34 C
Mumbai
March 6, 2026
Mumbai News Kannada
ಮುಂಬಯಿ

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಫೋರ್ಟ್‌ನ ಮನೋಹರ್ ದಾಸ್ ಸ್ಟ್ರೀಟ್‌ನಲ್ಲಿರುವ ಬಿ.ಎಂ.ಸಿ ಶಾಲೆಗೆ ಸ್ಥಳಾಂತರ





ಮುಂಬಯಿ, ಅಕ್ಟೋಬರ್ 29:

​ಸುಮಾರು 15 ವರ್ಷಗಳಿಂದ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯನ್ನು ನಡೆಸಲು ಸೂಕ್ತ ಸ್ಥಳಾವಕಾಶವಿಲ್ಲದೆ ವಿದ್ಯಾದಾಯಿನಿ ಸಭೆಯು ವಿವಿಧ ಸ್ಥಳಗಳಲ್ಲಿ ಶಾಲೆಯನ್ನು ನಡೆಸುವ ಸವಾಲನ್ನು ಎದುರಿಸಿತ್ತು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ತನ್ನ ಶತಮಾನೋತ್ಸವವನ್ನು (2026) ಆಚರಿಸಲಿರುವ ಈ ಸಂದರ್ಭದಲ್ಲಿ, ಶಾಲೆಯು ಪೋರ್ಟ್ ಪ್ರದೇಶದಲ್ಲಿರುವ ಮನೋಹರ್ ದಾಸ್ (ಮೋದಿ) ಸ್ಟ್ರೀಟ್‌ನ ಬಿ.ಎಂ.ಸಿ (ಮಹಾನಗರಪಾಲಿಕೆ) ಶಾಲೆಗೆ ಔಪಚಾರಿಕವಾಗಿ ಅಕ್ಟೋಬರ್ 31, 2025 ರಂದು ಸ್ಥಳಾಂತರಗೊಳ್ಳಲಿದೆ.

​ಮುಂಬೈ ಕೋಟೆ ಪರಿಸರದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ವಿದ್ಯಾದಾಯಿನಿ ಸಭಾವು ನಾಲ್ಕು ವರ್ಷಗಳ ಹಿಂದೆ ತನ್ನ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆ. ಹಗಲಿನಲ್ಲಿ ಕೆಲಸ ಮಾಡಿ ರಾತ್ರಿ ವೇಳೆಯಲ್ಲಿ ಕಲಿಯುವ ತುಳು-ಕನ್ನಡಿಗರಿಗಾಗಿ ಸಮಾನ ಮನಸ್ಕರ ಸಹಕಾರದೊಂದಿಗೆ 1926 ರ ಸುಮಾರಿಗೆ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯನ್ನು ಪ್ರಾರಂಭಿಸಲಾಯಿತು. ಈ ಶಾಲೆಯು 1933 ರಲ್ಲಿ ಸರ್ಕಾರದಿಂದ ಮಾನ್ಯತೆಯನ್ನು ಪಡೆಯಿತು.

​ಆರಂಭದಲ್ಲಿ ಮುಂಬೈ ಕೋಟೆ ಪರಿಸರದಲ್ಲಿ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಶಾಲೆಯನ್ನು ನಡೆಸಲಾಗುತ್ತಿತ್ತು. ನಂತರ ಕೊಲಬಾ ಪರಿಸರದ ಕನ್ನಡಿಗರ ಬೇಡಿಕೆಗೆ ಅನುಗುಣವಾಗಿ ಶಾಲೆ ಕೊಲಬಾ ಪರಿಸರಕ್ಕೆ ಸ್ಥಳಾಂತರಗೊಂಡಿತು. 1965 ರ ಸುಮಾರಿಗೆ, ಸಿ.ಎಸ್.ಟಿ. ರೈಲ್ವೆ ಸ್ಟೇಷನ್ ಎದುರಿಗಿರುವ ಕ್ಯಾಪಿಟಲ್ ಚಿತ್ರಮಂದಿರದ ಹಿಂಭಾಗದ ಬಾರ್ಡಾ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ರಾತ್ರಿ ಶಾಲೆಯನ್ನು ಸುಮಾರು 45 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಲಾಯಿತು.

2008 ರ ಸಂದರ್ಭದಲ್ಲಿ ಬಾರ್ಡಾ ಇಂಗ್ಲಿಷ್ ಹೈಸ್ಕೂಲ್‌ನ ಆಡಳಿತ ಸಮಿತಿಯು ಬದಲಾವಣೆಗೊಂಡು, ಹಗಲು ಶಾಲೆಯನ್ನು ಮುಚ್ಚಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ನಿರ್ಧರಿಸಿತು. ರಾತ್ರಿ ಶಾಲೆಯನ್ನು ಮುಚ್ಚುವ ಉದ್ದೇಶದಿಂದ, ಶಾಲೆಯ ಮಾಸಿಕ ಬಾಡಿಗೆಯನ್ನು ರೂ. 400 ರಿಂದ ನೇರವಾಗಿ ರೂ. 25,000 ಕ್ಕೆ ಏರಿಸಿತು. ಆ ಸಮಯದಲ್ಲಿ ಶಾಲೆಯಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗೆ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದರು ಮತ್ತು 8 ಹಾಗೂ 9ನೇ ತರಗತಿಗಳಿಗೆ ವಿಭಾಗಗಳನ್ನು ಹೊಂದಿದ ಏಕೈಕ ರಾತ್ರಿ ಶಾಲೆಯಾಗಿತ್ತು.

​ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ವಿದ್ಯಾದಾಯಿನಿ ಸಭೆಯು ಒಂದು ವರ್ಷಗಳ ಕಾಲ ಪ್ರತಿ ತಿಂಗಳು ರೂ. 25,000 ಬಾಡಿಗೆ ಪಾವತಿಸಿ ಶಾಲೆಯನ್ನು ನಡೆಸಿತು. ನಂತರ ಬಾರ್ಡಾ ಸ್ಕೂಲ್ ಆಡಳಿತ ಸಮಿತಿಯು ಶಾಲೆಯನ್ನು ಪಕ್ಕದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ, ಬಾಡಿಗೆಯನ್ನು ರೂ. 30,000 ಕ್ಕೆ ಏರಿಸಿತು. ಅಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಪ್ರಸ್ತುತ ವಿದ್ಯಾದಾಯಿನಿ ಸಭೆಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ಕೋಟ್ಯಾನ್ ಅವರ ಸಲಹೆಯಂತೆ ಸಭೆಯು ದಾನಿಗಳ ನೆರವಿನಿಂದ ಬಾಡಿಗೆ ಪಾವತಿಸಿತು.

​ಆದರೆ, ಅಕ್ಟೋಬರ್ 2010 ರಲ್ಲಿ, ಬಾರ್ಡಾ ಹೈಸ್ಕೂಲ್ ಆಡಳಿತ ಮಂಡಳಿಯು ಶಾಲಾ ಕಟ್ಟಡದಿಂದ ವಿದ್ಯಾದಾಯಿನಿ ರಾತ್ರಿ ಶಾಲೆಯನ್ನು ಹೊರಹಾಕಿತು. ಈ ಅತಂತ್ರ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳ ಕಳಕಳಿಯಿಂದ, ಸಭಾದ ಪದಾಧಿಕಾರಿಗಳಾದ ಶ್ರೀ ಜೆ.ಎಂ. ಕೋಟ್ಯಾನ್ ಮತ್ತು ಶ್ರೀ ಚಿತ್ರಾಪು ಕೆ.ಎಂ. ಕೋಟ್ಯಾನ್ ರವರು ಕನ್ನಡ ಭವನ ಶಾಲೆಯಲ್ಲಿ, ನಂತರ ಆರ್ಯ ಸಮಾಜದ ಕಟ್ಟಡದಲ್ಲಿ, ಬಿಲ್ಲವ ಜಾಗೃತಿ ಬಳಗದ ಕಚೇರಿಯಲ್ಲಿ ಮತ್ತು ಮಹೇಶ್ ಲಂಚ್ ಹೋಂನ ಮಳಿಗೆಯಲ್ಲಿ 2020 ರವರೆಗೆ ಶಾಲೆಯನ್ನು ನಡೆಸಿದರು. ತದನಂತರ 2021 ರಿಂದ ವಿದ್ಯಾದಾಯಿನಿ ಸಭೆಯ ಕಚೇರಿ ಮತ್ತು ಅದರ ಮೇಲಿನ ಕೊಠಡಿಯಲ್ಲಿ ಶಾಲೆಯನ್ನು ನಡೆಸಲು ಆರಂಭಿಸಿದರು. ಸೂಕ್ತ ಶಾಲಾ ವಾತಾವರಣವಿಲ್ಲದಿದ್ದರೂ, ವಿದ್ಯಾದಾಯಿನಿ ಸಭೆ ಹಾಗೂ ಸರ್ಕಾರೇತರ ಸಂಸ್ಥೆ ‘ಮಾಸೂಮ್’ನ ಸಹಕಾರದಿಂದ ಶಾಲೆಯು ಕಳೆದ 12 ವರ್ಷಗಳಿಂದ ಎಸ್.ಎಸ್.ಸಿ.ಯಲ್ಲಿ ಸತತವಾಗಿ 100% ಫಲಿತಾಂಶವನ್ನು ದಾಖಲಿಸುತ್ತಿದೆ.

2019 ರಲ್ಲಿ ಜಾರಿಗೆ ಬಂದ ಬನ್ಸಲ್ ಕಮಿಟಿ ನಿರ್ಣಯದ ಪ್ರಕಾರ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಹೊಸದಾಗಿ ರಾತ್ರಿ ಶಾಲೆಗೆ ಅನುಮತಿ ನೀಡಬಾರದು ಎಂಬ ವರದಿಯಿದ್ದರೂ, ಸಭಾವು ಮಂತ್ರಿ ಮಾನ್ಯರ ಸಹಾಯದಿಂದ ಕಟ್ಟಡಕ್ಕಾಗಿ ಪ್ರಯತ್ನಿಸಿತ್ತು. ಈ ಸ್ಥಳಾಂತರ ಸಾಧ್ಯವಾಗಲು, ಮಹಾನಗರ ಪಾಲಿಕೆಯ ದಾದರ್, ಕರಿ ರೋಡ್, ಪರೇಲ್, ಎ.ಎಂ.ಸಿ. ಆಫೀಸ್, ಸಿ.ಎಸ್.ಪಿ. ಆಫೀಸ್ ಸೇರಿದಂತೆ ಪ್ರತಿಯೊಂದು ಕಚೇರಿಗೆ ದಿನನಿತ್ಯ ಅಲೆದಾಡಿ, ಕಾರ್ಯನಿರ್ವಹಿಸಿದವರ ಶ್ರಮ ಮುಖ್ಯವಾಗಿದೆ.

​ಇದಕ್ಕೆ ಕಾರಣರಾದವರು:

  • ​ಸಭಾದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ಕೋಟ್ಯಾನ್ (ದಕ್ಷ ಮಾರ್ಗದರ್ಶನ).
  • ​ಗೌರವಾಧ್ಯಕ್ಷರಾದ ಶ್ರೀ ಜೆ.ಯಂ. ಕೋಟ್ಯಾನ್ (ಕಾಲಕಾಲಕ್ಕೆ ಸಲಹೆ).
  • ​ಕೋಶಾಧಿಕಾರಿ ಶ್ರೀ ಆರ್.ಕೆ. ಕೋಟ್ಯಾನ್ (ಕಾರ್ಯದ ಪ್ರಗತಿಯ ವಿಚಾರಣೆ).
  • ​ಗೌರವ ಕಾರ್ಯದರ್ಶಿ ಶ್ರೀ ಚಿತ್ರಾಪು ಕೆ.ಎಂ. ಕೋಟ್ಯಾನ್ (ಪ್ರೋತ್ಸಾಹ ಮತ್ತು ದಾಖಲೆಗಳ ಸಹಕಾರ).
  • ​ಶಾಲಾ ಶಿಕ್ಷಕಿ ಚಿತ್ರಲೇಖ ಮತ್ತು ಮುಖ್ಯ ಶಿಕ್ಷಕ ಶ್ರೀ ಪ್ರಕಾಶ್ಚಂದ್ರ ಎಂ. ಆರ್. ಬಂಗೇರ (ಸತತ ಬಿ.ಎಂ.ಸಿ. ಕಚೇರಿಗಳ ಭೇಟಿ).
  • ​ಶಾಲಾಧಿಕಾರಿ ಡಾ. ಪ್ರಕಾಶ್ ಮೂಡುಬಿದಿರೆ (ಮುಂದಾಳತ್ವ ಮತ್ತು ಕಾಳಜಿ).

​ಈ ಎಲ್ಲರ ಪ್ರಯತ್ನದ ಫಲವಾಗಿ, ವಿದ್ಯಾರ್ಥಿಗಳ ಬಗ್ಗೆ ಅವರಿಗಿದ್ದ ಕಾಳಜಿಯಿಂದ, 15 ವರ್ಷಗಳ ನಂತರ ಸಭೆಗೆ ಸೂಕ್ತ ಸ್ಥಳದಲ್ಲಿ ಶಾಲೆಯನ್ನು ನಡೆಸುವ ಅವಕಾಶ ದೊರೆತಿದೆ.

​🎊 ಉದ್ಘಾಟನಾ ಸಮಾರಂಭ

​ವಿದ್ಯಾದಾಯಿನಿ ಸಭೆಯು ಈ ಸ್ಥಳಾಂತರ ಕಾರ್ಯಕ್ರಮವನ್ನು ಅಕ್ಟೋಬರ್ 31, 2025 ರಂದು ಸಾಯಂಕಾಲ 6 ಗಂಟೆಗೆ ಹಮ್ಮಿಕೊಂಡಿದೆ. ಮುಂಬೈ ಜಿ.ಪಿ.ಓ. ಎದುರುಗಡೆ ಇರುವ ಮನೋಹರ್ ದಾಸ್ (ಮೋದಿ) ಸ್ಟ್ರೀಟ್‌ನ ಮಹಾನಗರಪಾಲಿಕೆಯ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

​ಪ್ರಸಿದ್ಧ ಮಹೇಶ್ ಲಂಚ್ ಹೋಂ ಹೋಟೆಲಿನ ಮಾಲಕಿ ಹಾಗೂ ದಿವಂಗತ ಸೂರು ಸಿ. ಕರ್ಕೇರರವರ ಧರ್ಮಪತ್ನಿ ಶ್ರೀಮತಿ ಶಾರದಾ ಸೂರು ಕರ್ಕೇರರವರು ಇತರ ಅತಿಥಿಗಳ ಉಪಸ್ಥಿತಿಯಲ್ಲಿ ಶಾಲೆಯನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ.

​ವಿದ್ಯಾದಾಯಿನಿ ಸಭಾದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ, ಸದಸ್ಯರು, ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು, ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಸರ್ವ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದ್ದಾರೆ.



Related posts

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಪೂರ್ವ – ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ 26ನೇ ವಾರ್ಷಿಕ ಅಯ್ಯಪ್ಪ ಪೂಜೆ ಸಂಪನ್ನ.

Mumbai News Desk

ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಹಾಗೂ ಶನೀಶ್ವರ ಮಹಾಪೂಜೆ.

Mumbai News Desk

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸಮೀಕ್ಷಾ ಪ್ರಶಾಂತ್ ಬಾಗಲ್ ಗೆ ಶೇ 86.4 ಅಂಕ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ನಾಡಹಬ್ಬದ ನಿಮಿತ್ತ ‘ಕವಿಗೋಷ್ಠಿ’ಯ ವೈಭವ

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವ ಸಮಾರೋಪ ಸಮಾರಂಭ

Mumbai News Desk