರ್ 23 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ವಿನಂತಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರ ಬಂಜನ್ ಮತ್ತು ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

​ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ದಿ. ಪಿ. ಕೆ. ಸಾಲ್ಯಾನ್ ಅವರ ಧರ್ಮಪತ್ನಿ ಶ್ರೀಮತಿ ಸಾವಿತ್ರಿ ಪಿ. ಕೆ. ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು. ಅವರ ಪುತ್ರ ಜಯರಾಜ್ ಪಿ. ಸಾಲ್ಯಾನ್ ಮತ್ತು ಪುತ್ರಿ ಆರತಿ ಉಪಸ್ಥಿತರಿದ್ದರು. ಅಲ್ಲದೆ, ಮುಖ್ಯ ಅತಿಥಿ ಡಾ. ಆರ್ ಕೆ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

​ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರುಗಳೆಂದರೆ: ಉದ್ಯಮಿ ಜಗದೀಶ್ ಆರ್ ಬಂಜನ್ ಅಮರನಾಥ್, ಸಂಘದ ಉಪಾಧ್ಯಕ್ಷ ಡಿ ಐ ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ ಸಾಲ್ಯಾನ್, ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ್ ಕೆ ಕುಲಾಲ್, ಠಾಣೆ ಕಸಾರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಸಿ ಮೂಲ್ಯ, ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಎಸ್ ಕುಲಾಲ್, ಮಂಗಳೂರು ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಬಂಗೇರ, ಸಿ ಎಸ್ ಟಿ ಮೂಲೂಂಡ್ ಮಾನ್ಕುರ್ಡ್ ಸಮಿತಿಯ ಕಾರ್ಯಾಧ್ಯಕ್ಷ ಉದಯ ಅತ್ತಾವರ್, ಮೀರಾ ರೋಡ್ ವಿರಾರ್ ಸ್ಥಳೀಯ ಸಮಿತಿಯ ಉಪಕಾರ್ಯಧ್ಯಕ್ಷ ಮೋಹನ್ ಬಂಜನ್, ಅಮೂಲ್ಯ ಸಂಪಾದಕ ಆನಂದ ಬಿ ಮೂಲ್ಯ ಮತ್ತು ಕುಲಾಲ ಭವನ ಉದ್ಘಾಟನಾ ಸಮಿತಿಯ ಕಾರ್ಯಧ್ಯಕ್ಷ ಬಿ ದಿನೇಶ್ ಕುಲಾಲ್.

ರಘು ಮೂಲ್ಯ ಪಾದಬೆಟ್ಟು ಹಾಗೂ ಡಾ. ಆರ್. ಕೆ. ಶೆಟ್ಟಿಯವರೊಂದಿಗೆ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಯನ್ನು ಬಿಡುಗಡೆಗೊಳಿಸಿದರು.

​ಕುಲಾಲ ಸಂಘ ಮುಂಬಯಿಯ ಗೌರವ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಅವರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವನೆ ನುಡಿಗಳನ್ನಾಡಿದರು. ಕಟ್ಟಡ ಸಮಿತಿಯ ಕಾರ್ಯದರ್ಶಿ ಉಮೇಶ್ ಎಂ ಬಂಗೇರ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಕವಿತಾ ಹಂಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಂಘದ ಗೌರವ ಕೋಶಾಧಿಕಾರಿ ಜಯ ಎಸ್ ಅಂಚನ್ ಅವರು ವಂದನಾರ್ಪಣೆ ಮಾಡಿದರು. ಪ್ರೇಮ ಮೂಲ್ಯ ಕಲ್ಯಾಣ್ ಮತ್ತು ಜಯಂತಿ ಬಂಗೇರ್ ಮೀರಾ ರೋಡ್ ಅವರು ಪ್ರಾರ್ಥನೆ ನೆರವೇರಿಸಿದರು.

​ಸಮಾರಂಭದಲ್ಲಿ ಸಂಘದ ಸ್ಥಳೀಯ ಸಮಿತಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಣಿತ ಭಜನೆ ಮತ್ತು ಮ್ಯಾಜಿಸಿಯನ್ ಕುಂದರ್ಸ್ ಮ್ಯಾಜಿಕ್ ಶೋ ನಡೆಯಿತು. ಈ ಸಮಾರಂಭವು ಮುಂಬಯಿಯ ಕುಲಾಲ ಬಾಂಧವರಲ್ಲಿ ನವೆಂಬರ್ 23 ರ ಲೋಕಾರ್ಪಣೆ ಸಮಾರಂಭಕ್ಕೆ ಉತ್ಸಾಹ ತುಂಬಿತು.



Related posts

ಮುಂಬೈ : ವಿಕ್ರೋಲಿಯ ಪಾರ್ಕ್ ಸೈಟ್‌ನ ವರ್ಷಾ ನಗರದ ಜನಕಲ್ಯಾಣ್ ಸೊಸೈಟಿಯಲ್ಲಿ ಭೂಕುಸಿತ, ಇಬ್ಬರು ಸಾವು

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಭಾಂಡುಪ್ ಸ್ಥಳೀಯ ಕಚೇರಿಯ ಸಂಯೋಜನೆಯಲ್ಲಿ ಬಾಬು ಶಿವ ಪೂಜಾರಿ ಅವರ “ಬಿಲ್ಲವರ ಗುತ್ತು” ಗ್ರಂಥದ ಮುಂಬಯಿ ಅವೃತಿ ಬಿಡುಗಡೆ.

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಧಾರ್ಮಿಕ ಸಭೆ

Mumbai News Desk

 ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ,

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು : ನಾನಿಲ್ತಾರ್ನಲ್ಲಿ  ಸ್ನೇಹ ಸಮ್ಮಿಲನದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

₹20,000+ಕೋಟಿ ವ್ಯವಹಾರದ ಮೈಲುಗಲ್ಲು ಮತ್ತು10% ಲಾಭಾಂಶ— ಭಾರತ್ ಬ್ಯಾಂಕಿನ ಬಲಿಷ್ಠತೆ, ಸಾಧನೆ ಮತ್ತು ಇನ್ನಷ್ಟು ಉಜ್ವಲ ಭವಿಷ್ಯದ ಹೊಸ ಅಧ್ಯಾಯ

Mumbai News Desk