September 7, 2026
Mumbai News Kannada
ಸುದ್ದಿ

ಕರಾವಳಿಯ 25 ವರ್ಷಗಳ ವಿಕಾಸ ಪಥ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬ ಸಂಭ್ರಮ





ಕರಾವಳಿಯ ಶೇ.95ರಷ್ಟು ಸಕಾರಾತ್ಮಕತೆಯನ್ನು ಜಗತ್ತಿಗೆ ತೋರಿಸಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ: 25 ವರ್ಷಗಳ ಸೇವೆಗೆ ಸಚಿವ ಯು.ಟಿ. ಖಾದರ್ ಮೆಚ್ಚುಗೆ

ಚಿತ್ರ: ಭಾಸ್ಕರ್ ಕಾಂಚನ್, ವರದಿ: ವಾಣಿ ಪ್ರಸಾದ್

ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ (ರಿ.) ಯ 25ನೇ ವರ್ಷದ ಬೆಳ್ಳಿಹಬ್ಬ ಸಮಾರಂಭ ಸೆಪ್ಟೆಂಬರ್ 6ರಂದು, ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಕುಡ್ಮುಲ್ ರಂಗರಾವ್ ಸಭಾಭವನ (ಟೌನ್‌ಹಾಲ್‌) ದಲ್ಲಿ ವಿಜೃಂಭಣೆಯಿಂದ ಜರಗಿತು.


ಕರ್ನಾಟಕ ಸರಕಾರದ ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್, ಇಂಧನ ಸಚಿವರಾದ ಕೆ. ಜೆ. ಜಾರ್ಜ್, ಅವರು ಸಮಾರಂಭದ ಉದ್ಘಾಟನೆ ನೆರವೇರಿಸಿದರು.
ಬಳಿಕ ಯು ಟಿ ಖಾದರ್ ಅವರು ಮಾತನಾಡುತ್ತಾ “ಕಳೆದ 25 ವರ್ಷಗಳಿಂದ ಅತ್ಯಂತ ತಾಳ್ಮೆ, ಪ್ರೀತಿ ಮತ್ತು ಬದ್ಧತೆಯಿಂದ ನಮ್ಮ ಊರಿಗೆ ಹಾಗೂ ಕರಾವಳಿ ಭಾಗಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದಿರುವ ‘ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ’ಯನ್ನು ಹಾಗೂ ಅದರ ರೂವಾರಿಗಳಾದ ಜಯಕೃಷ್ಣ ಎ. ಶೆಟ್ಟಿ ಅವರು, ಪ್ರಸ್ತುತ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ಅವರು ಮತ್ತು ಸಮಿತಿಯ ಎಲ್ಲಾ ಸದಸ್ಯರನ್ನು ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜನರ ಪರವಾಗಿ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.
ನನ್ನ ವಿದ್ಯಾರ್ಥಿ ನಾಯಕತ್ವದ ದಿನಗಳನ್ನು ನೆನೆಸಿಕೊಂಡಾಗ, ಆ ಸಮಯದಲ್ಲಿ ನಡೆದ ಎಂ.ಆರ್.ಪಿ.ಎಲ್ ಹಾಗೂ ಕಡಂದಲೆ ಫ್ಯಾಕ್ಟರಿಯ ಪ್ರತಿಭಟನೆಗಳ ನೆನಪುಗಳು ಉಂಟಾಗುತ್ತವೆ. ಆ ಸಂದರ್ಭಗಳಲ್ಲಿ ಸರಿಯಾದ ಮಾಹಿತಿ ಅಥವಾ ಸಂದೇಶ ಸಾರ್ವಜನಿಕರಿಗೆ ಸಿಗದೆ, ಕೈಗಾರಿಕೆಗಳು ಮುಚ್ಚಿ ಹೋದರೆ ಅಥವಾ ಬರದಿದ್ದರೆ ನಮ್ಮ ಊರಿನ ಅಭಿವೃದ್ಧಿಗೆ ಎಷ್ಟೊಂದು ದೊಡ್ಡ ನಷ್ಟವಾಗುತ್ತದೆ ಎಂಬುದನ್ನು ನಾವು ಅನುಭವದಿಂದ ತಿಳಿದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ, ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯು ಸಾರ್ವಜನಿಕರು ಮತ್ತು ಕಂಪನಿಗಳ ನಡುವೆ ಒಂದು ದೃಢವಾದ ಸೇತುವೆಯಾಗಿ ಕೆಲಸ ಮಾಡಿ, ಸತ್ಯಾಸತ್ಯತೆಗಳನ್ನು ಜನರಿಗೆ ತಲುಪಿಸುವ ಅತ್ಯಂತ ಜವಾಬ್ದಾರಿಯುತ ಕೆಲಸವನ್ನು ಮಾಡಿದೆ.ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಹೊರಗಿನಿಂದ ಹೂಡಿಕೆಗಳು ಬರುವುದು ಅತ್ಯಂತ ಅಗತ್ಯವಾಗಿದೆ. ಆರ್ಥಿಕ ಚಟುವಟಿಕೆಗಳು ಹೆಚ್ಚಾದಾಗ ಮಾತ್ರ ನಮ್ಮ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ಇಡೀ ಪ್ರದೇಶವು ಅಭಿವೃದ್ಧಿ ಹೊಂದುತ್ತದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 95 ರಷ್ಟು ಅತ್ಯುತ್ತಮ ವಾತಾವರಣ ಮತ್ತು ಸಕಾರಾತ್ಮಕ ಅಂಶಗಳಿದ್ದರೂ, ದುರದೃಷ್ಟವಶಾತ್ ಕೇವಲ ಶೇಕಡಾ 5 ರಷ್ಟು ನಕಾರಾತ್ಮಕ ವಿಷಯಗಳು ಹೆಚ್ಚು ಪ್ರಚಾರ ಪಡೆಯುತ್ತಿವೆ. ಈ ನಕಾರಾತ್ಮಕ ಚಿಂತನೆ ಮತ್ತು ವಾತಾವರಣ ಬದಲಾಗಬೇಕಿದೆ.ನಮ್ಮ ಕರಾವಳಿ ಭಾಗದಲ್ಲಿ ಸುಂದರವಾದ ನದಿಗಳು ಕಡಲತೀರಗಳು ,ಬೆಟ್ಟ-ಗುಡ್ಡಗಳು, ಅರಣ್ಯ ಸಂಪತ್ತು, ದೇಶದಲ್ಲೇ ಹೆಸರಾದ ಶ್ರೇಷ್ಠ ಶಿಕ್ಷಣ ಸಂಸ್ಥೆಗಳು, ಅತ್ಯಾಧುನಿಕ ಆರೋಗ್ಯ ಕ್ಷೇತ್ರ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನೈಸರ್ಗಿಕ ಬಂದರು ಸೇರಿದಂತೆ ಎಲ್ಲಾ ತರಹದ ಸಾಮರ್ಥ್ಯವೂ ಇದೆ. ಈ ಅಪಾರ ಸಾಮರ್ಥ್ಯವನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.ಸಾರ್ವಜನಿಕರು, ಮಾಧ್ಯಮ ಮಿತ್ರರು ಮತ್ತು ಸರ್ಕಾರ ಒಂದಾಗಿ ಕೈಜೋಡಿಸಿದಾಗ ಮಾತ್ರ ಕರಾವಳಿಯ ನೈಜ ಅಭಿವೃದ್ಧಿ ಸಾಧ್ಯ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಈ ಮೂಲಕ ಭರವಸೆ ನೀಡುತ್ತಾ, ಪರಿಸರ ಸಮಿತಿಯ ಈ ಸತ್ಕಾರ್ಯ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಕರ್ನಾಟಕ ಸರಕಾರದ ಇಂಧನ ಸಚಿವರಾದ ಕೆ ಜೆ ಜಾರ್ಜ್ ತನ್ನ ಅನಿಸಿಕೆ ತಿಳಿಸುತ್ತಾ “ರಾಜಕೀಯವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಿ, ಬಳಿಕ ಎಲ್ಲರೂ ಒಂದಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರತಿಯೊಂದು ಧರ್ಮಗ್ರಂಥವೂ ಒಳ್ಳೆಯದನ್ನೇ ಬೋಧಿಸುವುದರಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬರನ್ನೂ ಜೊತೆಯಲ್ಲಿ ಕರೆದೊಯ್ಯಬೇಕು .ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿದ್ದು, ಶ್ರೀನಿವಾಸ ಮಲ್ಯ ಹಾಗೂ ಜಾರ್ಜ್ ಫೆರ್ನಾಂಡಿಸ್ ಅವರಂತಹ ನಾಯಕರ ಕೊಡುಗೆಯನ್ನು ಸ್ಮರಿಸುತ್ತ , ಮುಂಬರುವ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವರು ನುಡಿದರು.

ಅನಿವಾಸಿ ಭಾರತೀಯ ಹಾಗೂ ಇನ್ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್ (ಇಂಡಿಯಾ-ಗ್ಲೋಬಲ್) ನ ವಿಶಿಷ್ಟ ಫೆಲೋ ಡಾ. ರೊನಾಲ್ಡ್ ಕೊಲಾಸೊ ಅವರು ದಿಕ್ಸೂಚಿ ಭಾಷಣ ಮಾಡಿ ಮಾತನಾಡುತ್ತಾ “ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಸಮತೋಲನದಿಂದ ಮುನ್ನಡೆಸುವ ಮೂಲಕ ಕರ್ನಾಟಕ ಕರಾವಳಿಯ ಪ್ರವಾಸೋದ್ಯಮ ಹಾಗೂ ಆರ್ಥಿಕ ಪ್ರಗತಿಗೆ ಹೊಸ ದಿಕ್ಕು ನೀಡಬೇಕು ಎಂದು ಆಗ್ರಹಿಸಲಾಗಿದೆ.ಕರಾವಳಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಅಭಿವೃದ್ಧಿಗಾಗಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಿ, ಪ್ರವಾಸೋದ್ಯಮ ತಜ್ಞರು, ಪರಿಸರ ತಜ್ಞರು, ನಗರ ಯೋಜಕರು, ಉದ್ಯಮಿಗಳು ಹಾಗೂ ಎನ್‌ಆರ್‌ಐ ಪ್ರತಿನಿಧಿಗಳನ್ನು ಒಳಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.ಮುಂದಿನ 50ರಿಂದ 100 ವರ್ಷಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಸಂಪರ್ಕ, ನಿರಂತರ ವಿದ್ಯುತ್, ನೀರು ಮತ್ತು ಆಧುನಿಕ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಬೀಚ್ ರೆಸಾರ್ಟ್‌ಗಳು, ವಾಟರ್ ಸ್ಪೋರ್ಟ್ಸ್, ಕ್ರೂಸ್, ಇಕೋ ಹಾಗೂ ಮೆಡಿಕಲ್ ಟೂರಿಸಂಗೆ ಉತ್ತೇಜನ ನೀಡುವುದರ ಜೊತೆಗೆ ಮೆರೀನಾ, ಐಟಿ, ಆಹಾರ ಸಂಸ್ಕರಣೆ ಮತ್ತು ಮೀನುಗಾರಿಕೆ ಆಧಾರಿತ ಉದ್ಯಮಗಳನ್ನು ಅಭಿವೃದ್ಧಿಪಡಿಸಬೇಕು.
ಕರಾವಳಿಯ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಪರಿಸರ ಸಂರಕ್ಷಣೆಯೊಂದಿಗೆ ನಡೆಯುವ ಸಮಗ್ರ ಅಭಿವೃದ್ಧಿಯೇ ಕರಾವಳಿಯ ದೀರ್ಘಕಾಲೀನ ಆರ್ಥಿಕ ಪ್ರಗತಿಗೆ ಪೂರಕವಾಗಲಿದೆ” ಎಂದು ವಿವರಿಸಿದರು.

ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಅವರು ವಿಷನ್ ಪ್ಲಾನ್ ಕುರಿತು ವಿವರಣೆ ನೀಡುತ್ತ “ನಮ್ಮದೇ ನೆಲದಲ್ಲಿರುವ ನಾಗಾರ್ಜುನ (ಯುಪಿಸಿಎಲ್) ಯೋಜನೆಯಿಂದ ಶೇಕಡಾ 50ರಷ್ಟು ವಿದ್ಯುತ್ ರಾಜಧಾನಿ ಬೆಂಗಳೂರಿಗೆ ಸರಬರಾಜಾಗುತ್ತಿದೆ. ಆದರೆ, ವಿದ್ಯುತ್ ಉತ್ಪಾದಿಸುವ ನಮ್ಮ ಕರಾವಳಿ ಭಾಗದಲ್ಲೇ ನಿರಂತರ ವಿದ್ಯುತ್ ಕಡಿತ ಹಾಗೂ ಲೋಡ್ ಶೇಡಿಂಗ್ ಆಗುತ್ತಿರುವುದು ಅತ್ಯಂತ ಬೇಸರದ ಸಂಗತಿ. ಮಾನ್ಯ ಇಂಧನ ಸಚಿವ ಜಾರ್ಜ್ ಅವರಲ್ಲಿ ನನ್ನ ನಮ್ರ ವಿನಂತಿ ಏನೆಂದರೆ, ಮುಂದಿನ ಎರಡು ವರ್ಷಗಳ ಒಳಗಾಗಿ ಅಗತ್ಯ ತಾಂತ್ರಿಕ ಹಾಗೂ ಸ್ವಿಚ್‌ಗೇರ್ ಸಮಸ್ಯೆಗಳನ್ನು ಸರಿಪಡಿಸಿ, ನಮ್ಮ ಜಿಲ್ಲೆಗಳಿಗೆ ದಿನದ 24ಗಂಟೆಯೂ ನಿರಂತರ ಹಾಗೂ ಸುಗಮ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.ಎರಡನೆಯದಾಗಿ, ಕಳೆದ 45 ವರ್ಷಗಳಿಂದ ನಮ್ಮನ್ನು ಕಾಡುತ್ತಿರುವ ಸಮುದ್ರ ಕೊರೆತದ ಸಮಸ್ಯೆ. ಪ್ರತಿ ವರ್ಷ ಕೇವಲ ತಾತ್ಕಾಲಿಕವಾಗಿ ಕಲ್ಲುಗಳನ್ನು ಹಾಕುವುದು ಮತ್ತು ಗುತ್ತಿಗೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದೇವೆ ಹೊರತು ಶಾಶ್ವತ ಪರಿಹಾರ ಸಿಕ್ಕಿಲ್ಲ. ಮುಂಬೈನ ಮರೀನ್ ಡ್ರೈವ್ ಮಾದರಿಯಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿದರೆ ಮಾತ್ರ ಇದಕ್ಕೆ ಶಾಶ್ವತ ಮುಕ್ತಿ ಸಿಗಲು ಸಾಧ್ಯ. ನಮ್ಮ320 ಕಿಲೋಮೀಟರ್ ಕರಾವಳಿ ತೀರದಲ್ಲಿ, ಸದ್ಯ ಅತ್ಯಂತ ತುರ್ತು ಅಗತ್ಯವಿರುವ ಕೇವಲ ಶೇಕಡಾ 5 ಅಂದರೆ ,15ಕಿಲೋಮೀಟರ್ ಭಾಗಕ್ಕಾದರೂ ತಜ್ಞರ ಸಮಿತಿ ರಚಿಸಿ, ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿ ವಿನಂತಿಸುತ್ತೇನೆ.ಕರಾವಳಿ ತೀರ ಭದ್ರವಾದರೆ ನಮ್ಮಲ್ಲಿ ಪ್ರವಾಸೋದ್ಯಮ ಅದ್ಭುತವಾಗಿ ಬೆಳೆಯುತ್ತದೆ. ಇದರ ಜೊತೆಗೆ, ನಮ್ಮ ಭವಿಷ್ಯದ ಪೀಳಿಗೆಯ ಶಾಂತಿ ಮತ್ತು ನೆಮ್ಮದಿಗಾಗಿ ಈ ಭಾಗದಲ್ಲಿ ಜಾತಿ-ಧರ್ಮಗಳ ಹೆಸರಿನಲ್ಲಿ ನಡೆಯುವ ಜಗಳಗಳು ನಿಲ್ಲಬೇಕು. ನಮ್ಮ ಯು.ಟಿ. ಖಾದರ್ ಅವರಂತೆ ಎಲ್ಲ ಸಮುದಾಯಗಳನ್ನು ಗೌರವಿಸುವ ಕೋಮು ಸೌಹಾರ್ದತೆ ನಮ್ಮಲ್ಲಿ ನೆಲೆಸಬೇಕು. ನಮ್ಮ ರಾಜಕಾರಣಿಗಳು ಮತ್ತು ಸಾರ್ವಜನಿಕರು ಒಂದಾಗಿ ಈ ಕರಾವಳಿಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡಿಸೋಣ ಎಂದರು.

ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾ “ನಮ್ಮ ಭಾಗದಿಂದ ಮುಂಬೈಗೆ ಕೊಂಕಣ ರೈಲ್ವೆಯ ಹೆಜ್ಜೆಯನ್ನಿಟ್ಟ ಆ ದಿನಗಳನ್ನು ನಾವಿಂದು ನೆನಪಿಸಿಕೊಳ್ಳಬೇಕಿದೆ. ಈ ಹಿಂದೆ ನಾವೆಲ್ಲರೂ ಸಚಿವರೊಂದಿಗೆ ತೆರಳಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಕುರಿತು ಮಾತನಾಡಿದ್ದೆವು. ಮುಂದಿನ ಅಭಿವೃದ್ಧಿಯ ದೃಷ್ಟಿಯಿಂದ ಈ ಕಾರ್ಯ ಅತ್ಯಗತ್ಯವಾಗಿದ್ದು, ಇದಕ್ಕೆ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪೂರ್ಣ ಸಹಕಾರ ಬೇಕಾಗಿದೆ.ವೇದಿಕೆಯಲ್ಲಿ ರೊನಾಲ್ಡ್ ಕೊಲಾಸೊ, ಜಗಧೀಶ್ ಅಧಿಕಾರಿ ಸೇರಿದಂತೆ ಅನೇಕ ಹಿರಿಯರು ಹಾಗೂ ಆತ್ಮೀಯರು ಉಪಸ್ಥಿತರಿದ್ದಾರೆ. ಇವರೆಲ್ಲರೂ ಒಂದಾಗಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯ, ಸಂಪರ್ಕ ಹಾಗೂ ನೆಟ್‌ವರ್ಕ್ ಬಳಸಿ ನವೀನ ಸಾಧನೆಗಳನ್ನು ಮಾಡಲು ಸೂಕ್ತ ವಾತಾವರಣವಿದೆ. ಆದ್ದರಿಂದ ನಿಮ್ಮ ಎಲ್ಲಾ ಸಾಮರ್ಥ್ಯವನ್ನು ಈ ಮಣ್ಣಿನ ಏಳಿಗೆಗಾಗಿ ಜೋಡಿಸಬೇಕಾಗಿ ವಿನಂತಿಸುತ್ತೇನೆ.ನಾನು ಹಾಗೂ ವೇದವ್ಯಾಸ ಕಾಮತ್ ಅವರು ಮಂಗಳೂರಿನ ಅಭಿವೃದ್ಧಿಗಾಗಿ ಸದಾ ಸಿದ್ಧರಿದ್ದೇವೆ. ಮಂಗಳೂರಿನಲ್ಲಿ ನೂತನ ಉದ್ಯಮಗಳನ್ನು ಸ್ಥಾಪಿಸಲು, ಹೂಡಿಕೆ ಮಾಡಲು ಹಾಗೂ ನಮ್ಮ ನೆಲದ ಮಕ್ಕಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ.ಈ ಬೆಳ್ಳಿ ಹಬ್ಬದ ಶುಭ ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷರಾದ ಜಯಕೃಷ್ಣ ಶೆಟ್ಟಿ ಅವರಿಗೂ ಹಾಗೂ ಸಮಸ್ತ ಸದಸ್ಯರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಈ ನಿಸ್ವಾರ್ಥ ಸೇವೆಗೆ ಆ ಭಗವಂತನ ಆಶೀರ್ವಾದ ಸದಾ ಇರಲಿ ಎಂದರು.

ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ. ವೇದವ್ಯಾಸ ಕಾಮತ್ ಮಾತನಾಡಿ “ಇಂದು ಈ ಕಾರ್ಯಕ್ರಮವು ಮಂಗಳೂರಿನ ಹಳೆಯ ನೆನಪುಗಳನ್ನು ಮೆಲಕು ಹಾಕುವ ಅತ್ಯದ್ಭುತ ಅವಕಾಶವನ್ನು ನಮಗೆ ಮಾಡಿಕೊಟ್ಟಿದೆ. ನಾವು ಶಾಲೆಯಲ್ಲಿ ಓದುತ್ತಿದ್ದ ಸಣ್ಣ ವಯಸ್ಸಿನ ದಿನಗಳಲ್ಲೇ ‘ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ’ ಕೈಗೆತ್ತಿಕೊಂಡ ಹೋರಾಟಗಳು ಮತ್ತು ಸಮಾಜಮುಖಿ ಕಾರ್ಯಗಳನ್ನು ಕೇಳಿ ಬೆಳೆದಿದ್ದೇವೆ.ಅವತ್ತಿನ ವಾತಾವರಣ ಮತ್ತು ಪರಿಸ್ಥಿತಿಗಳೇ ಬೇರೆಯಾಗಿದ್ದವು. ಜಾರ್ಜ್ ಫರ್ನಾಂಡಿಸ್ ಅವರಿಂದ ಹಿಡಿದು ಅನೇಕ ಮಹಾನೀಯರು ಈ ಭಾಗದ ಏಳಿಗೆಗೆ ನೀಡಿದ ಕೊಡುಗೆ ಅಪಾರ. ಎಂ.ಆರ್.ಪಿ.ಎಲ್ ನಂತಹ ಕೈಗಾರಿಕೆಗಳು ಬರುವಾಗ ನಮಗೆ ಉದ್ಯಮ, ಕೆಲಸ ಕಾರ್ಯಗಳು ಬೇಕು; ಆದರೆ ಪರಿಸರಕ್ಕೆ ಯಾವುದೇ ಹಾನಿಯಾಗಬಾರದು ಎಂಬ ದೂರದೃಷ್ಟಿಯ ಚಿಂತನೆಯನ್ನು ಈ ಸಮಿತಿ ಮಾಡಿದೆ. ನಿಮ್ಮ ಈ ಹೋರಾಟಗಳು ಇಂದು ಹತ್ತಾರು ಹೋರಾಟಗಾರರಿಗೆ ದಾರಿದೀಪವಾಗಿದೆ.ಇಂದು ಇಂಧನ ಸಚಿವ ಕೆ.ಜೆ. ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ನಾವೆಲ್ಲರೂ ಒಂದಾಗಿ ಈ ತುಳುನಾಡಿನ ಅಭಿವೃದ್ಧಿಗೆ ಶ್ರಮಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಬಿ.ಎಂ. ಹೆಗ್ಡೆ, ಕೆ.ಕೆ. ಪೈ, ಪೇಜಾವರ ಶ್ರೀಗಳು ಹಾಗೂ ಜಾರ್ಜ್ ಫರ್ನಾಂಡಿಸ್ ಅವರಂತಹ ದೈತ್ಯ ಪ್ರತಿಭೆಗಳ ಮಾರ್ಗದರ್ಶನದಲ್ಲಿ ಬೆಳೆದ ಈ ಸಂಸ್ಥೆಯು, ನೆಲ-ಜಲವನ್ನು ಉಳಿಸಿ, ಬಡತನ ನಿವಾರಣೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ದುಬೈನ ಕೈಗಾರಿಕೋದ್ಯಮಿ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಮಾತನಾಡಿ, ಸಮಿತಿಯಲ್ಲಿ ಎಲ್ಲಾ ಧರ್ಮದವರೂ ಸದಸ್ಯರಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಆದರ್ಶಗಳನ್ನು ಸಮಿತಿಯು ಅನುಸರಿಸುತ್ತಿದೆ , ದೇವರಿಗೆ ಜಾತಿ-ಮತಗಳ ಭೇದವಿಲ್ಲ ಎಂಬ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
ಒಗ್ಗಟ್ಟಿನಿಂದ ಮುನ್ನಡೆದರೆ ಯಾವುದೇ ಸಾಧನೆಯನ್ನೂ ಮಾಡಲು ಸಾಧ್ಯವಿದೆ. ನಮ್ಮ ಉತ್ತಮ ಕಾರ್ಯಗಳಿಗೆ ಸರ್ಕಾರವು ಖಂಡಿತವಾಗಿಯೂ ಸಹಕಾರ ಮತ್ತು ಬೆಂಬಲ ನೀಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ರಾಜ್ಯ ಸಂಚಾಲಕ ಕೆ. ಪಿ ಜಗದೀಶ ಅಧಿಕಾರಿ ಮಾತನಾಡುತ್ತಾ “ಸಮಿತಿಯ ಸಂಸ್ಥಾಪಕರು, ಪದಾಧಿಕಾರಿಗಳು 25 ವರ್ಷಗಳಿಂದ ಈ ಜಿಲ್ಲೆಯ ಅಭಿವೃದ್ಧಿಗಾಗಿ ಮುಂಬೈಯಲ್ಲಿ ಸಂಪಾದಿಸಿದ ಬಹುಪಾಲು ಸಂಭಾವನೆಯನ್ನು ನೀಡಿದ್ದಾರೆ. ಅವರೆಲ್ಲರ ಯೋಚನೆ ಮತ್ತು ಯೋಚನೆ ಒಂದೇ ನಮ್ಮ ಎರಡು ಜಿಲ್ಲೆಗಳು ಅಭಿವೃದ್ಧಿ ಆಗಬೇಕು. ಈ ಜಿಲ್ಲೆಯ ಜನರಿಗೆ ಉದ್ಯೋಗ ಆಗಬೇಕು. ಅಂತರಾಷ್ಟ್ರೀಯ ಕಂಪನಿಗಳು ನಗರಕ್ಕೆ ಆಗಮಿಸಬೇಕು ಎಂಬ ಅಭಿಲಾಷೆಗಳು ಅವರದಾಗಿದೆ. ಜಯ ಕೃಷ್ಣ ಶೆಟ್ಟಿ ಅವರು ಸಮಿತಿಯ ಮೂಲಕ ಕೋಟ್ಯಾಂತರ ರೂಪಾಯಿಯನ್ನು ಜಿಲ್ಲೆಯ ಅಭಿವೃದ್ಧಿಗಾಗಿ ನೀಡುತ್ತಿದ್ದಾರೆ ಆದ್ದರಿಂದ ಈ ಜಿಲ್ಲೆಯ ಜನರೆಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿಗಾಗಿ ಸಹಕರಿಸಬೇಕು ಎಂದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ ನಮ್ಮವರು ಬುದ್ದಿವಂತರು, ಶ್ರೀಮಂತ ಮನಸ್ಸಿನವರಾದ ನಾವೆಲ್ಲರೂ ಸೇರಿ ಸರಕಾರದೊಂದಿಗೆ ಕೈಜೋಡಿಸಿ ಈ ಜಿಲ್ಲೆಯನ್ನು ಜಗತ್ತಿಗೆ ಪ್ರಸಿದ್ಧಿ ಮಾಡೋಣ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಸಾಧನೆಯ ಹಾದಿಯಲ್ಲಿ ಬೆಳೆದ ನಾವೆಲ್ಲರೂ ಒಗ್ಗಟ್ಟಾಗಿ ಎರಡು ಜಿಲ್ಲೆಯನ್ನು ಪ್ರಗತಿ ಮಾಡೋಣ ಎಂದು ನುಡಿದರು .
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ. ಎ. ಗಫೂರ್, ,ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷರಾದ ಧರ್ಮಪಾಲ್ ದೇವಾಡಿಗ ಹಾಗೂ ದುಬೈನ ಉದ್ಯಮಿ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್‌ಕುಮಾರ್ ಎಂ. ಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸುತ್ತಾ ” ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸಮರ್ಥ ರೀತಿಯಲ್ಲಿ ನಿರ್ವಹಿಸಲು ಎಲ್ಲರೂ ಸಹಕಾರ ನೀಡಿದ್ದಾರೆ. ಅವರೆಲ್ಲರ ಸಹಕಾರದಿಂದ ಇಂದು ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುವಲ್ಲಿ ಸಹಕಾರಿ ಆಗಿದೆ. ಅನಿವಾರ್ಯ ಕಾರಣಗಳಿಂದ ಕರ್ನಾಟಕದ ಮುಖ್ಯಮಂತ್ರಿಗಳು ನಮ್ಮೊಂದಿಗೆ ಪಾಲ್ಗೊಳ್ಳದಿದ್ದರೂ ಕೂಡ ಅವರ ಪ್ರತಿನಿಧಿಯಾಗಿ. ಇಬ್ಬರು ಸಚಿವರು ಆಗಮಿಸಿದ್ದಾರೆ ಇದು ನಮಗೆ ಅಭಿಮಾನ ತಂದಿದೆ. ನಮ್ಮ ಎಲ್ಲಾ ಯೋಜನೆಗಳನ್ನು ಯೋಚನೆಗಳನ್ನು ಸಚಿವರ ಮೂಲಕ ಮುಖ್ಯಮಂತ್ರಿ ಗೆ ತಲುಪಿಸಲಿದ್ದೇವೆ. ಈ ಜಿಲ್ಲೆಯಲ್ಲಿ ಪ್ರತೀ ವರ್ಷ ಕೋಟಿಗಟ್ಟಲೆ ಮಕ್ಕಳು ಕಲಿತು ಹೊರಬರುತ್ತಾರೆ. ಅವರ ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿದೆ. ಇಲ್ಲಿ ಸೇರಿದ ಎಲ್ಲರೂ ಕಷ್ಟ ಪಟ್ಟು ಹಣ ಸಂಪಾದಿಸಿ ಇದೀಗ ಜಿಲ್ಲೆಯ ಅಭಿವೃದ್ದಿಗೆ ಹೊರಟಿದ್ದೆ .ನಮ್ಮ ಜಿಲ್ಲೆ ರಾಜ್ಯ ಹಾಗೂ ದೇಶ ಅಭಿವೃದ್ದಿಯಾಗಬೇಕಾಗಿದೆ ಎಂದು ನುಡಿದರು.
ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
ಸಮಿತಿಯ ವಕ್ತಾರ ದಯಾಸಾಗರ್ ಚೌಟ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಿತಿಯ ಗೌರವ ಕಾರ್ಯದರ್ಶಿಗಳಾದ ಜಿ. ಟಿ. ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.
ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ, ರಾಜ್ಯ ಸಂಯೋಜಕ ಕೆ. ಪಿ. ಜಗದೀಶ್ ಅಧಿಕಾರಿ, ಧನಸಂಗ್ರಹಣಾ ಸಮಿತಿ ಕಾರ್ಯಾಧ್ಯಕ್ಷ ಡಾ. ಆರ್. ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಜಿ. ಟಿ. ಆಚಾರ್ಯ, ಗೌರವ ಕಾರ್ಯದರ್ಶಿ ಸುರೇಂದ್ರ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಅರುಣ್‌ಪ್ರಕಾಶ್ ಶೆಟ್ಟಿ ಹಾಗೂ ಕೋಶಾಧಿಕಾರಿ ಪ್ರಭಾಕರ್ ಬಂಗೇರ ಕಾರ್ಕಳ ,ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಹಿರಿಯಡ್ಕ ಮೋಹನ್‌ದಾಸ್, ಚಂದ್ರಶೇಖರ್ ಆರ್. ಬೆಲ್ಚಡ. ಅಡ್ವೋಕೇಟ್ ಆರ್. ಎಮ್. ಭಂಡಾರಿ, ಸಿ.ಎ. ಐ. ಆರ್. ಶೆಟ್ಟಿ, ಗಿರೀಶ್ ಬಿ. ಸಾಲಿಯಾನ್,
ಗೌರವ ಕಾರ್ಯದರ್ಶಿಗಳಾದ ದೇವದಾಸ ಕುಲಾಲ್
ಸಿಎಸ್. ಗಣೇಶ್ ಶೆಟ್ಟಿ, ಹ್ಯಾರಿ ಸಿಕ್ವೇರಾ,
ಗೌರವ ಜಂಟಿ ಕೋಶಾಧಿಕಾರಿಗಳಾದ ರಾಕೇಶ್ ಭಂಡಾರಿ, ಮಹೇಶ್ ಕಾರ್ಕಳ , ಸದಸ್ಯರುಗಳಾದ ಬಿ ವಿವೇಕ್ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ರವಿ ದೇವಾಡಿಗ, ತುಳಸೀದಾಸ್ ಎಲ್. ಅಮೀನ್,ಡಾ. ಪ್ರಭಾಕರ್ ಶೆಟ್ಟಿ ಬೋಳ, ಅಡ್ವೋಕೇಟ್ ದಯಾನಂದ ಶೆಟ್ಟಿ, ದಿವಾಕರ್ ಶೆಟ್ಟಿ ಪೋಸ್ರಾಲ್, ತೋನ್ಸೆ ಅಶೋಕ್ ಶೆಟ್ಟಿ,
ಅಡ್ವೋಕೇಟ್ ಸಂತೋಷ್ ಕುಮಾರ್ ಹೆಗ್ಡೆ, ಚಿತ್ರಾಪು ಕೆ. ಎಮ್. ಕೋಟ್ಯಾನ್, ಅಡ್ವೊಕೇಟ್ ಗುಣಾಕರ್ ಶೆಟ್ಟಿ , ಜಯರಾಮ್ ಶೆಟ್ಟಿ , ವಿಲ್ಸನ್ ಫೆರ್ನಾಂಡೀಸ್, ಮಂಜುನಾಥ ಹೆಗ್ಡೆ, ಸುಂದರ್ ಆಚಾರ್ಯ, ಉಭಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


ಕರಾವಳಿ ಅಭಿವೃದ್ಧಿಗೆ 25 ವರ್ಷಗಳ ನಿಸ್ವಾರ್ಥ ಸೇವೆ: ಸಮಿತಿಗೆ ಸರ್ಕಾರದ ಸೂಕ್ತ ಪ್ರಾತಿನಿಧ್ಯಕ್ಕೆ ನಿತ್ಯಾನಂದ ಕೋಟ್ಯಾನ್ ಆಗ್ರಹ

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ.) ಅಧ್ಯಕ್ಷರುನಿತ್ಯಾನಂದ ಡಿ. ಕೋಟ್ಯಾನ್ ಮಾತನಾಡಿ
ಜಯಕೃಷ್ಣ ಶೆಟ್ಟಿ ಅವರ ನೇತೃತ್ವದ ‘ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ’ ಕಳೆದ 25ವರ್ಷಗಳಿಂದ ಈ ಕರಾವಳಿ ಭಾಗದ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ರಾಮಚಂದ್ರ ಬೈಕಂಪಾಡಿ, ಫೆಲಿಕ್ಸ್ ಡಿಸೋಜಾ, ಜಗನ್ನಾಥ ಅಧಿಕಾರಿ ಸೇರಿದಂತೆ ಅನೇಕ ಕಾರ್ಮಿಕ ನಾಯಕರು ಹಾಗೂ ಮುಖಂಡರು ಒಟ್ಟಾಗಿ ಕುದುರೆಮುಖ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಾಗಾರ್ಜುನ ಯೋಜನೆಗಳಂತಹ ಪ್ರಮುಖ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.ಇಂದು ಈ ಸಮಿತಿಯು ಬೆಳ್ಳಿ ಮಹೋತ್ಸವದ ನೀಡಲು ಹೊಸ್ತಿಲಲ್ಲಿದೆ. ಈ ಸಮಿತಿಯಲ್ಲಿ ಬ್ಯಾಂಕರ್‌ಗಳು, ನ್ಯಾಯವಾದಿಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು ಹಾಗೂ ಸಮಾಜದ ವಿವಿಧ ರಂಗಗಳ ನುರಿತ ತಜ್ಞರಿದ್ದಾರೆ. ಅವರು ಕರಾವಳಿ ಭಾಗದ ಮುಂದಿನ 100 ವರ್ಷಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅತ್ಯುತ್ತಮ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದಾರೆ.ಮುಂಬೈನಿಂದ ಬಂದಿರುವ ನಮ್ಮ ಸಮಿತಿಯ ಸದಸ್ಯರು ಹಾಗೂ ದಾನಿಗಳು ಲಕ್ಷಾಂತರ ರೂಪಾಯಿ ಹಣ ಮತ್ತು ತಮ್ಮ ಅಮೂಲ್ಯ ಸಮಯವನ್ನು ಈ ಪ್ರದೇಶದ ಏಳಿಗೆಗಾಗಿ ವಿನಿಯೋಗಿಸುತ್ತಿದ್ದಾರೆ. ಈ ಹಿರಿಯರ ತ್ಯಾಗ ಮತ್ತು ಶ್ರಮವನ್ನು ಇಂದಿನ ಯುವ ಪೀಳಿಗೆ ಹಾಗೂ ಜನಾಂಗ ಅರ್ಥೈಸಿಕೊಳ್ಳಬೇಕಿದೆ.ನಮ್ಮ ಮುಖ್ಯ ಬೇಡಿಕೆ ಏನೆಂದರೆ, ಸರ್ಕಾರದ ಅಭಿವೃದ್ಧಿ ಮಂಡಳಿಗಳಲ್ಲಿ ಅಥವಾ ನಿರ್ಧಾರ ತೆಗೆದುಕೊಳ್ಳುವ ಕಮಿಟಿಗಳಲ್ಲಿ ‘ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ’ಗೆ ಸೂಕ್ತ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆಯನ್ನು ನೀಡಬೇಕು. ನಮಗೆ ಯಾವುದೇ ಹುದ್ದೆ ಅಥವಾ ಸ್ವಾರ್ಥ ಹಿತಾಸಕ್ತಿಗಳಿಲ್ಲ, ಕೇವಲ ಕರಾವಳಿ ಭಾಗದ ನೈಜ ಅಭಿವೃದ್ಧಿ ಮತ್ತು ಪ್ರಗತಿಯೇ ನಮ್ಮ ಮುಖ್ಯ ಗುರಿಯಾಗಿದೆ. ಯು.ಟಿ. ಖಾದರ್ ಅವರಂತಹ ನಾಯಕರು ಹಾಗೂ ಪ್ರಸ್ತುತ ಸರ್ಕಾರ ಈ ವಿಚಾರದಲ್ಲಿ ನಮಗೆ ಬೆಂಬಲ ನೀಡಬೇಕಾಗಿ ವಿನಂತಿಸುತ್ತೇನೆ ಎಂದು ನುಡಿದರು .



Related posts

ಕೋಡಿಕಲ್ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್ ಆರೋಗ್ಯ ತಪಾಸಣಾ ರಕ್ತದಾನ ಶಿಬಿರ 

Mumbai News Desk

ಬೆಳ್ಮಣ್: ಕುಂಭ ನಿಧಿ ಕ್ರೆಡಿಟ್ ಕೋ ಅಪರೆಟಿವ್ ಸೂಸೈಟಿ ಉದ್ಘಾಟನೆಗೆ ಸಿದ್ಧತೆ ,

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (04/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶ

Mumbai News Desk

ಪೊಲಿಪು ಹೊನ್ನಯ್ಯ ಎಂ. ಕರ್ಕೇರ ನಿಧನ

Mumbai News Desk

ಮುಂಬೈ ಕನ್ನಡತಿ ನ್ಯಾ. ಮೀನಾಕ್ಷಿ ಅಚಾರ್ಯರಿಗೆ ಗ್ಲೋಬಲ್ ಲೀಗಲ್ ಅವಾರ್ಡ್ಸ್ ನಿಂದ, “ವರ್ಷದ ವ್ಯವಸ್ಥಾಪಕಿ ಪಾಲುದಾರ ಮಹಿಳೆ” ಪ್ರಶಸ್ತಿ.

Mumbai News Desk