ಮಂಗಳೂರು, (ಜೂನ್ 16): ದೇಶಾದ್ಯಂತ ತೀವ್ರ ಕುತೂಹಲ ಮತ್ತು ಭಾರೀ ಸಂಚಲನ ಮೂಡಿಸಿರುವ ಧರ್ಮಸ್ಥಳದ ಬುರುಡೆ ಪ್ರಕರಣದ (Dharmasthala Mass Burial Case) ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರಾದ ಎಸ್ಪಿ ಸೈಮನ್ ಅವರು ಪ್ರಯಾಣಿಸುತ್ತಿದ್ದ ಅಧಿಕೃತ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಗಂಭೀರ ದುರ್ಘಟನೆ ಸಂಭವಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಅಪಾಯಕಾರಿ ತಿರುವುಗಳಿಂದ ಕೂಡಿರುವ ಚಾರ್ಮಾಡಿ ಘಾಟ್ ರಸ್ತೆಯ ತಿರುವೊಂದರಲ್ಲಿ ಈ ಅಪಘಾತ ನಡೆದಿದೆ. ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಈ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಲು ಮತ್ತು ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚಿಸಲು ಚಿಕ್ಕಮಗಳೂರು ಎಸ್ಪಿ ಹಾಗೂ ಎಸ್ಐಟಿ ತನಿಖಾಧಿಕಾರಿಯಾಗಿರುವ ಜೀತೇಂದ್ರ ಕುಮಾರ್ ದಯಾಮ ಅವರನ್ನು ಸೈಮನ್ ಭೇಟಿಯಾಗಿದ್ದರು. ಚರ್ಚೆ ಮುಗಿಸಿ ವಾಪಸ್ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಎದುರಾಗಿದೆ.
ಕಾರು ಪಲ್ಟಿಯಾದ ರಭಸಕ್ಕೆ ವಾಹನ ಜಖಂಗೊಂಡಿದ್ದು, ಕಾರಿನಲ್ಲಿದ್ದ ಎಸ್ಐಟಿ ಎಸ್ಪಿ ಸೈಮನ್, ಇನ್ಸ್ಪೆಕ್ಟರ್ ಕುಸುಮಾಧರ್, ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಹಾಗೂ ವಾಹನದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.




