ಮಂಗಳೂರಿನಲ್ಲಿ ನಾಳೆ (ಸೆಪ್ಟಂಬರ್.6) ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಬೆಳ್ಳಿ ಹಬ್ಬ ಸಮಾರಂಭ: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಂದ ಉದ್ಘಾಟನೆ
ಕರ್ನಾಟಕದ ಕರಾವಳಿಯ ಅಭಿವೃದ್ದಿಗಾಗಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ (ರಿ.) ತನ್ನ 25ನೇ ವರ್ಷದ
ಬೆಳ್ಳಿ ಹಬ್ಬದ ಸಂಭ್ರಮದ ಆಚರಣೆಯನ್ನು ನಾಳೆ, ಸೆಪ್ಟೆಂಬರ್ 6, 2026 ರ ಭಾನುವಾರ ಮಧ್ಯಾಹ್ನ 3:00 ಗಂಟೆಗೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಕುಡ್ಮುಲ್ ರಂಗರಾವ್ ಟೌನ್ಹಾಲ್ನಲ್ಲಿ ಹಮ್ಮಿಕೊಂಡಿದೆ. ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಅವರು ವಿಷನ್ ಪ್ಲಾನ್ ಕುರಿತು ಮಾತನಾಡಲಿದ್ದು, ಅನಿವಾಸಿ ಭಾರತೀಯ ಹಾಗೂ ಇನ್ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್ (ಇಂಡಿಯಾ-ಗ್ಲೋಬಲ್) ನ ವಿಶಿಷ್ಟ ಫೆಲೋ ಡಾ. ರೊನಾಲ್ಡ್ ಕೊಲಾಸೊ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್, ಇಂಧನ ಸಚಿವರಾದ ಕೆ. ಜೆ. ಜಾರ್ಜ್, ಉಡುಪಿ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ. ವೇದವ್ಯಾಸ ಕಾಮತ್, ಬಂಟವಾಳ ಶಾಸಕರಾದ ರಾಜೇಶ್ ನಾಯ್ಕ್, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ. ಎ. ಗಫೂರ್, ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮೂಡುಬಿದಿರೆಯ ಆಳ್ವಾಸ್ ಎಡುಕೇಷನ್ ಫೌಂಡೇಶನ್ ಅಧ್ಯಕ್ಷರಾದ ಡಾ. ಮೋಹನ ಆಳ್ವ, ಎಂಆರ್ಜಿ ಗ್ರೂಪ್ ಸಿಎಂಡಿ ಡಾ. ಕೆ. ಪ್ರಕಾಶ್ ಶೆಟ್ಟಿ, ಸೌದಿ ಅರೇಬಿಯಾದ ಉದ್ಯಮಿ ಝಕರಿಯಾ ಜೋಕಟ್ಟೆ, ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷರಾದ ಧರ್ಮಪಾಲ್ ದೇವಾಡಿಗ ಹಾಗೂ ದುಬೈನ ಉದ್ಯಮಿ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಿತಿಯ ಗೌರವ ಅಧ್ಯಕ್ಷರಾದ ಪದ್ಮವಿಭೂಷಣ ಡಾ. ಬಿ. ಎಂ. ಹೆಗ್ಡೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಕಾರ್ಯಾಧ್ಯಕ್ಷರಾದ ಹರೀಶ್ಕುಮಾರ್ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ, ರಾಜ್ಯ ಸಂಯೋಜಕ ಕೆ. ಪಿ. ಜಗದೀಶ್ ಅಧಿಕಾರಿ, ಧನಸಂಗ್ರಹಣಾ ಸಮಿತಿ ಕಾರ್ಯಾಧ್ಯಕ್ಷ ಡಾ. ಆರ್. ಕೆ. ಶೆಟ್ಟಿ, ವಕ್ತಾರ ದಯಾಸಾಗರ್ ಚೌಟ, ಗೌರವ ಕಾರ್ಯದರ್ಶಿ ಜಿ. ಟಿ. ಆಚಾರ್ಯ, ಗೌರವ ಕಾರ್ಯದರ್ಶಿ ಸುರೇಂದ್ರ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಅರುಣ್ಪ್ರಕಾಶ್ ಶೆಟ್ಟಿ ಹಾಗೂ ಕೋಶಾಧಿಕಾರಿ ಪ್ರಭಾಕರ್ ಬಂಗೇರ ಕಾರ್ಕಳ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಸಮಾರಂಭಕ್ಕೆ ಎಲ್ಲರನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.




