July 28, 2026
Mumbai News Kannada
ಮುಂಬಯಿ

ದುರ್ಗಾಪ್ರಸಾದ್ ಸಿ. ಸಾಲ್ಯಾನ್, ಪ್ರತಾಪ್ ಎನ್. ಕೋಟ್ಯಾನ್‌ರಿಗೆ ನುಡಿ ನಮನ








​.

.

ನಿಸ್ವಾರ್ಥ ಸೇವೆ ಮಾಡುತ್ತಿದ್ದ ಇಬ್ಬರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ: ವಿರಾರ್ ಶಂಕರ್ ಶೆಟ್ಟಿ


ಮುಂಬಯಿ: ಜಯ ಸಿ. ಸುವರ್ಣ ಅಭಿಮಾನಿಗಳಾದ ದುರ್ಗಾಪ್ರಸಾದ್ ಸಿ. ಸಾಲ್ಯಾನ್ (ಗೌರವ ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ಹೋಟೆಲ್ ಮತ್ತು ರೆಸ್ಟೋರೆಂಟ್ ಫೆಡರೇಶನ್) ಮತ್ತು ಪ್ರತಾಪ್ ಎನ್. ಕೋಟ್ಯಾನ್ (ಮಾಜಿ ಕೋಶಾಧಿಕಾರಿ, ಗೊರೇಗಾಂವ್ ಕರ್ನಾಟಕ ಸಂಘ) ಇವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದು, ಇಬ್ಬರಿಗೂ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವು ಏಪ್ರಿಲ್ 14ರ ಮಂಗಳವಾರದಂದು ಗೊರೇಗಾಂವ್‌ನ ಜಯಲೀಲಾ ಹಾಲ್‌ನಲ್ಲಿ ನಡೆಯಿತು.


​ಮಹಾರಾಷ್ಟ್ರ ಹೋಟೆಲ್ ಮತ್ತು ರೆಸ್ಟೋರೆಂಟ್ ಫೆಡರೇಶನ್ ಅಧ್ಯಕ್ಷ ವಿರಾರ್ ಶಂಕರ್ ಬಿ. ಶೆಟ್ಟಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ, “ದುರ್ಗಾಪ್ರಸಾದ್ ಸಾಲ್ಯಾನ್ ನನ್ನ ಬಹಳ ಹತ್ತಿರದ ಗೆಳೆಯ. ಹಲವು ವರ್ಷಗಳಿಂದ ನಮ್ಮ ಸಂಬಂಧವಿದ್ದು, ಭಯಂದರ್‌ನಲ್ಲಿ ಹೋಟೆಲ್ ವ್ಯವಹಾರ ಮಾಡುತ್ತಿದ್ದ ಸಂದರ್ಭದಿಂದಲೂ ನನಗೆ ಅವರ ಪರಿಚಯವಿದೆ. ರಾಜಕೀಯದಲ್ಲೂ ಅವರಿಗೆ ಅಪಾರ ಅನುಭವವಿತ್ತು. ಹತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ಫೆಡರೇಶನ್ ಸಂಸ್ಥೆಯನ್ನು ಮತ್ತೆ ಬಲಿಷ್ಠಗೊಳಿಸುವಲ್ಲಿ ದುರ್ಗಾಪ್ರಸಾದ್ ಅವರು ಬಹಳ ಶ್ರಮಿಸಿದ್ದಾರೆ,” ಎಂದರು.


​ಮುಂದುವರಿದು ಮಾತನಾಡಿದ ಅವರು, “ನಾನು ಅಧ್ಯಕ್ಷನಾದ ಬಳಿಕ ನಾವು ಮಹಾರಾಷ್ಟ್ರದ ಬಹುತೇಕ ಹೋಟೆಲ್ ಅಸೋಸಿಯೇಷನ್‌ಗಳ ಕಾರ್ಯಚಟುವಟಿಕೆಗಳನ್ನು ಸಂಪರ್ಕಿಸಿದ್ದೇವೆ. ಅಲ್ಲಿನ ಸಭೆಗಳು ಯಶಸ್ವಿಯಾಗಿ ನಡೆಯುವುದಕ್ಕೆ ದುರ್ಗಾಪ್ರಸಾದ್ ಅವರ ಕಾನೂನಾತ್ಮಕ ಅನುಭವವೇ ಕಾರಣವಾಗಿತ್ತು. ಅವರ ಅಗಲಿಕೆ ಫೆಡರೇಶನ್‌ಗೆ ತುಂಬಲಾರದ ನಷ್ಟ. ನಾವು ರೂಪಿಸಿದ್ದ ದೊಡ್ಡ ಯೋಜನೆಗಳೆಲ್ಲವೂ ಈಗ ಸ್ತಬ್ಧಗೊಂಡಿವೆ. ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿದ್ದ ಇಬ್ಬರು ಮಹಾನುಭಾವರು ನಮ್ಮನ್ನು ಅಗಲಿರುವುದು ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ,” ಎಂದು ಹಾರೈಸಿದರು.


​ಠಾಣೆ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ಪುಲ್ಲ ಉಮೇಶ್ ಶೆಟ್ಟಿ ಮಾತನಾಡಿ, “ಬಿಲ್ಲವ ಸಮಾಜದ ಎರಡು ಅಮೂಲ್ಯ ರತ್ನಗಳು ಸಮಾಜದಿಂದ ದೂರವಾಗಿರುವುದು ಬಹಳ ದುಃಖದ ಸಂಗತಿ. ಮನುಷ್ಯ ಎಷ್ಟೇ ಸತ್ಯವಂತನಾಗಿದ್ದರೂ, ಅಧಿಕಾರದಲ್ಲಿದ್ದರೂ ವಿಧಿ ಬರಹವನ್ನು ತಡೆಯಲು ಸಾಧ್ಯವಿಲ್ಲ. ವಸ್ತುನಿಷ್ಠವಾಗಿ ಮಾತನಾಡುತ್ತಿದ್ದ ಆ ಇಬ್ಬರ ಆತ್ಮಕ್ಕೆ ಸದ್ಗತಿ ದೊರೆಯಲಿ,” ಎಂದರು.


​ಗೊರೇಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮಾತನಾಡಿ, “ಬಿಲ್ಲವ ಸಮಾಜದಲ್ಲಿ ಈ ಇಬ್ಬರ ಸೇವೆ ಅವಿರತವಾದುದು. ಇಬ್ಬರೂ ಜಯ ಸುವರ್ಣರವರ ಅನುಯಾಯಿಗಳಾಗಿ ಸೇವೆ ಸಲ್ಲಿಸಿದವರು,” ಎಂದರು.


​ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಂ. ಸಾಲ್ಯಾನ್ ನುಡಿ ನಮನ ಸಲ್ಲಿಸುತ್ತಾ, “ಮನುಷ್ಯನ ಬದುಕು ಜನನ ಮತ್ತು ಮರಣದ ನಡುವೆ ಇರುತ್ತದೆ. ಎಷ್ಟು ದಿನ ಬದುಕಿದ್ದಾರೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದಾರೆ ಎನ್ನುವುದು ಮುಖ್ಯ. ಇಬ್ಬರೂ ಸಜ್ಜನರಾಗಿ ಸಮಾಜದ ಮೇಲೆ ಅಪಾರ ಕಾಳಜಿ ಇಟ್ಟು ಸೇವೆ ಮಾಡಿದವರು. ಇವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ,” ಎಂದರು.


​ಮಹಾರಾಷ್ಟ್ರ ಹೋಟೆಲ್ ಮತ್ತು ರೆಸ್ಟೋರೆಂಟ್ ಫೆಡರೇಶನ್ ಉಪಾಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಮಾತನಾಡಿ, “ಫೆಡರೇಶನ್ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ದುರ್ಗಾಪ್ರಸಾದ್ ಸಾಲ್ಯಾನ್ ಅವರು ಸರ್ಕಾರಕ್ಕೆ ಮನವಿ ಸಲ್ಲಿಸುವಲ್ಲಿ ಮತ್ತು ರಾಜಕೀಯ ಮುಖಂಡರೊಂದಿಗೆ ವ್ಯವಹರಿಸುವಲ್ಲಿ ಚತುರತೆ ಹೊಂದಿದ್ದರು. ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರೌಢಿಮೆ ಹೊಂದಿದ್ದ ಇವರ ಅವಧಿಯಲ್ಲಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ವಿಧಿಲಿಖಿತವೇ ಬೇರೆಯಾಗಿದೆ,” ಎಂದು ವಿಷಾದಿಸಿದರು.


​ಜಯ ಸುವರ್ಣ ಅಭಿಮಾನಿ ಬಳಗದ ಸದಾಶಿವ ಕರ್ಕೇರ ನಾಲಾಸೋಪಾರ, ಶಶಿಕಲಾ ಕೋಟ್ಯಾನ್ ಗೊರೇಗಾಂವ್, ಧನಂಜಯ್ ಶಾಂತಿ, ಜಗನ್ನಾಥ್ ಕೋಟ್ಯಾನ್ ಗೊರೇಗಾಂವ್, ಸಚಿಂದ್ರ ಕೆ. ಕೋಟ್ಯಾನ್ ಗೊರೇಗಾಂವ್, ಅಶೋಕ್ ಸಸಿಹಿತ್ಲು ಮೊದಲಾದವರು ಅಗಲಿದ ಗಣ್ಯರ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡರು.


​ದುರ್ಗಾಪ್ರಸಾದ್ ಸಾಲ್ಯಾನ್ ಅವರ ಪುತ್ರ ಶ್ರೀನಿಶ್ ದುರ್ಗಾಪ್ರಸಾದ್ ಸಾಲ್ಯಾನ್ ತಂದೆಯ ಸೇವಾ ಕಾರ್ಯಗಳನ್ನು ಸ್ಮರಿಸಿ, ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು. ಶಶಿಧರ್ ಬಂಗೇರ ಕಾರ್ಯಕ್ರಮ ನಿರ್ವಹಿಸಿ, ಇಬ್ಬರ ಸಿದ್ಧಿ-ಸಾಧನೆಗಳನ್ನು ಪರಿಚಯಿಸಿದರು.


​ಅಂತಿಮ ನಮನ ಸಲ್ಲಿಸಲು ಜಯ ಸಿ. ಸುವರ್ಣ ಅಭಿಮಾನಿಗಳು, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಪದಾಧಿಕಾರಿಗಳು, ಮುಂಬಯಿ ಬಿಲ್ಲವರು ಹಾಗೂ ಮಹಾರಾಷ್ಟ್ರ ಹೋಟೆಲ್ ಮತ್ತು ರೆಸ್ಟೋರೆಂಟ್ ಫೆಡರೇಶನ್ ಪದಾಧಿಕಾರಿಗಳು ಮತ್ತು ಸದಸ್ಯರು, ಗೊರೇಗಾಂವ್ ಕರ್ನಾಟಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.




Related posts

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ಮಲಾಡ್ ನಲ್ಲಿ ಉಚಿತ ವೈದ್ಯಕೀಯ ಶಿಬಿರ,

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 59ನೇ ನವರಾತ್ರಿ ಉತ್ಸವ ಸಂಪನ್ನ

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ;ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ದಾಸ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ ಅನನ್ಯ: ಮಧುಸೂದನ್‌ ಟಿ.ಆರ್‌.

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk