32 C
Mumbai
March 7, 2026
Mumbai News Kannada
ಮುಂಬಯಿ

ಭಜನೆಯಿಂದ ಭಾವನಾತ್ಮಕ ಸಮಸ್ಯೆಗೆ ಪರಿಹಾರ: ಶ್ರೀ ನಾರಾಯಣಗುರು ಭಜನ ಮಂಡಳಿ ಮಲಾಡ್ ವಲಯಕ್ಕೆ ಸೂರ್ಯಕಾಂತ್ ಜೆ. ಸುವರ್ಣ ಚಾಲನೆ





ಮಲಾಡ್, ಅ. 11:

​ಮುಂಬಯಿಯ ತುಳುನಾಡಿನ ಸಮೃದ್ಧ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಭಜನೆ ಮಹತ್ತರ ಪಾತ್ರ ವಹಿಸುತ್ತದೆ. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಸಿದ್ಧಾಂತಗಳಿಗೆ ಬದ್ಧರಾಗಿ, ಸಮಾಜದಲ್ಲಿ ಸಂಘಟನೆ ಮತ್ತು ಸಾಮರಸ್ಯವನ್ನು ಬಲಪಡಿಸಲು ಭಜನ ಮಂಡಳಿಗಳು ಅತ್ಯಗತ್ಯ ಎಂದು ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜೆ. ಸುವರ್ಣ ಅವರು ಪ್ರತಿಪಾದಿಸಿದರು. ಚಿಂತನಾಶೀಲ ಮತ್ತು ಸ್ವಾಸ್ಥ್ಯ ಬದುಕಿನ ಮೂಲಕ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಭಜನೆಯು ಸಹಕಾರಿಯಾಗಿದೆ ಎಂದರು.

​ಮಲಾಡ್ ಪೂರ್ವದ ಉತ್ಕರ್ಷ ವಿದ್ಯಾ ಮಂದಿರ ಸಭಾಭವನದಲ್ಲಿ, ಜಯ ಸಿ. ಸುವರ್ಣ ಅಭಿಮಾನಿ ಬಳಗ ಮತ್ತು ಮುಂಬಯಿ ಬಿಲ್ಲವರು ಆಯೋಜಿಸಿದ್ದ ಶ್ರೀ ನಾರಾಯಣಗುರು ಭಜನ ಮಂಡಳಿ ಮಲಾಡ್ ವಲಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಭಜನೆಯಿಂದ ಕೇವಲ ಒಗ್ಗಟ್ಟು ಮಾತ್ರವಲ್ಲದೆ, ಸಮುದಾಯದ ಭಾವನಾತ್ಮಕ ಸಮಸ್ಯೆಗಳನ್ನೂ ಪರಿಹರಿಸಲು ಸಾಧ್ಯವಿದೆ. ಇದು ದಿವಂಗತ ಜಯ ಸಿ. ಸುವರ್ಣ ಅವರ ದೂರದೃಷ್ಟಿಯ ಚಿಂತನೆಯ ಫಲ ಎಂದು ಸೂರ್ಯಕಾಂತ್ ಸುವರ್ಣ ಅವರು ಹೇಳಿದರು.

​ಕಾರ್ಯಕ್ರಮದ ಗೌರವ ಅತಿಥಿಗಳಾದ ಮಲಾಡ್ ಕನ್ನಡ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಜಗದೀಶ್ ಎಸ್. ಹೆಗ್ಡೆ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕುರಾರ್ ಮಲಾಡ್ ಪೂರ್ವದ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್. ಶೆಟ್ಟಿ ಅವರು ನೂತನ ಭಜನ ಮಂಡಳಿಯ ಸ್ಥಾಪನೆಗೆ ಹಾರ್ದಿಕ ಶುಭ ಕೋರಿದರು.

​ಶ್ರೀ ನಾರಾಯಣಗುರುಗಳ ಚಿಂತಕರಾದ ಧನಂಜಯ ಶಾಂತಿ ಅವರು ಗುರುಗಳ ಜೀವನ ಚರಿತ್ರೆ ಮತ್ತು ಅವರ ಮಾನವೀಯ ಸಂದೇಶದ ಕುರಿತು ವಿವರವಾಗಿ ಮಾತನಾಡಿದರು. “ಮಾನವ ಕುಲಕ್ಕೆ ಸಾಮರಸ್ಯವೇ ಮೂಲ ಮಂತ್ರ,” ಎಂದಿದ್ದ ನಾರಾಯಣ ಗುರುಗಳು ಶೋಷಿತ ವರ್ಗದ ಕಾಮಧೇನುವಾಗಿದ್ದರು. ವಿದ್ಯಾರ್ಜನೆಯ ಮೂಲಕ ಸಮಾಜದಲ್ಲಿ ಗೌರವ ಪಡೆಯಬಹುದು ಎಂಬ ಜಯ ಸಿ. ಸುವರ್ಣ ಅವರ ಸಂದೇಶವೂ ಗುರುಗಳ ತತ್ವದ ಆಳವಾದ ನಂಬಿಕೆಯಿಂದ ಬಂದಿದೆ ಎಂದು ಅವರು ತಿಳಿಸಿದರು.

​ಈ ಸಂದರ್ಭದಲ್ಲಿ ಸಮಾಜದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರಾದ ಸುಭಾಷ್ ಡಿ. ಅಮೀನ್, ವತ್ಸಲಾ ಕೆ. ಪೂಜಾರಿ, ಸರಸ್ವತಿ ಜಿ. ಪಾಲನ್, ಸುಶೀಲಾ ಅಂಚನ್, ಗೋಪಾಲ ಕಿದಿಯೂರು, ರವಿಕಲಾ ಟಿ. ಪೂಜಾರಿ, ಇಂದಿರಾ ಡಿ ಪೂಜಾರಿ, ದಿವಾಕರ ಗುರುಸ್ವಾಮಿ, ರೋಹಿತ್ ಗೋಪಾಲ್ ಪಾಲನ್ ಅವರನ್ನು ಸೂರ್ಯಕಾಂತ್ ಜೆ. ಸುವರ್ಣ ಮತ್ತು ಗಣ್ಯರು ಸಮ್ಮಾನಿಸಿ ಗೌರವಿಸಿದರು.

​ವೇದಿಕೆಯಲ್ಲಿ ಭಾರತ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ, ಶ್ರೀದೇವಿ ಮಹಾಮ್ಮಾಯಿ ದೇವಸ್ಥಾನದ ಧರ್ಮದರ್ಶಿ ರವಿ ಸ್ವಾಮೀಜಿ, ಶಿವಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್‌ನ ಧರ್ಮದರ್ಶಿ ಶಂಕರ ಸುವರ್ಣ, ಮತ್ತು ಸ್ಥಳೀಯ ಮಾಜಿ ನಗರ ಸೇವಕಿ ದಕ್ಷಾ ಪಟೇಲ್ ಉಪಸ್ಥಿತರಿದ್ದು, ನೂತನ ಭಜನ ಮಂಡಳಿಗೆ ಯಶಸ್ಸು ಕೋರಿದರು.

​ಪ್ರಧಾನ ಆರ್ಚಕರಾದ ಜಯ ಎಸ್. ಪೂಜಾರಿ, ಆರ್ಚಕರಾದ ಸುಂದರ ಎಂ. ಪೂಜಾರಿ, ಮತ್ತು ರಾಮ ಡಿ. ಪೂಜಾರಿ ಅವರು ಶಾಸ್ತ್ರೋಕ್ತವಾಗಿ ಜಪಯಜ್ಞಾ ಮತ್ತು ಇತರ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ನಂತರ, ಹರಿಶ್ಚಂದ್ರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ 32 ಮಂದಿ ಸದಸ್ಯರನ್ನೊಳಗೊಂಡ ನೂತನ ಭಜನ ಸಮಿತಿಯನ್ನು ರಚಿಸಲಾಯಿತು.

ಶ್ರೀ ನಾರಾಯಣಗುರು ಭಜನ ಮಂಡಳಿಯ ಅಧ್ಯಕ್ಷರಾಗಿ ಅಶೋಕ್ ಕೆ. ಕುಕ್ಯಾನ್, ಕಾರ್ಯದರ್ಶಿಯಾಗಿ ಕೇಶವ್ ಎಸ್. ಪೂಜಾರಿ, ಮತ್ತು ಕೋಶಾಧಿಕಾರಿಯಾಗಿ ಸಬಿತಾ ಜಿ. ಪೂಜಾರಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮವನ್ನು ಶಶಿಧರ ಬಂಗೇರ ಅವರು ಸುಂದರವಾಗಿ ನಿರ್ವಹಿಸಿ ವಂದಿಸಿದರು. ಕೊನೆಯಲ್ಲಿ ಎಲ್ಲರಿಗೂ ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.

ಸಂತೋಷ್ ಕೆ. ಪೂಜಾರಿ, ನಿರ್ದೇಶಕ, ಭಾರತ್ ಕೋ-ಆಪರೇಟಿವ್ ಬ್ಯಾಂಕ್:

“ಬ್ರಹ್ಮಶ್ರೀ ನಾರಾಯಣಗುರುಗಳ ಧಾರ್ಮಿಕ ಸಿದ್ಧಾಂತ ಮತ್ತು ಚಿಂತನೆಯ ಮೂಲಕ ಸಮಾಜದ ಒಗ್ಗಟ್ಟಿಗೆ ಜನನಾಯಕ ಜಯ ಸಿ. ಸುವರ್ಣ ಅವರು ವಿಶೇಷ ಮಹತ್ವ ನೀಡಿದವರು. ಎಲ್ಲ ಸಮಸ್ಯೆಗಳಿಗೆ ‘ಸಂಘಟನೆಯೇ ಮನೆ’ ಎಂದು ಅವರು ನಂಬಿದ್ದರು.”

ನ್ಯಾಯವಾದಿ ಸೋಮನಾಥ್ ಬಿ. ಅಮೀನ್, ಉಪ ಕಾರ್ಯಾಧ್ಯಕ್ಷ, ಭಾರತ್ ಕೋ-ಆಪರೇಟಿವ್ ಬ್ಯಾಂಕ್:

“ನಾವು ಸಂಘಟನೆ ಮತ್ತು ಭಜನೆಯ ಮೂಲಕ ಒಗ್ಗಟ್ಟನ್ನು ಸಾಧಿಸಿ, ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪ್ರಾಶಸ್ತ್ಯ ನೀಡಬೇಕು.”



Related posts

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 79 ನೇ ವಾರ್ಷಿಕ ಮಹಾಪೂಜೆ, ಧಾರ್ಮಿಕ ಸಭೆ

Mumbai News Desk

ಅಭಿನವ ಮಂತ್ರಾಲಯ ಜೋಗೇಶ್ವರಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 354ನೇ ಆರಾಧನಾ ಮಹೋತ್ಸವ ಸಂಪನ್ನ

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ;ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಶಾಖೆಯ ಕಾರ್ಯಕಾರಿ ಸಮಿತಿಯ ಸ್ನೇಹ ಸಮ್ಮಿಲನ

Mumbai News Desk

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk

ವಿದ್ಯಾದಾಯಿನಿ ಸಭಾ ಫೋರ್ಟ್ ವತಿಯಿಂದ ಗುರುಜಯಂತಿ ಉತ್ಸವಾಚರಣೆ.

Mumbai News Desk