34 C
Mumbai
March 6, 2026
Mumbai News Kannada
ಲೇಖನ

‘ಗುರುವೇ ನಮ್ಮ ಗುರುತು’





ಹುಟ್ಟು ಸಾವು ಮನುಷ್ಯನಿಗೆ ಒಮ್ಮೆ ವರವಾಗಿ ಒಮ್ಮೆ ಶಾಪವಾಗಿ ಕಾಡಬಹುದು, ಹುಟ್ಟು ಸಾವಿನ ನಡುವೆ ನಮ್ಮ ಸತ್ಕಾರ್ಯಗಳು ನಮ್ಮನ್ನ ನಮ್ಮ ಬದುಕನ್ನ ರೂಪಿಸುತ್ತೆ ಅನ್ನುವ ಮಾತನ್ನು ನಾವೆಲ್ಲ ನಂಬಿಕೊಂಡು ಬಂದವರು.ಅದಕ್ಕೆ ಸನಾತನ ಧರ್ಮದಲ್ಲಿ ಅತೀ ಉನ್ನತವಾದ ಶ್ರೇಷ್ಠ ಸ್ಥಾನಮಾನವಿದೆ . ಬಲ್ಲವರು ಹೇಳಿದ ಹಾಗೇ ಹುಟ್ಟು ಸಾವು ಒಂದು ಪುಸ್ತಕದ ಮೊದಲ ಹಾಗೂ ಕೊನೆಯ ಪುಟವಿದ್ದಂತೆ,ಮೊದಲ ಪುಟ ಹುಟ್ಟು ,ಕೊನೇಯ ಪುಟ ಸಾವು ಇವೆರಡು ಪುಟವನ್ನು ಬ್ರಹ್ಮನಿಂದಲೇ ಬರೆಸಿಕೊಂಡು ಬರುವ ನಾವು ಈ ನಡುವಿನ ಪುಟಗಳನ್ನು ನಾವೇ ಬರೆಯುವುದು ನಮ್ಮ ಧರ್ಮ ಕರ್ಮಗಳ ಸತ್ಕಾರ್ಯದಿಂದ .ಹುಟ್ಟಿನ ಖುಷಿ ಸಾವಿನ ದುಖಃ ನಮ್ಮ ಜೀವನದ ಅವಿಭಾಜ್ಯ ಅಂಗ .ಪ್ರತಿ ಮನುಷ್ಯನ ಹುಟ್ಟಿಗೂ ಕಾರಣ ಇರುತ್ತೆ ಅನ್ನುವ ಹಾಗೇ ಕೆಲವರ ಜೀವನದಲ್ಲಿ ಹಲವಾರು ಪವಾಡಗಳು ನಡೆದು ಹೋಗುತ್ತೆ .ಕೆಲವೊಮ್ಮೆ ಈಗಿನ ಯುಗದಲ್ಲಿ ಇದು ನಿಜಾನ ?ಅನ್ನುವಂತೆ ಮೂಗಿನ ಮೇಲೆ ಬೆರಳಿಡುವಷ್ಟು ಮೂಕರಾಗಿಬಿಡ್ತೀವಿ.ಈ ಮಾತು ನಮ್ಮ ವರ್ಲಿ ಅಪ್ಪಾಜಿ ಬೀಡುನ್ನು ಕಟ್ಟಿ ಬೆಳೆಸಿ ಪೋಷಿಸಿ ಉಳಿಸಿದವರಲ್ಲಿ ನಮ್ಮ ಎಲ್ಲರ ನೆಚ್ಚಿನ ಗುರುಸ್ವಾಮಿಯವರಾದ  ರಮೇಶ್‌ ಗುರುಸ್ವಾಮಿರ ಬಗ್ಗೆ ನೂರಕ್ಕೆ ನೂರು ಸತ್ಯ.

ಅಪ್ಪಾಜಿ ಬೀಡನ್ನು ಪಾವನ ಕ್ಷೇತ್ರವಾಗಿಸಿದ ಹೆಮ್ಮೆ ನೇರವಾಗಿ ಗುರುಸ್ವಾಮಿಗಳಿಗೆ ಸಲ್ಲುತ್ತದೆ ಎಂದರೂ ತಪ್ಪಾಗಲಾರದು . ಸುಮಾರು ನಲ್ವತ್ತು ವರುಷದ ಹಿಂದೆ ಈ ಕ್ಷೇತ್ರಕ್ಕೆ ಕಾಲಿಟ್ಟವರು ತನ್ನ ಬೆಳವಣಿಗೆಯ ಜೊತೆ ಕ್ಷೇತ್ರದ ಬೆಳವಣಿಗೆಗೆ ನಿರಂತರ ದುಡಿದವರು . ಇಲ್ಲಿ ತಾರತಮ್ಯದ ಗಾಳಿಯನ್ನು ಸುಳಿಯಲು ಬಿಡದ ಸ್ವಾಮೀಜಿಯವರು ತನ್ನ ಜೊತೆ ಅಯ್ಯಪ್ಪ ಭಕ್ತ ಸ್ವಾಮಿಗಳನ್ನ ಕಟ್ಟಿಕೊಂಡು ಶಬರಿ ಮಲೆ ಕ್ಷೇತ್ರಕ್ಕೆ ಪ್ರತಿ ವರುಷವೂ ಹೋಗಿ ಬರುವುದು ವಾಡಿಕೆ. ಪ್ರತಿ ವರುಷ ಹೋಗಲು ಇಚ್ಚೆ ಇರುವ ಒಂದಷ್ಟು ಕನ್ನಿ ಸ್ವಾಮಿಗಳನ್ನು,ವೃತಾಧಾರಿಗಳನ್ನು ತಮ್ಮ ಶಿಬಿರದಲ್ಲಿ ಸವಲತ್ತು ನೀಡಿ ದರುಶನ ಪಡೆದು ಹಿಂತಿರುಗಿ ಕರೆತರುವ ಜವಾಬ್ಧಾರಿಯನ್ನು ಹೊತ್ತು, ಶಿಷ್ಯರಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಸತ್ಕಾರ್ಯ ವನ್ನು ನಡೆಸಿಕೊಂಡು ಬರುತ್ತಿದ್ದರು.ಆಡಂಬರದ ಈ ಯುಗದಲ್ಲಿ ಎಲ್ಲವನ್ನು ಶಾಸ್ತ್ರ ಬದ್ದವಾಗಿ ನಿಯಮದಂತೆ ಲಾಲಿಸಿ ಪಾಲಿಸಿ ಆಲಿಸಿ 48 ದಿನಗಳ ಒಂದು ಮಂಡಲವನ್ನು ಪೂರೈಸಿ ದೇವರ ದರುಷನ ಪಡೆಯುವುದು ಪ್ರತಿ ವರುಷದ ಇವರ ಸತ್ಕಾರ್ಯವೇ ಸರಿ. ಹಾಗೇ ಸುಮಾರು ಸಾವಿರಕ್ಕಿಂತಲೂ ಹೆಚ್ಚು ಸ್ವಾಮಿಜಿಗಳನ್ನು ತನ್ನ ಜೊತೆ ಶಬರಿ ಮಲೆಗೆ ಕರೆದೊಯ್ಯುತ್ತಿದ್ದರು. ಇದ್ದಕ್ಕೆ ಸದಾ ಜೊತೆ ನೀಡುತ್ತಿದ್ದವರು ಅವರ ಧರ್ಮ ಪತ್ನಿ ಶಾಂಭವಿ ಆರ್‌ ಶೆಟ್ಟಿ, ಮತ್ತು ಮಕ್ಕಳು ಕೂಡಾ. ಸುಮಾರು 31 ಬಾರಿ ರಮೇಶ್‌ ಗುರುಸ್ವಾಮಿಯವರು.

 ಇರುಮುಡಿಯ ಜೊತೆ ಶಬರಿಮಲೆಗೆ ಹೋಗಿ ದೇವರ ದರುಷನ ಪಡೆದು ದೇವರ ಆಶೀರ್ವಾದ ಪಡೆದು ಬಂದವರು .

ಈ ಕ್ಷೇತ್ರದಲ್ಲಿ ಧಾರ್ಮಿಕ ಕೆಲಸ ಕಾರ್ಯಗಳು ಹರಿಕಥೆ ,ಭಜನೆ, ಅನ್ನದಾನ ಹಿರಿಯ ಕಿರಿಯರೆನ್ನದೆ ಗೌರವ ಸನ್ಮಾನ ,ಸತ್ಸಂಗ ,ಸತ್ಕಾರ ಅನ್ನದಾನ ,ಪೂಜೆ ,ಪುನಸ್ಕಾರ ಹೋಮ ಪಡಿಪೂಜೆ ಇತ್ಯಾದಿ ಸತ್ಕಾರ್ಯಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದು ತಮಗೆಲ್ಲರಿಗೂ ತಿಳಿದ ವಿಷಯ.

      ಮುಂದೆ ಗುರಿ , ಹಿಂದೆ ಗುರು ಇದ್ದರೆ ಬದುಕು ಸ್ಪಷ್ಟ ಎಂಬಂತೆ ಇವರೇ ಅರಿವಿನ ಗುರುವಾಗಿದ್ದರು .ಇವರೇ ನಮ್ಮ ಗುರುತಾಗಿದ್ದರು .ನಮಗೆಲ್ಲರಿಗೂ ಹೆಗ್ಗುರುತಾಗಿದ್ದರು. ಮಕ್ಕಳಿರಲಿ ಬಡವ ಬಲ್ಲಿದ ಶ್ರೀಮಂತರಿರಲಿ ಆ ಕ್ಷೇತ್ರಕ್ಕೆ ಬಂದ ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುತ್ತಿದ್ದ ಗುರು ಸ್ವಾಮಿಯವರು ಎಲ್ಲರನ್ನು ಸ್ವಾಮಿಲೇ ಸ್ವಾಮಿಲೇ ಎಂದು ಸದಾ ಕರೆಯುತ್ತಿದ್ದರು.

 ಎಲ್ಲರನ್ನು ಒಟ್ಟುಗೂಡಿಸಿ ಮುಂದೆಯೂ ಇಲ್ಲಿನ ಕಾರ್ಯ ಹೀಗೆಯೇ ಮುಂದುವರಿಯಬೇಕು ಮುನ್ನಡೆಸಿಕೊಂಡು ಹೋಗಬೇಕು ಎಂಬ ದೂರಾಲೋಚನೆಯಿಂದ ಸಮಾನ ಮನಸ್ಕರನ್ನು ಒಟ್ಟುಗೂಡಿಸಿ ಈ ಕ್ಷೇತ್ರಕ್ಕೆ ಒಂದು ಟ್ರಸ್ಟ್‌ ಮಾಡಿದರು.ಉಳಿಸಿ ಬೆಳೆಸುವುದೇ ಅವರ ಉದ್ದೇಶವೂ ಅಗಿತ್ತು.ಈ ಕ್ಷೇತ್ರ ನಿಂತ ನೀರಾಗಬಾರದು ನಿರಂತರ ಹರಿಯುವ ಪಂಪಾ ನದಿಯಂತೆ ಹರಿಯುತ್ತಿರಬೇಕು . ಜೊತೆಗೆ ಅಪ್ಪಾಜಿ ಬೀಡಿನ ಮಹಿಳೆಯರನ್ನು ಒಟ್ಟುಗೂಡಿಸಿ ಮಹಿಳಾ ವಿಭಾಗ ಆರಂಭಿಸಿದರು.

ಭಜನೆ ಮಾಡಿದ ಕ್ಷೇತ್ರ ವಿಭಜನೆ ಆಗೋಲ್ಲ ಅನ್ನುವಂತೆ ಅಪ್ಪಾಜಿ ಬೀಡಿನಲ್ಲೂ ಮಹಿಳಾ ಮಣಿಗಳೇ ಭಜನಾ ಸತ್ಸಂಗ ನಡೆಸಿಕೊಡುತ್ತ ಬಂದಿದ್ದಾರೆ. ಅಪ್ಪಾಜಿ ಬೀಡಿನ ಮಹಿಳೆಯರೂ ಒಗ್ಗಟ್ಟು ಒಮ್ಮನಿಸ್ಸಿನಿಂದ ವಾರಕ್ಕೊಮ್ಮೆ ಭಜನಾ ಸತ್ಸಂಗ ನಡೆಸಿಕೊಡುತ್ತಿರುವುದು ಅವರು ಗುರುವಿನ ಮೇಲಿಟ್ಟ ಅಭಿಮಾನ ಗೌರವ ಪ್ರೇರಣೆ ಅಂದರೂ ತಪ್ಪಾಗಲಾರದು. ಶಿವರಾತ್ರಿಯ ದಿನದಂದು ಸಾಗರದ ಹಾಗೇ ಜನ ಸಮುದಾಯ ಸೇರುತ್ತೆ ,ಬಂದವರೆಲ್ಲರೂ ಶಿವಲಿಂಗಕ್ಕೆ ಎಳನೀರು ಅಭಿಷೇಕ ಮಾಡಿಸುವ ವ್ಯವಸ್ಥೆಯನ್ನು ಇಲ್ಲಿನ ಯುವ ಸಮುದಾಯ ಗುರುಗಳ ಆಶಿರ್ವಾದದಿಂದ ನಡೆಸಿಕೊಡುತ್ತಾ ಬಂದಿದೆ . ಆದರೆ…ಇದ್ದಕ್ಕಿದ್ದಂತೆ ಪಕೃತಿಯ ಗಾಳಿ ವೇಗವನ್ನು ಹೆಚ್ಚಿಸಿದೆ.ಆ ಗಾಳಿ ಯಮನ ಸುಂಟರಗಾಳಿ ಎಂದೂ ಯಾರಿಗೂ ತಿಳಿಯದ ಹಾಗೇ ಅಬ್ಬರಿಸದೆ ಮೌನವಾಗಿಯೇ ತನ್ನ ಕೆಲಸ ಮುಗಿಸಿ ಬಿಟ್ಟಿದೆ . ಅಂದು ಮುಂಜಾನೆ ಸಾವು ಒಬ್ಬಂಟಿಯಾಗಿ ಕಾರ್ಗತ್ತಲಲ್ಲಿ ತಿರುಗಾಡುತ್ತಿತ್ತು. ಬದುಕು ಬೇಡ ಅನ್ನುವವರನ್ನ ಬಿಟ್ಟು ನಗು ನಗುತ ಬದುಕು ಸಾಗಿಸುತ್ತಿದ್ದ ಸಾವಿರಾರು ಜನರಿಗೆ ಗುರುವಾದವರಿಗೆ ಹೊಂಚು ಹಾಕಿ ಕುಳಿತ್ತಿತೇನೋ.ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡಿನತ್ತ ಕಾಲ ಪುರುಷ ಕಣ್ಣಿಟ್ಟ ಅಂದು ತಾರೀಕು 10.02.2026 ಮಂಗಳವಾರ ಮುಂಜಾನೆ ಅಮಂಗಳದ ಸುದ್ದಿ .ಮೂಡಣದ ನೇಸರ ಮೂಡುವುದನ್ನೇ ಮರೆತ.ನಮ್ಮೆಲ್ಲರ ಪ್ರೀತಿ ಪಾತ್ರರಾದ ರಮೇಶ್ ಗುರುಸ್ವಾಮಿ ಬೀಡು ತೊರೆದು ಬಾರದೂರು ಬೆಳಗಲು ಹೊರಟರು.

ಹುಟ್ಟು ಬ್ರಹ್ಮನ ಸೃಷ್ಟಿ ,ಸಾವು ಕಾಲ ನಿರ್ಣಯ.ಈ ಮಾತು ಕಹಿಯಾದರೂ ಒಪ್ಪಿಕೊಳ್ಳಲೇ ಬೇಕು.ಪಡುಬಿದ್ರೆಯ ಪವಿತ್ರ ಮಣ್ಣಿನಲ್ಲಿ ಜಲಜ ಬಾಬು ದಂಪತಿಗಳ ಪವಿತ್ರ ಗರ್ಭಾಂಬುಧಿಯಲ್ಲಿ ಆರು ಮಕ್ಕಳಲ್ಲಿ ಕಿರಿಯವನಾಗಿ ಜನಿಸಿದವರು. ಜೀವನವೆಂಬ ಪುಸ್ತಕದಲ್ಲಿ ಕೆಲವು ಅಧ್ಯಾಯಗಳು ಅಕಾಲದಲ್ಲೇ ಮುಗಿದು ಹೋಗುತ್ತದೆ ಆದರೆ ಬರೆದ ಅಕ್ಷರಗಳು ಎಂದಿಗೂ ಅಳಿಯುದಿಲ್ಲವಂತೆ.ಅಂದು ಹೆತ್ತಬ್ಬೆ ಇಟ್ಟ ಹೆಸರ ಅರ್ಥದಂತೆ ಆನಂದದ ಅಧಿಪತಿಯಾಗಿ (ರಮೇಶ)ಬಾಳಿದವರು .ಸ್ವತಂತ್ರವಾಗಿ ಬದುಕು ಕಟ್ಟಿ ಕೊಳ್ಳಲು ಸ್ವಂತಿಕೆಯನ್ನು ಬಿಟ್ಟು ಕೊಡದ ಛಲವಾದಿ.ಉದ್ಯೋಗ ವ್ಯವಹಾರ ಎನ್ನುತ್ತ ಇರುವಾಗ ಮನದೊಳಗೆ ಬಂದಾಕೆ ಶಾಂಭವಿ.ಕೈ ಹಿಡಿದಾಕೆ ಒಡ ಹುಟ್ಟಿಗೆ ಕಟ್ಟಿಕೊಂಡ ಹರಕೆ ತೀರಿಸಲು ಮನ ಮಾಡಿದರು.ತಿಳಿದವರು ಹೇಳುತ್ತಾರೆ ಅಕ್ಕ ಅಮ್ಮನಾಗುತ್ತಾಳೆ ಬಾವ ಅಪ್ಪನಂತೆ ಆಸರೆ ಯಾಗುತ್ತಾನಂತೆ.31 ವರುಷದ ಹಿಂದೆ ಒಂದು ವರುಷ ಮಾತ್ರ ಯಾತ್ರೆ ಎಂದು ಸಂಕಲ್ಪಿಸಿದವರಿಂದ ಆ ಧರ್ಮಶಾಸ್ತ್ರ ಕೊನೆ ಉಸಿರು ಇರುವವರೆಗೆ ನಿಮ್ಮಿಂದ ಪೂಜೆ ಸ್ವೀಕರಿಸಿ .ಮೊನ್ನೆ ಅವನಂಗಳದಲ್ಲಿ ಶರಣು ಕರೆಯಲು ಕರ ಹಿಡಿದುಕೊಂಡು ಹೋದನಲ್ಲಾ ಗುರುಗಳೇ…

ನಿಮ್ಮ ಹೆಸರು ಕೇಳಿ ಕಣ್ಣು ಮುಚ್ಚಿದರೂ ಕಾಣುವುದು ಮುಗ್ದ ಮಗು ಮುಖ, ಬಿಳಿಯ ಕೂದಲು, ಶುಭ್ರ ವಸ್ತ್ರ . ಮುಖದಲ್ಲಿ ಮಾಸದ ಮಂದಹಾಸ .ಕಠಿಣ ನಿಯಮ ಪಾಲನೆಯೊಂದಿಗೆ ಅಯ್ಯಪ್ಪ ವೃತಾಧಾರಿಗಳಿಗೆ ಗುರುವಾಗಿ, ಮಾರ್ಗದರ್ಶಕರಾಗಿದ್ದವರು.ಯಾರನ್ನು ಅಂತಸ್ತಿನಲ್ಲಿ ಅಳೆದವರಲ್ಲ.ತಮ್ಮದೇ ಖರ್ಚಿನಲ್ಲಿ ಅಯ್ಯಪ್ಪ ವೃತಾಧಾರಿಗಳಿಗೆ ಶಬರಿಮಲೆ ಯಾತ್ರೆ ಮಾಡಿಸಿದವರು.ದಾನದಲ್ಲಿ ಶ್ರೇಷ್ಠ ದಾನ ಅನ್ನದಾನ.ಅದೆಲಕ್ಕಿಂತ ಸಮಧಾನ ಮಿಗಿಲೆಂದರಿತವರು.ಹಾಗಾಗಿ ಮಾತು ಕೃತಿಯಲ್ಲಿ ಅಪ್ಪಾಜಿಯಾದವರು.

ಕವಿ ಹೇಳಿದ ಹಾಗೆ”ತಾನು ಕೆಸರಲ್ಲಿ ಕುಸಿಯುತ್ತಿದ್ದರು ತಾವರೆಯು ಮರಿ ದುಂಬಿಗಳಿಗೆ ಪೊರೆವ ತೊಟ್ಟಿಲಾಗಿ ಹೇಗೆ ತಾಯ್ತನವನ್ನು ಪ್ರೀತಿಯಲ್ಲಿ ಮೆರೆಯುವುದು ಹಾಗೆ ಬಾಳಿಸು ಗುರುವೇ ಕರುಣೆ ಇಟ್ಟು” ಎಂಬಂತೆ ಬದುಕಿದವರು. ಮಾತು ಕೇಳುಗರಿಗೆ ಕಠೋರವೆನಿಸಿದರು, ಹೃದಯ ಹೂವಂತೆ ಮೃದು. ಗುರುಸ್ವಾಮಿಯವರನ್ನು ಕಳಕೊಂಡ ಶಿಷ್ಯ ವೃಂದದ ಪಾಡು ದನದಿಂದ ಬೇರ್ಪಟ್ಟ ಕರುವಿನ ಪರಿಸ್ಥಿತಿಯಂತಾಗಿದೆ. ವಿಶಾಲ ಸರೋವರವೊಂದು ಬತ್ತಿ ಹೋದ ಅನುಭವ .ಸಾವು ಪ್ರತಿಯೊಂದು ಜೀವರಾಶಿಗೂ ಇದೆ. ಜಾತಸ್ಯ ಮರಣಂ ಧ್ರುವಂ. ಸಾವು ಯಾರನ್ನು ಬಿಟ್ಟಿಲ್ಲ ,ಬಿಡುವುದಿಲ್ಲ .ಗುರು ಸ್ವಾಮಿ ಹಾಕಿಕೊಟ್ಟ ದಾರಿ ನಮ್ಮ ಮುಂದಿದೆ.31 ವರ್ಷದ ಪರಂಪರೆ ನೂರು ವರುಷಕ್ಕೂ ಮುಂದುವರಿಯಬೇಕು.ಕಿರು ಬೆರಳನ್ನಿಡಿದು ಗುರಿ ತೋರಿದ ಗುರು ಪಂದಲ ಕಂದನ ಪದತಳದಿಲ್ಲಿ ನಿಂತು ಕಾಯುವರು.ರಮೇಶ್ ಗುರುಸ್ವಾಮಿಯವರ ಶಿಷ್ಯ ಸಂತತಿ ಸಾವಿರವಾಗಬೇಕು.ಕಟ್ಟಿ ಬೆಳೆಸಿದ ಮಂಡಳಿಯ ಜೊತೆ ಕಟಿ ಬದ್ಧರಾಗಿ ನಾವೆಲ್ಲ ನಿಲ್ಲಬೇಕು.ಶಾಂಭವಿಯಮ್ಮನಿಗೆ  ಮಕ್ಕಳಾಗಿ ಹಿಂದಿನಂತೆಯೇ ಇರಬೇಕು.ಅವರ ಕುಡಿಗಳಾದ ಸನತ್, ರಾಣಿ ರಾಗಿಣಿಗೆ ಬೆಂಗವಾಲಾಬೇಕು. ಪಾರ್ಥಸಾರತಿ ಅಪ್ಪಾಜಿ ಬೀಡನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಾರಥಿತಿಯೂ ಹೌದು.ಜೇನು ಗೂಡಂತಿದ್ದ ಅಪ್ಪಾಜಿ ಬೀಡು ದೊರೆಯಿಲ್ಲದ ಅರಮನೆಯಾಗಿದೆ . ಕಾಲಪುರುಷ ಕಟುಕನಾದಾಗ ಕಣ್ಣೀರ ಪಾಲು ನಮ್ಮದಾಯಿತು.ಗುರುಗಳು ಭೌತಿಕವಾಗಿ ನಮ್ಮಿಂದ ದೂರ ಇರಬಹುದು .ಆದರೇ ಅವರ ಆದರ್ಶಗಳೇ ನಮ ಬದುಕಿಗೆ ಭರವಸೆಯಾಗಿದೆ.

ತಿಳಿದು ಬರುವುದು ಜನನ

ತಿಳಿಯದೆ ಬರುವುದು ಮರಣ

ತಿಳಿದು ತುಳಿಯದೇ ಬದುಕಿದ ನಿಮಗೆ ಅಂತಿಮವಲ್ಲದ ನಮನ

            -ಅರ್ಪಿತಾ ಪಿ ಶೆಟ್ಟಿ, ಕಟಪಾಡಿ




Related posts

ಸುನಿತಾ ವಿಲಿಯಮ್ಸ್ ಗೂ ಭಾರತಕ್ಕೂ ಇರುವ ಸಂಬಂಧ

Mumbai News Desk

ಮನೆ ಮನಗಳ ಬೆಳಗಿಸುವ ದೀಪಾವಳಿ

Mumbai News Desk

“ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನ ನಲ್ಲಿ ಕನ್ನಡ ನಾಟಕ ಚಾಮ ಚಲುವೆ ಮತ್ತು ಸೋಲಿಗರ ಬಾಲೆ ಯಶಸ್ವಿ ಪ್ರದರ್ಶನ.”

Mumbai News Desk

ಮುಂಬಯಿಯಲ್ಲಿ ಆಗಸ್ಟ್ 15ರಿಂದ ನಾಗಶ್ರೀ ಜಿ ಎಸ್ ತಂಡ ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ

Mumbai News Desk

ಇರಾನ್-ಇಸ್ರೇಲ್ ಸಂಘರ್ಷ: ಕಾರಣಗಳು, ಇತ್ತೀಚಿನ ಬೆಳವಣಿಗೆ ಮತ್ತು ಭಾರತದ ಮೇಲಿನ ಪ್ರಭಾವ

Mumbai News Desk

ಮೇರು ವ್ಯಕ್ತಿತ್ವದ ಸಾಧಕನ ಸಾಧನೆಯನ್ನು ತೆರೆದಿಟ್ಟ ಸುವರ್ಣಯುಗ

Mumbai News Desk