
ಬ್ಯಾಂಕಿನ ಅಭಿವೃದ್ಧಿಗೆ ಗ್ರಾಹಕರ ಬೆಂಬಲ ಅಪಾರ: ನ್ಯಾಯವಾದಿ ರೋಹಿಣಿ ಸಾಲ್ಯಾನ್
ಮಂಗಳೂರು: ಭಾರತ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್ನ ಮಂಗಳೂರಿನ ಹಂಪನಕಟ್ಟೆ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಅಂಗವಾಗಿ ಕೇಕ್ ಕತ್ತರಿಸಿ ಶುಭ ಕೋರಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬ್ಯಾಂಕಿನ ಮಾಜಿ ಉಪಕಾರ್ಯಾಧ್ಯಕ್ಷೆ, ನ್ಯಾಯವಾದಿ ರೋಹಿಣಿ ಸಾಲ್ಯಾನ್, “ಬ್ಯಾಂಕಿನ ವ್ಯವಹಾರದ ಅಭಿವೃದ್ಧಿಯನ್ನು ಕಂಡಾಗ ಬಹಳ ಸಂತೋಷವಾಗುತ್ತದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಸೇವಾ ಕಾರ್ಯಗಳು ಶ್ಲಾಘನೀಯ. ಬ್ಯಾಂಕಿನ ಬೆಳವಣಿಗೆಗೆ ಗ್ರಾಹಕರ ಮತ್ತು ಹಿತೈಷಿಗಳ ಬೆಂಬಲ ಅಪಾರವಾಗಿದೆ. ಬ್ಯಾಂಕನ್ನು ಮತ್ತಷ್ಟು ಭದ್ರವಾಗಿ ರೂಪಿಸುವಲ್ಲಿ ಎಲ್ಲರ ಸಹಕಾರ ಅಗತ್ಯ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್, ಕೋಶಾಧಿಕಾರಿ ನ್ಯಾಯವಾದಿ ಪದ್ಮರಾಜ್ ಆರ್. ಪೂಜಾರಿ, ಹಿರಿಯ ಗ್ರಾಹಕರಾದ ಶಂಕರ್ ಸುವರ್ಣ ಕುದ್ರೋಳಿ, ಬ್ಯಾಂಕ್ಗಳ ಪ್ಯಾನಲ್ ಮೌಲ್ಯಮಾಪಕ ಅಶೋಕ್ ಕುಮಾರ್, ರವಿಶಂಕರ್ ಮಿಜಾರ್, ಸಂದೇಶ್ ಎಂ., ‘ನಮ್ಮ ಕುಡ್ಲ’ ವಾಹಿನಿಯ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ ಸೇರಿದಂತೆ ಹಲವು ಉದ್ಯಮಿಗಳು ಹಾಗೂ ಹಿರಿಯ ಗ್ರಾಹಕರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಾಖೆಯ ಮುಖ್ಯ ಪ್ರಬಂಧಕಿ ಹೇಮಲತಾ ಎ. ಸುವರ್ಣ, ಉಪ ಪ್ರಬಂಧಕ ಹರ್ಷ ಕರ್ಕೇರ, ಶಾಖಾಧಿಕಾರಿಗಳಾದ ಸ್ಮಿತಾ ಮತ್ತು ಮಿಥಾಲಿ, ಸಿಬ್ಬಂದಿ ವರ್ಗದವರಾದ ನಿಶಾ, ಪೃಥ್ವಿ, ನಮಿತಾ, ವಿದ್ಯಾ, ಅಮಿತಾ, ಯೋಗೀಶ್ ಹಾಗೂ ಸೂರಜ್ ಅವರು ಆಗಮಿಸಿದ ಗ್ರಾಹಕರನ್ನು ಮತ್ತು ಹಿತೈಷಿಗಳನ್ನು ಸ್ವಾಗತಿಸಿ ಗೌರವಿಸಿದರು.




