July 23, 2026
Mumbai News Kannada
ಮುಂಬಯಿ

ಬೊರಿವಲಿ: ಜಗದೀಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ; ಲೋಕಕಲ್ಯಾಣಕ್ಕೆ ಧರ್ಮ ಜಾಗೃತಿ ಅಗತ್ಯ: ಪೇಜಾವರ ಶ್ರೀ







​ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್

ಮುಂಬೈ: “ಕಲಿಯುಗದಲ್ಲಿ ಸನಾತನ ಧರ್ಮದ ರಕ್ಷಣೆ ಹಾಗೂ ಸಮಾಜದ ಸ್ವಾಸ್ಥ್ಯಕ್ಕಾಗಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಗತ್ಯವಿದೆ. ಆರಾಧನಾಲಯಗಳ ಜೀರ್ಣೋದ್ದಾರ ಕಾರ್ಯಗಳು ನಿರಂತರವಾಗಿ ನಡೆಯುವ ಮೂಲಕ ಶ್ರೇಷ್ಠ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ,” ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

​ಬೊರಿವಲಿ ಪೂರ್ವದ ಶ್ರೀಕೃಷ್ಣ ನಗರದ ನ್ಯಾನ್ಸಿ ಕಾಂಪ್ಲೆಕ್ಸ್‌ನಲ್ಲಿ (ನವೀಕೃತ ಡಿಜಿಎಸ್ ಶೀತಲ್ ರಿಗಾಲಿಯಾ) ನೆಲೆಸಿರುವ ಇತಿಹಾಸ ಪ್ರಸಿದ್ಧ ಗಾಂಭೀವಿ ಶ್ರೀ ಜಗದೀಶ್ವರಿ ಅಮ್ಮನವರ ಶಿಲಾಮಯ ಮಂದಿರದ ಪುನರ್‌ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

​ಕಣ್ಮನ ಸೆಳೆದ ವೈಭವದ ಶೋಭಾಯಾತ್ರೆ

​ಉತ್ಸವದ ಅಂಗವಾಗಿ ಫೆಬ್ರವರಿ 6ರ ಸಂಜೆ ನಡೆದ ವೈಭವದ ಶೋಭಾಯಾತ್ರೆ ಭಕ್ತರ ಕಣ್ಮನ ಸೆಳೆಯಿತು. ನಾಸಿಕ್ ಡೋಲು, ಜಾಲಿಂ ಮೇಳ, ಯಕ್ಷಗಾನ ಪ್ರಾತ್ಯಕ್ಷಿಕೆ, ಸಾಂಪ್ರದಾಯಿಕ ಚೆಂಡೆ ವಾದನ ಹಾಗೂ ತುಳುನಾಡಿನ ಸಾಂಸ್ಕೃತಿಕ ಹೆಮ್ಮೆಯ ಹುಲಿವೇಷ ಕುಣಿತ ಮೆರವಣಿಗೆಗೆ ವಿಶೇಷ ಮೆರಗು ನೀಡಿದವು. ನೂರಾರು ಸುಮಂಗಲೆಯರು ಪೂರ್ಣಕುಂಭ ಹಾಗೂ ಕಲಶಗಳನ್ನು ಹಿಡಿದು ಭಕ್ತಿಯಿಂದ ಸಾಗಿದ್ದು ಶೋಭಾಯಾತ್ರೆಯ ಗಾಂಭೀರ್ಯವನ್ನು ಹೆಚ್ಚಿಸಿತು.

ಫೆಬ್ರವರಿ 3 ರಿಂದಲೇ ದೇವಸ್ಥಾನದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಶ್ರೀ ಜಗದೀಶ್ವರಿ ದೇವಿ, ಗಣಪತಿ ಹಾಗೂ ನಾಗದೇವರ ಬಿಂಬ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಫೆಬ್ರವರಿ 7ರ ಶನಿವಾರದಂದು ದೇವಸ್ಥಾನದ ಆವರಣದಲ್ಲಿ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಹಾಗೂ ವಿಶೇಷ ಪೂಜೆಗಳು ಭಕ್ತಿಭಾವದಿಂದ ಜರುಗಿದವು.

​ಈ ಧಾರ್ಮಿಕ ವಾಚನ ಕಾರ್ಯಕ್ರಮದಲ್ಲಿ ವಾಚಕರಾಗಿ ಸತೀಶ್ ವೈ. ಕೋಟ್ಯಾನ್, ರಾಮ ಕರ್ಕೇರ, ನಿತ್ಯಾನಂದ ಶೆಟ್ಟಿ, ಶುಭ ಪೂಜಾರಿ ಹಾಗೂ ಕೃಷ್ಣ ಅಮೀನ್ ಅವರು ಪಾಲ್ಗೊಂಡು ಗ್ರಂಥದ ಪವಿತ್ರ ಸಾಲುಗಳನ್ನು ವಾಚಿಸಿದರು.

​ಗ್ರಂಥದ ಸಾರವನ್ನು ಭಕ್ತರಿಗೆ ತಲುಪಿಸುವ ಅರ್ಥದಾರಿಗಳಾಗಿ ರತ್ನಾಕರ ಅಂಚನ್, ರವಿ ಅಮೀನ್, ಕೃಷ್ಣ ಅಮೀನ್, ಪ್ರವೀಣ್ ಪೂಜಾರಿ, ಪುಷ್ಪಾ ಬಂಗೇರ, ಸೋಮನಾಥ ಶಾಂತಿ ಮತ್ತು ಮೋಹನ್ ಶೆಟ್ಟಿಗಾರ್ ಅವರು ಸಹಕರಿಸಿ, ಕಾರ್ಯಕ್ರಮದ ಸಾಫಲ್ಯಕ್ಕೆ ಕಾರಣರಾದರು.

ಬ್ರಹ್ಮಶ್ರೀ ಕಳತ್ತೂರು ಉದಯ ತಂತ್ರಿಗಳ ಪೌರೋಹಿತ್ಯದಲ್ಲಿ, ವೇದಮೂರ್ತಿ ಪಕ್ಷಿಕೆರೆ ವಿಜಯ್ ಉಪಾಧ್ಯಾಯ ಹಾಗೂ ಸಂತೋಷ್ ಕುಮಾರ್ ಭಟ್ ಮುದ್ರಾಡಿ ಅವರ ನೇತೃತ್ವದಲ್ಲಿ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ ಮತ್ತು ಕಲಶಾಧಿವಾಸದಂತಹ ಧಾರ್ಮಿಕ ವಿಧಿಗಳು ಸಂಪನ್ನಗೊಂಡವು. ಮಂದಿರ ನಿರ್ಮಾಣದ ರೂವಾರಿಗಳಾದ ಡಿಜಿಎಸ್ ಗ್ರೂಪ್‌ನ ಆಡಳಿತ ನಿರ್ದೇಶಕ ಈಶ್ವರ್‌ದೇವ್ ಶುಕ್ಲ ದಂಪತಿ ಕಾರ್ಯಕ್ರಮದ ಯಜಮಾನಿಕೆ ವಹಿಸಿದ್ದರು.

ಈ ಪವಿತ್ರ ಸಂದರ್ಭದಲ್ಲಿ ಮಾಜಿ ಸಂಸದ ಗೋಪಾಲ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರವೀಣ್ ದಾರೆಕರ್, ಕಾರ್ಪೊರೇಟರ್‌ಗಳಾದ ಪ್ರಕಾಶ ದಾರೆಕರ್, ಸಂಜಯ್ ಘಾಡಿ, ಭಾಸ್ಕರ್ ಖುರ್ಸಂಗೆ, ಬಿಲ್ಲವರ ಅಸೋಸಿಯೇಶನ್ ಮುಂಬೈ ಅಧ್ಯಕ್ಷ ಹರೀಶ್ ಜಿ. ಅಮೀನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಕಾರ್ಯಾಧ್ಯಕ್ಷ ಎನ್.ಟಿ. ಪೂಜಾರಿ (ಶಿವ ಸಾಗರ್ ಗ್ರೂಪ್), ಕರ್ನಾಟಕ ಮಲ್ಲ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಪಾಲ್ಗೊಂಡಿದ್ದರು. ಉದ್ಯಮಿಗಳಾದ ಅನಿಲ್ ಸಾಲಿಯಾನ್, ರಿತೇಶ್ ಪೂಜಾರಿ, ರವಿ ಎಸ್. ಶೆಟ್ಟಿ, ಪದ್ಮನಾಭ ಎಸ್. ಪಯ್ಯಡೆ, ಮುಂಡಪ್ಪ ಎಸ್. ಪಯ್ಯಡೆ ಹಾಗೂ ರತ್ನಾಕರ್ ಅಂಚನ್ ಉಪಸ್ಥಿತರಿದ್ದರು.

​ಶ್ರೀ ಜಗದೀಶ್ವರಿ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಶೇಖರ್ ಎಂ. ಕೋಟ್ಯಾನ್, ಕಾರ್ಯದರ್ಶಿ ರವೀಂದ್ರ ಆರ್. ಮೆಂಡನ್, ಕೋಶಾಧಿಕಾರಿ ಚೇತನ್ ಪೂಜಾರಿ ಹಾಗೂ ಸಲಹೆಗಾರರಾದ ರಾಜೇಶ್ ಪೂಜಾರಿ, ಅರುಣ್ ಮೊಯ್ಲಿ, ರೋಹಿತ್ ಸುವರ್ಣ, ಪುಷ್ಪಾ ಜಿ. ಬಂಗೇರ ಅವರು ಆಗಮಿಸಿದ ಗಣ್ಯರನ್ನು ಗೌರವಿಸಿದರು.

​ ಬ್ರಹ್ಮಕಲಶಾಭಿಷೇಕ (ಫೆಬ್ರವರಿ 8)

​ಉತ್ಸವದ ಪ್ರಮುಖ ಘಟ್ಟವಾದ ಬ್ರಹ್ಮಕಲಶಾಭಿಷೇಕ ಭಾನುವಾರ ಬೆಳಿಗ್ಗೆ 8:25ರ ಕುಂಭ ಲಗ್ನದಲ್ಲಿ ನೆರವೇರಲಿದೆ. ಇದರೊಂದಿಗೆ ಚಂಡಿಕಾ ಯಾಗ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆಯಿಂದ ದುರ್ಗಾನಮಸ್ಕಾರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ರಂಗಪೂಜೆ ನಡೆಯಲಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.



Related posts

ಬಿಲ್ಲವರ ಅಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಸಮಿತಿ – ಭಕ್ತಿಭಾವ ಮತ್ತು ವಿಜೃಂಭಣೆಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ.

Mumbai News Desk

ಮಂಜೇಶ್ವರದ ಸೊಸೆ ಮುಂಬಯಿ ಮನಪಾ ಸದಸ್ಯೆ : 25ನೇ ವಾರ್ಡ್ ನಿಂದ ನಿಶಾ ಪರುಳೇಕರ್ – ಬಂಗೇರ ಆಯ್ಕೆ

Mumbai News Desk

ಕನ್ನಡ ಸಂಘ ಸಯನ್ ನ ಆಯೋಜನೆಯಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ಮಲಾಡ್ ಶ್ರೀಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ ವಿವಿಧ ಶನಿಮಂದಿರದವರಿಂದ ಶ್ರೀ ಶನಿ ಗ್ರಂಥ ಪಾರಾಯಣ.

Mumbai News Desk

ಗೊರೇಗಾಂವ್: ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

Mumbai News Desk