July 15, 2026
Mumbai News Kannada
ಮುಂಬಯಿ

ಡೊಂಬಿವಲಿ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವಕ್ಕೆ ಚಾಲನೆ









​ಡೊಂಬಿವಲಿ: ಇಲ್ಲಿನ ತುಳು ಕನ್ನಡಿಗರ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಹಾಗೂ ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿಯ ಸಂಚಾಲಕತ್ವದಲ್ಲಿ ಮುನ್ನಡೆಯುತ್ತಿರುವ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಮತ್ತು ಸರಣಿ ಕಾರ್ಯಕ್ರಮಗಳಿಗೆ ಶನಿವಾರ (ದಿನಾಂಕ: 11.07.2026) ಮಂದಿರದ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಚಾಲನೆ ನೀಡಲಾಯಿತು.
​ಮಧ್ಯಾಹ್ನ 2 ಗಂಟೆಯಿಂದ ಸಂಜೆ 6.30 ರ ತನಕ ನಡೆದ ಹರಿನಾಮ ಸಂಕೀರ್ತನೆಯ ಬಳಿಕ, ಸಂಜೆ 7 ಗಂಟೆಗೆ ಸರಿಯಾಗಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸುವರ್ಣ ಸಂಭ್ರಮದ ಉದ್ಘಾಟನೆ ನೆರವೇರಿತು. ಮಂದಿರದ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಒಟ್ಟಾಗಿ 50 ದೀಪಗಳನ್ನು ಬೆಳಗಿಸುವ ಮೂಲಕ ಸರಣಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.


​ನಿಸ್ವಾರ್ಥ ಸೇವೆಗೆ ದೇವರ ಅನುಗ್ರಹವಿರಲಿ: ಡಾ. ದಿವಾಕರ ಶೆಟ್ಟಿ ಇಂದ್ರಾಳಿ
​ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಾಧ್ಯಕ್ಷ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಅವರು, “‘ಭಜನೆ ಇದ್ದಲ್ಲಿ ವಿಭಜನೆ ಇಲ್ಲ’ ಎಂಬ ಮಂತ್ರವನ್ನು ಮನಗಂಡು ಹಿರಿಯರು ಸ್ಥಾಪಿಸಿದ ಶ್ರೀ ಮುಂಬ್ರಾ ಮಿತ್ರ ಮಂಡಳಿಯ ಹಾದಿಯಲ್ಲೇ ನಡೆದು ಯುವ ಪೀಳಿಗೆಯು ಡೊಂಬಿವಲಿಯಲ್ಲಿ ಶ್ರೀ ಮಹಾವಿಷ್ಣು ದೇವರ ಮಂದಿರವನ್ನು ನಿರ್ಮಿಸಿದೆ. ಮುಂಬ್ರಾ ಮಿತ್ರ ಭಜನಾ ಮಂಡಳಿಯ ಕಾರ್ಯಕಾರಿ ಸಮಿತಿಯ ನಿಸ್ವಾರ್ಥ ಸೇವೆ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಕಳೆದ 4 ವರ್ಷಗಳಿಂದ ರಕ್ತದಾನದಂತಹ ಶ್ರೇಷ್ಠ ಕಾರ್ಯವನ್ನು ಮಾಡುತ್ತಾ, ಪ್ರಥಮ ವರ್ಷದಲ್ಲಿ 100 ಯೂನಿಟ್ ಹಾಗೂ ಈ ವರ್ಷ 182 ಯೂನಿಟ್ ರಕ್ತ ಸಂಗ್ರಹಿಸಿ ಸಾವಿರಾರು ಜೀವ ಉಳಿಸುವ ಕೆಲಸ ಮಾಡುವ ಮೂಲಕ ಇದೊಂದು ಮಾದರಿ ಮಂದಿರವಾಗಿ ಹೊರಹೊಮ್ಮಿದೆ. ನಿಮ್ಮ ಸ್ವಾರ್ಥ ರಹಿತ ಕೆಲಸ ಕಾರ್ಯಗಳಿಗೆ ಶ್ರೀ ಮಹಾವಿಷ್ಣು ದೇವರ ಸಂಪೂರ್ಣ ಅನುಗ್ರಹ ಲಭಿಸಲಿ, ನಾವೆಲ್ಲರೂ ಸೇರಿ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಯಶಸ್ವಿಗೊಳಿಸೋಣ” ಎಂದು ಕರೆ ನೀಡಿದರು.


​ಗಣ್ಯರ ಮನದಾಳದ ನುಡಿಗಳು
​ಶ್ರೀ ಸುಬ್ಬಯ್ಯ ಶೆಟ್ಟಿ ಸೂರಿಂಜೆ (ಸ್ಮರಣಿಕೆ ಬಿಡುಗಡೆ ಸಮಿತಿಯ ಕಾರ್ಯಾಧ್ಯಕ್ಷ): “ಮುಂಬ್ರಾ ಮಿತ್ರ ಭಜನಾ ಮಂಡಳಿ ಪ್ರತಿವರ್ಷ ಅಚ್ಚುಕಟ್ಟಾಗಿ ವಾರ್ಷಿಕ ಮಹಾ ಪೂಜೆಯನ್ನು ಆಯೋಜಿಸುತ್ತಾ ಬಂದಿದೆ. ಈ ವರ್ಷ ಸುವರ್ಣ ಸಂಭ್ರಮದ ಉದ್ಘಾಟನಾ ದೀಪ ಪ್ರಜ್ವಲಿಸುವ ಸೌಭಾಗ್ಯ ನನ್ನ ಪಾಲಿಗೆ ಒದಗಿ ಬಂದಿರುವುದು ನನ್ನ ಸೌಭಾಗ್ಯ. ನಾವೆಲ್ಲರೂ ಕೂಡಿ ಈ ಮಹೋತ್ಸವವನ್ನು ವಿಜೃಂಭಣೆಯಿಂದ ಮಾಡೋಣ” ಎಂದರು.
​ಶ್ರೀ ರವೀಂದ್ರ ಶೆಟ್ಟಿ: “ಮುಂಬ್ರಾ ಮಿತ್ರ ಭಜನಾ ಮಂಡಳಿಯ ಸದಸ್ಯರ ಒಗ್ಗಟ್ಟಿಗೆ ನಾನು ಮನಸೋತಿದ್ದೇನೆ. ಪ್ರತಿವರ್ಷ ನಮ್ಮವರನ್ನು ಗುರುತಿಸಿ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿರುವ ನಿಮ್ಮ ಚತುರತೆ ಇತರರಿಗೆ ಮಾದರಿ. ಸುವರ್ಣ ಸಂಭ್ರಮದ ಕಾರ್ಯಕ್ರಮಕ್ಕೆ ನನ್ನ ಪೂರ್ಣ ಸಹಕಾರ ನೀಡುತ್ತೇನೆ” ಎಂದು ಭರವಸೆ ನೀಡಿದರು.
​ಶ್ರೀ ದೇವದಾಸ್ ಕುಲಾಲ್: “ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳು ಈ ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಿರಲಿ. ಮಂದಿರದ ಸುವರ್ಣ ಮಹೋತ್ಸವ ನಿರ್ವಿಘ್ನವಾಗಿ ಜರಗಲಿ, ನನ್ನ ಪೂರ್ಣ ಸಹಕಾರವಿದೆ” ಎಂದರು.
​ಶ್ರೀ ರವಿ ಸನಿಲ್: “ಕಳೆದ ಹಲವು ವರ್ಷಗಳಿಂದ ಈ ಮಂದಿರಕ್ಕೆ ಬರುತ್ತಿದ್ದು, ಇಲ್ಲಿನ ಸದಸ್ಯರ ಒಗ್ಗಟ್ಟು ಮತ್ತು ಕಾರ್ಯಚಟುವಟಿಕೆಗಳು ಇತರರಿಗೆ ಮಾದರಿಯಾಗಿವೆ. ಸುವರ್ಣ ಸಂಭ್ರಮದ ಕಾರ್ಯಕ್ರಮಕ್ಕೆ ತನು, ಮನ, ಧನದಿಂದ ನನ್ನ ಬೆಂಬಲವಿದೆ” ಎಂದು ಘೋಷಿಸಿದರು.
​ಶ್ರೀ ವಸಂತ್ ಸುವರ್ಣ: “ಸಮಿತಿಯ ಸಂಘಟಿತ ಕಾರ್ಯ ಚಟುವಟಿಕೆಗಳು ಶ್ಲಾಘನೀಯ. ಭಜನಾ ಮಂಡಳಿಯಲ್ಲಿ ಹಿರಿಯರು, ಕಿರಿಯರು, ಮಕ್ಕಳು ಹಾಗೂ ಮಹಿಳೆಯರ ಭಜನಾ ತಂಡಗಳಿದ್ದು, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಗೌರವ ತಂದಿದ್ದಾರೆ. ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ನನ್ನ ಸಂಪೂರ್ಣ ಸಹಕಾರವಿದೆ” ಎಂದು ತಿಳಿಸಿದರು.


​ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ ಅವರು ಮಂದಿರ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸುತ್ತಾ, ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಸರಣಿ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಯೋಜನೆಗಳ ವಿವರ ನೀಡಿದರು:
​ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು: 50 ಮನೆಗಳಲ್ಲಿ ಭಜನಾ ಕಾರ್ಯಕ್ರಮ, ಭಜನಾ ಸ್ಪರ್ಧೆ, ತಿರುಪತಿ ಕ್ಷೇತ್ರದಲ್ಲಿ ಭಜನೆ ಮಾಡುವ ಕ್ಷೇತ್ರ ದರ್ಶನ, ಸಾಮೂಹಿಕ ಶನಿ ಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಏಕಾಹ ಭಜನೆ, ಅಖಂಡ ಹರಿನಾಮ ಸಂಕೀರ್ತನೆ, ಹರಿಕಥೆ, ತಾಳಮದ್ದಳೆ, ಯಕ್ಷಗಾನ, ಭಕ್ತಿ ರಸಮಂಜರಿ, ಪೌರಾಣಿಕ ನಾಟಕ ಹಾಗೂ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮ.
​ಸಾಮಾಜಿಕ ಚಟುವಟಿಕೆಗಳು: ಕ್ರೀಡಾಕೂಟ, ರಕ್ತದಾನ ಶಿಬಿರ, ಹಳದಿ ಕುಂಕುಮ, ಯೋಗ ಶಿಬಿರ, ಭಾವಗೀತೆ ಸ್ಪರ್ಧೆ ಮತ್ತು ಮಹಿಳಾ ದಿನಾಚರಣೆ.
​ಮೂರ್ತಿ ಪ್ರತಿಷ್ಠಾಪನೆ ಮತ್ತು ಸಮಾರೋಪ: ಮಾರ್ಚ್ 2027 ರ 12 ಮತ್ತು 13 ರಂದು ದೇವರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಏಪ್ರಿಲ್ ತಿಂಗಳಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಈ ವೇಳೆ ಸ್ಮರಣಿಕೆ ಬಿಡುಗಡೆ ಹಾಗೂ ಮಂದಿರದ ಸ್ಥಾಪಕರಿಗೆ, ಹಿರಿಯ ಸದಸ್ಯರಿಗೆ ಮತ್ತು ಅರ್ಚಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
​ಅಭಿವೃದ್ಧಿ ಯೋಜನೆಗಳು: ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಮಂದಿರದ ಗರ್ಭಗುಡಿಯ ನವೀಕರಣ, ರಜತ ಮೂರ್ತಿ ಹಾಗೂ ಪ್ರಭಾವಳಿ, ಗರ್ಭಗುಡಿಯ ಬಾಗಿಲಿಗೆ ತಾಮ್ರದ ಪಟ್ಟಿ ಮುಚ್ಚಳಿಕೆ, ಏಕಶಿಲಾ ಪಾಣಿಪೀಠ, ಗಣಪತಿ ಹಾಗೂ ದುರ್ಗಾದೇವಿ ಫೋಟೋಗೆ ಬೆಳ್ಳಿಯ ಮುಚ್ಚಳಿಕೆ ಹಾಗೂ ಭಕ್ತರ ಅನುಕೂಲಕ್ಕಾಗಿ ಸ್ವಾಗತ ಗೋಪುರ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಒಟ್ಟು ಸುಮಾರು ರೂ. 60 ಲಕ್ಷ ವೆಚ್ಚ ನಿಗದಿಪಡಿಸಲಾಗಿದೆ.
​ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ ಮತ್ತು ಸಮಿತಿಗಳ ಘೋಷಣೆ
​ಕಾರ್ಯಕ್ರಮದ ವೇದಿಕೆಯಲ್ಲಿ ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ, ಗೌರವಾಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್, ಉಪಾಧ್ಯಕ್ಷರಾದ ಅರವಿಂದ್ ಪದ್ಮಶಾಲಿ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಪ್ರಧಾನ ಅರ್ಚಕರಾದ ಹರೀಶ್ ಪದ್ಮಶಾಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಸಾಲಿಯಾನ್ ಉಪಸ್ಥಿತರಿದ್ದರು.


​ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ಮೂರು ಉಪ ಸಮಿತಿಗಳ ಪದಾಧಿಕಾರಿಗಳನ್ನು ಘೋಷಿಸಿ ಗೌರವಿಸಲಾಯಿತು:
​ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷರು: ಡಾ. ಇಂದ್ರಾಳಿ ದಿವಾಕರ್ ಶೆಟ್ಟಿ
​ಸ್ಮರಣಿಕೆ ಬಿಡುಗಡೆ ಸಮಿತಿ ಕಾರ್ಯಾಧ್ಯಕ್ಷರು: ಸುಬ್ಬಯ್ಯ ಶೆಟ್ಟಿ, ಸೂರಿಂಜೆ
​ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷರು: ಸುಕುಮಾರ್ ಶೆಟ್ಟಿ
​ಸಮಿತಿಗಳ ಪ್ರಮುಖ ಸದಸ್ಯರು: ಆನಂದ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ರವೀಂದ್ರ ಶೆಟ್ಟಿ, ರವಿ ಸನಿಲ್, ರಾಜೀವ್ ಭಂಡಾರಿ, ಹರೀಶ್ ಶೆಟ್ಟಿ, ಯದುವೀರ್ ಪುತ್ರನ್, ಚಂದ್ರಹಾಸ್ ಪಾಲನ್, ರವಿ ಪೂಜಾರಿ, ಲಕ್ಷ್ಮಣ್ ಪೂಜಾರಿ, ವಸಂತ್ ಸುವರ್ಣ, ತಾರಾನಾಥ್ ಅಮೀನ್, ದೇವದಾಸ್ ಕುಲಾಲ್, ಜಗನಾಥ್ ಶೆಟ್ಟಿ ಮತ್ತು ರತನ್ ಪೂಜಾರಿ.
​ದಾನಿಗಳ ಸಹಕಾರಕ್ಕೆ ಅಧ್ಯಕ್ಷರ ಕರೆ
​ಮಂದಿರದ ಅಧ್ಯಕ್ಷರಾದ ಇಂದುಶೇಖರ್ ಸುವರ್ಣ ಅವರು ಮಾತನಾಡಿ, “ಸುವರ್ಣ ಮಹೋತ್ಸವದ ಉಪ ಸಮಿತಿಗಳನ್ನು ರಚಿಸಲಾಗಿದ್ದು, ವೇದಿಕೆಯಲ್ಲಿದ್ದ ಎಲ್ಲಾ ಅತಿಥಿ ಗಣ್ಯರು ಭರವಸೆ ನೀಡಿರುವುದಕ್ಕೆ ಆಭಾರಿಯಾಗಿದ್ದೇನೆ. ಮಂದಿರದ ಗರ್ಭಗುಡಿ ನವೀಕರಣ ಸೇರಿದಂತೆ ಹಲವು ಯೋಜನೆಗಳು ನಮ್ಮ ಮುಂದಿವೆ. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ದಾನಿಗಳ, ಹಿತೈಷಿಗಳ, ಸದಸ್ಯರ ಹಾಗೂ ಭಕ್ತಾದಿಗಳ ಪೂರ್ಣ ಸಹಕಾರ ಅತ್ಯಗತ್ಯ” ಎಂದು ವಿನಂತಿಸಿದರು.
​ಸಂಘ ಸಂಸ್ಥೆಗಳಿಗೆ ಗೌರವ ಮತ್ತು ವಂದನೆ
​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯ ಪ್ರಮುಖ ಸಂಘ ಸಂಸ್ಥೆಗಳಾದ ಕರ್ನಾಟಕ ಸಂಘ ಡೊಂಬಿವಲಿ, ಬಂಟರ ಸಂಘ ಡೊಂಬಿವಲಿ, ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ, ಮೊಗವೀರ ವ್ಯವಸ್ಥಾಪಕ ಮಂಡಳಿ, ದೇವಾಡಿಗ ಸಂಘ, ಕುಲಾಲ ಸಂಘ, ಮೊಗವೀರ್ ಮಹಾಜನ ಸಂಘ, ಸಾಯಿನಾಥ್ ಮಿತ್ರ ಮಂಡಳಿ, ಪಶ್ಚಿಮ ವಿಭಾಗ ನವರಾತ್ರಿ ಮಂಡಳಿ, ರಾಧಾಕೃಷ್ಣ ಶನಿ ಮಂದಿರ, ತುಳು ವೆಲ್ಫೇರ್ ಅಸೋಸಿಯೇಷನ್, ಜಗಜ್ಯೋತಿ ಕಲಾವಿದರು, ನಮ್ಮ ಸಂಘ, ಸಿರಿನಡ್ಡಾ ವೆಲ್ಫೇರ್ ಅಸೋಸಿಯೇಷನ್ ಹಾಗೂ ಜಗದಾಂಬ ಮಂದಿರದ ಪದಾಧಿಕಾರಿಗಳನ್ನು ಗೌರವಿಸಲಾಯಿತು.
​ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಭಕ್ತ ಮಹಾಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.



Related posts

ಮುಂಬೈ: ಬಾಂದ್ರಾದಲ್ಲಿ ರೈಲ್ವೆ ಭೂಮಿ ತೆರವು ವೇಳೆ ಭಾರಿ ಹಂಗಾಮು, ಪೊಲೀಸರ ಮೇಲೆ ಕಲ್ಲು ತೂರಾಟ, ಲಾಠಿ ಪ್ರಹಾರ

Mumbai News Desk

ಸಾಲಿಯಾನ್ ಮೂಲಸ್ಥಾನ ಸಭಾ (ಎರ್ಮಾಳು ಬಡಾ) ಮುಂಬೈ ಶಾಖೆಯ ವಾರ್ಷಿಕ ಮಹಾಸಭೆ

Mumbai News Desk

ವೀರಕೇಸರಿ ಮೀರಾಭಾಯಂದರ್ ವತಿಯಿಂದ ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮ.

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk

ನವಿ ಮುಂಬೈ : ಕಾಮೋಥೆ ಕಟ್ಟಡದಲ್ಲಿ ಎರಡು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟ, ಮಹಿಳೆ ಮತ್ತು ಮಗಳು ಸಾವು

Mumbai News Desk