September 7, 2026
Mumbai News Kannada
ಮುಂಬಯಿ

ಪೇಜಾವರ ಮಠ ಮುಂಬಯಿಯಲ್ಲಿ ಶ್ರೀ ಕೃಷ್ಣಾಷ್ಟಮಿ – ವಿಟ್ಲಪಿಂಡಿ ಉತ್ಸವ





ಶ್ರೀಕೃಷ್ಣನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಮುಂಬಯಿ, ಸೆ. 7: ದೇವರು ಸ್ವತಃ ಧರೆಗಿಳಿದು ಮಾನವ ರೂಪದಲ್ಲಿ ನಮ್ಮ ನಡುವೆ ಅವತರಿಸಿ, ನಮ್ಮನ್ನು ಉದ್ಧರಿಸಿರುವುದು ಆತನ ಅಪಾರ ಕರುಣೆಯ ಪ್ರತೀಕವಾಗಿದೆ. ಶ್ರೀಕೃಷ್ಣನ ರೂಪದಲ್ಲಿ ಅವತರಿಸಿದ ಭಗವಂತನು ಮಾನವರಾದ ನಮಗೆ ಶಾಶ್ವತವಾದ ಸಂದೇಶವನ್ನು ನೀಡುವ ಮೂಲಕ ನಮ್ಮನ್ನು ಜಾಗೃತಗೊಳಿಸಿದ್ದಾನೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿ ಪರಮಪೂಜ್ಯ ಡಾ. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ನುಡಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ಸೆ. 5ರಂದು ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಉತ್ಸವವನ್ನು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ ಆಶೀರ್ವಚಿಸಿದರು.

ನಮ್ಮ ಉದ್ಧಾರಕ್ಕಾಗಿ ಅವತರಿಸಿದ ದೇವರನ್ನು ಸ್ಮರಿಸುವುದು, ಆರಾಧಿಸುವುದು ಹಾಗೂ ಆತನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಮ್ಮ ನಿಜವಾದ ಕರ್ತವ್ಯವಾಗಬೇಕು. ಭಗವಂತನನ್ನು ಸ್ಮರಿಸುವುದು ಕೇವಲ ಒಂದು ಆಚರಣೆಗೆ ಸೀಮಿತವಾಗದೆ, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಶ್ರೀಕೃಷ್ಣನು ತನ್ನ ಜೀವನ ಮತ್ತು ಉಪದೇಶಗಳ ಮೂಲಕ ಮಾನವ ಕುಲಕ್ಕೆ ಧರ್ಮ, ಸತ್ಯ, ಪ್ರೀತಿ, ಕರ್ತವ್ಯ ಹಾಗೂ ಸದಾಚಾರದ ಮಾರ್ಗವನ್ನು ತೋರಿಸಿದ್ದಾನೆ. ಆದ್ದರಿಂದ ಶ್ರೀಕೃಷ್ಣನ ಸಂದೇಶಗಳನ್ನು ಕೇವಲ ಕೇಳುವುದಷ್ಟೇ ಅಲ್ಲದೆ, ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಭಕ್ತಿಭಾವ, ಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಬೇಕು. ಭಗವಂತನ ಆರಾಧನೆಯೊಂದಿಗೆ ಆತನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆಚರಣೆಗೆ ನಿಜವಾದ ಅರ್ಥ ಮತ್ತು ಸಾರ್ಥಕತೆ ದೊರೆಯುತ್ತದೆ ಎಂದು ಶ್ರೀಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್, ಕಾರ್ಯಾಧ್ಯಕ್ಷ ಅವಿನಾಶ್ ಎಸ್. ಶಾಸ್ತ್ರಿ, ಗೌರವ ಕೋಶಾಧಿಕಾರಿ ಸರ್ವಜ್ಞ ಉಡುಪ, ಪುತ್ತಿಗೆ ಶ್ರೀಗಳ ಚಾತುರ್ಮಾಸ್ಯ ಸಮಿತಿಯ ಸಂಚಾಲಕ ಸಿಎ| ಸುಧೀರ್ ಆರ್. ಎಲ್. ಶೆಟ್ಟಿ, ಕಲಾಜಗತ್ತು ತಂಡದ ರೂವಾರಿ ವಿಜಯಕುಮಾರ್ ಶೆಟ್ಟಿ ತೋನ್ಸೆ, ಪೇಜಾವರ ಮಠದ ಮುಂಬಯಿ ಶಾಖಾ ಮುಖ್ಯ ಪ್ರಬಂಧಕರಾದ ರಾಮದಾಸ ಉಪಾಧ್ಯಾಯ ರೆಂಜಾಳ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಜೆ. ಗೋಲ್ಡ್ ವೇದಿಕೆಯಲ್ಲಿದ್ದರು.

ಸೆ. 4ರಂದು ಶ್ರೀ ಪೇಜಾವರ ಮಠದಲ್ಲಿನ ಶ್ರೀಕೃಷ್ಣನ ಸನ್ನಿಧಿಯಲ್ಲಿ ರಾತ್ರಿ 12ಕ್ಕೆ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ, ಮಹಾಪೂಜೆ, ಮಹಾಮಂಗಳಾರತಿಯನ್ನು ರಾಮದಾಸ ಉಪಾಧ್ಯಾಯ ರೆಂಜಾಳ ನೆರವೇರಿಸಿದರು ಹಾಗೂ ಪ್ರಸಾದ ವಿತರಣೆ ನಡೆಯಿತು.

ಸೆ. 5ರಂದು ಕುಂಟಾಡಿ ಸುರೇಶ್ ಭಟ್ ಅವರಿಂದ ಬಲಿಮೂರ್ತಿ ಉತ್ಸವ ನಡೆಯಿತು. ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಉಂಡಾರು ಅವರ ಪೌರೋಹಿತ್ಯದಲ್ಲಿ ಶ್ರೀದೇವರಿಗೆ ರಂಗಪೂಜೆ, ಮಹಾಪೂಜೆ ನೆರವೇರಿತು. ಸಂಜೆ ರಾಧಾ-ಕೃಷ್ಣರ ವೇಷ ಧರಿಸಿದ ಪುಟಾಣಿಗಳು ವಿವಿಧ ಉತ್ಸವವನ್ನು ಸಂಭ್ರಮಿಸಿದರು. ಮುದ್ದುಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಚೆರಿಮೇರಿ ದಿನೇಶ್ ಕೋಟ್ಯಾನ್ ಸಂಯೋಜನೆಯಲ್ಲಿ ಹುಲಿವೇಷ ಮತ್ತು ಸ್ಯಾಕ್ಸೋಫೋನ್ ವಾದನ ನಡೆಸಲಾಯಿತು. ಉಪಸ್ಥಿತ ಗಣ್ಯರು ಮಕ್ಕಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.

ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಟ್ರಸ್ಟಿಗಳು, ಪದಾಧಿಕಾರಿಗಳು, ಸದಸ್ಯರು, ಮಠದ ಅರ್ಚಕರಾದ ಪವನಕುಮಾರ್ ಅಣ್ಣಿಗೇರಿ, ವಿಷ್ಣುತೀರ್ಥ ಸಾಲಿ, ಗುರುಪ್ರಸಾದ್ ಭಟ್ ಅಂಬಾಗಿಲು, ರಾಧಾಕೃಷ್ಣ ಭಟ್, ರಮೇಶ್ ಭಟ್, ಹಿರಿಯ ಪುರೋಹಿತರಾದ ಪ್ರಕಾಶ ಆಚಾರ್ಯ ರಾಮಕುಂಜ, ಪರೇಲ್ ಶ್ರೀನಿವಾಸ ಭಟ್, ವಾಸುದೇವ ರಾವ್, ರಾಮಚಂದ್ರ ಸಾಮಗ, ಸುದರ್ಶನ ಭಟ್, ಸಹ ಪುರೋಹಿತರು ಮತ್ತು ಮಠದ ಸಿಬ್ಬಂದಿ, ಸುರೇಂದ್ರ ಕುಮಾರ್ ಹೆಗ್ಡೆ, ಕಮಲಾಕ್ಷ ಸರಾಫ್, ಶೇಖರ್ ಸಾಲ್ಯಾನ್ ಸಾಂತಾಕ್ರೂಜ್, ದೇವೇಂದ್ರ ಬಂಗೇರಾ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯಕುಮಾರ್ ಶೆಟ್ಟಿ ನಿರ್ದೇಶನದಲ್ಲಿ ಕಲಾಜಗತ್ತು ನಾಟಕ ತಂಡದಿಂದ ‘ಶರಶಯ್ಯ’ ನಾಟಕ ಪ್ರದರ್ಶನಗೊಂಡಿತು. ಬಳಿಕ ರಾತ್ರಿ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನೆರವೇರಿತು.

ಸೇವಾಕಾರ್ಯಗಳಲ್ಲಿ ಭಕ್ತರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಭಾವದಿಂದ ಪಾಲ್ಗೊಳ್ಳುತ್ತಿರುವುದು ಕಾರ್ಯಕ್ರಮಗಳ ಯಶಸ್ಸಿಗೆ ಪ್ರಮುಖ ಕಾರಣ: ರಾಮದಾಸ ಉಪಾಧ್ಯಾಯ ರೆಂಜಾಳ

ಪೇಜಾವರ ಮಠದ ಪ್ರಬಂಧಕರಾದ ರಾಮದಾಸ ಉಪಾಧ್ಯಾಯ ರೆಂಜಾಳ ಮಾತನಾಡಿ, “ವರ್ಷಪೂರ್ತಿ ಮಠದ ವತಿಯಿಂದ ನಡೆಯುವ ವಿವಿಧ ಧಾರ್ಮಿಕ ಹಾಗೂ ಸೇವಾಕಾರ್ಯಗಳಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ಮತ್ತು ಬೆಂಬಲ ನೀಡುತ್ತಿದ್ದಾರೆ. ಶ್ರೀಕೃಷ್ಣನ ಸಂದೇಶದಂತೆ ಪ್ರತಿಯೊಬ್ಬರೂ ಭಕ್ತಿ, ಸೇವೆ, ಪ್ರೀತಿ ಹಾಗೂ ಪರೋಪಕಾರದ ಮನೋಭಾವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಿದೆ. ವರ್ಷಪೂರ್ತಿ ನಡೆಯುವ ಧಾರ್ಮಿಕ ಸೇವಾಕಾರ್ಯಗಳಲ್ಲಿ ಭಕ್ತರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಭಾವದಿಂದ ಪಾಲ್ಗೊಳ್ಳುತ್ತಿದ್ದು, ಅವರ ಅಪಾರ ಸಹಕಾರವೇ ಇಂತಹ ಕಾರ್ಯಕ್ರಮಗಳ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ” ಎಂದು ತಿಳಿಸಿದರು.



Related posts

ಬಂಟರ ಸಂಘ, ಮುಂಬಯಿ: ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ಮಾತಾ ಕಿ ಚೌಕಿ ಭಕ್ತಿ ಪ್ರಧಾನ ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಶನ್ ಇದರ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ವಿಜ್ರಂಭಣೆಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯೋತ್ಸವ ಆಚರಣೆ

Mumbai News Desk

ಬಿಲ್ಲವರ ಅಸೋಸಿಯೇಶನ್ ಮೀರಾ ರೋಡ್ ಸ್ಥಳೀಯ ಕಚೇರಿಯಿಂದ ಅದ್ಧೂರಿ ಸ್ನೇಹ ಸಮ್ಮಿಲನ;

Mumbai News Desk

ಮೀರಾರೋಡ್ ಪೂರ್ವದ ಶ್ರೀ ರಾಧಾ ಕೃಷ್ಣ ವೃದ್ಧಾಶ್ರಮಕ್ಕೆ ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ  ಮಹಿಳಾ ವಿಭಾಗ ಭೇಟಿ

Mumbai News Desk

ಬೈಂಗನ್ ವಾಡಿ, ಗೋವಂಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರ;ವಿಜೃಂಭಣೆಯ 45 ನೇ ವಾರ್ಷಿಕೋತ್ಸವ: ಕಲ್ಕುಡ -ಕಲ್ಲುರ್ಟಿ- ಗುಳಿಗ ದೈವಗಳ ಕೋಲ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್: ಭಜನಾ ಮಂಡಳಿಯ ವರ್ಷಾಚರಣೆ

Mumbai News Desk