
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಐತಿಹಾಸಿಕ ಸಂಪುಟ ಸಭೆಯ ಬೆನ್ನಲ್ಲೇ, ಮುಖ್ಯಮಂತ್ರಿ (ಡಿಸಿಎಂ) ಡಿ.ಕೆ. ಶಿವಕುಮಾರ್ ಅವರು ಶನಿವಾರ (ಸೆ.19) ಬೆಳಿಗ್ಗೆ ಮಂಗಳೂರಿನ ಮೀನುಗಾರಿಕಾ ಧಕ್ಕೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಗಳು ಸ್ತಬ್ಧವಾಗಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಕ್ಷಮ ಕ್ರಮಕ್ಕೆ ಆದೇಶಿಸಿದರು. ಯಾರೇ ಅಧಿಕಾರಿಗಳು ತಪ್ಪೆಸಗಿದ್ದರೂ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು (ಸಸ್ಪೆಂಡ್) ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ಗೆ ಸ್ಥಳದಲ್ಲೇ ಸೂಚನೆ ನೀಡಿದರು.
“ಧಕ್ಕೆಯಲ್ಲಿ ಮೀನುಗಾರಿಕೆ ಹಾಗೂ ವ್ಯಾಪಾರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಮೀನು ವ್ಯಾಪಾರಿಗಳು ಆಗಮಿಸುತ್ತಾರೆ. ಸ್ವಲ್ಪ ವಿಳಂಬವಾದರೂ ಮೀನು ಕೊಳೆತು ಹೋಗಿ ವ್ಯಾಪಾರಿಗಳು ಮತ್ತು ಮೀನುಗಾರರು ದೊಡ್ಡ ಪ್ರಮಾಣದ ನಷ್ಟ ಅನುಭವಿಸಬೇಕಾಗುತ್ತದೆ. ಸಣ್ಣ ಮೀನುಗಾರರಿಗೂ ಯಾವುದೇ ರೀತಿಯ ತೊಂದರೆಯಾಗಬಾರದು. ಇಲ್ಲಿ ಯಾವುದೇ ಮಾಫಿಯಾಗಳಿಗೆ ಆಸ್ಪದ ನೀಡದೆ, ವ್ಯವಹಾರ ನ್ಯಾಯಬದ್ಧವಾಗಿ ಸಾಗಬೇಕು” ಎಂದು ಅವರು ಗರಂ ಆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಿಂದೆ ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೂ ಮೀನುಗಾರರ ಕಷ್ಟಗಳನ್ನು ಕೇಳಿದ್ದೆ. ಮೀನುಗಾರರ ಅಸೋಸಿಯೇಷನ್ ಮುಖಂಡರು ಸಹ ನನ್ನನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಮೀನುಗಾರರ ಸಮಸ್ಯೆಗಳನ್ನು ಕಣ್ಣಾರೆ ಕಂಡು ಪರಿಹರಿಸುವ ಉದ್ದೇಶದಿಂದಲೇ ನಾನೇ ಸ್ವತಃ ಬೆಳಿಗ್ಗೆ 5 ಗಂಟೆಗೆ ಎದ್ದು ಧಕ್ಕೆಗೆ ಆಗಮಿಸಿದ್ದೇನೆ. ಕಾರವಾರದವರೆಗಿನ ಮೀನುಗಾರರ ಸಮಸ್ಯೆಗಳ ಕುರಿತು ವರದಿ ತರೆಸಿಕೊಂಡು ಸೂಕ್ತ ಪರಿಹಾರ ಕಲ್ಪಿಸಲಾಗುವುದು” ಎಂದರು.
ಅಲ್ಲದೆ, “ಅಳವೆ ಬಾಗಿಲಿನಲ್ಲಿ ಹೂಳು ತೆಗೆಯದ ಕಾರಣ ಬೋಟ್ ಬಿದ್ದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ತಕ್ಷಣವೇ ಡ್ರೆಡ್ಜಿಂಗ್ (ಹೂಳು ಎತ್ತುವ) ಕಾರ್ಯ ನಡೆಸಬೇಕಿದೆ. ಕೇಂದ್ರ ಸರ್ಕಾರದ ಟೆಕ್ನಿಕಲ್ ಕಮಿಟಿಗೆ ಈ ಕುರಿತು ಮಾಹಿತಿ ನೀಡಿ, ಶೀಘ್ರವೇ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಸಂಪುಟ ಸಭೆಯಲ್ಲೂ ಮೀನುಗಾರರ ವಿಚಾರವಾಗಿ ಚರ್ಚಿಸಿದ್ದು, ನಾವು ನುಡಿದಂತೆ ನಡೆಯುತ್ತೇವೆ” ಎಂದು ಭರವಸೆ ನೀಡಿದರು.




