July 23, 2026
Mumbai News Kannada
ಮುಂಬಯಿ

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಸ್ಥಳಾಂತರ ಕಾರ್ಯಕ್ರಮ







ಮಕ್ಕಳಿಗೆ ಉತ್ತಮ ಸೌಲಭ್ಯದೊಂದಿಗೆ ಉಚಿತ ಶಿಕ್ಷಣ ಒದಗಿಸುವುದು ನಮ್ಮ ಧ್ಯೇಯ- ಪುರುಷೋತ್ತಮ ಎಸ್ ಕೋಟ್ಯಾನ್

ಚಿತ್ರ,ವರದಿ: ಉಮೇಶ್ ಕೆ. ಅಂಚನ್

ಮುಂಬಯಿ, ನ.2:ಸುಮಾರು 99 ವರ್ಷಗಳ ಹಿಂದೆ ಸಮಾನ ಮನಸ್ಕರಾದ ನಮ್ಮ ಪೂರ್ವಜರು ಮುಂಬಯಿ ಮಾಯಾನಗರಿಗೆ ಹೊಟ್ಟೆ ಪಾಡಿಗಾಗಿ ಬಂದ ತುಳುಕನ್ನಡಿಗ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯನ್ನು ಸ್ಥಾಪಿಸಿದರು. ಆ ಮುಖೇನ ಹಗಲಿಗೆ ಹೋಟೇಲು ಕ್ಯಾಂಟೀನುಗಳಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡಿ ಈ ಶಾಲೆಯು ದಾರಿದೀಪವಾಯಿತು.ಆದರೆ ಕೆಲವೊಂದು ಕಾರಣಗಳಿಂದ ಕಳೆದ 15 ವರ್ಷಗಳಿಂದ ಶಾಲೆಗೆ ಸರಿಯಾದ ಜಾಗ ಇಲ್ಲದೆ ತೊಂದರೆ ಪಡಬೇಕಾಯಿತು. ಈ ಸಮಯದಲ್ಲಿ ಆರ್ಯಸಮಾಜ ಫೋರ್ಟ್ ಹಾಗೂ ದಿವಂಗತ ಸೂರು ಸಿ.ಕರ್ಕೇರರವರು ಶಾಲೆಗೆ ಜಾಗ ಕೊಟ್ಟು ಸಹಕರಿಸಿದ್ದಾರೆ . ಹಲವಾರು ದಾನಿಗಳು, ಶಿಕ್ಷಣ ಪ್ರಿಯರು ಹಾಗೂ ಸರಕಾರೇತರ ಸಂಸ್ಥೆ ಮಾಸೂಮ್ ವಿದ್ಯಾರ್ಥಿಗಳಿಗೆ ಬೇಕಾದ ಸವಲತ್ತು ಕೊಟ್ಟು ಸಹಾಯ ಹಸ್ತ ನೀಡಿದ್ದಾರೆ.ಸದ್ಯಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಕಾಶ್ಚಂದ್ರ ಬಂಗೇರ ಹಾಗೂ ಶಿಕ್ಷಕಿ ಚಿತ್ರಲೇಖಾ ಮಾಲಿಯವರ ಪರಿಶ್ರಮದಿಂದ ಉತ್ತಮ ಮಹಾನಗರಪಾಲಿಕೆಯ ಶಾಲೆ ಫೋರ್ಟ್ ಪರಿಸರದಲ್ಲೇ ದೊರಕಿದೆ. ಮುಂದೆ ರಾತ್ರಿ ಶಾಲೆಯಲ್ಲಿ ಕಲಿಯಲು ಇಚ್ಛಿಸುವ ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣ ದೊರಕಲಿದೆ ಎಂದು ವಿದ್ಯಾದಾಯಿನಿ ಸಭಾ ಫೋರ್ಟ್ ಇದರ ಅಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್ ಹೇಳಿದರು.
ಅವರು ಅ.31ರಂದು ವಿದ್ಯಾದಾಯಿನಿ ಸಭಾ ಸಂಚಾಲಕತ್ವದ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯನ್ನು ಮುಂಬಯಿ ಜಿಪಿವೋ ಎದುರು ಮೋದಿ(ಮನೋಹರ್ ದಾಸ್) ಸ್ಟ್ರೀಟಿನ ಮನಪಾ ಶಾಲೆಗೆ ಸ್ಥಳಾಂತರಿಸಿ ಅದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಕೊಠಡಿಯನ್ನು ಮಹೇಶ್ ಗ್ರೂಪ್ ಆಫ್ ಹೋಟೇಲ್ಸ್ ನ ಆಡಳಿತ ನಿರ್ದೇಶಕಿ , ದಿ.ಸೂರು ಸಿ.ಕರ್ಕೇರರವರ ಧರ್ಮಪತ್ನಿ ಶಾರದಾ ಸೂರು ಕರ್ಕೇರರವರು ಉದ್ಘಾಟಿಸಿ ಮಾತನಾಡಿ ಈ ರಾತ್ರಿ ಶಾಲೆಯಲ್ಲಿ ಕಲಿತ ಎಷ್ಟೋ ಮಂದಿ ಬ್ಯಾಂಕು, ಉದ್ಯಮ ಹಾಗೂ ಇನ್ನಿತರ ಉನ್ನತ ಕಚೇರಿಗಳಲ್ಲಿ ಕೆಲಸ ಮಾಡಿ ತಮ್ಮ ಬಾಳು ಬೆಳಗಿಸಿದ್ದಾರೆ. ಬರುವ ವರ್ಷ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳು ಒಂದಾಗಿ ಸಹಕರಿಸಬೇಕು ಎಂದರು.


ಆರ್ಯಸಮಾಜ ಫೋರ್ಟ್ ಇದರ ಕಾರ್ಯದರ್ಶಿ, ಸಮಾಜ ಸೇವಕ ನ್ಯಾಯವಾದಿ ಸುಧಾಕರ್ ಹೊಸಾಡು ಮಾತನಾಡಿ ಶಾಲೆಗೆ ತಮ್ಮ ಸಹಕಾರ ಸದಾ ನೀಡುವುದರೊಂದಿಗೆ ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಆರ್ಥಿಕ ತೊಂದರೆ ಇದ್ದಲ್ಲಿ ಚೆಂಬೂರು ಕರ್ನಾಟಕ ಶಾಲೆಯ ವತಿಯಿಂದ ಉಚಿತವಾಗಿ ಕಲಿಯಲು ಅನುಕೂಲವಾಗುವಂತಹ ವ್ಯವಸ್ಥೆ ಮಾಡಿ ಕೊಡುವ ಭರವಸೆ ನೀಡಿದರು.


ಅತಿಥಿಯಾಗಿ ಆಗಮಿಸಿದ್ದ ಸಮಾಜಸೇವಕ, ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ಮಾತನಾಡಿ ಇಂತಹ ಉಚಿತ ವಿದ್ಯಾಭ್ಯಾಸ ನೀಡುವ ಶಾಲೆಯನ್ನು ಬ್ರಿಟಿಷ್ ಆಡಳಿತ ಸಮಯದಲ್ಲಿ ಸ್ಥಾಪಿಸಿದ ಹಿರಿಯರನ್ನು ಇಂದು ನೆನಪಿಸುವ ಅಗತ್ಯ ಇದೆ. ಅದೆಷ್ಟೋ ಉತ್ತಮ ಹಳೆ ವಿದ್ಯಾರ್ಥಿಗಳನ್ನು ಪಡಕೊಂಡ ಶಾಲೆಗೆ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಸ್ವಂತ ಜಾಗ ಖರೀದಿಸಲು ತೊಂದರೆಯಾಗದು ಎಂದರು.


ವಿದ್ಯಾದಾಯಿನಿ ಸಭಾದ ನಿಕಟಪೂರ್ವ ಕಾರ್ಯದರ್ಶಿ ಚಿತ್ರಾಪು ಕೆ.ಎಮ್.ಕೋಟ್ಯಾನ್ ಮಾತನಾಡುತ್ತಾ ವಿದ್ಯಾದಾಯಿನಿ ಸಭಾದ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ನೋಡಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂತೋಷ್ ವ್ಯಕ್ತಪಡಿಸಿ ತಮ್ಮ ಪತ್ರಿಕಾ ಸಂದೇಶದಲ್ಲಿ ಶಿಕ್ಷಣ ಬಹಳ ಶಕ್ತಿಶಾಲಿ ಆಯುಧವಾಗಿ ದ್ದು ಇಡೀ ಜಗತ್ತನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ ಎಂದು ನೆಲ್ಸನ್ ಮಂಡೇಲಾರವರ ಮಾತನ್ನು ನೆನಪಿಸಿ ಬರೆದು ಕಳುಹಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ ಜಾಗದ ತೊಂದರೆ ಇದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ವಂಚನೆ ಆಗದಂತೆ ಶಾಲೆ ನಡೆದಿದೆ. ಈ ಸಂದರ್ಭದಲ್ಲಿ ಅಂತರ್ ರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ರವರ ಮಾತಿನ ಪ್ರಕಾರ ನಾವು ಬದುಕನ್ನು ಅಕ್ಷರಗಳಿಂದ ಗೆಲ್ಲಬೇಕೇ ವಿನಹ ಅಸ್ತ್ರಗಳಿಂದಲ್ಲ, ಬದುಕನ್ನು ಪ್ರೀತಿಯಿಂದ ಅರಳಿಸ ಬಹುದು ವಿನಹ ಹಗೆಯಿಂದಲ್ಲ ಎಂದ ಅವರು ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಸಂಸ್ಥಾಪಕರಾದ ವಿ.ಎಸ್.ಉಳಿಯಾರಗೋಳಿ, ಐ.ಎಮ್.ಪೈ ಹಾಗೂ ದಾನಿ ಸೂರು ಸಿ.ಕರ್ಕೇರ ಮೊದಲಾದವರನ್ನು ನೆನಪಿಸಿದರು.
ಶಿಕ್ಷಕ ಸುಭಾಷ್ ಖೇಡೇಕರ್, ವಿದ್ಯಾದಾಯಿನಿ ಸಭಾದ ಗೌರವಾಧ್ಯಕ್ಷ ಜೆ.ಎಮ್ , ಕೋಟ್ಯಾನ್,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಆರ್.ಕೋಟ್ಯಾನ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಆರಂಭದಲ್ಲಿ ಶಾರದಾ ಸೂರು ಕರ್ಕೇರರವರು ರಿಬ್ಬನ್ ಕತ್ತರಿಸಿ, ಶಾರದಾದೇವಿಯ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಶಾಲಾ ಕೊಠಡಿಯನ್ನು ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಪ್ರಕಾಶ್ಚಂದ್ರ ಎಮ್.ಆರ್.ಬಂಗೇರ ಸರ್ವರನ್ನೂ ಸ್ವಾಗತಿಸಿ ಕಳೆದ ಹದಿನೈದು ವರ್ಷಗಳ ಶಾಲಾ ಅನುಭವ, ವಿದ್ಯಾರ್ಥಿಗಳ ಕೊರತೆ, ಎಸ್.ಎಸ್.ಸಿಯಲ್ಲಿ ಹಲವಾರು ವರ್ಷಗಳಿಂದ ನೂರು ಪ್ರತಿಶತ ಫಲಿತಾಂಶ ಹಾಗೂ ಶಾಲೆಗೆ ಜಾಗ ಪಡೆಯಲು ಮನಪಾದ ಹಿಂದೆ ಪಟ್ಟ ಶ್ರಮದ ಬಗ್ಗೆ ವಿವರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಚಿತ್ರಲೇಖಾ ಆರ್ .ಮಾಲಿ ವಂದಿಸಿದರು.ಕಾರ್ಯಕ್ರಮವನ್ನು ಸಭಾದ ಗೌ.ಕಾರ್ಯದರ್ಶಿ ಹರೀಶ್ ಶಾಂತಿ ನಿರೂಪಿಸಿದರು.
ಶಾಲಾ ಶಿಕ್ಷಕ ಬಿಪಿನ್ ದುಬೆ , ಸಭಾದ ಉಪಾಧ್ಯಕ್ಷ ಆರ್.ಕೆ.ಕೋಟ್ಯಾನ್, ಕೋಶಾಧಿಕಾರಿ ಗೋಪಾಲ್ ಪೂಜಾರಿ, ಜೊತೆ ಕೋಶಾಧಿಕಾರಿ ಶ್ರೀಧರ್ ಪೂಜಾರಿ (ಸಿದ್ದು), ಸೇವಾದಳದ ಜಿ.ವೊ.ಸಿ ಸುರೇಶ್ ಪೂಜಾರಿ, ಸಂಚಾಲಕ ಜಿ.ಸಿ.ಸಾಲ್ಯಾನ್ ,ಸದಾನಂದ್ ಪೂಜಾರಿ, ಮಾಸೂಮ್ ಸಂಸ್ಥೆಯ ಪ್ರತಿನಿಧಿ ಸಂಕೇತ್, ಸಭಾದ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದಿವಂಗತ ಸೂರು ಸಿ.ಕರ್ಕೇರರವರ 7ನೇ ಪುಣ್ಯತಿಥಿಯ ಸಲುವಾಗಿ ಹಾಗೂ ಇತ್ತೀಚೆಗೆ ವಿಧಿವಶಳಾದ ಜೋಗೇಶ್ವರಿ ಸಂಸ್ಕೃತಿ ಅಮೀನ್ ಅವರ ಆತ್ಮ ಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭವ್ಯ ಶಿವನಂದ್ ಪೂಜಾರಿಗೆ ಶೇ 92.00 ಅಂಕ

Mumbai News Desk

ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್- ನಾಲಾಸೋಪಾರ: ಯಕ್ಷಗಾನ  ಶಿಬಿರ, ಭರತ ನಾಟ್ಯ, ಭಜನೆ,, ಕನ್ನಡ ಕಲಿಕೆ  ಮುಹೂರ್ತ

Mumbai News Desk

ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಸಂಪನ್ನ.

Mumbai News Desk

ಮೀರಾ ರೋಡ್: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 36ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬೈ ಶಾಖೆಯಲ್ಲಿ ಮಂಡಳಿಯ 124ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಮಲಾಡ್ ಗೋವಿಂದ್ ನಗರ್ ದ ಶ್ರೀ ಅಂಬಿಕಾ  ಮಂದಿರದಲ್ಲಿ ಭಕ್ತಿ ಸಂಭ್ರಮದ ದಸರಾ ಮಹೋತ್ಸವ

Mumbai News Desk