July 22, 2026
Mumbai News Kannada
ಮುಂಬಯಿ

ಯಂಗ್ ಮೆನ್ಸ್ ಎಜ್ಯುಕೇಶನ್ ಸೊಸೈಟಿ ವತಿಯಿಂದ ಧಾರಾವಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾಲಯದ ಕನ್ನಡ ಮಾಧ್ಯಮದ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ







​ಮುಂಬೈನ ಹಿರಿಯ ವಿದ್ಯಾಸಂಸ್ಥೆಯಾದ ಯಂಗ್ ಮೆನ್ಸ್ ಎಜ್ಯುಕೇಶನ್ ಸೊಸೈಟಿ ವತಿಯಿಂದ ಧಾರಾವಿಯ 90 ಫೀಟ್ ರೋಡ್‌ನಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾಲಯದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವು ನವೆಂಬರ್ 27ರಂದು ಶಾಲಾ ಕಿರು ಸಭಾಗೃಹದಲ್ಲಿ ಯಶಸ್ವಿಯಾಗಿ ನಡೆಯಿತು.

​ಯಂಗ್ ಮೆನ್ಸ್ ಎಜುಕೇಶನ್ ಸೊಸೈಟಿಯ ಟ್ರಸ್ಟಿಗಳಾದ ಎನ್. ಪಿ. ಸುವರ್ಣ, ಅಧ್ಯಕ್ಷರಾದ ವಿಠ್ಠಲ್ ಡಿ. ಕರ್ಕೇರ, ಉಪಾಧ್ಯಕ್ಷರಾದ ಶೇಖರ್ ಎನ್. ಸುವರ್ಣ, ಸಮಿತಿ ಸದಸ್ಯರುಗಳಾದ ವಸಂತ್ ಎನ್. ಸುವರ್ಣ, ಸುಬ್ರಮಣ್ಯ ಮೊಗವೀರ, ಪ್ರಭಾ ಎನ್. ಸುವರ್ಣ, ಹೋಪ್ ಫೌಂಡೇಶನ್‌ನ ಪ್ರವರ್ತಕರಾದ ಡಾ. ಪ್ರಕಾಶ್ ಮೂಡಬಿದ್ರೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಶಾಲೆಯ ಕಾರ್ಯದರ್ಶಿ ಮತ್ತು ಉಸ್ತುವಾರಿ ನಿರಂಜನ್ ನಂದಪಳ್ಳಿ, ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಶೆಟ್ಟಿ – ಇವರ ಉಪಸ್ಥಿತಿಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.

​ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ವಿಠ್ಠಲ್ ಡಿ. ಕರ್ಕೇರ, “ನಮ್ಮ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾರ್ಜನೆ ಮಾಡಿ, ಜೀವನದಲ್ಲಿ ಯಶಸ್ಸುಗಳಿಸಿ ಹೆತ್ತವರಿಗೂ ಮತ್ತು ಕಲಿತ ಶಾಲೆಗೂ ಕೀರ್ತಿ ತರಬೇಕು” ಎಂದು ಹಾರೈಸಿದರು.

​ಸಂಸ್ಥೆಯ ಹಿರಿಯ ಟ್ರಸ್ಟಿಗಳಾದ ಎನ್. ಪಿ. ಸುವರ್ಣ ಅವರು ಮಕ್ಕಳಿಗೆ ಹಿತವಚನ ನೀಡುತ್ತಾ, “ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದೇವೆ ಎಂಬ ಕೀಳರಿಮೆ ನಿಮ್ಮಲ್ಲಿ ಇರಬಾರದು. ನಾನು ಯಂಗ್ ಮೆನ್ಸ್ ಎಜ್ಯುಕೇಶನ್ ಸೊಸೈಟಿಯ ರಾತ್ರಿ ಶಾಲೆಯಲ್ಲಿಯೇ ಕಲಿತು, ಮುಂದೆ ಪದವಿ, ಸ್ನಾತಕೋತ್ತರ ಪದವಿ ಪಡೆದು, ಉತ್ತಮ ಸ್ಥಾನ-ಮಾನ ಗಳಿಸಿ, ಇಂದು ಅದೇ ಸಂಸ್ಥೆಯ ಟ್ರಸ್ಟಿಯಾಗಿರುತ್ತೇನೆ. ಮುಂಬೈನ ರಾತ್ರಿ ಶಾಲೆಗಳು ನೂರಾರು ಜನರ ಬಾಳಿಗೆ ಆಶಾದೀಪವಾಗಿತ್ತು. ನೀವೆಲ್ಲರೂ ಕಠಿಣ ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ದೇಶದ ಸತ್ಪ್ರಜೆಗಳಾಗಿ” ಎಂದು ಪ್ರೇರೇಪಿಸಿದರು.

​ಸಮಿತಿ ಸದಸ್ಯ ವಸಂತ ಸುವರ್ಣ ಮಾತನಾಡುತ್ತಾ, “ಯಂಗ್ ಮೆನ್ಸ್ ಎಜ್ಯುಕೇಶನ್ ಸೊಸೈಟಿ ಸುಮಾರು 80 ವರ್ಷಗಳ ಇತಿಹಾಸವಿರುವ ಒಂದು ದೊಡ್ಡ ಸಂಸ್ಥೆ. ಒಂದು ಕಾಲದಲ್ಲಿ ಇಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವುದು ಕಷ್ಟವಾಗಿತ್ತು. ಕಾಲಕ್ರಮೇಣ ವಿದ್ಯಾರ್ಥಿಗಳ ಕೊರತೆಯಿಂದ ರಾತ್ರಿ ಶಾಲೆಗಳು ಮುಚ್ಚುತ್ತಾ ಹೋಗಿವೆ. ಇಂದು ಕನ್ನಡ ಮಾಧ್ಯಮ ಶಾಲೆಗಳಿಗೂ ಇದೇ ಪರಿಸ್ಥಿತಿ ಬಂದಿದೆ. ನಾನು ಕೂಡ ಯಂಗ್ ಮೆನ್ಸ್‌ನಲ್ಲಿ ಕಲಿತು, ಇಂದು ವೇದಿಕೆಯಲ್ಲಿ ಮಾತನಾಡುತ್ತಿದ್ದೇನೆ ಎನ್ನಲು ಹೆಮ್ಮೆಯಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಸಂಸ್ಥೆಯು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ತಾವು ಮುನ್ಸಿಪಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಕೀಳರಿಮೆ ಪಡಬೇಡಿ. ನಿಮ್ಮಲ್ಲಿ ಪ್ರತಿಭೆ ಇದ್ದರೆ, ಅವಕಾಶ ಖಂಡಿತ ಸಿಗುತ್ತದೆ” ಎಂದರು.

​ಸಮಿತಿ ಸದಸ್ಯೆ ಪ್ರಭಾ ಎನ್. ಸುವರ್ಣ ಅವರು ತಮ್ಮ ಅನಿಸಿಕೆ ತಿಳಿಸುತ್ತಾ, “ಶಾಲೆಯನ್ನು ಮತ್ತು ಇಲ್ಲಿಯ ವಿದ್ಯಾರ್ಥಿಗಳನ್ನು ಕಂಡು ಬಹಳ ಸಂತೋಷವಾಯಿತು. ನಾನು ಕೂಡ ಮುನ್ಸಿಪಲ್ ಶಾಲೆಯಲ್ಲಿ ಕಲಿತವಳು. ಎಲ್ಲಕ್ಕಿಂತ ದೊಡ್ಡ ದಾನವೆಂದರೆ ವಿದ್ಯೆ, ಅದನ್ನು ಯಾರಿಂದಲೂ ಕಸಿಯಲಾಗುವುದಿಲ್ಲ. ನೀವೆಲ್ಲರೂ ಮನಸ್ಸಿಟ್ಟು ಕಲಿತು, ನಿಮ್ಮ ಗುರಿಯನ್ನು ತಲುಪಿರಿ. ನಿಮ್ಮ ಗುರುಗಳನ್ನು ಎಂದಿಗೂ ಮರೆಯದಿರಿ” ಎಂದು ವಿದ್ಯಾರ್ಥಿಗಳಿಗೆ ಉಪದೇಶ ನೀಡಿದರು.

​ಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಪ್ರವೀಣ್ ಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕಿ ಸುಜಾತ ವಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು. ಶಿಕ್ಷಕರಾದ ಧನರಾಜ್ ಪೂಜಾರಿ, ರಾಜಶ್ರೀ ಶ್ರೀಯಾನ್ ಮತ್ತು ಶಿಕ್ಷಕೇತರ ವರ್ಗದವರು ಕಾರ್ಯಕ್ರಮಕ್ಕೆ ಸಹಕರಿಸಿದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ  ನಿಧಿ ಸಂತೋಷ್ ಶೆಟ್ಟಿ, ಗೆ ಶೇ 91.80 ಅಂಕ.

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ಮೀರಾಭಾಯಂದರ್ ಹೋಟೇಲ್ಸ್ ಅಸೋಸಿಯೇಷನಿನ ವಿಶೇಷ ಸರ್ವ ಸಾಮಾನ್ಯ ಸಭೆ, ಸನ್ಮಾನ.

Mumbai News Desk

ಭಾರತ್ ಬ್ಯಾಂಕ್ ಈ ವರ್ಷದ 2024 ಕ್ಯಾಲೆಂಡರ್ ಬಿಡುಗಡೆ.

Mumbai News Desk

ಕರ್ನಾಟಕ ಸಂಘ, ಸಯನ್ ದಸರಾ ಹಬ್ಬದ ನಿಮಿತ್ತ ಭಜನೆ ಕಾರ್ಯಕ್ರಮ

Mumbai News Desk

ಬಂಟರ ಸಂಘ ಮುಂಬಯಿ ವಸಾಯಿ ದಹಾಣ ಪ್ರಾದೇಶಿಕ ಸಮಿತಿ ಯಿಂದ.ಸಮಾಜದ ಅರ್ಥಿಕವಾಗಿ ಹಿಂದುಳಿದ ಪರಿವಾರ ಮತ್ತು ವಿದ್ಯಾರ್ಥಿಗಳೀಗೆ 2025-26 ಸಾಲಿನ ಆರ್ಥಿಕ ಸಹಾಯ ವಿತರಣೆ.

Mumbai News Desk