
ಛತ್ತೀಸ್‌ಗಢದ ಬಸ್ತಾರ್‌ನ ದಟ್ಟ ಅರಣ್ಯಗಳಲ್ಲಿ ಒಂದು ಕಾಲದಲ್ಲಿ ಬಂದೂಕು ಹಿಡಿದು ಹೋರಾಡುತ್ತಿದ್ದ ಮಾಜಿ ನಕ್ಸಲ್ ಮಹಿಳೆಯರು, ಈಗ ರಾಯ್‌ಪುರದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಫ್ಯಾಷನ್ ಶೋನಲ್ಲಿ ನವಿರಾದ ಕೈಮಗ್ಗ ಸೀರೆಗಳನ್ನು ಉಟ್ಟು ಆತ್ಮವಿಶ್ವಾಸದಿಂದ ರ್ಯಾಂಪ್ ವಾಕ್ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಹಿಂಸೆಯ ಹಾದಿ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬಂದ ಈ ಮಹಿಳೆಯರ ಅಭೂತಪೂರ್ವ ಪರಿವರ್ತನೆಗೆ ನೆರೆದಿದ್ದ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಹಾಗೂ ಕರತಾಡನ ವ್ಯಕ್ತವಾಗಿದೆ.

ಸರ್ಕಾರದ ಸುಧಾರಿತ ಪುನರ್ವಸತಿ ಯೋಜನೆ ಹಾಗೂ ಜಾಗೃತಿ ಕಾರ್ಯಕ್ರಮಗಳ ಫಲವಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ಈ ಮಹಿಳೆಯರು, ಈಗ ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಈ ಸುಂದರ ಕ್ಷಣಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. “ಬಂದೂಕು ಹಿಡಿಯುತ್ತಿದ್ದ ಕರಗಳು ಇಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿರುವುದು ದೇಶದಲ್ಲಿ ಶಾಂತಿ ನೆಲೆಸುತ್ತಿರುವುದಕ್ಕೆ ಸಾಕ್ಷಿ” ಎಂದು ಅನೇಕ ನೆಟ್ಟಿಗರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಇನ್ನು ಕೆಲವರು “ಲೆನಿನ್ ಸಿದ್ಧಾಂತದಿಂದ ಲಿನೆನ್ ಬಟ್ಟೆಯವರೆಗೆ” ಹಾಗೂ “ನಕ್ಸಲರನ್ನು ನಕ್ಸಲ್‌ಬ್ಯಾಡೀಸ್ ಮಾಡಿದ್ದಾರೆ” ಎಂದು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ದಶಕಗಳ ಕಾಲ ನಕ್ಸಲ್ ಪೀಡಿತವಾಗಿದ್ದ ಪ್ರದೇಶದ ಮಹಿಳೆಯರು ಇಂದು ಭಯಮುಕ್ತವಾಗಿ ಗೌರವಯುತ ಜೀವನದತ್ತ ಹೆಜ್ಜೆ ಇಡುತ್ತಿರುವುದು ಬಸ್ತಾರ್ ಪ್ರದೇಶದ ಬದಲಾವಣೆಗೆ ಹಿಡಿದ ಕೈಗನ್ನಡಿಯಾಗಿದೆ.




