
ಕಡಲ ತಡಿಯ ಸುಂದರ ಮನೋಜ್ಞವಾದ ಪ್ರಕೃತಿ ರಮಣೀಯ ಚೆಲುವಿನ ನಡುವೆ ಕಂಗೊಳಿಸುವ ಅತ್ಯಂತ ಕಾರಣಿಕ ಮತ್ತು ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭವು ಮಾ. 4ರಿಂದ 8ರ ತನಕ ಅದ್ದೂರಿಯಾಗಿ ನಡೆಯಲಿದೆ. ಮಾರ್ಚ್ 8ರಂದು ಬ್ರಹ್ಮಕಲಶೋತ್ಸವದ ಪ್ರಮುಖ ಕಾರ್ಯಕ್ರಮವು ಜರಗಲಿದೆ.
ಮಾರ್ಚ್ 4 ರಂದು ವೈದಿಕ ಕಾರ್ಯಕ್ರಮ ನಡೆಯಲಿದ್ದು ಅಂದು ಬೆಳಿಗ್ಗೆ 8.30 ರಿಂದ ಋತ್ವಿಜರ ಸ್ವಾಗತ, ಮಹಾ ಪ್ರಾರ್ಥನೆ, ಪಂಚಗವ್ಯ, ಪುಣ್ಯಾಹ ನಾಂದಿ, ಅರಣೀಮಥನ, ದ್ವಾದಶ ನಾರೀಕೇಳ ಗಣಯಾಗ, ತೋರಣ ಮುಹೂರ್ತ ಉಗ್ರಾಣ ಮುಹೂರ್ತ ನಡೆಯಲಿದೆ. ಬೆಳಿಗ್ಗೆ 9 ರಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೋತ್ಸವದ ಭವ್ಯ ಶೋಭಾಯಾತ್ರೆ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ ಸಂಜೆ 4.30 ರಿಂದ ವಾಸ್ತು ಪೂಜೆ, ವಾಸ್ತು ಬಲಿ, ಪ್ರಸಾದ ಶುದ್ದಿ, ವಾಸ್ತು ಹೋಮ, ರಾಕ್ಷೋಘ್ಹ್ನ ಹೋಮ ಹಾಗೂ ಕದಿಕೆ ಭಂಡಾರ ಮಂದಿರದಿಂದ ಭಂಡಾರ ಆಗಮನ ನಡೆಯಲಿದೆ. ಅಂದು ಸಂಜೆ 5ರಿಂದ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ವಾಮನ ಇಡ್ಯಾ ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಮೂಲ್ಕಿ ಸೀಮೆ ಅರಮನೆಯ ಅರಸರು ದುಗ್ಗಣ್ಣ ಸಾವಂತರು ದೀಪ ಪ್ರಜ್ವಲಿಸಲಿರುವರು. ಓಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಮತ್ತು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು. ಮುಖ್ಯ ಅತಿಥಿಗಳು ಹಾಗೂ ಗೌರವ ಅತಿಥಿಗಳ ಉಪಸ್ಥಿತಿಯಲ್ಲಿ ಶ್ರೀ ಭಗವತೀ ಕ್ಷೇತ್ರ ಉಳ್ಳಾಲದ ರವಿ ಯಾನೆ ಕಂಡಪ್ಪ ಕಾರ್ನವರು ಮತ್ತು ಬಾಲಕೃಷ್ಣ ಯಾನೆ ಮಂಜಪ್ಪ ಕಾರ್ನವರು, ಶ್ರೀ ಭಗವತಿ ಕ್ಷೇತ್ರ ಅಡ್ಕ ಮಂಗಲಪಾಡಿಯ ಕೃಷ್ಣ ಕಾರ್ನವರು, ಸುಬ್ರಹ್ಮಣ್ಯ ಭಟ್ ಸಸಿಹಿತ್ಲು ವರಿಗೆ ವಿಶೇಷ ಗೌರವಾರ್ಪಣೆ ಮತ್ತು ಶ್ರೀಮತಿ ವೀಣಾ ಸಸಿಹಿತ್ಲು ಮತ್ತು ರಾಘು ಪೂಜಾರಿ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ 4ರಿಂದ ಕೇಳ ಸುಧಾಕರ ಮತ್ತು ಬಳಗ ಮಂಗಳಾದೇವಿ ಇವರಿಂದ ಸಾಕ್ಸೋ ಫೋನ್ ವಾದನ, ರಾತ್ರಿ 8ರಿಂದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿ ಶಕ್ತಿ ಕಲಾ ಬಳಗ ಅರ್ಪಿಸುವ ತುಳು ಪೌರಾಣಿಕ ನಾಟಕ “ಬೊಳ್ಳಿ ಮಲೆತ ಶಿವಶಕ್ತಿಲು” ತುಳು ನಾಟಕದ ಪ್ರದರ್ಶನವಿದೆ.
ಮಾರ್ಚ್ 5 ರಂದು ಬೆಳಿಗ್ಗೆ 8 ರಿಂದ ಪೂರ್ಣ ನವಗ್ರಹ ಹೋಮ, ಮೃತ್ಯುಂಜಯ ಹೋಮ, ಗಣಯಾಗ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 4.30 ರಿಂದ ಭುವರಾಹ ಹೋಮ, ದಿಕ್ಷಾಲಕರ ಹೋಮ, ನಾಗ ಸನ್ನಿಧಿಯಲ್ಲಿ ಅಶ್ಲೇಷಾ ಬಲಿ, ಅಯುತ ಕದಳೀಯಾಗದ ಪ್ರಯುಕ್ತ ಅಗ್ನಿಜನನ. ಸಂಜೆ 5ರಿಂದ ಶ್ರೀ ಭಗವತಿ ದೇವಸ್ಥಾನ ಸಸಿಹಿತ್ಲು ಇದರ ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಬೆಳ್ಚಡ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಕಟೀಲು ಕ್ಷೇತ್ರದ ವೇದಮೂರ್ತಿ ಶ್ರೀ ಹರಿನಾರಾಯಣದಾಸ ಆಸ್ರಣ್ಣರು ದೀಪ ಪ್ರಜ್ವಲಿಸಿ ಚಾಲನೆ ನೀಡಲಿದ್ದು ಚಿತ್ರಪುರ ಮಠದ ಶ್ರೀ ವಿದ್ಯೆಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿರುವರು. ಮುಖ್ಯ ಅತಿಥಿಗಳು ಹಾಗೂ ಗೌರವ ಅತಿಥಿಗಳ ಉಪಸ್ಥಿತಿಯಲ್ಲಿ ಕನಿಲ ಭಗವತೀ ಕ್ಷೇತ್ರದ ಮಂಜಪ್ಪ ಕಾರ್ನವರು ಮತ್ತು ದೇರುನ್ಹಿ ಕಾರ್ನವರು, ಬೊಲ್ನಾಡು ಭಗವತೀ ಕ್ಷೇತ್ರದ ಚಂದ್ರಶೇಖರ ಕಾರ್ನವರು ಇವರಿಗೆ ವಿಶೇಷ ಗೌರವಾರ್ಪಣೆ ಮತ್ತು ಸಸಿಹಿತ್ಲು ರಮೇಶ್ ಸಲಿಲ್ ಇವರಿಗೆ ಗೌರಾರ್ಪಣೆ ನಡೆಯಲಿರುವುದು. ಸಂಜೆ 4 ರಿಂದ 5 ರ ತನಕ ಕಲಾವತಿ ಪ್ರೇಮ್ ನಾಥ್ ಬಳಗದವರಿಂದ ಗಾನಸುಧೆ, ಸಂಜೆ 5 ರಿಂದ ರಾತ್ರಿ 8ರ ತನಕ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಇವರಿಂದ ತುಳು ನಾಟಕ “ಜೈ ಭಜರಂಗಬಲಿ” ಪ್ರದರ್ಶನ ನಡೆಯಲಿದೆ.

ಮಾರ್ಚ್ 6 ರಂದು ಬೆಳಿಗ್ಗೆ 7 ರಿಂದ “ಆಯುತ ಕದಳೀಯಾಗ”, ಗಣಯಾಗ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 4 ರಿಂದ ಮಹಿಳಾ ವೃಂದದವರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ, ಸಂಜೆ 4.30 ರಿಂದ ಶಕ್ತಿ ದಂಡಕ ಪೂಜೆ, ಶಾಂತಿ ಹೋಮ, ಅಶ್ಲೇಷಾ ಬಲಿ, ಸಂಜೆ 6ರಿಂದ ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಎ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಆಸ್ರಣ್ಣರು ದೀಪ ಪ್ರಜ್ವಲಿಸಿ ಚಾಲನೆ ನೀಡಲಿದ್ದು ಶ್ರೀಧಾಮ ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಮಂಜು ಕಾರ್ನವರು ಮತ್ತು ರಾಮಚಂದ್ರ ಯಾನೆ ಅಪ್ಪು ಕಾರ್ನವರನ್ನು , ವಿಶೇಷವಾಗಿ ಗೌರವಿಸಲಾಗುವುದು. ಸಂಜೆ 4.30 ರಿಂದ 6 ರ ತನಕ ತೋನ್ಸೆ ಪುಷ್ಕಳ್ ಕುಮಾರ್ ಇವರಿಂದ “ಸಮುದ್ರ ಮಥನ” ಹರಿಕಥಾ ಕಲಾಕ್ಷೇಪ, ರಾತ್ರಿ ಗಂಟೆ 8 ರಿಂದ ಶಾರದಾ ಆರ್ಟ್ಸ್ ತಂಡದ ಶ್ರೀ ದುರ್ಗಾ ಕಲಾವಿದರು ಹೊಯ್ಗೆ ಗುಡ್ಡೆ ಸಸಿಹಿತ್ತ್ಲು ಇವರಿಂದ ತುಳು ನಾಟಕ “ಬಿತ್ತ್ ಲ್ದ ಉಳ್ಳಾಲ್ದಿ ಅಪ್ಪೆ ಭಗವತೀ” ಪ್ರದರ್ಶನವಿದೆ.

ಮಾರ್ಚ್ 7 ರಂದು ಬೆಳಿಗ್ಗೆ 7 ರಿಂದ ಪ್ರಾಯಶ್ಚಿತ ಹೋಮ, ತತ್ವ ಹೋಮ, ತತ್ವಕಲಶ, ಗಣಯಾಗ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 4.30 ರಿಂದ ಬ್ರಹ್ಮಕಳಶ ಮಂಡಲ ರಚನೆ, ಕಳಶಾಧಿವಾಸ, ಅಧಿವಾಸ ಹೋಮ, ಸಂಜೆ 5 ರಿಂದ ಶ್ರೀ ಭಗವತಿ ದೇವಸ್ಥಾನ ಸಸಿಹಿತ್ತ್ಲು ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಅಧ್ಯಕ್ಷರಾದ ವೇದಪ್ರಕಾಶ್ ಎಂ ಶ್ರೀಯನ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರು ದೀಪ ಪ್ರಜ್ವಲಿಸಿ ಚಾಲನೆ ನೀಡಲಿದ್ದು, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮತ್ತು ಸಸಿಹಿತ್ತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅವರು ಆಶೀರ್ವಚನ ನೀಡಲಿರುವರು. ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಸಿಹಿತ್ಲು ಗುಲಾಬಿ ಲೀಲಯ್ಯ ಕೋಟ್ಯಾನ್ ಇವರನ್ನು ವಿಶೇಷವಾಗಿ ಗೌರವಿಸಲಾಗುವುದು ಮತ್ತು ಸಂದೀಪ್ ಸಸಿಹಿತ್ಲು ಇವರನ್ನು ಗೌರವಿಸಲಾಗುವುದು. ಸಂಜೆ 3.30 ರಿಂದ 6 ರ ತನಕ ಪದ್ಮನಾಭ ಸಸಿಹಿತ್ಲು ಮುಂಬಯಿ ಬಳಗದವರಿಂದ ಗಾನಸುಧೆ, ಸಂಜೆ 7ರಿಂದ 8.30ರ ತನಕ ವಿಧುಷಿ ಚಿತ್ರಾಕ್ಷೀ ಅಜಿತ್ ಕುಮಾರ್ ಬಳಗದವರಿಂದ ನೃತ್ಯರೂಪಕ ’ಶಕ್ತಿ ಪೀಠ’, ರಾತ್ರಿ 8.30ರಿಂದ ತ್ರಿನೇತ್ರ ಕಲಾವಿದರು ಮಂಗಳೂರು ಇವರಿಂದ ಅದ್ದೂರಿ ನಾಟಕ ’ಅಕ್ಕಸದ ರಕ್ಷಸೆ’ ಪ್ರದರ್ಶನವಿದೆ.

ಮಾರ್ಚ್ 8ರಂದು ಬೆಳಿಗ್ಗೆ 7 ರಿಂದ ಚಂಡಿಕಾ ಯಾಗ, ಬೆಳಿಗ್ಗೆ 11.15 ರಿಂದ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ. ಮಧ್ಯಾಹ್ನ 12.30 ರಿಂದ ಅನ್ನ ಸಂತರ್ಪಣೆ, ಸಂಜೆ 6 ರಿಂದ ದೀಪಾರಾಧನೆ ಭಂಡಾರ ನಿರ್ಗಮನ. ಸಂಜೆ 4ರಿಂದ ಬ್ರಹ್ಮ ಕಲಶೋತ್ಸವ ಸಮಿತಿ ಶ್ರೀ ಭಗವತೀ ದೇವಸ್ಥಾನ ಸಸಿಹಿತ್ಲು ಇದರ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಡಾ. ವೀರೇಂದ್ರ ಹೆಗ್ಡೆ ಅವರು ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಶ್ರೀ ಪೇಜಾವರ ಮಠ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಇದರ ಪರಮ ಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮತ್ತು ಪ್ರಧಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅವರು ಗಣ್ಯರ ಉಪಸ್ಥಿತಿಯಲ್ಲಿ ಆಶೀರ್ವಚನ ನೀಡಲಿರುವರು. ಮಧ್ಯಾಹ್ನ 2.30 ರಿಂದ 3.30ರ ತನಕ ಶಿವಪ್ರಣಮ್ (ರಿ) ಮೂಲ್ಕಿ ಸ್ಕೂಲ್ ಆಫ್ ಡ್ಯಾನ್ಸ್ ಪ್ರಸ್ತುತ ಪಡಿಸುವ ನೃತ್ಯ ವೈಭವ. ಸಮುದ್ರ ತೀರದಲ್ಲಿ ಸಂಜೆ 6.30 ರಿಂದ 7.30 ತನಕ ಗಂಗೆಗೆ ನುಡಿ ನಮನ – ಶ್ರೀ ಚಕ್ರವರ್ತಿ ಸೂಲಿಬೆಲೆ ಇವರಿಂದ, ರಾತ್ರಿ ಎಂಟು ಏಳು ಮೂರರಿಂದ ಎಂಟು 15 ರ ತನಕ ಅದ್ದೂರಿ ವೈಭವದ ಗಂಗಾವತಿ ರಾತ್ರಿ 7.30 ರಿಂದ 8.15 ರ ತನಕ “ಅದ್ದೂರಿ ವೈಭವದ ಗಂಗಾರತಿ”. ರಾತ್ರಿ 8.15 ರಿಂದ 10.15 ರ ತನಕ ಗಂಗಾ ಗಾಯನ – ಕಲಾಸಿರಿ ಬಳಗ ಮಂಗಳೂರು ಖ್ಯಾತ ಗಾಯಕರಿಂದ “ಭಕ್ತಿ ಭಾವ ಗಾನ” ನಡೆಯಲಿದೆ.
ಬ್ರಹ್ಮಕಲಶೋತ್ಸವವು ವಿದ್ವಾನ್ ವೇದಮೂರ್ತಿ ಶ್ರೀ ಕೃಷ್ಣಮೂರ್ತಿ ಭಟ್ ಹೊಯ್ಗೆಗುಡ್ಡೆ ಹಾಗೂ ಶ್ರೀ ಶ್ರೀಪತಿ ಭಟ್ ಹೊಯ್ಗೆಗುಡ್ಡೆ ಇವರ ನೇತೃತ್ವದಲ್ಲಿ ಮತ್ತು ವೇದಮೂರ್ತಿ ಶ್ರೀ ವೆಂಕಟೇಶ ತಂತ್ರಿ ಎಡಪದವು ಇವರ ಮಾರ್ಗದರ್ಶನದಲ್ಲಿ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಆಗಮಿಸಿ ಮಾತೆ ಭಗವತಿಯ ಪುಣ್ಯಪ್ರಸಾದವನ್ನು ಸ್ವೀಕರಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಕ್ಷೇತ್ರದ ಗೌರವಾಧ್ಯಕ್ಷರಾದ ರೋಹಿದಾಸ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮತ್ತು ಪ್ರಧಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪಮನೆ ಕಟೀಲು ಚಂದ್ರಶೇಖರ ಬೆಳ್ಚಡ, ಸಮಿತಿಯ ಕಾರ್ಯಾಧ್ಯಕ್ಷ ವಾಮನ ಇಡ್ಯಾ, ಮುಂಬಯಿ ಸಮಿತಿಯ ಗೌರವ ಅಧ್ಯಕ್ಷರುಗಳಾದ ಡಾ. ಸದಾಶಿವ ಕೆ. ಶೆಟ್ಟಿ ಕನ್ಯಾನ, ಕೃಷ್ಣ ಎನ್ ಉಚ್ಚಿಲ್, ಅಧ್ಯಕ್ಷ ವೇದಪ್ರಕಾಶ್ ಎಂ. ಶ್ರೀಯಾನ್, ಉಪಾಧ್ಯಕ್ಷರುಗಳಾದ ವಿಶ್ವನಾಥ ಬೆಳ್ಚಡ ಪಂದುಬೆಟ್ಟು, ಆದಿ ಉಡುಪಿ, ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ ಕರಿತೋಟ, ಜತೆ ಕಾರ್ಯದರ್ಶಿಗಳಾದ ರಾಜೇಂದ್ರ ಪ್ರಸಾದ್ ಎಕ್ಕಾರು ಮತ್ತು ಶಿವಣ್ಣ ಆಂಚನ್ ಕಾಪು, ಕೋಶಾಧಿಕಾರಿ ಸುರೇಶ್ ಕೆ ಬಂಗೇರ, ತೋಕೂರು, ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಬ್ರಹ್ಮಕಲಸ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು, ಮುಂಬಯಿ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಶ್ರೀ ಭಗವತಿ ದೇವಸ್ಥಾನದ ಆಚಾರ್ ಪಟ್ಟವರು ಏಳೂರ ಗುರಿಕಾರರು ಹಾಗೂ ಸಸಿಹಿತ್ಲು ಗ್ರಾಮಸ್ಥರು ಮತ್ತು ಉಪಸಮಿತಿಗಳ ಎಲ್ಲರೂ ವಿನಂತಿಸಿದ್ದಾರೆ.

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ
ಕರ್ನಾಟಕದ ಕರಾವಳಿ ಮಂಗಳೂರಿನಿಂದ ಉತ್ತರಕ್ಕೆ ಸುಮಾರು 24 ಕಿಲೋ ಮೀಟರ್ ದೂರದಲ್ಲಿ ಪಶ್ಚಿಮ ಸಮುದ್ರದ ತೀರದಲ್ಲಿರುವ ಸಸಿಹಿತ್ಲು ಒಂದು ರಮಣೀಯ ಪ್ರದೇಶ, ಸುಮಾರು 900 ವರ್ಷಗಳಷ್ಟು ಹಳೆಯದೆಂದು ಹೇಳಲ್ಪಟ್ಟ ಒಂದು ಕ್ಷೇತ್ರ ಶ್ರೀ ಭಗವತೀ, ಸಾಮಾನ್ಯವಾಗಿ ಇತರ ದೇವಸ್ಥಾನಗಳಂತೆ ಒಂದು ದೇಗುಲವೆನಿಸಿದರೂ ಇಲ್ಲಿಯ ಇತಿಹಾಸವನ್ನು ಕೇಳಿದಾಗ ನಾವು ಮತ್ತೆ ಕೇರಳ, ತಮಿಳುನಾಡಿನ ಸಂಬಂಧಗಳ ಕಡೆಗೆ ವಾಲಿದಂತಾಗುವುದು. ಇಲ್ಲಿ ಪುರಾಣದ ಘಟನೆ ಇದೆ. ಇತಿಹಾಸದ ಕಥೆಯಿದೆ
ಭಗವತಿಯೆಂಬ ನಾಮಧೇಯವನ್ನು ಪಡೆದು ಭೂಮಿಯಲ್ಲಿ ಭಕ್ತರ ಅಭೀಷ್ಟೆಗಳನ್ನು ನೆರವೇರಿಸುವ ಮಾತೆಯು ಪೂರ್ವದಲ್ಲಿ ಭದ್ರಕಾಳಿಯಾಗಿ ಅವತರಿಸಿದ್ದಳು. ಪೌರಾಣಿಕ ಹಿನ್ನೆಲೆಯನ್ನು ನೋಡಿದಾಗ ಶೈವಾಂಶ ಸಂಭೂತೆಯಾದ ಇವಳು ದಾರಿಗಾಸುರನೆಂಬ ದಾನವನ ವಧೆಗಾಗಿ ಪರಶಿವನ ನೇತ್ರಬಿಂದುವಿನಲ್ಲಿ ಹುಟ್ಟಿಕೊಂಡವಳು, ಬಿಂದು ಒಂದು ಅವನ ಉರದಲ್ಲಿ ಕುರುವಾಗಿ ಹುಟ್ಟಿ ತ್ರಿಮೂರ್ತಿಗಳ ಮಡದಿಯರು ಇದನ್ನು ಕಂಡು ಅಚ್ಚರಿಗೊಂಡು “ಅಂಬಾಕುರು” ಎಂದು ಭಯಭೀತರಾಗಿ ಅವಲೋಖಿಸುತ್ತಿದ್ದಂತೆ, ಆ ಭರಣಿ ನಕ್ಷತ್ರದಂದು ಕುರು ಒಡೆದು ನಡುರಾತ್ರಿಯಲ್ಲಿ ಕುರುಂಬಾ (ಚೀರುಂಭ) ಜನನವಾಯಿತು ಇವಳೇ ಭದ್ರಕಾಳಿ. ದಾರಿಕಾಸುರನೆಂಬ ದಾನವನನ್ನು ಅವನ ಸಾವಿರದ ಒಂದನೇಯ ಅವತಾರದಲ್ಲಿ ಭದ್ರಕಾಳಿಯು ವಧಿಸಿದ ಮೇಲೆ ಕೈಲಾಸದಲ್ಲಿರುವುದು ಸರಿಯಲ್ಲವೆಂದರಿತ ಪರಶಿವನು ಆದಿ ವೇದಾಳ (ಗುಳಿಗ) ಸಹಿತ ಭೂಮಿಗೆ ಕಳುಹಿಸುವುದು ತನ್ನ 2ನೇಯ ಅವತಾರದಲ್ಲಿ ಮಾನವಳಾಗಿ “ಕನ್ನಗಿ” ನಾಮಧೇಯದಿಂದ ಕೋವಲನನ್ನು ವಿವಾಹವಾಗಿ ಕಡಗದ ಕಥೆಯಿಂದ ಮಧುರಾ ಪಟ್ಟಣವನ್ನು ಲಯಮಾಡಿ ಕ್ರೋಧದಿಂದ ಬಂದು ಕೇರಳದ ಕೊಡಂಗಲ್ಲೂರಿನಲ್ಲಿ ನೆಲೆಸಿ ಅಮ್ಮನಾಗಿ ಪೂಜೆಯನ್ನು ಸ್ವೀಕರಿಸಿದ ಭಗವತಿಯು, ಸೆರಗೊಡ್ಡಿ ಬೇಡಿದವರಿಗೆ ಸ್ತ್ರೀರೂಪವಾಗಿ ಗೋಚರಿಸಿ ನಾವೆಯೇರಿ ಬಂದು ಕಾಸರಗೋಡಿನ ತಲಂಗರೆಯಲ್ಲಿ ಸಂಕೇತ ಮಾತ್ರವಾಗಿ ತನ್ನ ಇರವನ್ನು ತೋರಿಸಿ ಮುಂದೆ ನಾಲ್ವರೊಂದಿಗೆ ಸಮುದ್ರ ಮಾರ್ಗವಾಗಿ ಉತ್ತರಕ್ಕೆ ಪ್ರಯಾಣಿಸಿ ದಣಿವಾರಿಸಿಕೊಳ್ಳಲೆಂದು ಸಸಿಹಿತ್ಲುನ ಹಸಿರುಸಿರಿಯ ರಮಣೀಯತೆಗೆ ಮನಸೋತು ಮರಳಿನ ನಡುವಿನ ಆಲದ ಮರದ ತಂಪು ನೆರಳಿಗೆ ಬಂದು ವಿಶ್ರಾಂತಿಗೆ ಹಾತೊರೆಯಲು ಮೂರ್ತೆದಾರನು ಕೊಟ್ಟ ಎಳನೀರನ್ನು ಅಕ್ಕ ಭಗವತಿಯು ಕುಡಿದು ವಚನಭ್ರಷ್ಟೆಯಾದೆಯೆಂದು ತಂಗಿ ದುರ್ಗೆಯು ನುಡಿದು ಮೂಲಿಕಾ ಪುರದತ್ತ ತೆರಳಿ ಮುಂದೆ ಶಾಂಭವಿಯಲ್ಲಿ ಪಂಚದುರ್ಗಾ ಲಿಂಗೋದ್ಭವೆಯಾದಳು. ಭಗವತಿಯು ದಂಡರಾಜ, ಘಂಟಾಕರ್ಣ, ಗುಳಿಗನೊಂದಿಗೆ ಇಲ್ಲಿ ನೆಲೆಯಾದಳು. ಆದರೂ ಎಳೆಯ ಭಗವತಿಯು (ದುರ್ಗಾಶಕ್ತಿ) ತನ್ನ ನೆರಳನ್ನು ಪಡಿಮೂಡಿಸಿ ಏಕದಾರು ಪೀಠದಲ್ಲಿ ಪೂಜೆಯನ್ನು ಕೈಕೊಂಬಳು. ಭಗವತಿಯ ಚರಿತ್ರೆಯು ವಿಸ್ತ್ರತವಾಗಿದ್ದರೂ ಇಂದು ಮಹಾರಾಷ್ಟ್ರದಿಂದ ಅನೇಕ ಮಂದಿ ಭಕ್ತರು ಈ ಊರಿನಲ್ಲಿ ಹುಟ್ಟಿಬೆಳೆದು ಪರವೂರಿನಲ್ಲಿ ಕಾಯಕ ಮಾಡುತ್ತಿರುವ ಭಕ್ತರ ಸಂಖ್ಯೆ ಅನೇಕ ಇದ್ದು ಹನ್ನೆರಡು ವರ್ಷಗಳ ಅನಂತರ ನಡೆಯುವ ಅಮ್ಮನ ವೈಭವದ ಬ್ರಹ್ಮಕಲಶದ ಉತ್ಸವಕ್ಕೆ ಆಗಮಿಸುವ ತವಕದಲ್ಲಿದ್ದಾರೆ.
ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಸಮಸ್ತ ಭಕ್ತರಿಗೂ ಪೂರ್ಣ ಸ್ವಾಗತವನ್ನು ಕ್ಷೇತ್ರಾಡಳಿತ ನೀಡುವುದು. ಭಗವತೀ ದೇವಸ್ಥಾನದಲ್ಲಿ ನಿತ್ಯ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭಾಕಾರ್ಯಕ್ರಮಗಳು, ನಡೆಯುತ್ತವೆ. ಅನ್ನಸಂತರ್ಪಣೆ ಸೇವೆಗಳು ನಡೆಯುತ್ತವೆ, ಮಾತೆಯರಿಂದ ಕುಂಕುಮಾರ್ಚನೆ, ಕೊನೆಯಲ್ಲಿ ಗಂಗಾರತಿ ವಿಶಿಷ್ಟ ಕಾರ್ಯಕ್ರಮಗಳಿವೆ. ದೇವಸ್ಥಾನಕ್ಕೆ ದಾನಿಗಳು ಹೊಸ ರೂಪ ನೀಡಿದ್ದಾರೆ, ಕಲಶೋತ್ಸವದ ಅಧ್ಯಕ್ಷರು ಶ್ರಮಪಟ್ಟು ದುಡಿಯುತ್ತಾರೆ. ಮುಂಬಯಿ ಸಮಿತಿಯ ಅಧ್ಯಕ್ಷರಾದ ವೇದಪ್ರಕಾಶ್ ಶ್ರೀಯಾನ್, ಚಂದ್ರಶೇಖರ ಬೆಳ್ಳಡ, ಸದಾಶಿವ ಶೆಟ್ಟಿ, ಕೃಷ್ಣ ಉಚ್ಚಿಲ ಇವರುಗಳು ಸಮಿತಿಯ ಸದಸ್ಯರು ಸಹಕರಿಸುತ್ತಿರುವುದು ಉತ್ಸಾಹ ತಂದಿದೆ.




